ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ ಏನಾಗುತ್ತದೆ ಎಂಬ ಕಲ್ಪನೆಯ ‘ಕಾಮನ್ ಮ್ಯಾನ್’ ರಾಜಕೀಯ ವಿಡಂಬನೆಯ ಸಿನಿಮಾ. ಗೌರಿಶಂಕರ್ ಅವರ ಅಭಿನಯ ಗಮನ ಸೆಳೆಯುತ್ತದೆ.

ರಾಜ್

ಸಾಮಾಜಿಕ, ರಾಜಕೀಯ ವಿದ್ಯಮಾನವನ್ನು ಮುನ್ನೆಲೆಗೆ ತಂದು, ಸಾಮಾನ್ಯ ಪ್ರಜೆಯೊಬ್ಬ ನೇರವಾಗಿ ಆಡಳಿತದ ಚುಕ್ಕಾಣಿ ಹಿಡಿದರೆ ಏನಾಗಬಹುದು ಎಂಬ ಕಲ್ಪನೆಯೊಂದಿಗೆ ತೆರೆಗೆ ಬಂದಿರುವ ಚಿತ್ರವಿದು. ಸ್ಪಷ್ಟ ರಾಜಕೀಯ ವಿಡಂಬನೆಯ ಸಿನಿಮಾ.

ಹೋರಾಟಗಾರ ತಂದೆಯ ಅಗಲಿಕೆಯ ನೋವನ್ನು ಹೊತ್ತಿರುವ ಯುವ ವಕೀಲನೊಬ್ಬ ಒಂದು ಹಂತದಲ್ಲಿ ನೇರವಾಗಿ ವಿಧಾನಸೌಧದ ಹಕ್ಕನ್ನೇ ಪ್ರಶ್ನಿಸಿ ಬೀದಿಗಿಳಿಯುತ್ತಾನೆ. ಒಂದೆಡೆ ಯುವಕ, ಇನ್ನೊಂದೆಡೆ, ಜ್ಯೋತಿಷಿಯ ಮಾತಿಗೆ ಬೆದರಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಮುಖ್ಯಮಂತ್ರಿಯ ಮಧ್ಯದ ಹೋರಾಟದಲ್ಲಿ ಈ ಕತೆ ಮುಂದೆ ಸಾಗುತ್ತದೆ. ಅಧಿಕಾರ ಹಿಡಿದ ಆ ಯುವಕ ಸಚಿವರನ್ನು ವಾಸ್ತವಕ್ಕೆ ತರಲು ನಡೆಸುವ ಕಸರತ್ತು ಮತ್ತು ಆತನ ಹೋರಾಟವೇ ಚಿತ್ರದ ಮುಖ್ಯ ಆಕರ್ಷಣೆ.

‘ಕೆರೆಬೇಟೆ’ ಮೂಲಕ ಭರವಸೆ ಹುಟ್ಟಿಸಿದ್ದ ಗೌರಿಶಂಕರ್ ಈ ಚಿತ್ರದಲ್ಲಿ ತಮಗೆ ಸಿಕ್ಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾವೇ ಕಥೆ ಬರೆದು ನಿರ್ಮಿಸಿರುವ ಡಾ. ನರಸಿಂಹ ಮೂರ್ತಿ ಖಳನಾಯಕ ಸಿಎಂ ಪಾತ್ರದಲ್ಲಿ ಕಾಣಿಸಿಕೊಂಡು, ಅಧಿಕಾರದಾಹಿ ರಾಜಕಾರಣಿಯ ನಡವಳಿಕೆಯನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ತಂದಿದ್ದಾರೆ.

ಚಿತ್ರ: ಕಾಮನ್ ಮ್ಯಾನ್

ನಿರ್ದೇಶನ: ಓಂ ಸಾಯಿ ಪ್ರಕಾಶ್

ತಾರಾಗಣ: ಗೌರಿಶಂಕರ್, ಡಾ. ಎನ್. ನರಸಿಂಹ ಮೂರ್ತಿ, ಸೋನಾ ಲಾದ್ವಾ, ಪ್ರಕಾಶ್ ತೂಮಿನಾಡು

ರೇಟಿಂಗ್: 3

ಇಂದಿನ ರಾಜಕೀಯ ಪರಿಸ್ಥಿತಿ, ಕಮಿಷನ್ ಹಾವಳಿ ಮತ್ತು ಬೂಟಾಟಿಕೆಯ ಬದುಕಿಗೆ ಕನ್ನಡಿ ಹಿಡಿಯುವ ವಿಷಯವನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ. ಆದರೆ, ನಿರೂಪಣೆಯಲ್ಲಿ ಕೊಂಚ ಹಳೆಯ ಮೇಕಿಂಗ್ ಶೈಲಿ ಕಾಣುವುದರಿಂದ ಹೊಸತನ ನಿರೀಕ್ಷಿಸುವವರಿಗೆ ತುಸು ನಿರಾಸೆಯಾಗಬಹುದು. ಸಿನಿಮೀಯ ತರ್ಕಗಳನ್ನು ಬದಿಗಿಟ್ಟು, ಭ್ರಷ್ಟ ವ್ಯವಸ್ಥೆಗೆ ಒಬ್ಬ ಸಾಮಾನ್ಯ ಪ್ರಜೆ ನೀಡುವ ಖಡಕ್ ಉತ್ತರವನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಬಹುದು. ಜನಸಾಮಾನ್ಯನ ಅಂತರಂಗದ ಆಕ್ರೋಶಕ್ಕೆ ಧ್ವನಿಯಾಗುವಲ್ಲಿ ಈ ಪ್ರಯತ್ನ ಗಮನ ಸೆಳೆಯುತ್ತದೆ.