ಒಂದು ಪ್ರಯಾಣ ಹೊಸತೊಂದು ದಾರಿ ತೆರೆಯಬೇಕು. ಹೊಸ ಹೊಳಹು ಹುಟ್ಟಿಸಬೇಕು. ಮತ್ತೆ ಹುಮ್ಮಸ್ಸು ಕಟ್ಟಿಕೊಡಬೇಕು. ಅದೇ ಆಶಯದಲ್ಲಿ ಪ್ರವಾಸ ಶುರುವಾಗುತ್ತದೆ.
ರಾಜೇಶ್ ಶೆಟ್ಟಿ
ಅವಳಿಗೆ ಎಲ್ಲವೂ ಮೊದಲೇ ಪ್ಲಾನ್ ಆಗಿರಬೇಕು ಅನ್ನುವ ಛಲ. ಅವನಿಗೆ ಹೊಸ ಹೊಸ ಅಚ್ಚರಿಗಳಿಗೆ ತೆರೆದುಕೊಳ್ಳಬೇಕು ಎಂಬಾಸೆ. ಅವಳಿಗೆ ಸಮುದ್ರ ತೀರದಲ್ಲಿ ಮರಳಿನ ಗೂಡು ಕಟ್ಟುವುದಿಷ್ಟ, ಅವನಿಗೆ ಸಮುದ್ರದಾಳ ನೋಡುವ ಹಂಬಲ. ಅವಳು ಹೆದ್ದಾರಿ, ಅವನು ಕಾಡು ದಾರಿ. ಅವಳು ಅಂದುಕೊಂಡಿದ್ದು ನಡೆಯುವುದಿಲ್ಲ, ಅವನು ಭಾವಿಸಿದ್ದು ಸರಿ ಹೋಗುತ್ತಿರುವುದಿಲ್ಲ. ಹಾಗಾಗಿ ಇಬ್ಬರು ಪ್ರೇಮಿಗಳು ಒಂದು ಪ್ರಯಾಣಕ್ಕೆ ಹೊರಟು ನಿಲ್ಲುತ್ತಾರೆ. ಕತೆ ಶುರುವಾಗುತ್ತದೆ.
ಒಂದು ಪ್ರಯಾಣ ಹೊಸತೊಂದು ದಾರಿ ತೆರೆಯಬೇಕು. ಹೊಸ ಹೊಳಹು ಹುಟ್ಟಿಸಬೇಕು. ಮತ್ತೆ ಹುಮ್ಮಸ್ಸು ಕಟ್ಟಿಕೊಡಬೇಕು. ಅದೇ ಆಶಯದಲ್ಲಿ ಪ್ರವಾಸ ಶುರುವಾಗುತ್ತದೆ. ಅಲ್ಲಿ ಮತ್ತದೇ ಬೇಸರ, ಮತ್ತದೇ ಏಕಾಂತ. ಕೊನೆಗೊಂದು ಸೂಕ್ತ ಪರಿಹಾರ, ತಮ್ಮನ್ನು ತಾವು ಕಂಡುಕೊಳ್ಳುವಲ್ಲಿ ಸುಖಾಂತ್ಯ. ಹೊಸ ದಾರಿ. ಹೊಸ ಬೆಳಕು.ನಿರ್ದೇಶಕರು ಒಂದು ಹೊಸ ಕಾಲದ ವಿಭಿನ್ನ ಮನಸ್ಥಿತಿಯ ಜೋಡಿಗಳ ಕತೆಯನ್ನು ಹೇಳಿದ್ದಾರೆ. ಅವರ ಉದ್ದೇಶ ಚೆನ್ನಾಗಿದೆ. ಆದರೆ ದಾರಿ ತುಂಬಾ ದೀರ್ಘವಾಗಿದೆ. ಕೆಲವೊಂದು ಕಡೆ ಏನೂ ಜರುಗುವುದಿಲ್ಲ. ಮತ್ತೆ ಹಲವು ಕಡೆ ಪಾತ್ರಗಳ ಬದಲಾವಣೆ ದೃಶ್ಯಗಳ ಮೂಲಕ ಆಗುವ ಬದಲು ಮಾತಿನ ಮೂಲಕ ಆಗುತ್ತದೆ.
ಚಿತ್ರ: ದೂರ ತೀರ ಯಾನ
ನಿರ್ದೇಶನ: ಮಂಸೋರೆ
ತಾರಾಗಣ: ವಿಜಯ್ ಕೃಷ್ಣ, ಪ್ರಿಯಾಂಕ ಕುಮಾರ್, ಶ್ರುತಿ ಹರಿಹರನ್, ಕೃಷ್ಣ ಹೆಬ್ಬಾಳೆ
ರೇಟಿಂಗ್: 3
ವಾಚ್ಯತೆ ಜಾಸ್ತಿಯಾಗಿ ರುಚಿ ಕಡಿಮೆಯಾಗಿದೆ. ಈ ಸಿನಿಮಾವನ್ನು ಸೊಗಸು ಕಣ್ಣುಗಳಿಂದ ನೋಡಿ ಚೆಂದ ಮಾಡಿರುವುದು ಛಾಯಾಗ್ರಾಹಕ ಶೇಖರ್‌ಚಂದ್ರ ಮತ್ತು ಅದಕ್ಕೆ ತಕ್ಕಂತೆ ಸಂಗೀತ ನೀಡಿರುವ ರೋಣದ ಬಕ್ಕೇಶ್- ಕಾರ್ತಿಕ್. ಜೊತೆಗೆ ವಿಜಯ್- ಪ್ರಿಯಾಂಕ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ. ಅವರಿಗೆ ಮೆಚ್ಚುಗೆ. ಸದ್ದು ತುಂಬಿರುವ ಜಗತ್ತಿನಲ್ಲಿ ಒಂದು ಸಣ್ಣ ಹಿತವಾದ ಮೌನವನ್ನು ಈ ಸಿನಿಮಾ ಒದಗಿಸುತ್ತದೆ. ಆ ಮೌನ ತಟ್ಟಿದರೆ ಸಿನಿಮಾ ಸಾರ್ಥಕ.
