ಎಲ್ಲರೊಳಗೆ ರಾಮ, ರಾವಣ ಇಬ್ಬರೂ ಇರುತ್ತಾರೆ: ಸಂಯುಕ್ತಾ ಹೊರನಾಡು

ಟ್ರೇಲರ್‌ನಿಂದಲೇ ಕುತೂಹಲ ಮೂಡಿಸಿರುವ ‘ಅರಿಷಡ್ವರ್ಗ’ ಸಿನಿಮಾ ನ.27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಅರವಿಂದ್‌ ಕಾಮತ್‌ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಂದಿಗೆ ಮಾತುಕತೆ.

Samyuktha hornad kannada film Arishadvarga exclusive interview vcs

ಆರ್‌ ಕೇಶವಮೂರ್ತಿ

ಟ್ರೇಲರ್‌ ನೋಡಿದಾಗ ಚಿತ್ರದ ತುಂಬಾ ಡಾರ್ಕ್ ಲೈಫ್‌ ತುಂಬಿದೆ ಅನಿಸುತ್ತದಲ್ಲವೇ?

ಒಂದು ರೀತಿ ಹೌದು. ಅಂದರೆ ನಮ್ಮೊಳಗೆ ಆರು ವೈರಿಗಳು ಇದ್ದಾರೆ. ಅವರು ನಮ್ಮ ಗುಣಗಳ ರೂಪದಲ್ಲಿದ್ದಾರೆ. ಆ ಗುಣಗಳನ್ನು ಹೇಳುವ ಕತೆಯೇ ಈ ಚಿತ್ರದ್ದು. ವೈರಿಗಳು ಎಂದ ಮೇಲೆ ಡಾರ್ಕ್ನೆಸ್‌ ಇದ್ದೇ ಇರುತ್ತದೆ.

ಈ ಆರು ವೈರಿ ಅಥವಾ ಗುಣಗಳು ಯಾವುವು?

ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗೂ ಮತ್ಸರ. ಇವು ನಮ್ಮ ಬದುಕಿನ ಭಾಗವಾಗಿರುವ ಆರು ಗುಣಗಳು. ಇವು ನಮ್ಮ ಶತ್ರುಗಳು ಕೂಡ. ಈ ಶತ್ರುಗಳು ಪ್ರತಿಯೊಬ್ಬರಲ್ಲೂ ಇವೆ. ಸಂದರ್ಭಗಳಿಗೆ ತಕ್ಕಂತೆ ಅವು ಆಚೆ ಬಂದು ಮನುಷ್ಯನ ನಿಜ ಬಣ್ಣ ಹೇಳುತ್ತ ಹೋಗುತ್ತದೆ. ಆದರೆ, ಯಾವಾಗ ಈ ಆರು ಗುಣಗಳ ಮೇಲೆ ನಮಗೆ ಹಿಡಿತ ಸಿಗುತ್ತದೋ ಆಗ ನಾವು ಗೆದ್ದಂತೆ.

 

ಇದು ಮನುಷ್ಯರ ಮತ್ತೊಂದು ಮುಖವಾ?

ವಸ್ಟ್‌ರ್‍ ಆ್ಯಂಡ್‌ ಬೆಸ್ಟ್‌ ಫೇಸ್‌ ಎರಡೂ ಇರುತ್ತದೆ. ಪ್ರತಿಯೊಬ್ಬರ ಒಳಗೆ ರಾಮ ಮತ್ತು ರಾವಣ ಇಬ್ಬರು ಇರುತ್ತಾರೆ. ರಾವಣ ಇಲ್ಲದೆ ರಾಮ ಇರಲ್ಲ. ಹಾಗೆ ರಾಮ ಇಲ್ಲದೆ, ರಾವಣ ಇರಲಾಗದು. ರಾಮ ಯಾವಾಗ ಆಚೆ ಬರುತ್ತಾನೆ, ರಾವಣ ಯಾವಾಗ ಆಚೆ ಬರುತ್ತಾನೆ ಎಂಬುದರ ಮೇಲೆ ಮನುಷ್ಯರ ನಿಜ ಮುಖವಾಡಗಳು ನಿಂತಿರುತ್ತವೆ. ಅದನ್ನು ಆರು ಗುಣಗಳ ಮೂಲಕ ನಿರ್ದೇಶಕರು ಹೇಳಿದ್ದಾರೆ.

ಇಂಥ ಚಿತ್ರದಲ್ಲಿ ನಿಮ್ಮ ಪಾತ್ರವೇನು?

ನನ್ನ ಪಾತ್ರದ ಹೆಸರು ಸಾಕ್ಷಿ. ಕನಸುಗಳನ್ನು ಇಟ್ಟುಕೊಂಡಿರುವ ಹುಡುಗಿ. ಜೀವನದಲ್ಲಿ ಏನೋ ಆಗಬೇಕು ಅಂತ ಬಂದವಳಿಗೆ ಒಂದು ಕೊಲೆಯಿಂದ ಏನೆಲ್ಲ ಅವಾಂತರ, ಅನಾಹುತಗಳಾಗುತ್ತವೆ ಎಂಬುದನ್ನು ಹೇಳುವಂತಹ ಪಾತ್ರ. ಕಾಮ ಮತ್ತು ಕ್ರೋಧ ಇವೆರಡು ಗುಣಗಳು ನನ್ನ ಪಾತ್ರವನ್ನು ಆವರಿಸಿಕೊಂಡಾಗ ಏನಾಗುತ್ತದೆ ಎಂಬುದನ್ನು ನೋಡಬಹುದು.

ಅರಿಷಡ್ವರ್ಗ ಟ್ರೇಲರ್‌ಗೆ ಭಾರಿ ಮೆಚ್ಚುಗೆ!

ನೀವು ಈ ಸಿನಿಮಾ ಒಪ್ಪಲು ಕಾರಣ?

ನಿರ್ದೇಶಕ ಅರವಿಂದ್‌ ಕಾಮತ್‌ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದ ವಿಷಯ ನನಗೆ ಇಷ್ಟವಾಗಿದ್ದು. ತುಂಬಾ ಸೂಕ್ಷ್ಮವಾದ ಕತೆ. ಯಾರೂ ನಿರೀಕ್ಷೆ ಮಾಡದ ಪ್ರಶ್ನೆ, ಗುಣ ಮತ್ತು ವರ್ತನೆಗಳನ್ನು ಆಧರಿಸಿ ರೂಪಿಸಿರುವ ಕತೆಯನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದು. ಜತೆಗೆ ಈಗ ತುಂಬಾ ಪ್ರಸ್ತುತ ಎನಿಸುವ ಕತೆಯಾಗಿದ್ದರಿಂದ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ.

Samyuktha hornad kannada film Arishadvarga exclusive interview vcs

ಕತೆಗೂ ಮತ್ತು ಟೈಟಲ್‌ಗೂ ಇರುವ ನಂಟು ಏನು?

ಚಿತ್ರದ ಹೆಸರು ಅರಿಷಡ್ವರ್ಗ. ಅಂದರೆ ಆರು. ಚಿತ್ರದ ಕತೆ ಕೂಡ ಈ ಆರು ಗುಣಗಳ ಸುತ್ತ ಸಾಗುತ್ತದೆ. ಇಲ್ಲಿ ನನ್ನ ಒಳಗೊಂಡಂತೆ ಆರು ಪಾತ್ರಗಳಿವೆ. ಪ್ರತಿಯೊಂದು ಪಾತ್ರದ ಮೂಲಕವೂ ಒಂದೊಂದು ಕತೆ ತೆರೆದುಕೊಳ್ಳುತ್ತದೆ. ಟೈಟಲ್‌ ಕೂಡ ಇದನ್ನೇ ಪ್ರತಿನಿಧಿಸುತ್ತದೆ. ಅವಿನಾಶ್‌, ನಂದಗೋಪಾಲ್‌, ಅಂಜು ಆಳ್ವ ನೈಕ್‌, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್‌ ಕುಪ್ಲಿಕರ್‌, ಶ್ರೀಪತಿ ಮಂಜನಬೈಲು ಚಿತ್ರದ ಉಳಿದ ಪಾತ್ರಧಾರಿಗಳು.

ಈ ಹೊತ್ತಿನಲ್ಲಿ ಥಿಯೇಟರ್‌ಗೆ ಬರುತ್ತಿರುವ ಹಿಂದಿನ ಧೈರ್ಯ ಏನು?

ಬದಲಾಗಿರುವ ಪ್ರೇಕ್ಷಕರ ಮನಸ್ಸು. ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೇ ಕೂತಿದ್ದವರು ಓಟಿಟಿಗಳಲ್ಲಿ ಜಗತ್ತಿನ ಬಹಳಷ್ಟುಸಿನಿಮಾಗಳನ್ನು ನೋಡಿದ್ದಾರೆ. ಅವರಿಗೆ ಕಂಟೆಂಟ್‌ ಮಹತ್ವ ಏನೆಂದು ಗೊತ್ತಾಗಿದೆ. ಒಂದು ಸಿನಿಮಾಗೆ ಕತೆ ಎಷ್ಟುಮುಖ್ಯ, ಸ್ಟೋರಿ ವ್ಯಾಲ್ಯೂ ಏನೆಂದು ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ‘ಅರಿಷಡ್ವರ್ಗ’ ಕೂಡ ಜನ ಯಾವ ರೀತಿಯ ಕತೆ- ಕಂಟೆಂಟ್‌ ನಿರೀಕ್ಷೆ ಮಾಡುತ್ತಿದ್ದಾರೋ ಅದನ್ನೇ ಹೇಳಲು ಹೊರಟಿದೆ. ಹೀಗಾಗಿ ಕತೆ ಮೇಲೆ ನಂಬಿಕೆ ಇಟ್ಟು ಚಿತ್ರಮಂದಿರಕ್ಕೆ ಬರುತ್ತಿದ್ದೇವೆ.

Latest Videos
Follow Us:
Download App:
  • android
  • ios