ಹ್ಯಾಕರ್‌ಗಳನ್ನೂ, ಹ್ಯಾಕ್‌ ಮಾಡುವ ರೀತಿಯನ್ನೂ ತೋರಿಸುವ ಪ್ರೀತಿಗೆ ಇಲ್ಲಿ ಪ್ರೇಕ್ಷಕರು ದಂಗಾಗಿಬಿಡಬೇಕು. ಬೆರಗಾಗದೇ ಉಳಿದವರ ಗಮನ ಸೆಳೆಯಲು ಎಐ ಕೂಡ ಇದೆ.

- ರಾಜೇಶ

ಈ ಸಿನಿಮಾದ ಕತೆಯ ಆಧಾರ ಪೆನ್‌ಡ್ರೈವ್‌. ಅದರ ಸುತ್ತ ನಿಂಬೆಹಣ್ಣು ಹಿಡಿದುಕೊಂಡಿರುವ ರಾಜಕಾರಣಿ, ಮಹಾನಾಯಕ, ಉಜ್ವಲ, ಪೊಲೀಸರು, ವಂಚನೆ, ದ್ರೋಹ ಮತ್ತಿತ್ಯಾದಿ ವಿಚಾರಗಳಿವೆ. ಸಿನಿಮಾ ಆರಂಭದಿಂದ ಹಿಡಿದು ಅಂತ್ಯದವರೆಗೂ ಆಗಾಗ ಒಂದು ಬಲಿಷ್ಠ ಕೈ ಕಾಣಿಸುತ್ತಿರುತ್ತದೆ. ಅದರ ಸುತ್ತ ಕಿಡಿಗಳು, ಕೆಂಡಗಳು ಉದುರುತ್ತಿರುತ್ತವೆ. ಹಾರಾಡುತ್ತಿರುತ್ತವೆ. ಆ ಮಹಾನಾಯಕ ಯಾರೆಂಬುದು ಕೊನೆವರೆಗೂ ಗೊತ್ತಾಗುವುದಿಲ್ಲ. ಗೊತ್ತಾದಾಗ ಯೂಟ್ಯೂಬ್‌ ಭಾಷೆಯಲ್ಲಿ ಹೇಳುವುದಾದರೆ ಬೆಚ್ಚಿ ಬೀಳುತ್ತೀರಾ ಜೋಕೆ!

ಪೊಲೀಸ್ ಅಧಿಕಾರಿ ತನಿಷಾ ಕುಪ್ಪಂಡ ಸುತ್ತಲೇ ಕತೆ ಸುತ್ತುತ್ತಿರುತ್ತದೆ. ಮಧ್ಯದಲ್ಲಿ ರಾಜಕಾರಣಿ ಪುತ್ರನ ಪಾತ್ರಧಾರಿ ಕಿಶನ್ ಬೆಳಗಲಿ ಸಿಕ್ಕಿ ಮಧುರ ರಮ್ಯ ಕಾಲ ಜರುಗುತ್ತಿರುತ್ತದೆ. ಒಂದೆರಡು ಸೌಂದರ್ಯ ಸಮರ ಹಾಡುಗಳು ನಡೆದು ಕೊನೆಗೆ ಹಾಸಿಗೆ ಮೇಲೆ ಹೊದಿಕೆ ಬಿದ್ದು ಹಾಗೂ ಹೀಗೂ ಮಧ್ಯಂತರ ತಲುಪುವ ಹೊತ್ತಿಗೆ ಕತೆಗೊಂದು ವೇಗ, ಆವೇಗ, ಅಂತರ್ವೇಗ ದಕ್ಕಿರುತ್ತದೆ. ಆಮೇಲೆ ಮಾತ್ರ ಒಂದರ ಹಿಂದೊಂದರಂತೆ ಶಾಕೋಶಾಕು.

ಹ್ಯಾಕರ್‌ಗಳನ್ನೂ, ಹ್ಯಾಕ್‌ ಮಾಡುವ ರೀತಿಯನ್ನೂ ತೋರಿಸುವ ಪ್ರೀತಿಗೆ ಇಲ್ಲಿ ಪ್ರೇಕ್ಷಕರು ದಂಗಾಗಿಬಿಡಬೇಕು. ಬೆರಗಾಗದೇ ಉಳಿದವರ ಗಮನ ಸೆಳೆಯಲು ಎಐ ಕೂಡ ಇದೆ. ಪೆನ್‌ಡ್ರೈವ್‌ನಿಂದ ಹಿಡಿದು ಡಾರ್ಕ್‌ವೆಬ್‌ವರೆಗೂ ಹೋಗಿ ಬಂದಿರುವುದರಿಂದ ಇದನ್ನೊಂದು ಅಲ್ಟ್ರಾ ಮಾಡರ್ನ್‌ ಮ್ಯಾಕ್ಸ್‌ ಪ್ರೋ ಸಿನಿಮಾ ಎಂದರೂ ತಪ್ಪಿಲ್ಲ.

ಪೆನ್‌ಡ್ರೈವ್‌
ನಿರ್ದೇಶನ: ಸೆಬಾಸ್ಟಿನ್‌ ಡೇವಿಡ್‌
ತಾರಾಗಣ: ತನಿಷಾ ಕುಪ್ಪಂಡ, ಕಿಶನ್ ಬೆಳಗಲಿ, ಕರಿಸುಬ್ಬು, ಸಂಜನಾ ನಾಯ್ಡು

ಕೆಲವು ಸಿನಿಮಾಗಳು ಸದ್ಯಕ್ಕಿಂತ ಮುಂದೆ ಇರುತ್ತವೆ. ಇನ್ನು ಹಲವು ರೆಟ್ರೋ ಕಾಲದ ಚಿತ್ರಣ ಕೊಡುತ್ತವೆ. ಈ ಸಿನಿಮಾ ಮಾತ್ರ ಏಕಕಾಲಕ್ಕೆ ಭೂತ ಮತ್ತು ಭವಿಷ್ಯ ಎರಡನ್ನೂ ನೆನೆದು ನಡುಗುವಂತೆ ಮಾಡುತ್ತದೆ. ಹೇಳಿಕೇಳಿ ಇದೊಂದು ಸೋಶಿಯೋ ಪೊಲಿಟಿಕಲ್ ಥ್ರಿಲ್ಲರ್. ಆ ವಿಚಾರದ ಮೇಲೆ ಆಸಕ್ತಿ ಇದ್ದು ಹೋಗುವವರಿಗೆ ಈ ಸಿನಿಮಾ ರುಚಿ ರುಚಿಯಾದ ಆಕರ್ಷಕ ಬಿಸಿ ತುಪ್ಪ.