ಟೈಗರ್ ಶ್ರಾಫ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಟ ಸಲ್ಮಾನ್ ಖಾನ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ ಎನ್ನಲಾದ ಬಿಷ್ಣೋಯ್ ಗ್ಯಾಂಗ್‌ನ ಆಡಿಯೋ ಸಂದೇಶದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ಆತಂಕ ಹೆಚ್ಚಿಸಿದೆ.

ಗುಂಡಿನ ದಾಳಿ ಬಳಿಕ ಟೈಗರ್ ಶ್ರಾಫ್ ಹೇಗಿದ್ದಾರೆ? ಬ್ಯಾಂಡೇಜ್ ಹಾಕಿಕೊಂಡಿರುವ ನಟನ ಫೋಟೋ ವೈರಲ್!

ಬಾಲಿವುಡ್‌ನ ಆ್ಯಕ್ಷನ್ ಹೀರೋ ಟೈಗರ್ ಶ್ರಾಫ್ (Tiger Shroff) ಅವರ ಮೇಲೆ ನಡೆದ ಗುಂಡಿನ ದಾಳಿಯ ಘಟನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಮುಂಬೈನ ಜುಹೂ ಪ್ರದೇಶದಲ್ಲಿ ನಡೆದ ಈ ಘಟನೆ ಬಳಿಕ ನಟನ ಆರೋಗ್ಯದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದು, ಇದೀಗ ಅವರ ನಿವಾಸದಲ್ಲಿ ತೆಗೆದ ಫೋಟೋವೊಂದು ವೈರಲ್ ಆಗಿದೆ. ಎದೆ, ಹೆಗಲು ಮತ್ತು ಎಡಗೈಗೆ ವೈದ್ಯಕೀಯ ಬ್ಯಾಂಡೇಜ್ ಹಾಕಿಕೊಂಡು ಸೋಫಾದ ಮೇಲೆ ಕುಳಿತಿರುವ ಟೈಗರ್ ಅವರ ಚಿತ್ರ ಅಭಿಮಾನಿಗಳ ಗಮನ ಸೆಳೆದಿದೆ. ಟೈಗರ್ ಶ್ರಾಫ್ ಮನೆಯಲ್ಲಿ ಸಹಜವಾಗಿಯೇ ನೀರವ ಮೌನ ಆವರಿಸಿದೆ. ಟೈಗರ್ ಶ್ರಾಫ್ ಜೀವಕ್ಕೇನೂ ಅಪಾಯವಾಗಿಲ್ಲ, ಆದರೆ ಜೀವಭಯದಿಂದ ಓಡಾಡುವಂತಾಗಿದೆ ಎಂಬ ಸಹಜ ಚಿಂತೆ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಭಾನುವಾರ ಸಂಜೆ ಜುಹೂನ ಪುಷ್ಪಾ ಪಾರ್ಕ್ ಸಮೀಪದ ಫುಟ್ಬಾಲ್ ಮೈದಾನದಿಂದ ಟೈಗರ್ ಶ್ರಾಫ್ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಹೊರಡುತ್ತಿದ್ದಾಗ ಈ ಘಟನೆ ನಡೆದಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರನ್ನು ಗುರಿಯಾಗಿಸಿಕೊಂಡು ಐದು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಗಾಜಿನ ಚೂರುಗಳು ಮತ್ತು ಗನ್‌ಪೌಡರ್‌ನಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಟೈಗರ್ ಆರೋಗ್ಯ ವಿಚಾರಿಸಿದ ಏಕನಾಥ್ ಶಿಂಧೆ

ಘಟನೆಯ ಬಳಿಕ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಟೈಗರ್ ಶ್ರಾಫ್ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ನಟನ ತಾಯಿ ಆಯೇಷಾ ಶ್ರಾಫ್ ಕೂಡ ಉಪಸ್ಥಿತರಿದ್ದರು. ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಶಿಂಧೆ, ಮುಂಬೈ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತುಕತೆ ನಡೆಸಿ, ದಾಳಿಕೋರರನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸುವಂತೆ ಸೂಚಿಸಿದ್ದಾರೆ.

ಭೇಟಿಯ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿಗಳು, ಮುಂಬೈನಲ್ಲಿ ಬೆದರಿಕೆ ಮತ್ತು ಹಿಂಸಾಚಾರದ ಮೂಲಕ ಪ್ರಾಬಲ್ಯ ಸಾಧಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಯದ ವಾತಾವರಣ ಸೃಷ್ಟಿಸುವ ಯಾವುದೇ ಗ್ಯಾಂಗ್‌ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ, 1990ರ ದಶಕದಲ್ಲಿ ಮುಂಬೈನಲ್ಲಿ ಹೆಚ್ಚಾಗಿದ್ದ ಗ್ಯಾಂಗ್‌ವಾರ್‌ಗಳನ್ನು ನಿಯಂತ್ರಿಸಿದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಸೆಲೆಬ್ರಿಟಿಗಳ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ

ಟೈಗರ್ ಶ್ರಾಫ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಟ ಸಲ್ಮಾನ್ ಖಾನ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ ಎನ್ನಲಾದ ಬಿಷ್ಣೋಯ್ ಗ್ಯಾಂಗ್‌ನ ಆಡಿಯೋ ಸಂದೇಶದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ಆತಂಕ ಹೆಚ್ಚಿಸಿದೆ. ಸೆಲೆಬ್ರಿಟಿಗಳಾಗಲಿ, ಸಾಮಾನ್ಯ ನಾಗರಿಕರಾಗಲಿ ಪ್ರತಿಯೊಬ್ಬರ ಜೀವದ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ಶಿಂಧೆ ಒತ್ತಿಹೇಳಿದ್ದಾರೆ.

ಟೈಗರ್ ಅವರ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಟ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.