ಡಿಎಚ್‌

ಸಿನಿಮಾದ ಶೀರ್ಷಿಕೆಗೂ,‘ಹುಟ್ಟು ಅನಿವಾರ್ಯ, ಆದ್ರೆ ಸಾವು ಚರಿತ್ರೆ ಆಗಬೇಕು’ ಎನ್ನುವ ಅದರ ಉಪ ಶೀರ್ಷಿಕೆಗೂ ಈ ಸಿನಿಮಾದ ಕತೆ ಎಷ್ಟರ ಮಟ್ಟಿಗೆ ಹೋಲಿಕೆ ಆಗಿದೆ ಅಂತ ನೋಡಲು ಹೊರಟರೆ ಅದೊಂದು ಪ್ರಶ್ನಾರ್ಹವಾಗುಳಿಯ ಅಂಶ.  ಆದರೆ, ಕೊಲೆಯ ಸೇಡಿನ ಪ್ರತೀಕಾರಕ್ಕೆ ಆತ್ಮಗಳನ್ನು ಸೃಷ್ಟಿಸಿಕೊಂಡು ಕತೆಯನ್ನು ಕೊನೆ ತನಕ ನಿಗೂಢತೆಯಲ್ಲೇ ನಿರೂಪಿಸಿದ ರೀತಿ ಇಲ್ಲಿ ಅದ್ಭುತ. ಆರಂಭದಿಂದ ಅಂತ್ಯದವರೆಗೂ ಅದು ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳ್ಳಿರಿಸಿ, ನೋಡಿಸಿಕೊಂಡು ಹೋಗುವ ರೀತಿ ಇನ್ನು ವಿಶೇಷ.

ಚಿತ್ರ ವಿಮರ್ಶೆ: ಆ ದೃಶ್ಯ

ಇದೊಂದು ಆತ್ಮಗಳ ಕತೆ. ಅದು ಶುರುವಾಗುವುದು ಪ್ರೇಮದ ಜ್ವಾಲೆ ಮತ್ತು ಆಸ್ತಿ ಕಬಳಿಸಲು ನಡೆದ ಕೊಲೆಗಳ ಮೂಲಕ. ಕತೆಯ ಪ್ರಮುಖ ಪಾತ್ರಧಾರಿಗಳಾದ ವಿಕ್ರಮ್, ವೇದ, ಹಾಗೂ ಸುಮತಿ ಒಳ್ಳೆಯ ಸ್ನೇಹಿತರು. ಸುಮತಿಗೆ ವಿಕ್ರಮ ಮೇಲೆ ಒಂದಷ್ಟು ಪ್ರೀತಿ.ಆದರೆ ವಿಕ್ರಮ್‌ಗೆ ವೇದ ಮೇಲೆ ಮನಸ್ಸು. ವೇದಳಿಗೂ ವಿಕ್ರಮ್ ಕಂಡರೆ ಇಷ್ಟ. ಕೊನೆಗೆ ಅವರಿಬ್ಬರು ಪ್ರೀತಿಸುತ್ತಾರೆನ್ನುವ ವಿಷಯ ಗೊತ್ತಾದಾಗ ಸುಮತಿಗೆ ಕೋಪ. ಅದೇ ಕೋಪಕ್ಕೆ ಅಸ್ತ್ರವಾಗುವುದು ಒಂದು ವಿಡಿಯೋ. ಆ ವಿಡಿಯೋ ಮೇಲೆ ರಾಜಕಾರಣಿ ಶಿವಬಸಪ್ಪ, ಇನ್ಸ್‌ಸ್ಪೆಕ್ಟರ್ ಸತ್ಯ ಪ್ರಕಾಶ್ ಕಣ್ಣು.

ಚಿತ್ರ ವಿಮರ್ಶೆ: ಕಪಟ ನಾಟಕ ಪಾತ್ರಧಾರಿ

ವಿಡಿಯೋ ಇದೆ ಎನ್ನುವ ಕಾರಣಕ್ಕಾಗಿಯೇ ಬಲಿಯಾದವರು ವಿಕ್ರಮ್ ಮತ್ತು ವೇದ. ಅವರ ಸಾವಿಗೆ ಪ್ರತೀಕಾರವಾಗಿ ನಡೆಯುವ ಕತೆಯೇ ಮುಂದಿನದ್ದು. ನಿರಂಜನ್ ಹಾಗೂ ಕಾರುಣ್ಯಾ ರಾಮ್ ಪ್ರೇಮಿಗಳಾದರೆ, ಶೀತಲ್ ಶೆಟ್ಟಿ ವಿಲನ್. ನಿರಂಜನ್ ಒಡೆಯರ್ ಹಾಗೂ ಕಾರುಣ್ಯ ರಾಮ್ ನಡುವೆ ಬರುವ ಶೀತಲ್ ಶೆಟ್ಟಿ ಅವರ ಪಾತ್ರಕ್ಕೆ ಕೊಂಚ ನೆಗೆಟಿವ್ ಶೇಡ್ ಇದೆ. ಅದರಲ್ಲಿ ಖಡಕ್ ಅಭಿನಯಿಸಿದ್ದಾರೆ. ಖಳ ನಟರಾಗಿ ಹನುಮಂತೇಗೌಡ, ಮುನಿ, ಡ್ಯಾನಿಯಲ್ ಕುಟ್ಟಪ್ಪ ತಮ್ಮ ಕ್ರೌರ್ಯದ ಅಭಿನಯದಲ್ಲಿ ಪ್ರೇಕ್ಷಕರನ್ನು ಕಾಡಿಸುತ್ತಾರೆ. ಇದುವರೆಗೂ ನೆಗೆಟಿವ್ ಪಾತ್ರಗಳಲ್ಲೇ ಮಿಂಚಿದ್ದ ಭಜರಂಗಿ ಲೋಕಿ ಇಲ್ಲಿ ದಕ್ಷ ಪೊಲೀಸ್ ಅಧಿಕಾರಿ.

ಚಿತ್ರ ವಿಮರ್ಶೆ: ರಂಗನಾಯಕಿ

ತನಿಖಾ ಕಾರ್ಯದ ಅವರ ನಟನೆಯ ಹಾವಭಾವ ಚುರುಕಾಗಿದೆ. ಕುತೂಹಲ ತರಿಸುವ ಈ ಕತೆಗೆ ಪ್ರದೀಪ್ ವರ್ಮ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕೂಡ ಸಾಥ್ ನೀಡಿದೆ. ವಿಜಯ ಭರಮ ಸಾಗರ್ ಹಾಗೂ ಹರೀಶ್ ಶೃಂಗ ಸಾಹಿತ್ಯದ ಗೀತೆಗಳು ಹಿತವೆನಿಸುತ್ತವೆ. ನಾಗರ್ಜುನ್ ಅವರ ಛಾಯಾಗ್ರಹಣ, ವಿಕ್ರಮ್ ಮೋರ್ ಅವರ ಸಾಹಸ ಅಚ್ಚುಕಟ್ಟಾಗಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದರೆ, ಸಿನಿಮಾ ಇನ್ನೊಂದು ಹಂತದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿತ್ತು ಎನ್ನುವುದು ಈ ಚಿತ್ರದ ಕತೆಯಲ್ಲಿರುವ ಕೊರತೆ.