Shivanna Ghost Review: ಮುಗಿಯದ ಕತೆಯ ಮೊದಲ ರೋಚಕ ಅಧ್ಯಾಯ!

ಕನ್‌ಫ್ಯೂಷನ್ನೇ ಇಲ್ಲ ಮತ್ತು ಕನ್‌ಫ್ಯೂಷನ್ನೇ ಎಲ್ಲಾ. ಇತ್ತೀಚಿನ ಸಿನಿಮಾಗಳ ಚಿತ್ರಕತೆಯಂತೆ ಶ್ರೀನಿ ಕೂಡ ಅತ್ಯಂತ ಕಾಂಪ್ಲಿಕೇಟೆಡ್‌ ಆದ ಚಿತ್ರಕತೆಯೊಂದನ್ನು ಹೆಣೆದಿದ್ದಾರೆ. ಅದನ್ನು ಪೂರ್ತಿ ಅರ್ಥಮಾಡಿಕೊ‍ಳ್ಳಬೇಕಿದ್ದರೆ ಗದ್ದೆ ಬಯಲನ್ನು ಡ್ರೋನ್ ಹಾಕಿಕೊಂಡು ನೋಡಬೇಕು. 

Sandalwoood Actor Shivarajkumar Starrer Ghost Movie Review gvd

ನೇರವಾಗಿ ವಿಷಯಕ್ಕೆ ಬಂದರೆ, ಎಂ ಜಿ ಶ್ರೀನಿ ನಿರ್ದೇಶನದ ಘೋಸ್ಟ್‌ ಸಿನಿಮಾವನ್ನು ಎರಡೇ ವಾಕ್ಯಗಳಲ್ಲಿ ವಿವರಿಸಬಹುದು: ಪ್ರತಿಯೊಂದು ಕ್ರಿಯೆಗೂ ಅದನ್ನು ಮಾಡುವವರಿಗೂ ಗೊತ್ತಿಲ್ಲದ ಕಾರಣವೊಂದು ಇದ್ದೇ ಇರುತ್ತದೆ. ನಾಯಕನಾದವನು ಮಿಕ್ಕವರಿಂದ ತನಗೇನು ಬೇಕೋ ಅದನ್ನು ಮಾಡಿಸಬೇಕೇ ಹೊರತು, ಅದನ್ನು ಅವರು ಯಾಕೆ ಮಾಡಬೇಕು ಎಂದು ಹೇಳಬಾರದು. ಕನ್‌ಫ್ಯೂಷನ್ನೇ ಇಲ್ಲ ಮತ್ತು ಕನ್‌ಫ್ಯೂಷನ್ನೇ ಎಲ್ಲಾ. ಇತ್ತೀಚಿನ ಸಿನಿಮಾಗಳ ಚಿತ್ರಕತೆಯಂತೆ ಶ್ರೀನಿ ಕೂಡ ಅತ್ಯಂತ ಕಾಂಪ್ಲಿಕೇಟೆಡ್‌ ಆದ ಚಿತ್ರಕತೆಯೊಂದನ್ನು ಹೆಣೆದಿದ್ದಾರೆ. ಅದನ್ನು ಪೂರ್ತಿ ಅರ್ಥಮಾಡಿಕೊ‍ಳ್ಳಬೇಕಿದ್ದರೆ ಗದ್ದೆ ಬಯಲನ್ನು ಡ್ರೋನ್ ಹಾಕಿಕೊಂಡು ನೋಡಬೇಕು. 

ಈ ವಾಕ್ಯದ ಅರ್ಥವೇನು ಎಂದು ತಿಳಿಯಲು ನೀವು ಸಿನಿಮಾ ನೋಡಬೇಕು. ಸಿನಿಮಾ ನೋಡಿದ ನಂತರವೂ ಡ್ರೋನ್‌ನಲ್ಲಿ ಕಂಡ ಕಟ್ಟಡದ ನಕ್ಷೆ, ಘೋಸ್ಟ್‌ಗೆ ಹೇಗೆ ಗೊತ್ತಾಗುತ್ತದೆ ಎಂಬುದು ಥಟ್ಟನೆ ತಿಳಿಯುವುದಿಲ್ಲ. ಶ್ರೀನಿ ಏಕಕಾಲಕ್ಕೆ ಪಾತ್ರಗಳಿಗೂ ನೋಡುಗರಿಗೂ ಸವಾಲು ಒಡ್ಡುತ್ತಾ ಹೋಗುತ್ತಾರೆ. ಪರಿಸ್ಥಿತಿಯನ್ನು ನಿಗೂಢವಾಗಿಸುತ್ತಾ, ಮತ್ತೆ ತಿಳಿಯಾಗಿಸುತ್ತಾ, ಸುಮ್ಮನೆ ನನ್ನ ಹಿಂದೆ ಬನ್ನಿ ಎಂದು ಬಚ್ಚಿಟ್ಟ ನಿಧಿಯೊಂದನ್ನು ತೋರಿಸಲು ಕರೆದೊಯ್ಯುವ ಕಾಪಾಲಿಕನಂತೆ ಮುಂದೆ ಸಾಗುತ್ತಾರೆ. ಪ್ರೇಕ್ಷಕನ ಕೆಲಸ ಇಷ್ಟೇ: ನಿರ್ದೇಶಕನನ್ನು ಕಣ್ಮುಚ್ಚಿಕೊಂಡು ಹಿಂಬಾಲಿಸುವುದು.

ಘೋಸ್ಟ್
ನಿರ್ದೇಶನ: ಶ್ರೀನಿ
ತಾರಾಗಣ: ಶಿವರಾಜ್‌ಕುಮಾರ್, ಜಯರಾಮ್, ಅನುಪಮ್ ಖೇರ್‌, ದತ್ತಣ್ಣ, ಅರ್ಚನಾ ಜೋಯಿಸ್

ಒಂದು ಬಹುಸಮುಚ್ಛಯವುಳ್ಳ ಜೈಲು. ಅದರೊಳಗೆ ನುಗ್ಗುವ ಉಗ್ರರು. ಅವರ ಅಂಕಿತದಲ್ಲಿರುವ ಕೈದಿಗಳು. ಅವರ ಪೈಕಿ ಒಬ್ಬನ ಹುಡುಕಾಟದಲ್ಲಿರುವ ನಾಯಕ. ಅಲ್ಲಿ ಬಚ್ಚಿಡಲಾಗಿದೆ ಎಂದು ಊಹಿಸಲಾದ ಬಂಗಾರದ ಗಟ್ಟಿ, ಅದರ ಹಿಂದೊಂದು ಕರುಣಾಜನಕ ಕತೆ, ಆ ಕತೆಯ ಹಿಂದೊಬ್ಬ ಮಹಾನ್ ಗ್ಯಾಂಗ್‌ಸ್ಟರ್‌- ಹೀಗೆ ಶ್ರೀನಿ ಹೆಣೆಯುವ ಕತೆಯೊಳಗೆ ಹತ್ತಾರು ಕತೆಗಳು ಸೇರಿಕೊಂಡಿವೆ. ಇಂಥ ಸಿನಿಮಾಗಳ ಸದ್ಗುಣ ಎಂದರೆ ಅವು ನಮ್ಮನ್ನು ಆಲೋಚನೆ ಮಾಡಲು ಬಿಡುವುದಿಲ್ಲ. ಕಿವಿಗೆ ಅಪ್ಪಳಿಸುವ ಸದ್ದು ಮತ್ತು ಧಗಧಗನೆ ಉರಿಯವ ಸ್ಕ್ರೀನು, ಅಲ್ಲಿ ಆಗೀಗ ಚಿಮ್ಮುವ ಗುಂಡು, ಸಿಡಿಯುವ ಕೆಂಡದುಂಡೆ, ಸದ್ದು ಮಾಡುವ ಟೆಲಿಫೋನು, ವಿಕಾರವಾಗಿ ಓಡಾಡಿಕೊಂಡಿರುವ ಪಾತ್ರಧಾರಿಗಳು- ಎಲ್ಲವೂ ನಮ್ಮನ್ನು ನಮಗೆ ಗೊತ್ತೇ ಇಲ್ಲದ ಒಂದು ಲೋಕಕ್ಕೆ ಒಯ್ಯುತ್ತವೆ. 

ಒಮ್ಮೆ ಸಿನಿಮಾ ಶುರುವಾದರೆ, ನಮ್ಮನ್ನು ನಡುವೆ ಎಚ್ಚರಿಸುವುದು ಇಂಟರ್‌ವಲ್. ಕೊನೆಗೆ ಎಚ್ಚರಿಸುವುದು ಎಂಡ್‌ ಟೈಟಲ್. ಮಿಕ್ಕ ಹೊತ್ತಲ್ಲಿ ನಾವು ಚಿತ್ರಕತೆಗೆ ಪರವಶ. ಶ್ರೀನಿ ಅಸಾಧಾರಣ ಕತೆಯನ್ನು ಹೆಣೆಯುತ್ತಾ ಅದನ್ನು ಹೇಳಲು ಸೂಕ್ಷ್ಮ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಗೊತ್ತಾಗುತ್ತದೆ. ಟ್ರೈನ್ ಮಾಡಲಾದ ಇಲಿ, ಕಣ್ಣಿನ ರೆಪ್ಪೆಯಲ್ಲೇ ಸಂದೇಶ ದಾಟಿಸುವ ಕಲೆ, ಪೊಲೀಸರು ಮಾಡುವ ನೂರೆಂಟು ಪಿತೂರಿಗಳು, ಅದನ್ನು ತಡೆಗಟ್ಟುವ ವಿರೋಧಿಪಡೆ, ಸಾವಿರಾರು ಮಂದಿಯನ್ನು ದಡದಡದಡದಡ ಹೊಡೆದು ಹಾಕುವ ಮಲ್ಟಿಗನ್‌- ಆಹಾ, ಸಿನಿಮಾ ಎಂದರೆ ಎಂಥಾ ಮಾಯಾಲೋಕ. ಒಂದೇ ಒಂದು ಸಂತೋಷವೆಂದರೆ ಘೋಸ್ಟ್‌ ಚಿತ್ರದ ನಾಯಕ ರಕ್ತವಿರೋಧಿ. ಯಾರೂ ಸಾಯಬಾರದು ಅನ್ನುವುದು ಅವನಿಚ್ಛೆ.

Baanadariyalli Review: ಪ್ರೇಮ, ವಿರಹ ಮತ್ತು ಸಂಗಮ

ಚಿತ್ರದಲ್ಲಿ ನಾಯಕ ಮೊಲ ಮತ್ತು ಆಮೆಯ ಕತೆ ಹೇಳಿಸುತ್ತಾನೆ. ಕೊನೆಗೂ ಓಟದಲ್ಲಿ ಗೆಲ್ಲುವುದು ಆಮೆಯೋ ಮೊಲವೋ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುವುದಿಲ್ಲ. ಎಲ್ಲವೂ ಮುಕ್ತಾಯವಾಯಿತು ಅನ್ನುವ ಹೊತ್ತಿಗೆ, ಸತ್ತುಬಿದ್ದ ರಾವಣ ಎದ್ದುಕೂತಂತೆ ಮತ್ತೊಂದು ಕತೆ ಶುರುವಾಗುತ್ತದೆ. ಅದು ಎರಡನೆಯ ಭಾಗಕ್ಕೆ ಮುನ್ನುಡಿ. ಶ್ರೀನಿ ಈ ಮಹಾಯಾನಕ್ಕೆ ಮಹೇಂದ್ರ ಸಿಂಹ ಜತೆಯಾಗಿದ್ದಾರೆ. ಎಷ್ಟು ಬೇಕೋ ಅಷ್ಟನ್ನು ಎಷ್ಟು ಸಮರ್ಥವಾಗಿ ತೋರಿಸಬೇಕೋ ಅಷ್ಟು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಅರ್ಜುನ್ ಜನ್ಯ ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತ ನೀಡಿ ನಮ್ಮ ಥಿಂಕಿಂಗ್‌ ಟೈಮ್‌ನ್ನು ಶೂನ್ಯ ಮಾಡುತ್ತಾರೆ. 

ತೆರೆಯ ಮೇಲೆ ಕಾಣುವ ಚಿತ್ತಾರವೆಲ್ಲ ವಿಎಫ್‌ಎಕ್ಸ್‌ ಪರಿಣಾಮವೋ ಕಲಾನಿರ್ದೇಶಕನ ನೈಪುಣ್ಯವೋ ತಿಳಿಯದೇ ಹೋದರೂ ಕಣ್ಸೆಳೆಯುತ್ತದೆ. ಶಿವರಾಜ್‌ಕುಮಾರ್ ಕಡಿಮೆ ಮಾತಾಡುತ್ತಾರೆ, ಕಣ್ಣಿನ ಸನ್ನೆ ಮತ್ತು ಹುಬ್ಬಿನ ಚಲನೆಯಲ್ಲೇ ಸಾಕಷ್ಟು ಹೇಳುತ್ತಾರೆ. ಇಡೀ ಚಿತ್ರದುದ್ದಕ್ಕೂ ಅವರಿಲ್ಲ, ಆದರೆ ಇಡೀ ಚಿತ್ರದ ತುಂಬ ಆವರಿಸಿಕೊಳ್ಳುತ್ತಾರೆ. ಇದ್ದಕ್ಕಿದ್ದಂತೆ ಹಾಜರಾಗಿ ಅಚ್ಚರಿ ಕೊಡುವ ಎರಡು ಪಾತ್ರಗಳನ್ನು ನೀವು ತೆರೆಯ ಮೇಲೆ ಕಾಣಬಹುದು. ಘೋಸ್ಟ್‌ ಅಂದೆ ಅನೂಹ್ಯ, ಭಯ, ಕುತೂಹಲ ಮತ್ತು ಕಥೆ. ಇಲ್ಲೂ ಅಷ್ಟೇ!

Latest Videos
Follow Us:
Download App:
  • android
  • ios