ಬಾಂಗ್ಲಾದೇಶಿ ನಟಿ ರಾಯ್ಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆ ಪ್ರಕರಣವು ಪ್ಲಾಸ್ಟಿಕ್ ಚೀಲದಲ್ಲಿ ಅವರ ಛಿದ್ರಗೊಂಡ ದೇಹ ಪತ್ತೆಯಾಗುವುದರೊಂದಿಗೆ ಬೆಳಕಿಗೆ ಬಂದಿತು. ಪತಿಯ ಕಾರಿನಲ್ಲಿದ್ದ ಬ್ಲೀಚಿಂಗ್ ಪೌಡರ್ ವಾಸನೆಯು ಕೊಲೆಯ ರಹಸ್ಯವನ್ನು ಬಯಲು ಮಾಡಿತು.

ಢಾಕಾ (ಆ.24): ಖ್ಯಾತ ಬಾಂಗ್ಲಾದೇಶಿ ನಟಿ ರಾಯ್ಮಾ ಇಸ್ಲಾಂ ಶಿಮು (Raima Islam Shimu) ಅವರ ಭೀಕರ ಕೊ* ಚಿತ್ರರಂಗ ಹಾಗೂ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಶೂಟಿಂಗ್‌ಗಾಗಿ ಮನೆಯಿಂದ ಹೊರಟಿದ್ದ ನಟಿ ನಾಪತ್ತೆಯಾಗಿ, ಕೊನೆಗೆ 24 ಗಂಟೆಗಳ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ತೀವ್ರವಾಗಿ ಛಿದ್ರಗೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಭೀಕರ ಹತ್ಯೆಯ ರಹಸ್ಯವನ್ನು ಕೊನೆಗೆ ಒಂದು ಸಣ್ಣ ಬ್ಲಿಚಿಂಗ್ ಪೌಡರ್ ವಾಸನೆ ಬಯಲಿಗೆಳೆದಿತ್ತು. ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಈ ಕೊಲೆ ಹಾಗೂ ಅದರ ಹಿಂದಿನ ರಹಸ್ಯ ಈಗ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ.

ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ, ನಟಿ ರಾಯ್ಮಾ ಬೆಳಿಗ್ಗೆ 7 ಗಂಟೆಗೆ ಶೂಟಿಂಗ್‌ಗಾಗಿ ಮನೆಯಿಂದ ತೆರಳಿದ್ದರು. ಆದರೆ ಅವರು ಸೆಟ್‌ಗೆ ತಲುಪಲೇ ಇಲ್ಲ. ಗಂಟೆಗಳು ಕಳೆದರೂ ಅವರ ಸುಳಿವು ಸಿಗದಿದ್ದಾಗ, ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದರು.

ಆರಂಭದಲ್ಲಿ ಇದೊಂದು ಸಾಮಾನ್ಯ ನಾಪತ್ತೆ ಪ್ರಕರಣ ಎಂದು ಭಾವಿಸಿದ್ದ ಪೊಲೀಸರು, ತನಿಖೆ ಚುರುಕುಗೊಳಿಸಿದಾಗ ತೀವ್ರ ಆಘಾತಕಾರಿ ಸತ್ಯಗಳು ಹೊರಬಂದವು. ಢಾಕಾದ ಹಜಾರಿಬಾಗ್ ಸೇತುವೆ ಬಳಿಯ ಪೊದೆಗಳಲ್ಲಿ 24 ಗಂಟೆಗಳ ಕಾಲ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಲ್ಪಟ್ಟಿದ್ದ ನಟಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆರಂಭದಲ್ಲಿ ನಟನ ಮೇಲೆ ಅನುಮಾನ

ಪೋಲೀಸರು ನಟಿಯ ಪತಿ ಶಖಾವತ್ ಅಲಿ ನೋಬೆಲ್, ಆಕೆಯ ಸಹೋದರಿ ಮತ್ತು ಮನೆಗೆಲಸದವರನ್ನು ವಿಚಾರಣೆಗೆ ಒಳಪಡಿಸಿದರು. ಎಲ್ಲರೂ ನಟಿ ಬೆಳಿಗ್ಗೆಯೇ ಶೂಟಿಂಗ್‌ಗೆ ತೆರಳಿದ್ದರೆಂದು ಒಂದೇ ರೀತಿಯ ಹೇಳಿಕೆ ನೀಡಿದ್ದರು.

ಬಳಿಕ ಚಿತ್ರರಂಗದವರ ತನಿಖೆ ನಡೆಸಿದಾಗ, ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸದಸ್ಯತ್ವದ ವಿಚಾರವಾಗಿ ನಟಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ನಟ ಜಾಯೇದ್ ಖಾನ್ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಯಿತು. ಆದರೆ, ಜಾಯೇದ್ ಮತ್ತು ರಾಯ್ಮಾ ಕಳೆದ ಎರಡು ವರ್ಷಗಳಿಂದ ಯಾವುದೇ ಸಂಪರ್ಕದಲ್ಲಿರಲಿಲ್ಲ ಎಂಬುದು ತಿಳಿದುಬಂದ ನಂತರ ಆ ಕೋನದಿಂದ ತನಿಖೆಯನ್ನು ಕೈಬಿಡಲಾಯಿತು.

ಖಾಲಿ ಕಾರು ಬಿಚ್ಚಿಟ್ಟ ಕೊಲೆಯ ರಹಸ್ಯ!

ಮತ್ತೆ ಮನೆಯಿಂದಲೇ ತನಿಖೆ ಆರಂಭಿಸಿದ ಪೊಲೀಸರ ಕಣ್ಣು, ರಾಯ್ಮಾ ಮತ್ತು ಆಕೆಯ ಪತಿ ನೋಬೆಲ್ ಬಳಸುತ್ತಿದ್ದ ಕಾರಿನ ಮೇಲೆ ಬಿತ್ತು. ಪೊಲೀಸರು ಕಾರಿನ ಬಾಗಿಲು ತೆರೆಯುತ್ತಿದ್ದಂತೆ ತೀವ್ರವಾದ ಬ್ಲಿಚಿಂಗ್ ಪೌಡರ್ (Bleaching Powder) ವಾಸನೆ ಬಂದಿದೆ. ಕೊಲೆಯ ಆನಂತರ ರಕ್ತದ ಕಲೆ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಲು ಕಾರಿನಲ್ಲಿ ಬ್ಲಿಚಿಂಗ್ ಪೌಡರ್ ಬಳಸಲಾಗಿತ್ತು. ಕಾರಿನಲ್ಲಿ ಮೃತದೇಹವನ್ನು ಕಟ್ಟಿಹಾಕಲು ಬಳಸಿದ್ದ ಅದೇ ಮಾದರಿಯ ಹಗ್ಗದ ಬಂಡಲ್ ಸಹ ಪತ್ತೆಯಾಗಿತ್ತು. ಕಾರಿನಲ್ಲಿ ಸಿಕ್ಕ ಈ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಪತಿ ಶಖಾವತ್ ಅಲಿ ನೋಬೆಲ್‌ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಸ್ನೇಹಿತ ಅಬ್ದುಲ್ಲಾ ಜೊತೆಗೂಡಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ

ಕೊಲೆಗೆ ಕಾರಣವೇನು?

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪತಿಯ ವ್ಯವಹಾರ ಸಂಪೂರ್ಣವಾಗಿ ಕಸಿದುಕೊಂಡು ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಸಂಪೂರ್ಣ ಸಂಸಾರದ ಜವಾಬ್ದಾರಿ ರಾಯ್ಮಾ ಅವರ ಹೆಗಲೇರಿತ್ತು. ಇದರಿಂದಾಗಿ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಜನವರಿ 16, 2022 ರಂದು ಇಬ್ಬರ ನಡುವಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡು, ಆಕ್ರೋಶಗೊಂಡ ಪತಿ ಶಖಾವತ್, ನಟಿಯ ಮೇಲೆ ಹಲ್ಲೆ ನಡೆಸಿ ಗಂಟಲು ಹಿಸುಕಿ ಕೊಂದಿದ್ದ. ಬಳಿಕ ಮೃತದೇಹವನ್ನು ಎರಡು ತುಂಡು ಮಾಡಿ ಚೀಲದಲ್ಲಿ ತುಂಬಿ, ಕಾರಿನಲ್ಲಿ ತಂದು ಪೊದೆಯಲ್ಲಿ ಎಸೆದು ನಾಟಕವಾಡಿದ್ದ.