Gandhada Gudi ಅಪ್ಪು ಕನಸಿನ ದೃಶ್ಯ ಪಯಣ: ಅಮೋಘವರ್ಷ
ಪುನೀತ್ ರಾಜ್‌ಕುಮಾರ್ ಅವರ ಕನಸಿನ ಸಿನಿಮಾ ‘ಗಂಧದಗುಡಿ’ ಇಂದು ತೆರೆ ಮೇಲೆ ಮೂಡುತ್ತಿದೆ. ಚಿತ್ರದ ಮುಂಗಡ ಬುಕ್ಕಿಂಗ್ ಕೂಡ ಜೋರಾಗಿದೆ. ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಅಮೋಘವರ್ಷ ಅವರ ಮಾತುಗಳು ಇಲ್ಲಿವೆ.
ಆರ್. ಕೇಶವಮೂರ್ತಿ
ಪುನೀತ್ ರಾಜ್‌ಕುಮಾರ್ ಅವರ ಕನಸಿನ ಸಿನಿಮಾ ‘ಗಂಧದಗುಡಿ’ ಇಂದು ತೆರೆ ಮೇಲೆ ಮೂಡುತ್ತಿದೆ. ಚಿತ್ರದ ಮುಂಗಡ ಬುಕ್ಕಿಂಗ್ ಕೂಡ ಜೋರಾಗಿದೆ. ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಅಮೋಘವರ್ಷ ಅವರ ಮಾತುಗಳು ಇಲ್ಲಿವೆ.
* ನಿಮ್ಮ ಹಿನ್ನೆಲೆ ಏನು?
ನಾನು ಹುಟ್ಟಿದ್ದು ನನ್ನ ತಾಯಿಯ ಊರು ಚಿತ್ರದುರ್ಗದಲ್ಲಿ. ತಂದೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನವರು. ಇಂಜಿನಿಯರಿಂಗ್‌ವರೆಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ಕೆಲಕಾಲ ಅಮೆಜಾನ್‌ನಲ್ಲಿ ಹಾಗೂ ಅಮೆರಿಕಾದಲ್ಲಿ ಸ್ಟಾರ್ಟಪ್‌ನಲ್ಲಿ ಕೆಲಸ. ನಂತರ ಕ್ಯಾಮೆರಾ ಹಿಡಿದೆ. ವೈಲ್ಡ್‌ಲೈಫ್ ಜಗತ್ತು ನೋಡುವುದಕ್ಕೆ ಶುರು ಮಾಡಿದೆ.
* ಪುನೀತ್ ಹಾಗೂ ನಿಮ್ಮ ನಡುವೆ ಸ್ನೇಹ ಹಾಗೂ ಪರಿಚಯ ಆಗಿದ್ದು ಹೇಗೆ?
ಈ ಹಿಂದೆ ನಾನು ಮಾಡಿದ್ದ ವೈಲ್ಡ್ ಲೈಫ್ ಕುರಿತ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡು ನನ್ನ ಕರೆಸಿಕೊಂಡರು. ಹೀಗೆ ನಾವು ಒಮ್ಮೆ ಸಹಜವಾಗಿ ಭೇಟಿ ಆದ ಮೇಲೆ ನಮ್ಮ ಸ್ನೇಹ ಮುಂದುವರಿಯಿತು. ಅದು ‘ಗಂಧದ ಗುಡಿ’ ಚಿತ್ರದವರೆಗೂ ಕರೆದುಕೊಂಡು ಬಂತು.
* ಗಂಧದ ಗುಡಿ ಸಿನಿಮಾ ಮಾಡುವ ಆಲೋಚನೆ ಹುಟ್ಟಿದ್ದು ಹೇಗೆ?
ಒಮ್ಮೆ ನಾನು ಪುನೀತ್ ಅವರ ಜತೆಗೆ ಮಾತನಾಡುತ್ತಿದ್ದಾಗ ನಮ್ಮ ನಾಡಿನ ವನ್ಯ ಸಂಪತ್ತನ್ನು ಜಗತ್ತಿಗೆ ತೋರಿಸಬೇಕು. ಅದು ದೊಡ್ಡ ಪರದೆ ಮೇಲೆ ಎಲ್ಲರು ಕೂತು ನೋಡಬೇಕು ಎಂದು ಹೇಳಿಕೊಂಡಾಗ ಹುಟ್ಟಿಕೊಂಡ ಆಲೋಚನೆಯೇ ಗಂಧದ ಗುಡಿ. ಮುಂದೆ ಇಬ್ಬರು ಚರ್ಚೆ ಮಾಡಿ ಸ್ಪಷ್ಟರೂಪ ಸಿಕ್ಕಿತ್ತು.
Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ
* ಲಾಕ್‌ಡೌನ್ ಬಿಡುವಿನ ಸಮಯದ ಸದ್ಬಬಳಕೆಯ ಫಲವೇ ಈ ಚಿತ್ರನಾ?
ಹೌದು. ಒಂದು ವರ್ಷದ ಕಾಲ ಅವರು ಈ ಚಿತ್ರಕ್ಕಾಗಿ ರಾಜ್ಯದಾದ್ಯಂತ ಓಡಾಡಿದರು. ಅವರ ಶ್ರಮ ಮತ್ತು ಪ್ರೀತಿಯ ಕನಸು ಈ ಸಿನಿಮಾ.
* ಗಂಧದ ಗುಡಿಯಲ್ಲಿ ಏನೆಲ್ಲ ವಿಶೇಷತೆಗಳಿವೆ?
ಅದನ್ನೆಲ್ಲ ಚಿತ್ರ ನೋಡಿಯೇ ತಿಳಿದರೆ ಒಳ್ಳೆಯದು. ಒಂದು ಮಾತು ಹೇಳಬಲ್ಲೆ, ಈ ಸಿನಿಮಾ ಮಾಡಿದ್ದಲ್ಲ; ಆದದ್ದು.
* ಈ ಚಿತ್ರಕ್ಕಾಗಿ ತೆರೆ ಹಿಂದೆ ಕೆಲಸ ಮಾಡಿದ್ದು ಹೇಗಿತ್ತು, ಎಷ್ಟು ದಿನ, ಎಷ್ಟು ಜನ, ಎಲ್ಲೆಲ್ಲಿ ಹೋಗಿದ್ರಿ?
ಇದೊಂದು ವಿಶೇಷ ಅನುಭವ. ಒಬ್ಬ ಸೂಪರ್‌ಸ್ಟಾರ್ ಜತೆಯಲ್ಲಿ ಒಂದು ವರ್ಷ ಕಾಲ ಇದ್ದುದೇ ವಿಶೇಷ. ನನ್ನ ಪುಣ್ಯ. ತುಂಬಾ ಕಡಿಮೆ ಜನ. ಅತ್ಯಂತ ಸೂಕ್ಷ್ಮವಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಹೀಗಾಗಿ ತುಂಬ ಜನ ಇರಲಿಲ್ಲ.
* ಇದನ್ನು ಶೂಟ್ ಮಾಡುವಾಗ ಕಿರುಚಿತ್ರವಾಗಿತ್ತಾ, ಸಾಕ್ಷ್ಯಚಿತ್ರವಾಗಿತ್ತಾ ಅಥವಾ ಸಿನಿಮಾ ಆಗಿತ್ತಾ?
ಇದೊಂದು ಅನುಭವಾತ್ಮಕ ಚಿತ್ರವಾಗಿತ್ತು ಅಷ್ಟೆ. ನೀವು ನೋಡಿದ ಮೇಲೆ ಯಾವ ರೀತಿಯ ಸಿನಿಮಾ ಎಂಬುದನ್ನು ಹೇಳಿ.
* ಅಭಿಮಾನಿಗಳು ಅಣ್ಣಾವ್ರ ಗಂಧದಗುಡಿಗೆ ಈ ಗಂಧದಗುಡಿಯನ್ನು ಹೋಲಿಸುತ್ತಿರುವುದು ನೀವು ಹೇಗೆ ನೋಡುತ್ತೀರಿ?
ನಾಡಿನ ಈ ಮಹಾನ್ ಕುಟುಂಬಕ್ಕೆ ಗಂಧದ ಗುಡಿಯ ಪರಂಪರೆಯೇ ಇದೆ. ಆ ಮಹಾನ್ ಪರಂಪರೆಯ ಮುಂದುವರಿದ ಭಾಗವೇ ಈ ಚಿತ್ರ, ಅಪ್ಪು ಗಂಧದ ಗುಡಿ ಎಂದುಕೊಳ್ಳುತ್ತೇನೆ.
* ಪುನೀತ್ ಅವರೊಂದಿಗಿನ ನಿಮ್ಮ ಪಯಣದ ನೆನಪುಗಳನ್ನು ಮೆಲುಕು ಹಾಕುವುದಾದರೆ?
ಅದೊಂದು ಅದ್ಭುತ ಅವಿಸ್ಮರಣೀಯ ಅನುಭವ ಎಂದಷ್ಟೇ ಹೇಳಬಲ್ಲೆ.
Dharwad: ಪದ್ಮಾ ಚಿತ್ರಮಂದಿರದಲ್ಲಿ ಶುಕ್ರವಾರ ಗಂಧದ ಗುಡಿ ಪ್ರದರ್ಶನ, ಅಪ್ಪು ಭಾವಚಿತ್ರ ಮೆರವಣಿಗೆ
* ಈಗ ರಾಜ್ ಕುಟುಂಬ ನಿಮ್ಮ ಜತೆಗೆ ಹೇಗಿದೆ? ಪುನೀತ್ ಅವರು ಇಲ್ಲ ಎನ್ನುವ ಕೊರತೆ ಕಾಡುತ್ತಿದೆಯೇ?
ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಮೊದಲಿನಿಂದಲೂ ನಮ್ಮೊಂದಿಗೆ ಈ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದರು. ಅವರು ಈಗ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅಪ್ಪು ಅವರು ಇಲ್ಲ ಎನ್ನುವ ಕೊರತೆಯನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆದರೆ ಅವರು ನಮ್ಮೊಂದಿಗಿದ್ದಾರೆ, ನಮ್ಮನ್ನು ಮುನ್ನಡೆಸುತ್ತಿದ್ದಾರೆ ಎಂಬ ಭಾವನೆಯೆ ನಮ್ಮನ್ನು ತುಂಬಿದೆ. ಅಲ್ಲದೆ ದೊಡ್ಮನೆ ಕುಟುಂಬದ ಸದಸ್ಯರು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆಯೇ ಭಾವಿಸಿದ್ದಾರೆ.