ನಟ ಇಮ್ರಾನ್ ಖಾನ್ ತಮ್ಮ ಜೀವನದ ಬಹುಪಾಲು ಭಾರತದಲ್ಲೇ ಕಳೆದಿದ್ದಾರೆ ಮತ್ತು ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಹೊಂದಿದ್ದಾರೆ. ಭಾರತದಲ್ಲೇ ನೆಲೆಸಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಅವರು ಭಾರತೀಯ ಪೌರತ್ವ ಏಕೆ ಪಡೆಯಲಿಲ್ಲ ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಮುಂದಿಟ್ಟಿದೆ. ಇದೀಗ ನ್ಯಾಯಾಲಯ ಕೊಟ್ಟ ತೀರ್ಪೇನು? ನೋಡಿ..
Imran Khan's unconditional apology: ಪ್ರತಿಭಟನೆಯಲ್ಲಿ ಭಾಗವಹಿಸಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್; ಬಾಂಬೆ ಹೈಕೋರ್ಟ್ನಲ್ಲಿ ಬೇಷರತ್ ಕ್ಷಮೆಯಾಚನೆ!
ಮುಂಬೈ, ನ. 2: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಕೊನೆಗೂ ಬಾಂಬೆ ಹೈಕೋರ್ಟ್ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದು, ಸದ್ಯಕ್ಕೆ ಭಾರತದಲ್ಲಿ ತಂಗಲು ಅವರಿಗೆ ಅವಕಾಶ ಸಿಕ್ಕಿದೆ.
ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅಕ್ಟೋಬರ್ 10ರಂದು ಮುಂಬೈನಲ್ಲಿ ಇಮ್ರಾನ್ ಖಾನ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಭಾರತ ತೊರೆಯುವಂತೆ ನೋಟಿಸ್ ಕೂಡ ನೀಡಲಾಗಿತ್ತು. ಇದೀಗ ನವೆಂಬರ್ 2ರಂದು ನ್ಯಾಯಾಲಯದ ಮುಂದೆ ಹಾಜರಾದ ನಟ, ಪ್ರತಿಭಟನೆಯ ಆಯೋಜಕರೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಮತ್ತು ಅದರ ಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವಿರಲಿಲ್ಲ ಎಂದು ತಿಳಿಸಿದ್ದಾರೆ.
ನಟನಿಗೆ ನ್ಯಾಯಾಲಯದ ಖಡಕ್ ಪ್ರಶ್ನೆ
ಇಮ್ರಾನ್ ಖಾನ್ (American CitizenShip) ಅಮೆರಿಕದ ಪ್ರಜೆಯಾಗಿದ್ದು, ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಭಾರತೀಯ ಪ್ರಜೆಗಳಂತೆ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕು ಅವರಿಗೆ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ವಿದೇಶಿ ಪ್ರಜೆಯಾಗಿ ಭಾರತದ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದ ನ್ಯಾಯಾಲಯ, ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಲಿಖಿತ ಭರವಸೆ ನೀಡುವಂತೆ ತಿಳಿಸಿತು.
ಇಮ್ರಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಧೋಂಡ್, ನಟ ತಮ್ಮ ಜೀವನದ ಬಹುಪಾಲು ಭಾರತದಲ್ಲೇ ಕಳೆದಿದ್ದಾರೆ ಮತ್ತು ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಹೊಂದಿದ್ದಾರೆ ಎಂದು ವಿವರಿಸಿದರು. ಆದರೆ, ಭಾರತದಲ್ಲಿ ಬೆಳೆದಿರುವುದರಿಂದ ಅವರ ವಿದೇಶಿ ಪೌರತ್ವದ ಸ್ಥಾನಮಾನ ಬದಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತದಲ್ಲೇ ನೆಲೆಸಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಅವರು ಭಾರತೀಯ ಪೌರತ್ವ ಏಕೆ ಪಡೆಯಲಿಲ್ಲ ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಮುಂದಿಟ್ಟಿದೆ.
ಇತ್ತ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಇಮ್ರಾನ್ ಈ ಹಿಂದೆ ಕೂಡ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಕ್ಷೇಪಿಸಿದರು. ಕ್ಷಮೆಯಾಚನೆಯಿಂದ ಆರೋಪಗಳು ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ ಎಂದೂ ವಾದಿಸಿದರು.
ಡಿಸೆಂಬರ್ 7ಕ್ಕೆ ಮುಂದಿನ ವಿಚಾರಣೆ
ಕೊನೆಗೆ ಇಮ್ರಾನ್ ಖಾನ್ ಅವರ ಬೇಷರತ್ ಕ್ಷಮೆಯಾಚನೆ ಮತ್ತು ಭವಿಷ್ಯದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಭರವಸೆಯನ್ನು ಪರಿಗಣಿಸಿದ ನ್ಯಾಯಾಲಯ, ಭಾರತ ತೊರೆಯುವಂತೆ ನೀಡಿದ್ದ ನೋಟಿಸ್ ಜಾರಿಯನ್ನು ಸದ್ಯಕ್ಕೆ ತಡೆಹಿಡಿದಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿಪಡಿಸಲಾಗಿದೆ. ಈ ಬೆಳವಣಿಗೆ ಇದೀಗ ಬಾಲಿವುಡ್ ವಲಯದಲ್ಲೂ ಗಮನ ಸೆಳೆದಿದೆ.






