ಒಂದು ಅಪರಾಧ, ಆರು ಹೊರದಾರಿ; 'ಅರಿಷಡ್ವರ್ಗ' ಚಿತ್ರ ವಿಮರ್ಶೆ!
ಒಂದು ಕೊಲೆಯ ನಂತರ ಹುಟ್ಟಿಕೊಳ್ಳುವ ಕ್ರೈಮ್ ಸೀನ್, ಏನೆಲ್ಲ ದಾರಿಗಳನ್ನು ತೋರುತ್ತದೆ ಎಂಬುದು ಆಸಕ್ತಿದಾಯಕ. ತನಿಖೆ, ವಿಕ್ಟೀಮ್ ಆಂಡ್ ವಿಟ್ನಸ್, ಸರಿ- ತಪ್ಪುಗಳು, ಗೊಂದಲಗಳು, ಕಾನೂನು, ನ್ಯಾಯ ಹೀಗೆ ಹತ್ತಾರು ದಾರಿಗಳನ್ನು ಹೊತ್ತುಕೊಂಡೇ ಕ್ರೈಮ್ ಸೀನ್ ಹುಟ್ಟಿಕೊಳ್ಳುತ್ತದೆ ಅನಿಸುತ್ತದೆ.
ಆದರೆ, ಇಲ್ಲೊಂದು ಕ್ರೈಮ್ ಸೀನ್ ಆರು ದಾರಿಗಳನ್ನು ತೋರುತ್ತದೆ. ಅವು ಮನುಷ್ಯನ ಒಳಗಿನ ಗುಣಗಳು. ಈ ಗುಣಗಳೇ ಒಂದು ಕೊಲೆಗೆ ಕಾರಣವಾಗಿ, ಆ ಕೊಲೆಯಿಂದ ಏನೆಲ್ಲ ಕತೆ- ಘಟನೆಗಳು ತೆರೆದುಕೊಳ್ಳುತ್ತವೆ ಎಂಬುದು ಚಿತ್ರದ ಕತೆ. ಅದಕ್ಕೆ ಈ ಚಿತ್ರಕ್ಕೆ ‘ಅರಿಷಡ್ವರ್ಗ’ ಎನ್ನುವ ಸೂಕ್ತವಾದ ಶೀರ್ಷಿಕೆಯನ್ನು ಇಟ್ಟಿದ್ದಾರೆ ನಿರ್ದೇಶಕ ಅರವಿಂದ್ ಕಾಮತ್. ಮಿಸ್ಟರಿಯಲ್ಲೇ ಕೊನೆಯಾಗುವ ಈ ಕತೆಯಲ್ಲಿ ಬರುವ ಆರು ದಾರಿಗಳು, ಆರು ಪಾತ್ರಗಳು ಮತ್ತು ಒಂದು ಕೊಲೆಯ ಇಂಟರ್‌ಲಿಂಕ್‌ನ ಜಾಡು ತಿಳಿಯಬೇಕು ಎಂದರೆ ಸಿನಿಮಾ ನೋಡಬೇಕು.
ಅರಿಷಡ್ವರ್ಗ ಇದ್ದರೇನೇ ಮನುಷ್ಯರಾಗೋದು: ಅರವಿಂದ್ ಕಾಮತ್
ಈ ಚಿತ್ರದ್ದು ತೀರಾ ಸೂಕ್ಷ್ಮವಾದ ಕತೆ ಎನ್ನಬಹುದು. ನಟನಾಗಬೇಕು ಎಂದುಕೊಳ್ಳುವ ಯುವಕ ಏನು ಮಾಡುತ್ತಾನೆ, ನಿರ್ದೇಶಕನಾಗಲು ಬಂದವನು ಏನಾದ, ನಟಿಯಾಗುವ ಕನಸು ಕಂಡ ಹುಡುಗಿ ಎಲ್ಲಿ ಹೋದಳು, ದೇಹ ತೃಪ್ತಿಗಾಗಿ ಹತೊರೆಯುವ ಹೆಣ್ಣಿನ ನಡೆ, ಪತ್ನಿಯ ಆಸೆಗಳನ್ನು ಪೂರೈಸಲಾಗದ ಗಂಡ, ಕಳ್ಳನಾದ ಆಟೋ ಚಾಲಕ... ಇವರ ಬೆನ್ನತ್ತುವ ಪೊಲೀಸ್. ಒಂದೊಂದು ಪಾತ್ರವೂ ಒಂದೊಂದು ಕತೆಯನ್ನು ಹೇಳುತ್ತದೆ. ಯಾವ ಪಾತ್ರದ ಕತೆ ಎಷ್ಟುನಿಜ ಎಂದು ತಿಳಿಯುವ ಜವಾಬ್ದಾರಿ ತನಿಖೆಗೆ ಇಳಿಯುವ ಪೊಲೀಸ್‌ಗಿಂತ ಪ್ರೇಕ್ಷಕರಿಗೇ ವರ್ಗಾವಣೆಯಾಗುತ್ತದೆ. ನಿರ್ದೇಶಕರು ಅಚ್ಚುಕಟ್ಟಾದ ಕ್ರೈಮ್ ಚಾಜ್‌ರ್ ಶೀಟ್ ಬರೆದಿದ್ದಾರೆ. ಅದನ್ನು ಪೊಲೀಸ್ ಅಧಿಕಾರಿ ಚಾಚು ತಪ್ಪದೆ ಓದುತ್ತಾರೆ. ಪ್ರೇಕ್ಷಕರು ಆ ಚಾಜ್‌ರ್ ಶೀಟ್‌ನಲ್ಲಿರುವ ವ್ಯಕ್ತಿ ಮತ್ತು ಘಟನೆಗಳ ಹಿಂದೆ ಪಯಣಿಸುತ್ತಾರೆ. ಸಿನಿಮಾ ಮುಗಿದ ಮೇಲೂ ಪ್ರೇಕ್ಷಕನ ಪಯಣ ನಿಲ್ಲದು.
ಎಲ್ಲರೊಳಗೆ ರಾಮ, ರಾವಣ ಇಬ್ಬರೂ ಇರುತ್ತಾರೆ: ಸಂಯುಕ್ತಾ ಹೊರನಾಡು
ಹೊಟ್ಟೆಪಾಡಿಗೆ ಗಂಡುವೇಶ್ಯೆ ಕೆಲಸ ಮಾಡುವ ಪಾತ್ರದ ಮೂಲಕ ತೆರೆದುಕೊಳ್ಳುವ ಕತೆಯಲ್ಲಿ ಇಷ್ಟೆಲ್ಲ ಪಾತ್ರಗಳು ಬಂದು ನಿರ್ಮಾಪಕ ಪಾತ್ರದಾರಿಯ ಕೊಲೆಯ ಸುತ್ತ ಪ್ರದಕ್ಷಿಣೆ ಹಾಕುತ್ತವೆ. ಇದನ್ನು ನಿರ್ದೇಶಕರು ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಎಂದು ಗುರುತಿಸಿದ್ದಾರೆ. ಈ ಆರು ಅರಿಷಡ್ವರ್ಗಗಳು ಮನುಷ್ಯನೊಳಗೆ ಇದ್ದು, ಅವು ಯಾವಾಗ ಮತ್ತು ಹೇಗೆ ಆಚೆ ಬರುತ್ತವೆ, ಹಾಗೆ ಬಂದ ಮೇಲೆ ಸಂಭವಿಸುವ ಅನಾಹುತ ಎಂಥದ್ದು ಎನ್ನುವ ಅಭಿಪ್ರಾಯವನ್ನು ನೋಡುಗನ ಮುಂದಿಡುತ್ತದೆ ಈ ಸಿನಿಮಾ. ಇಡೀ ಚಿತ್ರಕತೆಯನ್ನು ಪೊಲೀಸ್ ಪಾತ್ರದಾರಿ ನಂದಗೋಪಾಲ್ ಹೊತ್ತು ಸಾಗುತ್ತದೆ. ಇವರ ಸಾರಥ್ಯಕ್ಕೆ ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಲಿಕರ್, ಗಂಡು ವೇಶ್ಯೆಯ ಪಾತ್ರದಾರಿಗಳು ಸ್ಟ್ರಾಂಗ್ ಪಿಲ್ಲರ್‌ಗಳಾಗುತ್ತಾರೆ. ಇಲ್ಲಿ ನಂದ ಅವರ ಕ್ಯಾರೆಕ್ಟರ್, ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವಂತಿದೆ.
ಅರಿಷಡ್ವರ್ಗ ಟ್ರೇಲರ್‌ಗೆ ಭಾರಿ ಮೆಚ್ಚುಗೆ!
ಚಿತ್ರ: ಅರಿಷಡ್ವರ್ಗ
ತಾರಾಗಣ: ಅವಿನಾಶ್, ನಂದಗೋಪಾಲ…, ಸಂಯುಕ್ತ ಹೊರನಾಡು, ಮಹೇಶ್ ಬಂಗ್, ಅಂಜು ಆಳ್ವ ನೈಕ್, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಲಿಕರ್, ಶ್ರೀಪತಿ ಮಂಜನಬೈಲು.
ನಿರ್ದೇಶನ: ಅರವಿಂದ್ ಕಾಮತ್
ನಿರ್ಮಾಣ: ಕನಸು ಟಾಕೀಸ್
ಸಂಗೀತ: ಉದಿತ್ ಹರಿತಾಸ್
ಛಾಯಾಗ್ರಾಹಣ: ರಚನಾ ದೇಶಪಾಂಡೆ ಮತ್ತು ತಂಡ
ಸೂಕ್ಷ್ಮವಾದ ಕತೆಯನ್ನು ತೆರೆ ಹಿಂದೆ ಕೂತು ಲಿಫ್ಟ್ ಮಾಡುವುದು ಸಂಕಲನಕಾರ ಹಾಗೂ ಹಿನ್ನೆಲೆ ಸಂಗೀತ. ಜತೆಗೆ ಛಾಯಾಗ್ರಾಹಣ. ಜಪ್ ಕಟ್‌ಗಳ ಮೂಲಕ ಹೊಸ ರೀತಿಯಲ್ಲಿ ಸ್ಕ್ರೀನ್‌ಪ್ಲೇ ಮೂಲಕ ಅರವಿಂದ್ ಕಾಮತ್ ಮನುಷ್ಯರಲ್ಲಿರುವ ಕೊರತೆಗಳು, ಆ ಕೊರತೆಗಳನ್ನು ದಾಟಲು ನಡೆಸುವ ಸಾಹಸಗಳನ್ನು ನಿರೂಪಿಸುತ್ತಾರೆ. ಥ್ರಿಲ್ಲಿಂಗ್ ಕಂಟೆಂಟ್ ಆಧಾರಿತ ಸಿನಿಮಾ ಬಯಸುವವರಿಗೆ ‘ಅರಿಷಡ್ವರ್ಗ’ ಉತ್ತಮ ಆಯ್ಕೆ.