ಹಳ್ಳಿ ಮಣ್ಣಿನ ವಾಸನೆ, ಧಾರ್ಮಿಕ ನಂಬಿಕೆ, ವೀರಗಾಸೆ ಮತ್ತು ಸಾಮಾಜಿಕ ಹೋರಾಟದ ಅಂಶಗಳನ್ನು ಒಳಗೊಂಡ ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ ರಾಘವೇಂದ್ರ ಗಮನ ಸೆಳೆಯುತ್ತಾರೆ. ಗೌಡನ ದರ್ಪದ ವಿರುದ್ಧ ಯುವಕನ ಬಂಡಾಯ..
ಆರ್.ಎಸ್.
ಹಳ್ಳಿಗಾಡಿನ ಮಣ್ಣಿನ ವಾಸನೆ, ಧಾರ್ಮಿಕ ಆಚರಣೆ ಹಾಗೂ ಊಳಿಗಮಾನ್ಯ ಪದ್ಧತಿಯ ಕ್ರೂರ ಮುಖಗಳನ್ನು ಒಟ್ಟಿಗೆ ತೆರೆಯ ಮೇಲೆ ತರುವ ಪ್ರಯತ್ನವಿದು. ಇಡೀ ಊರನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಮೆರೆಯುವ ಅಹಂಕಾರಿ ಗೌಡನ ದರ್ಪ ಒಂದೆಡೆಯಾದರೆ, ಅದೇ ಮಣ್ಣಿನಲ್ಲಿ ಬೆಳೆದು ಊರ ಒಳಿತಿಗಾಗಿ ತುಡಿಯುವ ನಿಷ್ಠಾವಂತ ಯುವಕನ ಬಂಡಾಯ ಇನ್ನೊಂದೆಡೆ. ಈ ಎರಡು ಧ್ರುವಗಳ ನಡುವಿನ ಕಾದಾಟವೇ ಚಿತ್ರದ ಮುಖ್ಯ ಜೀವಾಳ.
ಕೇವಲ ವೈಯಕ್ತಿಕ ದ್ವೇಷದ ಕಥೆಯಾಗಷ್ಟೇ ಉಳಿಯದೆ, ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಸೂಕ್ಷ್ಮ ಪಿಡುಗುಗಳನ್ನು ನಿರ್ದೇಶಕ ವಸಂತ್ ಕುಮಾರ್ ಮುನ್ನೆಲೆಗೆ ತಂದಿದ್ದಾರೆ. ಇದಕ್ಕೆ ವೀರಗಾಸೆಯ ಸಾಂಸ್ಕೃತಿಕ ಕಂಪನ್ನು ಮತ್ತು ವೀರಭದ್ರ ಸ್ವಾಮಿಯ ಪುರಾಣ ಹಿನ್ನೆಲೆಯನ್ನು ಬೆಸೆದಿರುವುದು ಚಿತ್ರಕ್ಕೊಂದು ಗಾಂಭೀರ್ಯ ತಂದುಕೊಟ್ಟಿದೆ. ನಿರ್ದೇಶಕರು ಕಥಾವಸ್ತುವನ್ನು ಅಷ್ಟೇ ಶ್ರದ್ಧೆಯಿಂದ ಕಟ್ಟಿಕೊಟ್ಟಿದ್ದರೂ, ನಿರೂಪಣೆಯಲ್ಲಿ ಹಲವು ವಿಚಾರಗಳನ್ನು ಏಕಕಾಲಕ್ಕೆ ತುರುಕಲು ಹೋಗಿರುವುದು ವೇಗಕ್ಕೆ ತುಸು ತಡೆ ಒಡ್ಡುತ್ತದೆ. ದ್ವಿತೀಯಾರ್ಧದಲ್ಲಿ ಅನಗತ್ಯ ಎನ್ನಿಸುವ ಕೆಲವು ಸನ್ನಿವೇಶಗಳನ್ನು ಚೊಕ್ಕವಾಗಿ ಕತ್ತರಿಸಿದ್ದರೆ ಚಿತ್ರದ ತೂಕ ಹೆಚ್ಚುತ್ತಿತ್ತು.
ಚಿತ್ರ: ರುದ್ರಾಭಿಷೇಕಂ
ನಿರ್ದೇಶನ: ವಸಂತ್ ಕುಮಾರ್
ತಾರಾಗಣ: ವಿಜಯ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್, ಬಲರಾಜವಾಡಿ
ರೇಟಿಂಗ್: 3
ವಿಜಯ ರಾಘವೇಂದ್ರ ತಮ್ಮ ಎಂದಿನ ಪರಿಪಕ್ವ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಹಳ್ಳಿಯ ಮುಗ್ಧ ಚೆಲುವೆಯಾಗಿ ಗಮನ ಸೆಳೆಯುತ್ತಾರೆ. ದುಷ್ಟ ಗೌಡನಾಗಿ ಬಲರಾಜವಾಡಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ವಸಂತ್ ಕುಮಾರ್ ಅತಿಥಿ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸಾಂಪ್ರದಾಯಿಕ ಕಲೆ, ನಂಬಿಕೆ ಮತ್ತು ಸಾಮಾಜಿಕ ಹೋರಾಟದ ಹೂರಣವಿರುವ ಹಳ್ಳಿ ಕಥೆಗಳನ್ನು ಇಷ್ಟಪಡುವ ಚಿತ್ರಪ್ರೇಮಿಗಳನ್ನು ಗಮನದಲ್ಲಿರಿಸಿಕೊಂಡು ಮೂಡಿಬಂದಿರುವ ಚಿತ್ರ.


