ಫ್ಲ್ಯಾಶ್‌ಬ್ಯಾಕ್ ತಂತ್ರದಲ್ಲಿ ಸಾಗುವ ಈ ಚಿತ್ರದಲ್ಲಿ ರಿಪೀಟ್ ಆಗುವ ದೃಶ್ಯಗಳು ಸೇರಿದಂತೆ ಒಂದಿಷ್ಟು ಕೊರತೆಗಳು ಇದ್ದರೂ, ಕನಸು ನನಸು ಮಾಡಿಕೊಳ್ಳಲು ಅಡ್ಡದಾರಿ ಹಿಡಿದರೆ ಏನಾಗುತ್ತದೆ ಎನ್ನುವ ಸಂದೇಶವನ್ನು ಅಚ್ಚುಕಟ್ಟಾಗಿ ಹೇಳುವಲ್ಲಿ ಚಿತ್ರ ಯಶಸ್ವಿ ಆಗುತ್ತದೆ.
ಆರ್. ಕೇಶವಮೂರ್ತಿ
ಹಣ, ಜನಪ್ರಿಯತೆಯೇ ಮುಖ್ಯ ಎಂದುಕೊಂಡು ಹೊರಡುವ ರೂಪದರ್ಶಿಯೊಬ್ಬಳ ಬದುಕು ಯಾವ ಯಾವ ದಾರಿಗಳಲ್ಲಿ ಪಯಣಿಸುತ್ತದೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಹೇಳುವ ಮೂಲಕ ಹದಿಹರೆಯದವರನ್ನು ಎಚ್ಚರಿಸುವಂತೆ ತಪಸ್ಸಿ ಸಿನಿಮಾ ಮೂಡಿ ಬಂದಿದೆ. ಚಿತ್ರದ್ದು ನೈಜ ಘಟನೆಗಳನ್ನಾಧರಿಸಿದ ಕತೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಹಾಗಂತ ಆ ರಿಯಲ್ ರೂಪದರ್ಶಿ ಯಾರೆಂಬುದನ್ನು ಚಿತ್ರತಂಡ ಹೇಳಿಲ್ಲ. ಆದರೆ ರಂಗುರಂಗಿನ ಜಗತ್ತಿನಲ್ಲಿ ಮೈ ಮರೆತು ಪ್ರಚಾರ, ಹಣದ ಹಿಂದೆ ಹೋಗುವ ಬಹುತೇಕರ ಬದುಕು ಹೀಗೆ ಆಗುತ್ತದೆ ಎಂಬುದನ್ನು ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಹೇಳಿದ್ದಾರೆ. ತುಂಬಾ ಕಡಿಮೆ ಪಾತ್ರಧಾರಿಗಳ ಮೂಲಕ ಸಿನಿಮಾ ಸಾಗುತ್ತದೆ.
ಫ್ಲ್ಯಾಶ್‌ಬ್ಯಾಕ್ ತಂತ್ರದಲ್ಲಿ ಸಾಗುವ ಈ ಚಿತ್ರದಲ್ಲಿ ರಿಪೀಟ್ ಆಗುವ ದೃಶ್ಯಗಳು ಸೇರಿದಂತೆ ಒಂದಿಷ್ಟು ಕೊರತೆಗಳು ಇದ್ದರೂ, ಕನಸು ನನಸು ಮಾಡಿಕೊಳ್ಳಲು ಅಡ್ಡದಾರಿ ಹಿಡಿದರೆ ಏನಾಗುತ್ತದೆ ಎನ್ನುವ ಸಂದೇಶವನ್ನು ಅಚ್ಚುಕಟ್ಟಾಗಿ ಹೇಳುವಲ್ಲಿ ಚಿತ್ರ ಯಶಸ್ವಿ ಆಗುತ್ತದೆ.
ಚಿತ್ರ: ತಪಸ್ಸಿ
ತಾರಾಗಣ: ರವಿಚಂದ್ರನ್, ಅಮಯ್ರಾ ಗೋಸ್ವಾಮಿ, ವಿನಯ ಪ್ರಸಾದ್, ಪ್ರಜ್ವಲ್, ಅನುಷಾ ಕಿಣಿ, ಸಚಿನ್, ಗುಬ್ಬಿ ನಟರಾಜ್
ನಿರ್ದೇಶನ: ಸ್ಪೆನ್ಸರ್ ಮ್ಯಾಥ್ಯೂ
ರೇಟಿಂಗ್: 3
ಮಾಡೆಲ್ ತಪಸ್ಸಿ ಪಾತ್ರಕ್ಕೆ ನಟಿ ಅಮಯ್ರಾ ಗೋಸ್ವಾಮಿ ಸೂಕ್ತ ಎನಿಸುತ್ತಾರೆ. ಬುದ್ಧಿವಾದ ಹೇಳಿ ಸರಿದಾರಿಗೆ ತರುವ ಪ್ರೊಫೆಸರ್ ಪಾತ್ರದಲ್ಲಿ ರವಿಚಂದ್ರನ್ ಅವರ ಪಾತ್ರಕ್ಕೆ ಹೆಚ್ಚು ಶ್ರಮ ಹಾಕುವ ಅಗತ್ಯ ಕೊಟ್ಟಿಲ್ಲ. ಚಿತ್ರದಲ್ಲಿ ಬರುವ ಪ್ರತಿ ಪಾತ್ರಧಾರಿಯೂ ನಿರ್ದೇಶಕನ ಸೂಚನೆಯಂತೆ ತೆರೆ ಮೇಲೆ ಬಂದು ಹೋಗುತ್ತಾರೆ!