ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ಮೋಕ್ಷಿತಾ ಪೈ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಏನದು ನೋಡಿ...
ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ಮೋಕ್ಷಿತಾ ಪೈ ಸಹಜವಾಗಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಫೇಮಸ್ ಆಗಿದ್ದಾರೆ. ಬಿಗ್‌ಬಾಸ್‌ನಲ್ಲಿ ತಮ್ಮ ಮುಗ್ಧ ಮುಖದಿಂದ, ಅಷ್ಟೇ ಸಾಫ್ಟ್ ಆಗಿ ಇರುವಲ್ಲಿ ನಟಿ ಮೋಕ್ಷಿತಾ ಪೈ ಎಲ್ಲರ ಮನಸ್ಸನ್ನು ಗೆದ್ದವರು. 3ನೇ ರನ್ನರ್ ಅಪ್ ಅರ್ಥಾತ್ 4ನೇ ಸ್ಥಾನ ಪಡೆದಿದ್ದಾರೆ ನಟಿ. ಬಿಗ್‌ಬಾಸ್‌ಗೂ ಮುನ್ನ ಪಾರು ಸೀರಿಯಲ್‌ನ ನಟನೆಯಿಂದ ಮನೆ ಮಾತಾಗಿದ್ದವರು ಈಕೆ. ಇನ್ನು ಬಿಗ್‌ಬಾಸ್‌ನಲ್ಲಿ ಸದಾ ಜಗಳದಿಂದಲೇ ಫೇಮಸ್ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೆ ರನ್ನರ್ ಅಪ್ ಆಗಿ ಮಿಂಚಿದರು.
ಇದೀಗ ಇವರಿಬ್ಬರೂ ಸೇರಿ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಇವರಿಬ್ಬರು ಅಪ್ಪಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಸಲಿಗೆ ಈ ಗುಡ್ನ್ಯೂಸ್ ಏನೆಂದರೆ, ಇವರಿಬ್ಬರೂ ಸೇರಿ ವೆಬ್ಸೀರಿಸ್ ಒಂದರಲ್ಲಿ ನಟಿಸುತ್ತಿದ್ದಾರೆ. ಧೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರಿಸ್ ಇದಾಗಿದೆ. ಈಗಾಗಲೇ ಇವರ ಚಿಕ್ಕ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಇನ್ನು ಮೋಕ್ಷಿತಾ ಪೈ ಕುರಿತು ಹೇಳುವುದಾದರೆ, ಇವರು ಪಾರು ಸೀರಿಯಲ್ ಮೂಲಕ ಫೇಮಸ್ ಆದವರು. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಈ ಧಾರಾವಾಹಿಯಲ್ಲಿ ಪಾರುವಿನದ್ದು ತ್ಯಾಗಮಯ ಪಾತ್ರ. ಅದು ಎಷ್ಟರಮಟ್ಟಿಗೆ ಎಂದರೆ ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಾಳೆ. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಾಳೆ. ಇದು ಜನನಿಗೆ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್ ಸುಖಾಂತ್ಯವಾಗಿದೆ. ಇಂಥ ತ್ಯಾಗಮಯ ಪಾತ್ರ ಮಾಡಿದವರು ಮೋಕ್ಷಿತಾ.
ಇನ್ನು, ವಿನಯ್ ಗೌಡ (Vinay Gowda) ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು. ಈ ಕ್ಲಿಪ್ ಅನ್ನು ಎಫ್ಎಫ್ಎಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ ಅಭಿಮಾನಿಗಳು ಸಂಪೂರ್ಣ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಶೀಘ್ರದಲ್ಲಿ ಇದರ ಬಗ್ಗೆ ವಿವರಣೆ ನೀಡಿ ಎನ್ನುತ್ತಿದ್ದಾರೆ.

