ಮಜಾ ಭಾರತ್​, ಗಿಚ್ಚಿ ಗಿಲಿಗಿಲಿ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯನಟ ಚಂದ್ರಪ್ರಭಾ ಅವರು ಇದೀಗ ನಟನೆಗೆ ಅವಕಾಶಗಳು ಸಿಗದೇ ಗಾರೆ ಕೆಲಸಕ್ಕೆ ಇಳಿದಿದ್ದಾರೆ. ಈ ಕುರಿತು ನಟ ಹೇಳಿದ್ದೇನು? 

ಬಣ್ಣದ ಲೋಕ ಅದರಲ್ಲಿಯೂ ರಿಯಾಲಿಟಿ ಷೋಗಳೇ ಹಾಗೆ. ಎಲ್ಲಿಯೋ ಇದ್ದವರನ್ನು ತಂದು ಒಂದಷ್ಟು ದಿನ ವೇದಿಕೆಯ ಮೇಲೆ ಹೀರೋ ಮಾಡುತ್ತದೆ. ಕೊನೆಗೆ ಆ ಷೋ ಮುಗಿದ ಮೇಲೆ ಕೆಲವರಿಗೆ ಒಳ್ಳೆಯ ಅವಕಾಶ ಸಿಕ್ಕರೆ, ಮತ್ತೆ ಕೆಲವರು ಬೀದಿಗೆ ಬರುತ್ತಾರೆ, ಇನ್ನು ಕೆಲವರು ಸಿಕ್ಕ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಅಷ್ಟಕ್ಕೂ ವೀಕ್ಷಕರ ನೆನಪಿನ ಶಕ್ತಿಯೂ ತುಂಬಾ ಷಾರ್ಟೇ. ಚಾಲ್ತಿಯಲ್ಲಿ ಇದ್ದಾಗ ಹೋದಲ್ಲಿ ಬಂದಲ್ಲಿ ಸೆಲ್ಫಿಗೆ ಮುಗಿ ಬೀಳ್ತಾರೆ. ಅವರು ಮರೆಯಾಗುತ್ತಿದ್ದಂತೆಯೇ ಪಕ್ಕದಲ್ಲಿ ನಿಂತರೂ ಸರಿಯಪ್ಪ ಎಂದು ಹೇಳಿ ಸರಿಸಿ ಮುಂದಕ್ಕೆ ಸಾಗುತ್ತಾರೆ. ಇದು ಸಿನಿಮಾ, ಕಿರುತೆರೆ, ಹಿರಿತೆರೆ ಎನ್ನದೇ ಎಲ್ಲವುಗಳಲ್ಲಿಯೂ ಸರ್ವೇ ಸಾಮಾನ್ಯವಾದದ್ದೇ. ಎಷ್ಟೋ ಹಿರಿಯ ಕಲಾವಿದರು ಜೀವನದ ಅಂತಿಮ ದಿನಗಳಲ್ಲಿ ಹಣ ಹೊಂದಿಸಲು ಆಗದೇ ಪರದಾಡಿದ್ದು ನಮ್ಮ ಕಣ್ಣಮುಂದೆಯೇ ಇದೆ, ಬೀದಿ ಹೆಣವಾದ ಕಲಾವಿದರೂ ಇದ್ದಾರೆ. ಕೊನೆಯ ದಿನಗಳಲ್ಲಿ ಒಬ್ಬರೂ ಹತ್ತಿರ ಸುಳಿಯದೇ ಹಾಗೆಯೇ ಕಣ್ಮುಚ್ಚಿದವರೂ ಇದ್ದಾರೆ.

ಇದೀಗ, ಹಾಸ್ಯಕಲಾವಿದ ಎಂದು ಗುರುತಿಸಿಕೊಂಡಿರೋ, ʻಗಿಚ್ಚಿ ಗಿಲಿಗಿಲಿʼ ಮೂಲ ಅಸಂಖ್ಯ ಅಭಿಮಾನಿಗಳನ್ನು ಗಳಿಸಿರೋ ನಟ ಚಂದ್ರಪ್ರಭ ಅವರು ಕೆಲ ತಿಂಗಳು ಭಾರಿ ಡಿಮಾಂಡ್​ನಲ್ಲಿ ಇದ್ದ ನಟ. ಇದೀಗ ಅವರು ಪುನಃ ತಮ್ಮ ಗಾರೆ ಕೆಲಸವನ್ನು ಮರು ಆರಂಭಿಸಿದ್ದಾರೆ. ತಮಗೆ ಅವಕಾಶಗಳು ಇಲ್ಲದ ಕಾರಣ ಮತ್ತೆ ತಮ್ಮ ಹಳೆಯ ಕೆಲಸವನ್ನು ಮುಂದುವರೆಸಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ʻಮಜಾಭಾರತʼ ರಿಯಾಲಿಟಿ ಶೋ ಮೂಲಕವೂ ಖ್ಯಾತಿಯ ನಂತರ ಅವರಿಗೆ ʻಗಿಚ್ಚಿ ಗಿಲಿಗಿಲಿʼಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಆದರೆ, ಇದೀಗ ಅವಕಾಶಗಳು ಇಲ್ಲದೇ ಮರಳಿ ತಮ್ಮ ಕೆಲಸವನ್ನು ಶುರುವಿಟ್ಟುಕೊಂಡಿದ್ದಾರೆ. ಇವರು ಮನೆಯ ಕೆಲಸವನ್ನು ಮಾಡುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ನೋಡಬಹುದಾಗಿದೆ. ಅದನ್ನು ಖುದ್ದು ಅವರೇ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೂಡ ಶೇರ್​ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ ಈ ಕೆಲಸ ಅವರಿಗೆ ಏನೂ ಹೊಸತಲ್ಲ. ಗಾರೆ ಕೆಲಸ ಹಾಗೂ ಇನ್ನಿತರ ಚಿಕ್ಕಪುಟ್ಟ ಕೆಲಸವನ್ನು ಮಾಡುತ್ತಲೇ ರಿಯಾಲಿಟಿ ಷೋಗಳಲ್ಲಿಯೂ ಭಾಗವಹಿಸಿ, ಭರ್ಜರಿ ಮನೆಯನ್ನೂ ಕಟ್ಟಿಸಿದ್ದಾರೆ. ಈಚೆಗೆ ಅದರ ಗೃಹಪ್ರವೇಶವನ್ನೂ ಮಾಡಿದ್ದರು. ಆದರೆ ಇದೀಗ ಮತ್ತೆ ಗಾರೆ ಕೆಲಸ ಮುಂದುವರೆಸಿದ್ದಾರೆ. ಈ ಕುರಿತು ಮಾತನಾಡಿರುವ ಚಂದ್ರಪ್ರಭ ಅವರು, “ಗಾರೆ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ಸಿನಿಮಾಕ್ಕೆ ಎಂಟ್ರಿ ಕೊಟ್ಟೆ, ಈಗ ಅವಕಾಶ ಇಲ್ಲದೇ ಮತ್ತೆ ಗಾರೆ ಕೆಲಸ ಮಾಡ್ತಿದ್ದೇನೆ. ಸುಮಾರು 17 ವರ್ಷ ಆಗಿತ್ತು ಗಾರೆ ಕೆಲಸ ಮಾಡಿ. ಇದೀಗ 2 ತಿಂಗಳಿನಿಂದ ನಾನು ಮತ್ತೆ ಗಾರೆ ಕೆಲಸ ಮಾಡ್ತಿದ್ದೇನೆ” ಎಂದಿದ್ದಾರೆ.

ಹಲವರು ತಮ್ಮನ್ನು ನೋಡಿ ಅಚ್ಚರಿಪಟ್ಟುಕೊಳ್ಳುತ್ತಾರೆ. ಸೆಲೆಬ್ರಿಟಿ ನೀನು, ಟಿವಿಯಲ್ಲಿ ನೋಡ್ತಿದ್ದೆ. ಈಗ ಗಾರೆ ಕೆಲಸನಾ ಕೇಳ್ತಾರೆ. ಆದರೆ ನನಗೆ ಹಲವು ವರ್ಷ ಅನ್ನ ಕೊಟ್ಟದ್ದೇ ಈ ಕೆಲಸ. ನನ್ನ ತಂದೆ ಈ ಕೆಲಸ ಹೇಳಿಕೊಟ್ಟಿದ್ದರು. ದುಡಿದು ತಿನ್ನಲು ಸಂಕೋಚ ಏಕೆ, ಮೊದಲಿಗೆ ತಂದೆಯ ಜೊತೆ ನಾನು ಈ ಕೆಲಸ ಮಾಡ್ತಿದ್ದೆ. 17 ವರ್ಷ ಆಗಿತ್ತು ನಾನು ಈ ಕೆಲಸ ಮಾಡಿ. ನಾನು ಬೆಂಗಳೂರಿಗೆ ಬಂದು ಸುಮಾರು ಹತ್ತು ವರ್ಷ ಆಯ್ತು. ಅದಕ್ಕಿಂತ ಮುಂಚೆ ರಂಗಾಯಣದಲ್ಲಿದ್ದೆ, ಈಗ ಮದುವೆ ಬೇರೆ ಆಗಿದೆ. ದುಡಿಯುವು ಅನಿವಾರ್ಯ ಎಂದು ಮನದ ಮಾತನ್ನು ತೆರೆದಿಟ್ಟಿದ್ದಾರೆ ನಟ. ಇಲ್ಲಿಯವರೆಗೂ ಒಂದು ಸೀರಿಯಲ್‌ ಅಥವಾ ಸಿನಿಮಾಗಳ ಅವಕಾಶವೇ ಇಲ್ಲ. 10 ವರ್ಷದಲ್ಲಿ 70 ರಿಂದ 80 ಸಿನಿಮಾ ಮಾಡಿದ್ದೇನೆ. ಈ ವರ್ಷವಂತೂ ಒಂದು ಸಿನಿಮಾ ಹಾಗೂ ಒಂದು ಸೀರಿಯಲ್‌ ಕೂಡ ಇಲ್ಲ ಎಂದೂ ನೋವು ತೋಡಿಕೊಂಡಿದ್ದಾರೆ.

View post on Instagram