Deadly Killer Review: ಕ್ರಿಮಿನಲ್‌ಗಳನ್ನು ಕರೆದುಕೊಂಡು ಪೊಲೀಸ್‌ ವ್ಯಾನ್‌ ಒಡಿಸ್ಸಾದ ಕಾಡಿನಿಂದ ಕರ್ನಾಟಕದೆಡೆಗೆ ಬರುತ್ತದೆ. ಆಂಧ್ರದ ಸರಹದ್ದಿಗೆ ಬರುವಾಗ ಇವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಾರೆ.

ಪ್ರಿಯಾ ಕೆರ್ವಾಶೆ

ನಾಲ್ಕು ದಶಕಗಳಿಂದ ಸಿನಿಮಾರಂಗದಲ್ಲಿರುವ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಸಾಹಸವನ್ನೇ ಜೀವಾಳವಾಗಿರಿಸಿಕೊಂಡು ಮಾಡಿರುವ ಚಿತ್ರವಿದು. ಆರಂಭದಿಂದ ಕೊನೆಯವರೆಗೂ ಮಾತಿಗಿಂತ ಹೆಚ್ಚು ಸೌಂಡ್‌ ಮಾಡುವುದು ಫೈಟ್‌. ಈ ಆ್ಯಕ್ಷನ್‌ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವುದು ಬ್ಯಾಗ್ರೌಂಡ್‌ ವಾಯ್ಸ್‌. ಅದರ ಅಬ್ಬರ ಕೊಂಚ ತಗ್ಗಿತು ಅನ್ನುವಾಗ ಅದನ್ನು ಮೀರಿಸುವಂತೆ ಕಿವಿಗಪ್ಪಳಿಸುವುದು ರೌಡಿಗಳ ಡೈಲಾಗ್‌. ಒಟ್ಟಿನಲ್ಲಿ ಶುರುವಿಂದ ಕೊನೆಯವರೆಗೂ ಪ್ರೇಕ್ಷಕನನ್ನು ಬಡಿದೆಬ್ಬಿಸುತ್ತಲೇ ಇರುವ ಚಿತ್ರವಿದು.

ಆರು ಜನ ಕುಖ್ಯಾತ ಕ್ರಿಮಿನಲ್‌ಗಳನ್ನು ಕರೆದುಕೊಂಡು ಪೊಲೀಸ್‌ ವ್ಯಾನ್‌ ಒಡಿಸ್ಸಾದ ಕಾಡಿನಿಂದ ಕರ್ನಾಟಕದೆಡೆಗೆ ಬರುತ್ತದೆ. ಆಂಧ್ರದ ಸರಹದ್ದಿಗೆ ಬರುವಾಗ ಇವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಾರೆ. ಕಾಡಿನ ಮಧ್ಯೆ ಒಂಟಿ ಬಂಗಲೆಯಲ್ಲಿ ಇರುವ ಅಮಾಯಕ ಗಂಡ ಹೆಂಡತಿಯನ್ನು ಬೆದರಿಸಿ ಅಲ್ಲಿ ಸೇರಿಕೊಳ್ಳುತ್ತಾರೆ. ಆದರೆ ಆ ಗಂಡ ಹೆಂಡತಿ ನಿಜಕ್ಕೂ ಅಮಾಯಕರಾ, ಅವರ ಉದ್ದೇಶ ಏನು, ಇಲ್ಲಿ ಯಾರು ಬೇಟೆ, ಯಾರು ಬೇಟೆಗಾರ ಅನ್ನುವುದು ಸಿನಿಮಾದ ಹೈಲೈಟ್‌. ಸೆಕೆಂಡ್‌ ಹಾಫ್‌ನಲ್ಲಿ ರುಚಿಗೆ ತಕ್ಕಷ್ಟು ಹಾರರ್‌ ಅನ್ನು ತಂದಿದ್ದಾರೆ. ಕೆಲವು ಸೆಕೆಂಡ್‌ ಉಸಿರೆಳೆದುಕೊಳ್ಳಲು ತಂಪಾದ ಹಳೆಯ ಹಾಡುಗಳ ಝಲಕ್‌ ಇದೆ.

ಚಿತ್ರ : ಡೆಡ್ಲಿ ಕಿಲ್ಲರ್‌

ನಿರ್ದೇಶನ : ಥ್ರಿಲ್ಲರ್‌ ಮಂಜು

ತಾರಾಗಣ: ಅಭಯ್‌ ವೀರ್‌, ನಿವೀಕ್ಷಾ, ಥ್ರಿಲ್ಲರ್‌ ಮಂಜು

ರೇಟಿಂಗ್‌ : 3

ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾಗಳಲ್ಲಿ ರೋಚಕತೆ, ವೇಗ, ಸೌಂಡ್‌ ಇರಬೇಕು ಅನ್ನೋ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತರಲು ಇಲ್ಲಿ ನಿರ್ದೇಶಕರು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಮಜಾ ಅನಿಸುವ ಕೆಲವು ಡಾರ್ಕ್‌ ಕಾಮಿಡಿ ಡೈಲಾಗ್‌ಗಳಿವೆ. ಏಕತಾನತೆ ನೀಗಿಸಲು ರೊಮ್ಯಾಂಟಿಕ್‌ ಹಾಡುಗಳಿವೆಯಾದರೂ ಅದಿಲ್ಲದಿದ್ದರೂ ವ್ಯತ್ಯಾಸವಾಗುತ್ತಿರಲಿಲ್ಲ. ನಾಯಕ ಅಭಯ್‌ವೀರ್‌ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಥ್ರಿಲ್ಲರ್‌ ಮಂಜು ಅವರ ಸಾಹಸವನ್ನು ಕಣ್ತುಂಬಿಸಿಕೊಳ್ಳಲು ಹೇಳಿಮಾಡಿಸಿದ ಸಿನಿಮಾವೆಂದರೆ ಅದು ಡೆಡ್ಲಿ ಕಿಲ್ಲರ್.