ನಂದಕಿಶೋರ್ ಆಕ್ಷನ್ ಕಟ್ ಹೇಳಿರುವ ರಾಣ ಸಿನಿಮಾ ರಿಲೀಸ್ ಆಗಿದೆ. ಶ್ರೇಯಸ್‌ ಮತ್ತು ರೀಷ್ಮಾ ಕಾಂಬಿನೇಷನಲ್ ಸಿನಿಮಾ ಹೇಗಿದೆ? 

ಆರ್‌ ಕೇಶವಮೂರ್ತಿ

ಒಂದು ಮಾಮೂಲಿ ಕತೆಗೆ ಅಗತ್ಯ ಇರುವ ಕಮರ್ಷಿಯಲ್‌ ಅಂಶಗಳನ್ನು ಸೇರಿಸಿ ರೂಪಿಸಿರುವ ಸಿನಿಮಾ ‘ರಾಣ’. ನಿರ್ದೇಶಕ ನಂದಕಿಶೋರ್‌ ಅವರಿಗೆ ಲಾಜಿಕ್‌ಗಳ ಹೊರತಾಗಿಯೂ ಮ್ಯಾಜಿಕ್‌ಗಳಿಂದ ಕೂಡಿದ ಮನರಂಜನೆಯ ಸಿನಿಮಾ ಮಾಡುವುದು ಗೊತ್ತಿದೆ. ಅದನ್ನು ಇಲ್ಲೂ ಮುಂದುವರಿಸಿದ್ದು, ನಿರ್ದೇಶಕರ ಈ ಕಲ್ಪನೆಗೆ ನಾಯಕ ರಾಣ ಪಾತ್ರಧಾರಿ ಶ್ರೇಯಸ್‌ ಮಂಜು ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ನಾಯಕ ಮಧ್ಯಮ ವರ್ಗದ ಕುಟುಂಬದವನು. ಪೊಲೀಸ್‌ ಆಗುವ ಕನಸು. ಇನ್ನೇನು ಪೊಲೀಸ್‌ ಆಗೇ ಬಿಟ್ಟರು ಎನ್ನುವ ಹೊತ್ತಿಗೆ ಹುಟ್ಟಿಕೊಳ್ಳುವ ಆ್ಯಕ್ಷನ್‌ ತಿರುವು. ರೌಡಿಗಳ ಜತೆಗೆ ಮುಖಾಮುಖಿ. ಯಾರೋ ಮಾಡಿದ ಕೊಲೆಗೆ ಹೀರೋ ತಲೆ ಕೊಡುವ ಪರಿಸ್ಥಿತಿ ಎದುರಾಗುವುದು, ಸಹಾಯ ಮಾಡಲು ಹೋಗಿ ಕ್ರಿಮಿನಲ್‌ ಅನಿಸಿಕೊಳ್ಳುವುದು, ಸ್ನೇಹಿತರ ಸಾವು, ಖಳನಾಯಕನ ಅಬ್ಬರ... ಇವಿಷ್ಟುಅಂಶಗಳನ್ನು ಹೊತ್ತುಕೊಂಡು ಸಿನಿಮಾ ತೆರೆ ಮೇಲೆ ಮೂಡುತ್ತದೆ.

HUBBALLI DHABA REVIEW: ಹುಬ್ಬಳ್ಳಿ ಡಾಬಾದಲ್ಲಿ ಕ್ರೌರ್ಯ ಜಾಸ್ತಿ, ಕಲಾವಿದರೇ ಆಸ್ತಿ

ತಾರಾಗಣ: ಶ್ರೇಯಸ್‌ ಮಂಜು, ರೀಷ್ಮಾ ನಾಣಯ್ಯ, ಗಿರಿ, ಅಶೋಕ್‌

ನಿರ್ದೇಶನ: ನಂದಕಿಶೋರ್‌

ರೇಟಿಂಗ್‌ : 3

ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಮೇಕಿಂಗ್‌ ವಿಭಾಗಗಳು ಚಿತ್ರದ ತಾಂತ್ರಿಕತೆಯ ಶಕ್ತಿಯನ್ನು ಹೆಚ್ಚಿಸುತ್ತವೆ. ವನ್‌ ಮ್ಯಾನ್‌ ಆರ್ಮಿಯಂತೆ ರಾಣ, ಇಲ್ಲಿ ಪ್ರತಿ ದೃಶ್ಯದಲ್ಲೂ ತಮ್ಮನ್ನು ತಾವೇ ಸಾಬೀತು ಮಾಡಿಕೊಂಡಂತೆ ಪಾತ್ರವನ್ನು ಅಪ್ಪಿಕೊಂಡಿದ್ದಾರೆ. ಮುಂದೆ ತನ್ನ ಕನಸಿನಂತೆ ರಾಣ ಪೊಲೀಸ್‌ ಆಗುತ್ತಾನೋ ಇಲ್ಲವೋ ಎನ್ನುವ ಕುತೂಹಲದ ಜತೆಗೆ ಮುಖ್ಯ ಖಳನಾಯಕನನ್ನು ಕೊಂದಿದ್ದು ಯಾರು ಎನ್ನುವ ತಿರುವು ಚಿತ್ರದ ಪ್ಲಸ್‌ ಪಾಯಿಂಟ್‌. ಸಿನಿಮಾ ಮುಗಿಯುವ ಹೊತ್ತಿಗೆ ಹೀಗೆ ಎರಡು ತಿರುವುಗಳ ಮೂಲಕ ಪ್ರೇಕ್ಷಕನ ಗಮನ ಸೆಳೆಯುವ ‘ರಾಣ’, ಕುರುಕ್ಷೇತ್ರ ಯುದ್ಧದಲ್ಲಿ ಸಿಕ್ಕಿಕೊಂಡ ಅಭಿಮನ್ಯುನಂತಾಗಿರುತ್ತದೆ. ಹೊಡೆದಾಟದ ಈ ಚಕ್ರವ್ಯೂಹದಿಂದ ನಾಯಕ ಹೇಗೆ ಆಚೆ ಬರುತ್ತಾನೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.

Dil Pasand Review: ಯೇ ದಿಲ್‌ ಮಾಂಗೆ ಮೋರ್‌

ತೀರಾ ಅದ್ಭುತ ಎನಿಸದಿದ್ದರೂ, ಹಳೆಯ ಕತೆ ಎಂದುಕೊಂಡರೂ ‘ರಾಣ’ ಸಿನಿಮಾ ಇಷ್ಟವಾಗಲು ಹಲವಾರು ಕಾರಣಗಳು ಇವೆ. ಶ್ರೇಯಸ್‌ ಮಂಜು ಮೊದಲ ಚಿತ್ರಕ್ಕಿಂತಲೂ ಇಲ್ಲಿ ಮತ್ತಷ್ಟುಶ್ರಮ ಪಟ್ಟಿದ್ದಾರೆ. ಅವರ ಶ್ರಮದಲ್ಲಿ ಚಿತ್ರದ ಫೈಟ್‌ಗಳು, ಡ್ಯಾನ್ಸ್‌ ನೋಡುಗರಿಗೆ ಇಷ್ಟವಾಗುತ್ತದೆ. ನಾಯಕಿಯಾಗಿ ರೀಷ್ಮಾ ನಾಣಯ್ಯ, ಪಾತ್ರದ ಸೊಗಸನ್ನು ಹೆಚ್ಚಿಸಿದ್ದಾರೆ. ಸಂಯುಕ್ತಾ ಹೆಗ್ಡೆ, ವಿಶೇಷ ಹಾಡಿನ ಮೂಲಕ ಆ್ಯಕ್ಷನ್‌ ಚಿತ್ರಕ್ಕೆ ಮತ್ತೇರಿಸುತ್ತಾರೆ.