Moda Kavida Vatavarana Review: ಮಳೆ, ಹಸಿರು ಬೆಟ್ಟಗಳು, ಕಾವ್ಯಾತ್ಮಕ ನಿರೂಪಣೆ ಮತ್ತು ಸಸ್ಪೆನ್ಸ್‌ ಕಥೆಯೊಂದಿಗೆ ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಹಾಗೂ ರೇಟಿಂಗ್ ಓದಿ.

ಆರ್‌.ಕೇಶವಮೂರ್ತಿ

ಮಳೆ, ಹಸಿರು ಬೆಟ್ಟ ಗುಡ್ಡಗಳು, ಕಡಿಮೆ ಮಾತು, ಅಷ್ಟೇ ಕಡಿಮೆ ಪಾತ್ರಧಾರಿಗಳು, ಕಾವ್ಯಾತ್ಮಕ ಸಾಲುಗಳು, ಹಿತವಾದ ಸಂಗೀತ, ಕಣ್ಣೋಟ ತೃಪ್ತಿಪಡಿಸುವ ಛಾಯಾಗ್ರಾಹಣ, ಕುತೂಹಲ ಹೆಚ್ಚಿಸುವ ತಿರುವುಗಳು... ಇವು ಚಿತ್ರದ ಪ್ರಧಾನ ಅಂಶಗಳು. ತಣ್ಣಗೆ ಬೀಸುವ ಮಂಜಿನಂತ ಮಳೆಯ ಜೊತೆಗೆ ಒಂದು ಕಾಫಿ ಕುಡಿಯುತ್ತಾ ಅಪ್ಪಟ ಕನ್ನಡದ ಪುಸ್ತಕ ಓದಂತೆ ಇಡೀ ಸಿನಿಮಾ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ.

ಸಿಂಪಲ್‌ ಸುನಿ ಸಿನಿಮಾ, ಕತೆ ಮತ್ತು ಪಾತ್ರಧಾರಿಗಳು ಪ್ರೇಕ್ಷಕರನ್ನು ಡಿಸ್ಟರ್ಬ್‌ ಮಾಡಲ್ಲ. ರಿಲ್ಯಾಕ್ಸ್‌ ಮೂಡ್‌ನಲ್ಲೇ ಕೂರಿಸಿಕೊಂಡು ಸಿನಿಮಾ ಜೊತೆಗೆ ಕರೆದುಕೊಂಡು ಹೋಗುವಷ್ಟು ಆಪ್ತವಾಗುತ್ತದೆ. ಈ ಚಿತ್ರಕ್ಕೂ ಇದೇ ಗುಣ ಇದೆ. ಸೌಪರ್ಣಿಕಾ, ಚೆರಿಶ್, ಸಾತ್ವಿಕ ಹೀಗೆ ಮೂರು ಪ್ಲಸ್‌ ಎರಡು ಪಾತ್ರಗಳು ಸೇರಿ ಒಟ್ಟು ಐದು ಪಾತ್ರಧಾರಿಗಳ ಸುತ್ತಲೇ ಚಿತ್ರದ ಮುಕ್ಕಾಲು ಪಾಲು ಕತೆ ನಡೆದರೂ ಪಾತ್ರಧಾರಿಗಳ ಕೊರತೆ ಅಂತ ಕಾಣಿಸದೆ ಇರುವುದು ಚಿತ್ರದ ಮತ್ತೊಂದು ಹೈಲೈಟ್‌.

ಇಲ್ಲಿ ಚಿತ್ರದ ನಾಯಕಿ ಸೌಪರ್ಣಿಕಾಗೆ ಒಂದು ಸಮಸ್ಯೆ ಇದೆ. ಆ ಸಮಸ್ಯೆಯ ಹಿಂದೆ ಯಾರೋ ಒಬ್ಬ ಸೈಕೋ ಇದ್ದಾನೆ ಎನ್ನುವುದು ಆಕೆಯ ಭಯ ಮತ್ತು ಆತಂಕ. ನಾಯಕಿಯ ಭಯದ ಹಿಂದಿನ ಕತೆ ಏನೆಂಬುದು ಚಿತ್ರದ ಕತೆ ಎಂದು ಸುಲಭಕ್ಕೆ ಹೇಳಬಹುದು. ಆದರೆ, ಇದರ ಜೊತೆಗೆ ಪ್ರೀತಿ- ಪ್ರೇಮ, ಬಾಲ್ಯದ ಒಂಟಿತನದಿಂದ ಮಕ್ಕಳ ಮೇಲಾಗುವ ಪರಿಣಾಮಗಳು, ಪ್ರೀತಿ ಎಂಬುದು ಹೊಂದಾಣಿಕೆಯೋ, ಅರ್ಥ ಮಾಡಿಕೊಳ್ಳುವ ಸಹ ಪಯಣವೋ... ಇತ್ಯಾದಿ ಅಂಶಗಳು ಲೈಟಾಗಿ ಇಲ್ಲಿ ತೆರೆದುಕೊಳ್ಳುತ್ತವೆ.

ಚಿತ್ರ: ಮೋಡ ಕವಿದ ವಾತಾವರಣ

ತಾರಾಗಣ: ಶೀಲಂ, ಮೋಕ್ಷಾ ಕುಶಾಲ್‌, ಸಾತ್ವಿಕ, ರಿಷಿ, ರೇಖಾ ಎಸ್ ಪ್ರಸಾದ್‌

ನಿರ್ದೇಶನ: ಸಿಂಪಲ್ ಸುನಿ

ರೇಟಿಂಗ್: 3

ಜೂಡಾ ಸ್ಯಾಂಡಿ ಸಂಗೀತ ಮತ್ತು ಸಂತೋಷ್‌ ರೈ ಪಾತಾಜೆ ಕ್ಯಾಮೆರಾ ಕಣ್ಣಿನ ಮೂಲಕ ಪ್ರೇಕ್ಷಕರನ್ನು ಪ್ರವಾಸ ಮಾಡಿಸುತ್ತಾರೆ. ಶೀಲಂ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿರುವ ನಟ. ಮೋಕ್ಷಾ ಕುಶಾಲ್‌ ಕನ್ನಡಕ್ಕೆ ದಕ್ಕಿರುವ ಮತ್ತೊಬ್ಬ ಪ್ರತಿಭಾವಂತ ನಟಿ. ತಾನು ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲೆ ಎಂಬುದನ್ನು ಸಾತ್ವಿಕಾ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.