ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಮದುವೆಯಾದ ಬಳಿಕ 'ಶ್ರೀಮೇಧಾ' ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ವಂಚನೆ ಪ್ರಕರಣ ಮತ್ತು ಕೌಟುಂಬಿಕ ವಿವಾದಗಳ ನಡುವೆಯೇ ಈ ಹೆಸರು ಬದಲಾವಣೆ ನಡೆದಿದೆ. 12 ವರ್ಷಗಳ ಗುಟ್ಟಿನ ಪ್ರೇಮಕಥೆಯ ಬಗ್ಗೆ ಮಾತ್ರ ಚೈತ್ರಾ ತುಟಿ ಬಿಚ್ಚಲಿಲ್ಲ.
ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಮದುವೆಯಾಗಿ ಹೊಸ ಬಾಳ್ವೆ ನಡೆಸುವ ಹೊತ್ತಿಗೇ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮೊದಲಿಗೆ ಅವರ ತಂದೆ ಮಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಗಂಡ-ಹೆಂಡತಿ ಇಬ್ಬರೂ ಕಳ್ಳರು ಎಂದಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಚೈತ್ರಾ, ಅಪ್ಪ ಕುಡುಕ ಆಗಿದ್ದು, ಕುಡಿಯಲು ದುಡ್ಡು ಕೊಡದಿದ್ದರೆ ಬಾಯಿಗೆ ಬಂದ ಹಾಗೆ ಹೇಳುತ್ತಾರೆ ಎಂದರು. ಅದಕ್ಕೆಮತ್ತೆ ಅಪ್ಪ ಚಾಟಿ ಬೀಸಿದ್ದರು. ಅದಾದ ಬಳಿಕ, ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ, ಆಕೆಯ ಭಾವ ಹಾಗೂ ಶ್ರೀರಾಮ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಮ್ಯಾನೇಜರ್ ಚಂದ್ರಶೇಖರ್ ಅವರು ಗಂಭೀರ ಆರೋಪಗಳನ್ನು ಮಾಡಿದರು. ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್, ಸಚಿವರಿಗೆ ಸೇರಿದೆ ಎನ್ನಲಾದ ಕೋಟ್ಯಾಂತರ ರೂಪಾಯಿಗಳನ್ನು ತಮ್ಮ ಸೊಸೈಟಿಯಲ್ಲಿ ಠೇವಣಿ ಇಡಿಸಿ, ನಂತರ ಅದರ ಮೇಲೆ ನಕಲಿ ದಾಖಲೆಗಳ ಆಧಾರದ ಮೇಲೆ ಸಾಲ ಪಡೆದು ವಂಚಿಸಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.
ಹೀಗೆ, ಮದುವೆಯಾಗುತ್ತಿದ್ದಂತೆಯೇ ಭಾರಿ ವಿವಾದಕ್ಕೆ ಸಿಲುಕಿರುವ ಚೈತ್ರಾ ಕುಂದಾಪುರ ಅವರು ಇದೀಗ ಹೆಸರು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಹಾಗೆಂದ ಮಾತ್ರಕ್ಕೆ ಹೆಸರು ಬದಲಾವಣೆಗೂ, ಗಲಾಟೆಗೂ ಏನೂ ಸಂಬಂಧ ಇಲ್ಲ ಎನ್ನಿ. ಸಾಮಾನ್ಯವಾಗಿ ಹಿಂದೂಗಳಲ್ಲಿ ಮಹಿಳೆಯರು ಮದುವೆಯಾಗಿ ಪತಿಯ ಮನೆಗೆ ಹೋದ ಬಳಿಕ ಬೇರೆಯ ಹೆಸರು ಇಡುತ್ತಾರೆ. ಇದು ತಲೆತಲಾಂತರಗಳಿಂದ ನಡೆದು ಬಂದಿದೆ. ಆದರೆ ಕಾಲ ಬದಲಾದಂತೆ ಈ ಸಂಪ್ರದಾಯ ಹೋಗಿದೆ. ಅಪ್ಪನ ಮನೆಯನ್ನು ತೊರೆದ ಮಾತ್ರಕ್ಕೆ, ಅವರ ಇಟ್ಟ ಹೆಸರನ್ನೂ ತೊರೆಯುವುದು ಸಲ್ಲದು, ಹೆಣ್ಣಿಗೇಕೆ ಇಷ್ಟೊಂದು ಶಾಸ್ತ್ರ ಸಂಪ್ರದಾಯಗಳು ಎಂದು ಬಹುತೇಕ ಮಹಿಳೆಯರು ಹೆಸರು ಬದಲಾಯಿಸಲು ಕೊಡುವುದಿಲ್ಲ. ಹಲವು ಗಂಡಿನ ಮನೆಯವರು ಕೂಡ ತಮ್ಮ ಸೊಸೆಯ ಹೆಸರನ್ನು ಬದಲಾಯಿಸಲು ಇಚ್ಛೆ ಪಡುವುದಿಲ್ಲ. ಆದರೂ ಈ ಸಂಪ್ರದಾಯವನ್ನು ಕೆಲವು ಕುಟುಂಬಗಳಲ್ಲಿ ನಡೆಸಿಕೊಂಡು ಬರಲಾಗಿದ್ದು, ಅದರಂತೆಯೇ ಚೈತ್ರಾ ಅವರಿಗೂ ಬೇರೆ ನಾಮಕರಣ ಮಾಡಲಾಗಿದೆ.
ಅಬ್ಬಬ್ಬಾ ಇವ್ರು ಚೈತ್ರಾ ಕುಂದಾಪುರನಾ? ನಟಿಯರ ಮೀರಿಸೋ ಪ್ರೀ ವೆಡ್ಡಿಂಗ್ ಶೂಟ್- ವಿಡಿಯೋ ವೈರಲ್!
ಚೈತ್ರಾ ಮದುವೆಯ ಸಮಯದಲ್ಲಿಯೇ ಈ ಶಾಸ್ತ್ರ ನೆರವೇರಿದೆ. ಚೈತ್ರಾ ಅವರ ಪತಿ, ಶ್ರೀಕಾಂತ್ ಕಶ್ಯಪ್ ಅವರ ತಾಯಿ, ಚೈತ್ರಾ ಅವರಿಗೆ 'ಶ್ರೀಮೇಧಾ' ಎಂದು ನಾಮಕರಣ ಮಾಡಿದ್ದಾರೆ. ವರನ ತಾಯಿ ಬಾಳೆ ಹಣ್ಣನ್ನು ತಿನ್ನಿಸಿ ಹೆಸರನ್ನು ಬದಲಿಸುವ ಶಾಸ್ತ್ರ ಇದು. ಇದಾದ ಬಳಿಕ ಚೈತ್ರಾ ಅವರೇ, ಈ ವೇಳೆ ನನ್ನ ತಾಯಿಯ ಅಮ್ಮನ ಮನೆಯ ಹೆಸರು ರೋಹಿಣಿ. ಭಾರತಿ ಅಂತ ಮದುವೆ ಆದ ಮೇಲೆ ಬದಲಾಯಿಸಿದ್ದಾರೆ. ಅದೇ ರೀತಿ ನನಗೂ ಈಗ ಹೆಸರು ಬದಲಾಗಿದೆ ಎಂದರು.
ಅದೇನೇ ಇದ್ದರೂ, ಚೈತ್ರಾ ತಮ್ಮ ಲವ್ ಸ್ಟೋರಿ ಬಗ್ಗೆ ಮಾತ್ರ ಹೇಳದೇ ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. 12 ವರ್ಷಗಳ ಲವ್ ಸ್ಟೋರಿ ಬಗ್ಗೆ ಮದುವೆಯ ಬಳಿಕ ಕೇಳಿದಾಗ ಚೈತ್ರಾ ಅವರು, ಅಯ್ಯೋ, ಅದಕ್ಕೆಲ್ಲಾ ಟೈಮ್ ಇಲ್ಲ. ಅದರ ಬಗ್ಗೆ ಕೇಳಬೇಡಿ. ನಮ್ಮ ಮದುವೆಗೆ ಬಂದಿದ್ದರೆ ಥ್ಯಾಂಕ್ಸ್ ಅಂದುಬಿಟ್ಟಿದ್ದಾರೆ. 12 ವರ್ಷ ಗುಟ್ಟಾಗಿಯೇ ನಮ್ಮ ಲವ್ ಇತ್ತು. ಮದುವೆಯನ್ನೂ ಸಿಂಪಲ್ ಆಗಿಯೇ ಮಾಡಿಕೊಳ್ಳೋಣ ಅಂದುಕೊಂಡಿದ್ವಿ. ಆದರೆ ಅದು ಎಲ್ಲರಿಗೂ ತಿಳಿದು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು ಎಂದಿದ್ದಾರೆ. ಆದರೆ ಲವ್ ಸ್ಟೋರಿಯ ಬಗ್ಗೆ ಮಾತ್ರ ತುಟಿ ಪಿಟಿಕ್ ಎನ್ನಲಿಲ್ಲ. ಶ್ರೀಕಾಂತ್ ಅವರು ಕೂಡ ಈಗ ಅದಕ್ಕೆಲ್ಲಾ ಟೈಂ ಇಲ್ಲ ಬಿಡಿ ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ದಂಪತಿ ಹಾರಿಕೆ ಉತ್ತರ ಕೊಟ್ಟು, ತಮ್ಮ ಪ್ರೀತಿ ಹುಟ್ಟಿದ್ದನ್ನು ಬಿಟ್ಟುಕೊಟ್ಟಿಲ್ಲ!
ಪ್ಲೀಸ್ ಆ ವಿಷ್ಯ ಒಂದನ್ನು ಕೇಳ್ಬೇಡಿ, ಅದ್ಕೆಲ್ಲಾ ಟೈಂ ಇಲ್ಲ... ಎಂದು ನುಣುಚಿಕೊಂಡ ಚೈತ್ರಾ ಕುಂದಾಪುರ!


