Asianet Suvarna News Asianet Suvarna News

Gandhada Gudi Review: ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ..

ಗಂಧದ ಗುಡಿಯಲ್ಲಿ ಪುನೀತ್‌ ನಿರೂಪಕರಲ್ಲ, ಪಯಣಿಗರು. ಅವರು ಕಾಡನ್ನು ಅರಿಯುತ್ತಾ ಹೋಗುವುದೇ ಗಂಧದ ಗುಡಿಯ ಜೀವಾಳ. ಪ್ರಶ್ನೋತ್ತರಗಳ ಮೂಲಕ ಪುನೀತ್‌ ಮತ್ತು ಅಮೋಘವರ್ಷ ತಮಗೆ ಗೊತ್ತಿರುವುದನ್ನೆಲ್ಲ ಹೇಳಿಕೊಳ್ಳುತ್ತಾರೆ. 

Puneeth Rajkumar And Amoghavarsha Gandhada Gudi Documentary Review gvd
Author
First Published Oct 29, 2022, 2:00 AM IST

ಜೋಗಿ

ಎರಡು ವರುಷಗಳ ಹಿಂದೆ ಡೇವಿಡ್‌ ಅಟೆನ್‌ಬರೋ ನಿರೂಪಿಸಿದ, ಜಾನ್‌ ಹ್ಯೂಜ್‌ ನಿರ್ದೇಶಿಸಿದ ಎ ಲೈಫ್‌ ಆನ್‌ ಅವರ್‌ ಪ್ಲಾನೆಟ್‌ ಎಂಬ ಸಾಕ್ಷ್ಯಚಿತ್ರ ಬಂದಿತ್ತು. ಅದು ಜಗತ್ತಿನ ಕಾಡಿನ ಚಿತ್ರಣವನ್ನು ನಮ್ಮ ಮುಂದೆ ಯಥಾವತ್‌ ತೆರೆದಿಟ್ಟ ಡಾಕ್ಯುಮೆಂಟರಿ. ಅದಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಯಿತು. ಡೇವಿಡ್‌ ಅಟೆನ್‌ಬರೋ ಅದನ್ನು ನಿರೂಪಿಸಿದ್ದರಿಂದ ಅದಕ್ಕೆ ವಿಶೇಷ ಮೌಲ್ಯವೂ ಬಂತು. ಹೀಗೆ ಪ್ರಸಿದ್ಧರು ನಿರೂಪಕರಾಗಿರುವ ಸಾಕ್ಷ್ಯಚಿತ್ರಗಳು ಸಾಕಷ್ಟುಸಿಗುತ್ತವೆ.

ಆದರೆ ಗಂಧದ ಗುಡಿ ಅಂಥ ಸಾಕ್ಷ್ಯಚಿತ್ರಗಳಿಗಿಂತ ಭಿನ್ನವಾದದ್ದು. ಇಲ್ಲಿ ಪುನೀತ್‌ ನಿರೂಪಕರಲ್ಲ, ಪಯಣಿಗರು. ಅವರು ಕಾಡನ್ನು ಅರಿಯುತ್ತಾ ಹೋಗುವುದೇ ಗಂಧದ ಗುಡಿಯ ಜೀವಾಳ. ಪ್ರಶ್ನೋತ್ತರಗಳ ಮೂಲಕ ಪುನೀತ್‌ ಮತ್ತು ಅಮೋಘವರ್ಷ ತಮಗೆ ಗೊತ್ತಿರುವುದನ್ನೆಲ್ಲ ಹೇಳಿಕೊಳ್ಳುತ್ತಾರೆ. ಗೊತ್ತಿರದೇ ಇರುವುದನ್ನು ತಿಳಿದುಕೊಳ್ಳುತ್ತಾರೆ. ಹಾಗೆ ಮಾಡುವ ಮೂಲಕ ನಮಗೆ ಅನೇಕ ಸಂಗತಿಗಳನ್ನು ಗೊತ್ತು ಮಾಡಿಸುತ್ತಾರೆ.

Gandhada Gudi ಅಪ್ಪು ಕನಸಿನ ದೃಶ್ಯ ಪಯಣ: ಅಮೋಘವರ್ಷ

ನಾಗರಹೊಳೆಯಿಂದ ಕಾಳಿನದಿ ಮೂಲದ ತನಕ ಸಾಗುವ ಈ ಪಯಣದಲ್ಲಿ ನೇತ್ರಾಣಿಯಿದೆ, ವಿಜಯನಗರ ಸಾಮ್ರಾಜ್ಯವಿದೆ, ರಾಜ್‌ಕುಮಾರ್‌ ಅಪಹರಣಕ್ಕೆ ಒಳಗಾದ ಸಂದರ್ಭದಲ್ಲಿ ಅಲೆದಾಡಿದ ಕಾಡುಗಳಿವೆ, ಕರಡಿಧಾಮವಿದೆ, ಸೋಲಿಗರ ಹಟ್ಟಿಯಿದೆ, ಆನೆಗಳನ್ನು ಪಳಗಿಸುವವರಿದ್ದಾರೆ, ಕಾಡು ಕಾಯುವ ಅರಣ್ಯರಕ್ಷಕರ ಕಷ್ಟ ಸುಖದ ಚಿತ್ರಣವಿದೆ, ಕಾಳಿಂಗ ಸರ್ಪವನ್ನು ಹಿಡಿಯುವ ಪರಿಣತರಿದ್ದಾರೆ, ಕುರಿಗಾಹಿಗಳಿದ್ದಾರೆ, ಅವರು ಮಾಡುವ ರುಚಿಯಾದ ರೊಟ್ಟಿಯಿದೆ.

ಇದನ್ನು ಸಾಕ್ಷ್ಯಚಿತ್ರ ಎಂದು ಕರೆಯಲಾಗದು. ಇದು ಸಾಕ್ಷ್ಯಚಿತ್ರನಾಟಕ. ಪುನೀತ್‌ ಮುಗ್ಧತೆ, ಅರಿಯುವ ಹಂಬಲ, ಮುಗುಳ್ನಗೆ, ಕುತೂಹಲ, ಹುಡುಕಾಟಗಳೆಲ್ಲ ಈ ಚಿತ್ರದುದ್ದಕ್ಕೂ ನಮ್ಮನ್ನು ಕಾಡುತ್ತವೆ. ಇದರ ಬಹುದೊಡ್ಡ ಶಕ್ತಿಯೆಂದರೆ ಎಲ್ಲೂ ಕೂಡ ಪುನೀತ್‌ ಸುಳ್ಳು ಹೇಳಿಲ್ಲ. ತನಗೆ ಗೊತ್ತಿಲ್ಲದೇ ಇರುವುದನ್ನು ಗೊತ್ತಿದೆ ಎಂದು ಹೇಳಿಕೊಂಡಿಲ್ಲ. ಹೀರೋಯಿಸಮ್‌ ತೋರಿಸಿಲ್ಲ. ಬುಸುಗುಟ್ಟುವ ಹಾವಿನೆದುರು ಅಂಜಿಕೆಯ ಹುಡುಗನಂತೆ, ಜಲಪಾತದ ಎದುರು ಬೆರಗುಗೊಂಡ ಪಯಣಿಗನಂತೆ, ಕಾಡಿನ ಎದುರು ಶರಣಾದ ಸಂತನಂತೆ ಕಾಣಿಸುತ್ತಾರೆ. ಮನುಷ್ಯ ಅಹಂಕಾರವನ್ನೆಲ್ಲ ಪಕ್ಕಕ್ಕಿಟ್ಟು ಕಾಡಿನ ಮುಂದೆ ಹೇಗೆ ಮುಗ್ಧ ಮನುಷ್ಯನಾಗಿ ನಿಲ್ಲಬೇಕು ಅನ್ನುವುದನ್ನು ತೋರುತ್ತಾರೆ.

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಇಲ್ಲಿ ಗಾಜನೂರು, ರಾಜ್‌ಕುಮಾರ್‌ ಧ್ಯಾನಸ್ಥರಾಗುತ್ತಿದ್ದ ಆಲದ ಮರ, ಅಪ್ಪು ಹೇಳುವ ಬಾಲ್ಯದ ಕತೆಗಳು- ಎಲ್ಲವೂ ಇದೆ. ಎಲ್ಲಿ ಬೇಕೋ ಅಲ್ಲಿ ಸೊಗಸಾದ ಹಾಡುಗಳಿವೆ. ನಾವಿದ್ದಲ್ಲೇ ಊರು, ಆಕಾಶಾನೇ ಸೂರು ಅನ್ನುವ ಅರ್ಥಪೂರ್ಣ ಸಾಲುಗಳನ್ನು ಕಿರಣ್‌ ಕಾವೇರಪ್ಪ ಬರೆದಿದ್ದಾರೆ. ಪ್ರತೀಕ್‌ ಶೆಟ್ಟಿ ಕೆಮರಾ ಕಾಡನ್ನು ನಮ್ಮ ಮುಂದೆ ಕಡೆದಿಟ್ಟಿದೆ. ಅಜನೀಶ್‌ ಲೋಕನಾಥ್‌ ಸಂಗೀತ ನಾಟಕೀಯವಾಗದೇ, ಕಾಡಿನ ಮೂಡನ್ನು ಸೆರೆಹಿಡಿಯುತ್ತದೆ. ಈಗ ಕಾಡಿನ ಪ್ರಯಾಣ ಮುಗಿದು, ಅಂತರಂಗದ ಪ್ರಯಾಣ ಶುರುವಾಗುತ್ತದೆ ಎಂಬ ಮಾತು ಚಿತ್ರದಲ್ಲಿದೆ. ಗಂಧದ ಗುಡಿ ನೋಡಿದ ನಂತರ ನಮ್ಮಲ್ಲಾಗುವುದೂ ಅದೇ.

Follow Us:
Download App:
  • android
  • ios