ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಕೊನೆಗೂ ತಮ್ಮ ಲವ್ ಸ್ಟೋರಿಯನ್ನು ತೆರೆದಿಟ್ಟಿದ್ದಾರೆ. ಆದರೆ ಅಲ್ಲೊಂದು ಟ್ವಿಸ್ಟ್ ಕೂಡ ಕೊಟ್ಟಿದ್ದಾರೆ. ಏನದು ನೋಡಿ!
ಬಿಗ್ಬಾಸ್ (Bigg Boss) ಖ್ಯಾತಿಯ ಚೈತ್ರಾ ಕುಂದಾಪುರ ಮದುವೆಯಾಗಿ ಹೊಸ ಬಾಳ್ವೆ ನಡೆಸುತ್ತಿದ್ದಾರೆ. ಮದ್ವೆಯಾದ ಆರಂಭದಲ್ಲಿಯೇ ಅಲ್ಲೋಲ ಕಲ್ಲೋಲವಾಗಿತ್ತು. ಅವರ ತಂದೆ ಮಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೊನೆಗೆ ಆ ವಿಷಯ ಅಲ್ಲಿಗೇ ತಣ್ಣಗಾಗಿದೆ. ಇಲ್ಲಿಯವರೆಗೂ ಚೈತ್ರಾ ತಮ್ಮ ಲವ್ ಸ್ಟೋರಿ ಬಗ್ಗೆ ಮಾತ್ರ ಹೇಳದೇ ಗುಟ್ಟಾಗಿಯೇ ಇಟ್ಟುಕೊಂಡಿದ್ದರು. 12 ವರ್ಷಗಳ ಲವ್ ಸ್ಟೋರಿ ಎಂದು ಹೇಳಲಾಗಿದ್ದರೂ ಆ ಬಗ್ಗೆ ಹೇಳಲು ಕೇಳಿದಾಗಲೆಲ್ಲಾ ಅವರು ಅಯ್ಯೋ, ಅದಕ್ಕೆಲ್ಲಾ ಟೈಮ್ ಇಲ್ಲ. ಅದರ ಬಗ್ಗೆ ಕೇಳಬೇಡಿ. ನಮ್ಮ ಮದುವೆಗೆ ಬಂದಿದ್ದರೆ ಥ್ಯಾಂಕ್ಸ್ ಅಂದುಬಿಟ್ಟಿದ್ದಾರೆ. 12 ವರ್ಷ ಗುಟ್ಟಾಗಿಯೇ ನಮ್ಮ ಲವ್ ಇತ್ತು. ಮದುವೆಯನ್ನೂ ಸಿಂಪಲ್ ಆಗಿಯೇ ಮಾಡಿಕೊಳ್ಳೋಣ ಅಂದುಕೊಂಡಿದ್ವಿ. ಆದರೆ ಅದು ಎಲ್ಲರಿಗೂ ತಿಳಿದು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು ಎಂದಿದ್ದರು.
ಆದರೆ ಲವ್ ಸ್ಟೋರಿಯ ಬಗ್ಗೆ ಮಾತ್ರ ತುಟಿ ಪಿಟಿಕ್ ಎಂದಿರಲಿಲ್ಲ. ಶ್ರೀಕಾಂತ್ ಅವರು ಕೂಡ ಈಗ ಅದಕ್ಕೆಲ್ಲಾ ಟೈಂ ಇಲ್ಲ ಬಿಡಿ ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದರು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ದಂಪತಿ ಹಾರಿಕೆ ಉತ್ತರ ಕೊಟ್ಟು, ತಮ್ಮ ಪ್ರೀತಿ ಹುಟ್ಟಿದ್ದನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ಈ ಜೋಡಿ ತಮ್ಮ ಸ್ಟೋರಿಯನ್ನು ಹೇಳಿಕೊಂಡಿದೆ. 12 ವರ್ಷಗಳ ಪರಿಚಯವಿದ್ದರೂ ಲವ್ವೂ ಅಲ್ಲ, ನಮ್ಮದು ಅರೆಂಜೂ ಅಲ್ಲ ಎಂದು ಇಂಟರೆಸ್ಟಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ ಇಬ್ಬರೂ.
ನ್ಯೂಸು ಸಂದರ್ಶನದಲ್ಲಿ ದಂಪತಿ ಈ ವಿಷಯವನ್ನು ತೆರೆದಿಟ್ಟಿದ್ದಾರೆ. ನಮ್ಮದು ಲವ್ ಮ್ಯಾರೇಜ್ ಅಲ್ಲ. ತುಂಬಾ ಮಂದಿ ಹಾಗೆಯೇ ಅಂದುಕೊಂಡಿದ್ದಾರೆ. ಆದರೆ ಐ ಲವ್ ಯು ಅಂತ ಯಾವಾಗ್ಲೂ ಮದ್ವೆಗೆ ಮೊದಲು ಹೇಳಿಯೇ ಇಲ್ಲ. ಯಾಕೆಂದ್ರೆ ಇದು ಲವ್ ಮ್ಯಾರೇಜ್ ಅಲ್ಲ. ಬದಲಿಗೆ ಮದ್ವೆಯಾಗೋಣ್ವಾ, ಜಾತಕ ಕೊಡು, ಜಾತಕ ಕೂಡಿ ಬಂದ್ರೆ ಮದ್ವೆಯಾಗೋಣ ಎಂದು ಹೇಳಿ ಜಾತಕ ನೋಡಿ ಮದುವೆಯಾಗಿರೋದಷ್ಟೇ ಎಂಬ ಇಂಟರೆಸ್ಟಿಂಗ್ ವಿಷ್ಯ ಹೇಳಿದ್ದಾರೆ. ಯಾವನಾದ್ರೂ ನಿನ್ನ ಕಟ್ಕೋಬೇಕಲ್ಲಾ, ನಿಂಗ್ಯಾರು ಸಿಗಲಿಕ್ಕಿಲ್ಲ, ಜಾತಕ ಮ್ಯಾಚ್ ಆದ್ರೆ ಸರಿ ನಾವೇ ಮದ್ವೆಯಾಗೋಣ ಬಾ, ಅಂದೆ ಅಷ್ಟೇ ಎಂದಿದ್ದಾರೆ ಚೈತ್ರಾ.
ಅದಕ್ಕೆ ಶ್ರೀಕಾಂತ್ ಅವರು ಈ ಪರಿ ಪಂಚೆ ಉಟ್ಟು, ಶಿಖೆ ಬಿಟ್ಟವರಿಗೆ ಯಾವ ಹೆಣ್ಣೂ ಸಿಗಲ್ಲ. ಅದ್ಕೇ ಹೂಂ ಎಂದು ಒಪ್ಪಿಕೊಂಡೆ. ಇವಳು ಕೂಡ ಕೋಪಿಷ್ಠೆ, ಅದ್ಕೇ ಬೇರೆ ಯಾರೂ ಸಿಗಲ್ಲ ಎಂದು ಮದುವೆಯಾದೆ ಎಂದು ತಮಾಷೆ ಮಾಡಿದ್ದಾರೆ. ಇವಳಿಗೆ ಬೇಗ ಕೋಪ ಬರತ್ತದೆ. ಹಿಂದೆ ಮುಂದೆ ನೋಡಲ್ಲ, ರಪ್ ಅಂತ ಅವರ ಎದುರೇ ಹೇಳುತ್ತಾಳೆ. ಕೋಪ ಅಷ್ಟೇ ಬೇಗ ತಣ್ಣಗಾಗುತ್ತೆ, ಆದ್ರೆ ನನ್ನ ಮೇಲೆ ಇನ್ನೂ ಕೋಪ ತೋರಿಸಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ. ಇನ್ನು ಚೈತ್ರಾ ಅವರು ಮದುವೆಯ ಬಳಿಕ ತಮ್ಮ ಹೆಸರನ್ನು ಸಂಪ್ರದಾಯದಂತೆ ಬದಲಿಸಿಕೊಂಡಿದ್ದಾರೆ. ಮದುವೆಯ ಸಮಯದಲ್ಲಿಯೇ ಈ ಶಾಸ್ತ್ರ ನೆರವೇರಿದೆ. ಚೈತ್ರಾ ಅವರ ಪತಿ, ಶ್ರೀಕಾಂತ್ ಕಶ್ಯಪ್ ಅವರ ತಾಯಿ, ಚೈತ್ರಾ ಅವರಿಗೆ 'ಶ್ರೀಮೇಧಾ' ಎಂದು ನಾಮಕರಣ ಮಾಡಿದ್ದಾರೆ. ವರನ ತಾಯಿ ಬಾಳೆ ಹಣ್ಣನ್ನು ತಿನ್ನಿಸಿ ಹೆಸರನ್ನು ಬದಲಿಸುವ ಶಾಸ್ತ್ರ ಇದು. ಇದಾದ ಬಳಿಕ ಚೈತ್ರಾ ಅವರೇ, ಈ ವೇಳೆ ನನ್ನ ತಾಯಿಯ ಅಮ್ಮನ ಮನೆಯ ಹೆಸರು ರೋಹಿಣಿ. ಭಾರತಿ ಅಂತ ಮದುವೆ ಆದ ಮೇಲೆ ಬದಲಾಯಿಸಿದ್ದಾರೆ. ಆದರೂ ಎಲ್ಲರೂ ಚೈತ್ರಾ ಎಂದೇ ಸದ್ಯ ಕರೆಯುತ್ತಿದ್ದಾರೆ.
