ಬಾಲಿವುಡ್ಗೆ ಬರಸಿಡಿಲು- ಬಿಗ್ಬಾಸ್ ಸ್ಟುಡಿಯೋದಲ್ಲಿ ಲಗಾನ್ ಕಲಾ ನಿರ್ದೇಶಕ ದೇಸಾಯಿ ನಿಗೂಢ ಸಾವು!
ಬಿಗ್ಬಾಸ್ ಸ್ಟುಡಿಯೋದಲ್ಲಿ ಖ್ಯಾತ ಕಲಾ ನಿರ್ದೇಶಕ ದೇಸಾಯಿ ನಿಗೂಢ ಸಾವನ್ನಪ್ಪಿದ್ದಾರೆ. ಇದುಆತ್ಮಹತ್ಯೆ ಎನ್ನಲಾಗುತ್ತಿದ್ದು, ಇನ್ನಷ್ಟೇ ಸತ್ಯ ಹೊರಬೀಳಬೇಕಿದೆ.
ಕೆಲ ವರ್ಷಗಳಿಂದ ಚಿತ್ರ ರಂಗದಲ್ಲಿ ಸಾವುಗಳ ಸರಮಾಲೆಯೇ ನಡೆಯುತ್ತಿದೆ. ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿ ಸಾವನ್ನಪ್ಪಿದರೆ, ಇನ್ನು ಕೆಲವರು ಆತ್ಮಹತ್ಯೆಯ (Suicide) ಹಾದಿ ತುಳಿಯುತ್ತಿದ್ದಾರೆ. ಕೆಲವರು ಅಪಘಾತಕ್ಕೀಡಾಗಿ ಅಕಾಲಿಕ ಮರಣ ಅನುಭವಿಸಿದ್ದಾರೆ. ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್, ಶ್ರೀದೇವಿ ಸೇರಿದಂತೆ ಕೆಲವರ ಸಾವು ಮಾತ್ರ ನಿಗೂಢವಾಗಿಯೇ ಉಳಿದುಬಿಟ್ಟಿದೆ. ಇದೀಗ ಬಾಲಿವುಡ್ನ ಸುಪ್ರಸಿದ್ಧ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ತಮ್ಮ ಸ್ಟುಡಿಯೋದಲ್ಲಿಯೇ ಸಾವನ್ನಪ್ಪಿದ್ದು, ಮೇಲ್ನೋಟಕ್ಕೆ ಇದನ್ನು ಆತ್ಮಹತ್ಯೆ ಎನ್ನಲಾಗುತ್ತಿದೆ. ಇವರಿಗೆ 58 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಮೂಲಗಳ ಪ್ರಕಾರ ಮುಂಬೈನ ಕರ್ಜತ್‌ನಲ್ಲಿರುವ ತಮ್ಮದೇ ಆದ ಎನ್‌ಡಿ ಸ್ಟುಡಿಯೋದಲ್ಲಿ ನಿತಿನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ 9ನೇ ತಾರೀಖಿನಂದು ಅವರ ಜನ್ಮದಿನವಿತ್ತು.
ಕರ್ಜಾತ್‌ನಲ್ಲಿರುವ ನಿತಿನ್ ದೇಸಾಯಿಯವರ (Nitin Chandrakanth Desai) ಬೃಹತ್ ND ಸ್ಟುಡಿಯೋಸ್ 52 ಎಕರೆಗಳಷ್ಟು ವಿಸ್ತಾರವಾಗಿದೆ. ಅಲ್ಲಿ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಚಲನಚಿತ್ರಗಳು ಮಾತ್ರವಲ್ಲದೆ ಅವರ ಸ್ಟುಡಿಯೋವನ್ನು ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ, ಬಿಗ್ ಬಾಸ್ ಹೋಸ್ಟ್ ಮಾಡಲು ಸಹ ಬಳಸಲಾಗಿದೆ. ನಿತಿನ್ ಕಲಾ ನಿರ್ದೇಶಕರಲ್ಲದೆ ನಿರ್ಮಾಪಕ ಮತ್ತು ನಿರ್ದೇಶಕರೂ ಆಗಿದ್ದರು. ವರದಿಯ ಪ್ರಕಾರ, ಅವರು 2003 ರಲ್ಲಿ ದೇಶ್ ದೇವಿ ಮಾ ಆಶಾಪುರ ಚಿತ್ರದ ಮೂಲಕ ನಿರ್ಮಾಪಕರಾದರು. ಟಿವಿ ಧಾರಾವಾಹಿಗಳನ್ನೂ ನಿರ್ಮಿಸಿದ್ದಾರೆ. ಅವರು ಹಲೋ ಜೈ ಹಿಂದ್ ನಂತಹ ಮರಾಠಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೀಗೆ ಸಿನಿ ಕ್ಷೇತ್ರದಲ್ಲಿ ತಮ್ಮದೇ ಕೆಲಸಗಳ ಮೂಲಕ ಗುರುತಿಸಿಕೊಂಡವರು ನಿತಿನ್. ಯಾವುದೇ ಗಾಡ್‌ಫಾದರ್ ಇಲ್ಲದೆ ಸಿನಿಮಾ ರಂಗದಲ್ಲಿ ತಮ್ಮ ಕಲಾಕೈಚಳವನ್ನು ಪ್ರದರ್ಶಿಸಿದ್ದ ಇವರು. ಅಪಾರ ಬುದ್ಧಿವಂತಿಕೆ ಹಾಗೂ ಕಲಾ ನೈಪುಣ್ಯದ ಮೂಲಕ ಹೆಸರುಗಳಿಸಿದವರು. ಕಲಾ ನಿರ್ದೇಶಕರಾಗಿ ಹಾಗೂ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿ ಅನುಭವ ಹೊಂದಿದ್ದ ಇವರು, ಚಿತ್ರಗಳ ನಿರ್ದೇಶನ ಹಾಗೂ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಅನೇಕ ಟಿವಿ ಸೀರೀಸ್‌ಗಳು ಹಾಗೂ ತಮ್ಮ ಮರಾಠಿ ಸೀರಿಯಲ್ ರಾಜ ಶಿವಛತ್ರಪತಿಯಂತಹ ಬ್ಲಾಕ್‌ಬಸ್ಟರ್ ಹಿಟ್‌ನಲ್ಲಿಯೂ ನಿರ್ಮಾಪಕರಾಗಿ ದುಡಿದಿದ್ದಾರೆ.
ಮಧ್ಯರಾತ್ರಿ ಮನೆಯಿಂದ ಹೊರ ದಬ್ಬಿದ್ದರು; ಭಾವ ಕೊಟ್ಟ ಕಿರುಕಿಳ ನೆನೆದು ಕಣ್ಣೀರಿಟ್ಟ ತನ್ವಿ!
ನಿತಿನ್ ದೇಸಾಯಿ ಅವರ ಸಾವಿನ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ಸ್ಟುಡಿಯೋ ಚೆನ್ನಾಗಿ ನಡೆಯುತ್ತಿಲ್ಲ, ಆರ್ಥಿಕ ಸಮಸ್ಯೆ ಇದ್ದ ಕಾರಣಕ್ಕಾಗಿ ನಿತಿನ್ ಅವರು ಚಿಂತೆಯಲ್ಲಿದ್ದರು ಎನ್ನಲಾಗಿದೆ. ಆದರೆ ಇದನ್ನು ಒಪ್ಪಲಾಗದು ಎನ್ನುತ್ತಿದ್ದಾರೆ ಇವರನ್ನು ಹತ್ತಿರದಿಂದ ಬಲ್ಲವರು. ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಖ್ಯಾತಿ ಗಳಿಸಿದ್ದ ನಿತಿನ್ ಅವರು, ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದವರು. ‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’(Devdas) , ‘ಜೋಧಾ ಅಕ್ಬರ್’ ಹಾಗೂ ‘ಲಗಾನ್’ ಮೊದಲಾದ ಸಿನಿಮಾಗಳಿಗೆ ನಿತಿನ್ ಅವರು ಸೆಟ್ ನಿರ್ಮಾಣ ಮಾಡಿದ್ದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ‘1942: ಎ ಲವ್ ಸ್ಟೋರಿ’ ಸಿನಿಮಾದ ಸೆಟ್ ಸಾಕಷ್ಟು ಗಮನ ಸೆಳೆದಿತ್ತು. ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಚೋಪ್ರಾ, ರಾಜ್ಕುಮಾರ್ ಹಿರಾನಿ ಮೊದಲಾದ ಖ್ಯಾತ ನಾಮರ ಜೊತೆ ನಿತಿನ್ ಕೆಲಸ ಮಾಡಿದ್ದರು.
ರಾಯಗಡ ಎಸ್ಪಿ ಸೋಮನಾಥ ಘಾರ್ಗೆ ಮಾತನಾಡಿ, ಮೇಲ್ನೋಟಕ್ಕೆ ಇದು ಆತ್ಮಹತ್ಯೆ (Suicide) ಎಂದು ಕಂಡುಬರುತ್ತಿದೆ. ಆದರೆ ಇನ್ನಷ್ಟೇ ಸತ್ಯಾಂಶ ಹೊರಬರಬೇಕಿದೆ. ಈ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಹಲವಾರು ಗಣ್ಯರು ನಿತಿನ್ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
Leader Ramaiah: ತೆರೆ ಮೇಲೆ ಬರಲಿದೆ ಸಿದ್ದರಾಮಯ್ಯ ಬಯೋಪಿಕ್: ಸಿಎಂ ಪಾತ್ರಕ್ಕೆ ನಟನಾರು?