‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಯಾಗಿರುವ ಬಗ್ಗೆ ಝೀ ಟಿವಿ ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್
ಬೆಂಗಳೂರು : ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಯಾಗಿರುವ ಬಗ್ಗೆ ಝೀ ಟಿವಿ ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಪ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸಬಹುದೇ? ಎಂದು ಕಟುವಾಗಿ ಪ್ರಶ್ನಿಸಿದೆ.
ಹಿಂದೂ ದೇವತೆಗಳನ್ನು ಅವಹೇಳನ
ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಚಿತ್ರಿಸಲಾಗಿದೆ ಎಂಬ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಜೀ ಎಂಟರ್ ಪ್ರೈಸಸ್‌ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ.ಅನಿಲ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ಕಾಮಿಡಿ ಎನ್ನುವುದು ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರಬಾರದು. ವಿಪರೀತಕ್ಕೂ ಹೋಗಬಾರದು. ಇಂತಹ ಧೋರಣೆ ತೋರಿರುವ ಅರ್ಜಿದಾರರಿಗೆ ಏಕೆ ಕರುಣೆ ತೋರಬೇಕು? ನ್ಯಾಯಾಲಯಗಳು ಹೆಚ್ಚು ಔದಾರ್ಯ ತೋರುತ್ತಿರುವ ಕಾರಣಗಳಿಂದಾಗಿಯೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಿದರು.
ಕೃಷ್ಣ-ದ್ರೌಪದಿಗೆ ಅವಮಾನ:
ಅರ್ಜಿದಾರರ ಪರ ವಕೀಲರು ಪ್ರಕರಣದ ಬಗ್ಗೆ ವಿವರಣೆ ನೀಡಲು ಮುಂದಾದಾಗ, ದೇವರೆಂದು ಆರಾಧಿಸುವ ಕೃಷ್ಣನನ್ನು ನಿಮ್ಮ ಕಾರ್ಯಕ್ರಮದಲ್ಲಿ ಏನೆಂದು ಬಿಂಬಿಸಲಾಗಿದೆ? ಬಳಸಿರುವ ಪದಗಳೇನು? ಅವುಗಳನ್ನು ಓದುವ ರೀತಿಯಲ್ಲಿ ಇದೆಯೇ? ದ್ರೌಪದಿಯನ್ನು ಹೇಗೆ ಬಿಂಬಿಸಲಾಗಿದೆ? ಇಂತಹ ಮನೋಭಾವದ ಆರೋಪಿಗಳನ್ನು ಏಕೆ ಸುಮ್ಮನೆ ಬಿಡಬೇಕು? ಹೋಗಿ ತನಿಖೆ ಎದುರಿಸಿ. ತನಿಖೆಯಲ್ಲಿ ಭಾಗಿಯಾಗಲು ಭಯವೇ? ಕಾಮಿಡಿ ಮಾಡಲು ಇಲ್ಲದ ಭಯ ತನಿಖೆಯಲ್ಲಿ ಭಾಗಿಯಾಗಲು ಏಕೆ? ಹೋಗಿ ಜಾಮೀನು ಪಡೆದುಕೊಳ್ಳಿ ಎಂದು ಕಟುವಾಗಿ ನುಡಿದರು.


