ಬ್ರಹ್ಮಗಂಟು ಸೀರಿಯಲ್​ನಲ್ಲಿ ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​ ಹಾಕಿಕೊಂಡು ನಟಿಸ್ತಿರೋ ಬ್ಯೂಟಿ ದಿಯಾ ಪಾಲಕ್ಕರ್​ ಸೀರಿಯಲ್​ಗಾಗಿ ಪಡ್ತಿರೋ ಕಷ್ಟ ಕೇಳಿ! ಸೀರಿಯಲ್​ಗೆ ಒಂದು ವರ್ಷ ಆದ ಹಿನ್ನೆಲೆಯಲ್ಲಿ ನಟಿಯ ಓಪನ್​ ಮಾತು.

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹೌದು. ಇವಳೇ ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎನ್ನುವ ಕ್ಯಾರೆಕ್ಟರ್​ ನಾಯಕಿ ದೀಪಾಳದ್ದು.

ಇದೀಗ ಸೌಂದರ್ಯಳ ಮೋಸದಿಂದ ಗಂಡನಿಗೇ ಇಷ್ಟವಿಲ್ಲದಿದ್ದರೂ ಇನ್ನೊಂದು ಮದುವೆಗೆ ಮುಂದಾಗಿದ್ದಳು ದೀಪಾ. ದೀಪಾಳ ಒಳ್ಳೆಯತನದಿಂದ ಆಕೆಯನ್ನು ಲವ್​ ಮಾಡಲು ಶುರು ಮಾಡಿರೋ ಚಿರುಗೆ ಇದು ಅರಗಿಸಿಕೊಳ್ಳಲಾಗದಿದ್ದರೂ ಆಣೆಗೆ ಕಟ್ಟುಬಿದ್ದು ಮತ್ತೊಂದು ಮದುವೆಗೆ ಅಣಿಯಾಗಿದ್ದ. ಆದರೆ ಇವರದ್ದು ಬ್ರಹ್ಮಗಂಟು ತಾನೆ? ಆ ಮದುವೆ ಸಾಧ್ಯವಾಗಲಿಲ್ಲ. ಸದ್ಯ ಈ ಸೀರಿಯಲ್​ ಇಷ್ಟರಮಟ್ಟಿಗೆ ಬಂದು ನಿಂತಿದೆ. 2024 ಜೂನ್​ 17ರಂದು ಆರಂಭವಾಗಿರೋ ಬ್ರಹ್ಮಗಂಟು ಸೀರಿಯಲ್​ ಇನ್ನೇನು ಕೆಲವೇ ದಿನಗಳಲ್ಲಿ ಒಂದು ವರ್ಷ ಪೂರೈಸಲಿದೆ. ಈ ಸಂದರ್ಭದಲ್ಲಿ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್​ ಈ ಸೀರಿಯಲ್​ನ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಮೈತುಂಬಾ ಕಪ್ಪು ಬಣ್ಣ, ಹಲ್ಲಿಗೆ ಕ್ಲಿಪ್​ ಹಾಕಿಕೊಂಡು ಶೂಟಿಂಗ್​ ಮಾಡುವ ನೋವಿನ ಅನುಭವವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಚಿತ್ತಾರ ಎನ್ನುವ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ, ದಿಯಾ ಪಾಲಕ್ಕರ್​ ನಿಜ ಜೀವನದಲ್ಲಿ ಸುರಸುಂದರಿ. ಸೀರಿಯಲ್​, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್​ ಮಾಡುವುದು ಇದೆ. ಆದರೆ ಈ ಸೀರಿಯಲ್​ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್​ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ನನಗೆ ದೀಪಾ ಕ್ಯಾರೆಕ್ಟರ್​ ಬಗ್ಗೆ ಆರಂಭದಲ್ಲಿ ಹೇಳಿದಾಗ ಸ್ವಲ್ಪ ಮುಜುಗರ ಆಯ್ತು. ಆದರೆ ಇದು ತುಂಬಾ ಚಾಲೆಂಜಿಂಗ್​ ಎನ್ನಿಸಿತು. ನನ್ನದಲ್ಲದ ರೂಪದಿಂದ ನಟನೆ ಮಾಡುವುದು ಚಾಲೆಂಜಿಂಗ್​ ಎನ್ನಿಸಿತು. ಬಾಲನಟಿಯಾಗಿ ನಟಿಸಿದ ಮೇಲೆ ಸಂಪೂರ್ಣ ನಾಯಕಿಯಾಗಿ ಇದೇ ಮೊದಲ ಸೀರಿಯಲ್​. ಆದ್ದರಿಂದ ಚಾಲೆಂಜ್​ ತೆಗೆದುಕೊಳ್ಳೋಣ ಎಂದು ತೆಗೆದುಕೊಂಡೆ ಎಂದಿದ್ದಾರೆ.

ನನಗೆ ಕನಿಷ್ಠ ಒಂದು ಗಂಟೆಯಾದ್ರೂ ಕಪ್ಪು ಬಣ್ಣ ಬಳಿಯಲು ಬೇಕು. ಎಲ್ಲರಿಗಿಂತಲೂ ಮೊದಲೇ ನಾನು ಮೇಕಪ್​ಗೆ ಕುಳಿತರೂ ನನ್ನ ಮೇಕಪ್​ ಎಲ್ಲರಿಗಿಂತಲೂ ಕೊನೆಯದಾಗಿ ಆಗುತ್ತದೆ. ಮುಖಕ್ಕೆ ಮೈ, ಹೊಟ್ಟೆ, ಕುತ್ತಿಗೆ, ಬೆನ್ನು ಎಲ್ಲವೂ ಮ್ಯಾಚ್​ ಮಾಡುವುದು ಕಷ್ಟವೇ ಎಂದಿದ್ದಾರೆ. ಹಲ್ಲಿಗೆ ಕ್ಲಿಪ್​ ಹಾಕುವ ಮುನ್ನ ಡೆಂಟಿಸ್ಟ್​ ಸಲಹೆ ಪಡೆದು ನನಗಾಗಿಯೇ ವಿಶೇಷ ರೀತಿಯಲ್ಲಿ ಕ್ಲಿಪ್​ ರೆಡಿ ಮಾಡಿದರು. ಇದು ನನ್ನ ಹಲ್ಲಿಗೆ ಡ್ಯಾಮೇಜ್​ ಮಾಡುವುದಿಲ್ಲ. ಆದರೆ ಕೆಲವೊಂದು ಈ ಕ್ಲಿಪ್​ ತೆಗೆಯಲು ಪುರುಸೊತ್ತು ಇಲ್ಲದಷ್ಟು ಶೂಟಿಂಗ್​ ಇರುತ್ತೆ. ಆ ಸಮಯದಲ್ಲಿ ತುಂಬಾ ತಲೆನೋವು ಬರುತ್ತೆ ಎಂದು ದಿಯಾ ಹೇಳಿದ್ದಾರೆ. ಆದರೆ ದೀಪಾ ಪಾತ್ರಕ್ಕೆ ಜನರು ತೋರುವ ಪ್ರೀತಿಯ ಮುಂದೆ ಈ ನೋವು ಏನೂ ಅನ್ನಿಸುವುದೇ ಇಲ್ಲ. ಜನ ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಅದೇ ಖುಷಿ ಎಂದಿದ್ದಾರೆ.

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

YouTube video player