ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಸದ್ಯ ಪೂಜಾ ಮತ್ತು ಕಿಶನ್ ಮದುವೆಯ ಸಂಭ್ರಮ ನಡೆಯುತ್ತಿದೆ. ಅದರ ನಡುವೆಯೇ ಭಾಗ್ಯ ನೇರಪ್ರಸಾರದಲ್ಲಿ ಬಂದು ಹೇಳಿದ್ದೇನು? ಇದೇನಿದು ಆದಿ-ಭಾಗ್ಯ ಮದುವೆ ಕಾನ್ಸೆಪ್ಟ್?
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಸದ್ಯ ಪೂಜಾ ಮತ್ತು ಕಿಶನ್ ಮದುವೆಯ ಸಂಭ್ರಮ. ಇದನ್ನು ಸಂಭ್ರಮ ಎನ್ನಬೇಕೋ, ಆತಂಕ ಎನ್ನಬೇಕೋ ಗೊತ್ತಿಲ್ಲ. ಏಕೆಂದ್ರೆ ಇಲ್ಲಿ ಇವರಿಬ್ಬರ ಮದುವೆಯನ್ನು ತಪ್ಪಿಸಲು ಒಬ್ಬರಲ್ಲ, ಇಬ್ಬರಲ್ಲ ನಾಲ್ಕು ಮಂದಿ ಕಿತಾಪತಿ ಮಾಡುತ್ತಿದ್ದಾರೆ. ಕಿಶನ್ ಅಣ್ಣ ಆದಿ, ಅತ್ತೆ, ಕನ್ನಿಕಾ ಸಾಲದು ಎನ್ನುವುದಕ್ಕೆ ಈಗ ತಾಂಡವ್ ಪ್ರವೇಶ ಕೂಡ ಆಗಿದೆ! ಏನಾದರೂ ಕಿತಾಪತಿ ಮಾಡಿ ಮದುವೆ ನಿಲ್ಲಿಸಲು ಹರಸಾಹಸ ಮಾಡುತ್ತಲೇ ಇದ್ದಾರೆ. ಭಾಗ್ಯಳ ಮನೆಯವರನ್ನು ಪರೀಕ್ಷಿಸುವ ಸಲುವಾಗಿ ಕಿಶನ್ಗೆ ಆಸ್ತಿಯಲ್ಲಿ ಬಿಡಿಗಾಸೂ ಕೊಡುವುದಿಲ್ಲ ಎಂದು ತಾತ ಹೇಳಿದ್ದ. ಆದರೆ ತಮಗೆ ಬೇಕಿರುವುದು ಆಸ್ತಿಯಲ್ಲ, ಕಿಶನ್ ಮತ್ತು ಪೂಜಾಳ ಪ್ರೀತಿ ಎನ್ನುವ ಮೂಲಕ ಮದುವೆ ನಿಲ್ಲಿಸುವ ಪ್ಲ್ಯಾನ್ ಉಲ್ಟಾ ಮಾಡಿ ಮದುವೆ ನಡೆಯುತ್ತಿದೆ.
ಇದರ ನಡುವೆಯೇ ನೇರಪ್ರಸಾರದಲ್ಲಿ ಬಂದಿರುವ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್ ಅವರು ವೀಕ್ಷಕರ ಜೊತೆ ಮದುವೆಯ ಸಂಭ್ರಮದಲ್ಲಿ ಭಾಗಿಯಾಗುವಂತೆ ಕೋರಿಕೊಂಡಿದ್ದಾರೆ. ಮದುವೆಯ ಶೂಟಿಂಗ್ ಸಮಯದಲ್ಲಿ ಹೊರಗಡೆ ಚಪ್ಪರ ಹಾಕಿದಾಗ ಜೋರಾಗಿ ಮಳೆ ಬಂದು ಆದ ಎಡವಟ್ಟುಗಳನ್ನು ವಿವರಿಸುತ್ತಲೇ ಈ ಮದುವೆಯ ಶೂಟಿಂಗ್ನ ತೊಂದರೆಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಅಲ್ಲೇ ಇದ್ದ ಟೀಮ್ ಸದಸ್ಯರನ್ನು ಮಾತನಾಡಿಸಿದ್ದಾರೆ. ಎಲ್ಲರೂ ನಿಜವಾದ ಮದುವೆಯ ರೀತಿಯಲ್ಲಿಯೇ ಭರ್ಜರಿಯಾಗಿ ರೆಡಿಯಾಗಿದ್ದು, ನೋಡಿದರೆ ರಿಯಲ್ ಮದುವೆಯೇನೋ ಎನ್ನಿಸುವಂತಿದೆ! ರಿಯಲ್ ಮದುವೆಯ ಸೆಟ್ ರೀತಿಯಲ್ಲಿಯೇ ಇದನ್ನು ರೆಡಿ ಮಾಡಿರುವ ಕಾರಣ, ನೋಡಿದರೆ ಇಲ್ಲಿ ನಡೆಯುತ್ತಿರುವುದು ನಿಜವಾದ ಮದುವೆ ಎಂದುಕೊಳ್ಳಬೇಕು.
ಎಲ್ಲರನ್ನೂ ಪರಿಚಯ ಮಾಡಿಸುವಾಗ ಭಾಗ್ಯ, ಕಿಶನ್ ಅಣ್ಣ ಆದಿಯ ಪರಿಚಯ ಮಾಡಿಸಿದ್ದಾಳೆ. ಅಷ್ಟಕ್ಕೂ ಆದಿಯ ಎಂಟ್ರಿ ಸೀರಿಯಲ್ಗೆ ಆದಾಗಲೇ ಬಹುತೇಕ ವೀಕ್ಷಕರು ಭಾಗ್ಯ ಮತ್ತು ಆದಿಯ ಜೋಡಿಯಾದರೆ ಚೆನ್ನಾಗಿತ್ತು ಎಂದು ಹೇಳಿದವರೇ. ಈ ಕ್ಯಾರೆಕ್ಟರ್ ಪ್ರವೇಶಿಸಿರುವುದಕ್ಕೆ ಕಾರಣವೂ ಅದೇ ಎಂದು ನೆಟ್ಟಿಗರು ತಾವೇ ಸೀರಿಯಲ್ ನಿರ್ದೇಶನವನ್ನೂ ಮಾಡಿಬಿಟ್ಟಿದ್ದರು. ಆದರೆ ಸದ್ಯ ಆದಿ ಭಾಗ್ಯಳಿಗೆ ವಿಲನ್ ಆಗಿದ್ದಾನೆ. ಆದರೆ, ಆದಿಗೆ ಸತ್ಯದ ಅರಿವಿಲ್ಲ, ಅರಿವಾದರೆ ಭಾಗ್ಯಳ ಪರವಾಗಿ ಆಗುತ್ತಾನೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ ಎಂದೆಲ್ಲಾ ಕಥೆ ಹೆಣೆಯುತ್ತಿರುವ ನೆಟ್ಟಿಗರು, ಪೂಜಾಳ ಮದುವೆಯ ಜೊತೆಜೊತೆಯಲ್ಲಿಯೇ ಭಾಗ್ಯ ಮತ್ತು ಆದಿಯ ಮದುವೆಯನ್ನೂ ಮಾಡಿಸಿ ಎನ್ನುತ್ತಿದ್ದಾರೆ!
ಇಬ್ಬರು ಅಷ್ಟು ದೊಡ್ಡ ಮಕ್ಕಳ ತಾಯಿ ಬೇರೆ ಮದುವೆಯಾಗುವುದನ್ನು ನಿಜ ಜೀವನದಲ್ಲಿ ಜನ ಒಪ್ಪಿಕೊಳ್ಳುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ... ಆದರೆ ಸೀರಿಯಲ್ಗಳಲ್ಲಿ ಮಾತ್ರ ನಾಯಕಿಯ ಗುಣ, ಆಕೆ ಪಡುತ್ತಿರುವ ನೋವು ಎಲ್ಲವನ್ನೂಪ್ರತ್ಯಕ್ಷವಾಗಿ ಕಾಣುವ ಹಿನ್ನೆಲೆಯಲ್ಲಿ ಗಂಡ ಮತ್ತೊಂದು ಮದುವೆಯಾದರೆ, ಹೆಂಡತಿ ಯಾಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಒಟ್ಟಿನಲ್ಲಿ ಸಮಾಜದ ಕೆಲವರ ಮನಸ್ಥಿತಿ ಬದಲಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಮದುವೆಯ ವಿಷಯ ಬಂದಾಗ ಗಂಡು ಏನು ಮಾಡಿದರೂ ಸರಿ ಎನ್ನುವ ಮನಸ್ಥಿತಿ ಬದಲಾಗುತ್ತಿದ್ದು, ಭಾಗ್ಯಳಿಗೂ ಸಂಗಾತಿ ಬೇಕು, ಆಕೆಯೂ ತನ್ನ ಮುಂದಿನ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು, ಅವಳ ಕಷ್ಟವೆಲ್ಲಾ ದೂರವಾಗಬೇಕು, ಪತ್ನಿಯನ್ನು ನಡುದಾರಿಯಲ್ಲಿ ಬಿಟ್ಟ ತಾಂಡವ್ಗೆ ತಕ್ಕ ಶಾಸ್ತಿಯಾಗಬೇಕು, ಅದಕ್ಕಾಗಿ ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎನ್ನುತ್ತಿದ್ದಾರೆ.
