ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎಂದು ಸಾರುತ್ತಿರುವ ಬ್ರಹ್ಮಗಂಟು ದೀಪಾಳ, ರಿಯಲ್​ ಮುಖವನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ತಿರೋ ನಟಿಯ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ... 

'ಪ್ಲೀಸ್​ ದೀಪಾ, ನಿನ್ನ ರಿಯಲ್​ ಮುದ್ದು ಮುಖ ತೋರಿಸು ಕಣೆ... ಹೀಗೆ ನೋಡಲು ಆಗಲ್ಲ'... 'ಡೈರೆಕ್ಟರ್​ ಸಾಹೇಬ್ರೇ ಈ ವೇಷ ಯಾವಾಗ ಬದಲಿಸ್ತೀರಾ?', 'ಇವಳ ಒರಿಜಿನಲ್​ ಮುಖ ತೋರಿಸಿಲ್ಲಾ ಅಂದ್ರೆ ಸೀರಿಯಲ್ ನೋಡೋದನ್ನೇ ಬಿಟ್​ಬಿಡ್ತೀವಿ ಅಷ್ಟೇ...' ಹೀಗೆ ಪ್ರತಿನಿತ್ಯವೂ ನಟಿಯ ನಿಜವಾದ ಮುಖವನ್ನು ನೋಡಲು ಕಾತರದಿಂದ ವೀಕ್ಷಕರು ಕಾಯ್ತಿದ್ದರೆ ಅದು ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್​ ನಾಯಕಿ ದೀಪಾಳದ್ದೇ. ಹೌದು. ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​... ಈ ವೇಷದಲ್ಲಿ ಕಾಣಿಸಿಕೊಳ್ತಿರೋ ದೀಪಾಳ ನಿಜವಾದ ಹೆಸರು ದಿಯಾ ಪಾಲಕ್ಕಲ್​. ರಿಯಲ್​ ಮುಖ ಮುದ್ದಾಗಿ ಇರೋದನ್ನು ನೋಡಿರುವ ವೀಕ್ಷಕರು, ಅದೇ ಮುಖವನ್ನೇ ತೋರಿಸಿ ಇನ್ನಾದರೂ ಎಂದು ನಿರ್ದೇಶಕರನ್ನು ದುಂಬಾಲು ಬೀಳುವುದನ್ನು ಕಮೆಂಟ್​ಗಳಲ್ಲಿ ನೋಡಬಹುದಾಗಿದೆ. ಇಂದು ಅರ್ಥಾತ್​ ಜುಲೈ 16 ದಿಯಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನದಿಂದ ಜೀ ಕನ್ನಡ ವಿಶೇಷ ವಿಡಿಯೋ ಒಂದನ್ನು ರಿಲೀಸ್​ ಮಾಡಿದೆ.

Add Asianetnews Kannada as a Preferred SourcegooglePreferred

ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎನ್ನುವ ಕ್ಯಾರೆಕ್ಟರ್​ ನಾಯಕಿ ದೀಪಾಳದ್ದು.

2024 ಜೂನ್​ 17ರಂದು ಆರಂಭವಾಗಿರೋ ಬ್ರಹ್ಮಗಂಟು ಸೀರಿಯಲ್​ ಇದೀಗ ಒಂದು ವರ್ಷ ಮುಗಿಸಿದೆ. ಆದರೂ ಇದುವರೆಗೂ ನಟಿಯ ರಿಯಲ್​ ಮುಖ ತೋರಿಸಿಲ್ಲ ಎನ್ನುವುದು ಅಭಿಮಾನಿಗಳ ಬೇಸರ. ಅಷ್ಟಕ್ಕೂ ದೀಪಾ ಕ್ಯಾರೆಕ್ಟರೇ ಬೇರೆಯಾಗಿರುವುದರಿಂದ, ರಿಯಲ್​ ಮುಖ ತೋರಿಸುವುದು ಕಷ್ಟವೇ. ಆದರೂ ಹಿಂದೊಮ್ಮೆ ನಟಿ, ಮುಂದೊಂದು ದಿನ ಸೀರಿಯಲ್​ನಲ್ಲಿ ರಿಯಲ್​ ಮುಖ ತೋರಿಸುವ ದಿನ ಬಂದರೂ ಬರಬಹುದು ಎಂದಿದ್ದರು. ಆದ್ದರಿಂದ ಆ ದಿನ ಯಾವಾಗ ಎಂದು ವೀಕ್ಷಕರು ಕೇಳ್ತಿದ್ದಾರೆ. ಈಗಲಾದರೂ ಆ ದಿನ ಬರತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ, ದಿಯಾ ಪಾಲಕ್ಕಲ್​ ಈ ಸೀರಿಯಲ್​ನ ತಮ್ಮ ಅನುಭವವನ್ನು ಹೇಳಿಕೊಂಡಿದ್ದರು. ಮೈತುಂಬಾ ಕಪ್ಪು ಬಣ್ಣ, ಹಲ್ಲಿಗೆ ಕ್ಲಿಪ್​ ಹಾಕಿಕೊಂಡು ಶೂಟಿಂಗ್​ ಮಾಡುವ ನೋವಿನ ಅನುಭವವನ್ನು ಅವರು ಶೇರ್​ ಮಾಡಿಕೊಂಡಿದ್ದರು.

ನನಗೆ ಕನಿಷ್ಠ ಒಂದು ಗಂಟೆಯಾದ್ರೂ ಕಪ್ಪು ಬಣ್ಣ ಬಳಿಯಲು ಬೇಕು. ಎಲ್ಲರಿಗಿಂತಲೂ ಮೊದಲೇ ನಾನು ಮೇಕಪ್​ಗೆ ಕುಳಿತರೂ ನನ್ನ ಮೇಕಪ್​ ಎಲ್ಲರಿಗಿಂತಲೂ ಕೊನೆಯದಾಗಿ ಆಗುತ್ತದೆ. ಮುಖಕ್ಕೆ ಮೈ, ಹೊಟ್ಟೆ, ಕುತ್ತಿಗೆ, ಬೆನ್ನು ಎಲ್ಲವೂ ಮ್ಯಾಚ್​ ಮಾಡುವುದು ಕಷ್ಟವೇ ಎಂದಿದ್ದಾರೆ. ಹಲ್ಲಿಗೆ ಕ್ಲಿಪ್​ ಹಾಕುವ ಮುನ್ನ ಡೆಂಟಿಸ್ಟ್​ ಸಲಹೆ ಪಡೆದು ನನಗಾಗಿಯೇ ವಿಶೇಷ ರೀತಿಯಲ್ಲಿ ಕ್ಲಿಪ್​ ರೆಡಿ ಮಾಡಿದರು. ಇದು ನನ್ನ ಹಲ್ಲಿಗೆ ಡ್ಯಾಮೇಜ್​ ಮಾಡುವುದಿಲ್ಲ. ಆದರೆ ಕೆಲವೊಂದು ಈ ಕ್ಲಿಪ್​ ತೆಗೆಯಲು ಪುರುಸೊತ್ತು ಇಲ್ಲದಷ್ಟು ಶೂಟಿಂಗ್​ ಇರುತ್ತೆ. ಆ ಸಮಯದಲ್ಲಿ ತುಂಬಾ ತಲೆನೋವು ಬರುತ್ತೆ ಎಂದು ದಿಯಾ ಹೇಳಿದ್ದಾರೆ. ಆದರೆ ದೀಪಾ ಪಾತ್ರಕ್ಕೆ ಜನರು ತೋರುವ ಪ್ರೀತಿಯ ಮುಂದೆ ಈ ನೋವು ಏನೂ ಅನ್ನಿಸುವುದೇ ಇಲ್ಲ. ಜನ ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಅದೇ ಖುಷಿ ಎಂದಿದ್ದರು.

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

View post on Instagram