ಉತ್ತರಪ್ರದೇಶದ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಸಲ್ಮಾ ಸಂಪ್ರದಾಯದ ಚೌಕಟ್ಟಿನಲ್ಲೇ ಬೆಳೆದವಳು. ಆದರೆ ಧೈರ್ಯವಂತೆ. ತನ್ನ ಸುತ್ತಲೂ ಇರುವ ಜನ, ಸಹೋದ್ಯೋಗಿಗಳು ಎಲ್ಲರೂ ತನ್ನನ್ನು ಸಿಂಗಲ್ ಸಲ್ಮಾ ಎಂದು ಕಿಚಾಯಿಸಿದರೆ ಕ್ಯಾರೇ ಎನ್ನದವಳು. ಆದರೂ ಅವಳ ಬಾಳಲ್ಲಿ ಏನಾಯ್ತು? ಈ ಸ್ಟೋರಿ ನೋಡಿ
* ವೀಣಾ ರಾವ್
ಪುರಾಣದಲ್ಲಿ ಯಯಾತಿಯ ಮಗಳು ಮಾಧವಿಯ ಬದುಕಲ್ಲಿ ಬಂದು ಹೋದ ಗಂಡುಗಳು ನಾಲ್ಕು. ಈ ನಾಲ್ಕೂ ಗಂಡುಗಳಿಂದ ಬೇಸತ್ತಿದ್ದ ಅವಳು ತನ್ನ ತಂದೆ ಏರ್ಪಡಿಸಿದ ಸ್ವಯಂವರದಲ್ಲಿ ಯಾವ ಗಂಡನ್ನೂ ಆಯ್ಕೆ ಮಾಡಿಕೊಳ್ಳದೆ ವನರಾಜನನ್ನು ಅರ್ಥಾತ್ ವನವನ್ನೂ ವರಿಸಿ ವನದೊಳಗೆ ಹೋಗಿಬಿಡುತ್ತಾಳೆ. ಹಾಗೆಯೇ ಸಿಗಲ್ ಸಲ್ಮಾ ಚಿತ್ರದ ನಾಯಕಿ ಸಲ್ಮಾ ಕೂಡಾ ತನ್ನ ಹಿಂದೆ ಬಿದ್ದ ಇಬ್ಬರು ಗಂಡುಗಳನ್ನು ತಿರಸ್ಕರಿಸಿ ತನ್ನನ್ನೇ ತಾನು ಆಯ್ಕೆ ಮಾಡಿಕೊಂಡು ತನ್ನ ಪಾಡಿಗೆ ತಾನು ಇರಲು ತೀರ್ಮಾನಿಸುವ ಚಿತ್ರ ಹ್ಯೂಮಾ ಕ್ಯುರೇಷಿ ಅಭಿನಯದ ನಚಿಕೇತ್ ಸಾಮಂತ್ ನಿರ್ದೇಶನದ ಸಿಂಗಲ್ ಸಲ್ಮಾ. ನೆಟ್ ಫ್ಲಿಕ್ಸ್ ನಲ್ಲಿ ಓಡುತ್ತಿದೆ.
ಐದು ಮಕ್ಕಳಲ್ಲಿ ಹಿರಿಯವಳು ಸಲ್ಮಾ. ಮೊದಲ ನಾಲ್ಕೂ ಮಕ್ಕಳೂ ಹೆಣ್ಣು, ಹೀಗಾಗಿ ಮರಳಿ ಯತ್ನವ ಮಾಡು ಪ್ರಯತ್ನದಲ್ಲಿ ಐದನೆಯ ಮಗು ಗಂಡಾಗುತ್ತದೆ. ಹೇಳಿಕೊಳ್ಳುವಂಥಹ ಆಸ್ತಿಪಾಸ್ತಿ ಇಲ್ಲದ ಸಲ್ಮಾಳ ತಂದೆಗೆ ಈ ನಾಲ್ಕು ಹೆಣ್ಣುಮಕ್ಕಳಲ್ಲಿ ಸಲ್ಮಾ ಹೊರತಾಗಿ ಮಿಕ್ಕ ಮೂವರಿಗೆ ಮದುವೆ ಮಾಡಿಸುವುದರಲ್ಲಿ ಹೈರಾಣಾಗಿರುತ್ತಾನೆ. ತಂದೆಯ ಅಸಹಾಯಕತೆಯಿಂದ ಮನೆಯ ಜವಾಬ್ದಾರಿ ತಾನೇ ತೆಗೆದುಕೊಳ್ಳುವ ಸಲ್ಮಾ ಒಂದು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ತಾವಿರುವ ನಗರ ಲಕ್ನೋದಲ್ಲಿ ಸ್ವಂತ ಮನೆಯ ಮೇಲೆ ಇರುವ ಬೃಹತ್ ಸಾಲದ ಜವಾಬ್ದಾರಿಯೂ ಅವಳದೇ. ಸಲ್ಮಾಳ ತಾಯಿಗೆ ಮಾತ್ರ ಹಿರಿಮಗಳ ಚಿಂತೆ ಮೂವತ್ತೈದು ದಾಟಿರುವ ಸುಂದರಿಯಾದ ತಮ್ಮ ಮಗಳು ಮದುವೆಯಾಗದೆ ಹಾಗೆಯೇ ಉಳಿದುಬಿಟ್ಟರೆ ಎಂಬ ಚಿಂತೆ! ಸದಾ ಮಗಳಿಗೆ ಮದುವೆಯಾಗು ಎಂದು ದುಂಬಾಲು ಬಿದ್ದಿರುತ್ತಾಳೆ.
ಉತ್ತರಪ್ರದೇಶದ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಸಲ್ಮಾ ಸಂಪ್ರದಾಯದ ಚೌಕಟ್ಟಿನಲ್ಲೇ ಬೆಳೆದವಳು. ಆದರೆ ಧೈರ್ಯವಂತೆ. ತನ್ನ ಸುತ್ತಲೂ ಇರುವ ಜನ, ಸಹೋದ್ಯೋಗಿಗಳು ಎಲ್ಲರೂ ತನ್ನನ್ನು ಸಿಂಗಲ್ ಸಲ್ಮಾ ಎಂದು ಕಿಚಾಯಿಸಿದರೆ ಕ್ಯಾರೇ ಎನ್ನದವಳು. ಕೆಲವರಂತೂ ಅವಳ ಕಾರಿನ ಹಿಂಭಾಗ ತಮ್ಮ ಫೋನ್ ನಂಬರ್ ಗೀಚಿ ಸಿಂಗಲ್ ಸಲ್ಮಾ ನಿನಗೆ ಬೇಕಾದ ಸುಖ ಕೊಡುತ್ತೇವೆ ಈ ನಂಬರಿಗೆ ಕರೆ ಮಾಡು ಎಂದೂ ಬರೆದು ಅವಳನ್ನು ಗೋಳುಗುಟ್ಟಿಸುತ್ತಾರೆ. ಇಂಥ ಬೀದಿ ಕಾಮಣ್ಣಗಳಿಗೆ ಬೆದರದ ಸಲ್ಮಾ ಅವರನ್ನು ಅಟ್ಟಿಸಿಕೊಂಡು ಹೋಗಿ ನಾಲ್ಕು ಬಾರಿಸಲೂ ಹಿಂಜರೆಯುವವಳಲ್ಲ.
ತಾಯಿಯ ಬಲವಂತಕ್ಕೆ ಮದುವೆಗೆ ಒಪ್ಪುವ ಸಲ್ಮಾ ತಾಯಿಯ ಜೊತೆಯಲ್ಲಿ ಹಲವಾರು ಗಂಡುಗಳ ಸಂದರ್ಶನಕ್ಕೆ ತಲೆಬಾಗುತ್ತಾಳೆ. ಎಲ್ಲರೂ ಎರಡನೆಯ ಮದುವೆ ಅಥವಾ ಮೂರನೆಯ ಮದುವೆಯ ಗಂಡುಗಳು. ಕೆಲವರು ಅವಳ ಸರ್ಕಾರಿ ನೌಕರಿಗೆ ಆಸೆ ಪಟ್ಟರೆ ಕೆಲವರು ತಮ್ಮ ಇರುವ ಹೆಂಡತಿಯರಲ್ಲಿ ಗಂಡುಮಕ್ಕಳಿಲ್ಲ ಇವಳಿಂದಲಾದರೂ ಆಗಬಹುದು ಎಂದು ಆಸೆ ಪಟ್ವಟರು. ಇಂತವರನ್ನು ನೋಡಿ ಜಿಗುಪ್ಸೆಗೊಳ್ಳುವ ಸಲ್ಮಾಗೆ ಅಂತೂ ಒಬ್ಬ ವ್ಯಕ್ತಿ ಸಿಕಂದರ್ ಇಷ್ಟವಾಗುತ್ತಾನೆ. ಅವಳಂತೆ ಇನ್ನೂ ಮದುವೆಯಾಗದ ವಯಸ್ಕ. ಎಲ್ಲರಂತೆ ಹೆಣ್ಣು ಇರುವುದೆ ಭೋಗಕ್ಕೆ ಎಂದು ಭಾವಿಸದ ಸಜ್ಜನ ಸುಸಂಸ್ಕೃತ ವ್ಯಕ್ತಿ.
ಸಿಕಂದರ್ ಜೊತೆಗೆ ಮದುವೆ ಪಕ್ಕಾಗುವ ಸಮಯಕ್ಕೆ ಸರಿಯಾಗಿ ಸಲ್ಮಾಳಿಗೆ ಕಚೇರಿಯಿಂದ ಲಂಡನ್ ಗೆ ಹೋಗುವ ಅವಕಾಶ ಬರುತ್ತದೆ. ಯಾವುದೋ ಒಂದು ಕಚೇರಿಯ ಕೆಲಸದ ಬಗ್ಗೆ ತರಬೇತಿ ತೆಗೆದುಕೊಳ್ಳಲು ನಾಲ್ಕು ಜನರ ಟೀಂ ಎರಡು ತಿಂಗಳ ಕಾಲದ ಲಂಡನ್ ಪ್ರಯಾಣಕ್ಕೆ ಸಿದ್ಧವಾಗುತ್ತಾರೆ. ಲಂಡನ್ ನಿಂದ ಬಂದ ನಂತರ ಮದುವೆಯಾಗುತ್ತೇನೆ ಎಂದು ಮನೆಯವರನ್ನೂ ಸಿಕಂದರನನ್ನೂ ಒಪ್ಪಿಸಿ ಸಲ್ಮಾ ಲಂಡನ್ ಗೆ ಹಾರುತ್ತಾಳೆ.
ಕಂಪೆನಿಯ ಮುಖ್ಯಸ್ಥ ಮೀತ್ ಎಂಬ ಪಂಜಾಬಿ ಹುಡುಗ
ಲಂಡನ್ ನಲ್ಲಿ ತಮ್ಮ ಟೀಮಿನ ತರಬೇತಿಗೆ ನಿಯೋಜಿಸಿರುವ ಕಂಪೆನಿಯ ಮುಖ್ಯಸ್ಥ ಮೀತ್ ಎಂಬ ಪಂಜಾಬಿ ಹುಡುಗ ಪರಿಚಯವಾಗುತ್ತಾನೆ. ಸಲ್ಮಾಳ ಚರುಕುತನ ನಾಯಕತ್ವದ ಗುಣಗಳು ಮೀತ್ ಗೆ ಇಷ್ಟವಾಗುತ್ತದೆ. ತಾನು ನಿಶ್ಚಿತಾರ್ಥವಾದ ವಧು ಎಂದು ಅರಿವಿದ್ದರೂ ಸಲ್ಮಾ ಮೀತ್ ನೆಡೆಗೆ ಆಕರ್ಷಿತಳಾಗುತ್ತಾಳೆ. ತರಬೇತಿಯ ಬಿಡುವಿನ ಸಮಯದಲ್ಲಿ ಮೀತ್ ಮತ್ತು ಸಲ್ಮಾ ಲಂಡನ್ ಸುತ್ತುತ್ತಾರೆ. ಹತ್ತಿರವಾಗುತ್ತಾರೆ. ಮೀತ್ ನಿಗೆ ಇನ್ನೊಬ್ಬ ಗೆಳತಿ ಇದ್ದಾಳೆಂದು ಸಲ್ಮಾಗೆ ತಿಳಿಯುತ್ತದೆ. ಆದರೂ ಅವಳು ವಿಚಲಿತಳಾಗುವುದಿಲ್ಲ. ಅವಳ ಜೊತೆಯೂ ಸ್ನೇಹ ಬೆಳೆಸುತ್ತಾಳೆ. ಮೀತ್ ನ ಗೆಳತಿ ಝೋಯಾ ಒಳ್ಳೆಯ ಛಾಯಾಗ್ರಾಹಕಿ ಅವಳು ಸಲ್ಮಾಳ ಅನೇಕ ಫೋಟೋಗಳನ್ನು ತೆಗೆಯುತ್ತಾಳೆ. ಝೋಯಾ ಮತ್ತು ಮೀತ್ ಓಪನ್ ರಿಲೇಷನ್ ಶಿಪ್ ನಲ್ಲಿ ಇರುತ್ತಾರೆ. ಅದನ್ನು ಮೀತ್ ಸಲ್ಮಾಳಿಗೆ ಹೇಳುತ್ತಾನೆ. ಝೋಯಾಗೆ ಮತ್ತೊಬ್ಬ ಗರ್ಲ್ ಫೆಂಡ್ ಇದ್ದಾಳೆ ಎಂದೂ ಹೇಳುತ್ತಾನೆ. ಸಲ್ಮಾ ಚಿಕಿತಳಾಗುತ್ತಾಳೆ.
ಒಮ್ಮೆ ಸಲ್ಮಾ ಮೀತ್ ಇಬ್ಬರೂ ಸುತ್ತಾಡುತ್ತಾ ಬೀಚ್ ಗೆ ಬರುತ್ತಾರೆ. ಬೀಚ್ ನಲ್ಲಿ ಸಲ್ಮಾ ಎಂದೂ ಧರಿಸದ ಬಿಕಿನಿ ತೊಟ್ಟು ಸಂಭ್ರಮಿಸುತ್ತಾಳೆ. ನೀರಿನೊಟನೆ ಚೆಲ್ಲಾಟ ಆಡುತ್ತಾಳೆ. ಮೀತ್ ನ ಜೊತೆ ಸುತ್ತಾಡಿ ಅವನ ಅಜ್ಜಿ ತಾತ ಇರುವ ಕಡೆಗೂ ಹೋಗಿ ಅವರನ್ನೂ ಭೇಟಿ ಮಾಡಿ ಬರುತ್ತಾಳೆ. ತನ್ನ ಮನಸ್ಸು ಹೀಗೆ ಮೀತ್ ನೆಡೆಗೆ ಆಕರ್ಷಿತವಾಗಿದೆ ಎಂದು ತನ್ನ ಜೊತೆ ಇರುವ ಮೇಲಧಿಕಾರಿ ಶ್ರೀಮತಿ ಶ್ರೀವಾಸ್ತವ್ ಗೂ ಹೇಳುತ್ತಾಳೆ. 'ಏನೂ ತಪ್ಪಿಲ್ಲ ಸಲ್ಮಾ ಮನಸ್ಸಿನ ಆಕರ್ಷಣೆಗೆ ಕಟ್ಟೆ ಕಟ್ಟಲು ಸಾಧ್ಯವೇ? ಮೀತ್ ನ ಜೊತೆಗಿನ ಓಡಾಟವನ್ನು ಒಂದು ಸವಿನೆನಪಾಗಿ ಹೃದಯದಲ್ಲಿ ಬಚ್ಚಿಟ್ಟುಕೋ' ಎಂದು ಹೇಳುತ್ತಾಳೆ. ಆದರೆೆ ಮೀತ್ ಸಲ್ಮಾಗೆ ತನ್ನ ಜೊತೆಗೆ ರಿಲೇಷನ್ಷಿಪ್ ಆಫರ್ ಮಾಡುತ್ತಾನೆ. ಸಲ್ಮಾ ಗೊಂದಲಕ್ಕೆ ಬೀಳುತ್ತಾಳೆ.
ತರಬೇತಿಯ ಕೊನೆಯ ದಿನ ಸಲ್ಮಾ ಬಹಳ ಅಚ್ಚುಕಟ್ಟಾಗಿ ತನ್ನ ಪ್ರೆಸೆಂಟೇಷನ್ ನೀಡುತ್ತಾಳೆ. ಮೀತ್ ಪ್ರಭಾವಿತನಾಗುತ್ತಾನೆ. ಮಾರನೆಯ ದಿನವೇ ಅಲ್ಲಿಂದ ಹೊರಡಬೇಕು. ಸಲ್ಮಾ ಮೀತ್ ನನ್ನು ಹುಡುಕುತ್ತಾ ಬರುತ್ತಾಳೆ. ಅವಳ ಮನಸ್ಸಿನಲ್ಲಿ ಮೀತ್ ನ ಆಫರ್ ನನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿರುತ್ತಾಳೆ. ಅವಳಿಗೆ ತನ್ನ ಸಂಪ್ರದಾಯಬದ್ಧ ಮನೆಗಿಂತ ಯಾವುದೇ ಚೌಕಟ್ಟಿಲ್ಲದ ಲಂಡನ್ನಿನ ಜೀವನ ಇಷ್ಟವಾಗಿರುತ್ತದೆ. ಮೀತ್ ನನ್ನು ಹುಡುಕುತ್ತಾ ಲಂಡನ್ ಕಚೇರಿಯ ಬೇಸ್ಮೆಂಟಿಗೆ ಬರುವ ಸಲ್ಮಾ ಅಲ್ಲಿ ಮೀತ್ ಮತ್ತು ಝೊಯಾ ಪರಸ್ಪರ ಅಪ್ಪುಗೆ-ಚುಂಬನದಲ್ಲಿ ಇರುವುದನ್ನು ನೋಡುತ್ತಾಳೆ. ಅವಳ ನಿರ್ಧಾರ ಚೂರು ಚೂರಾಗುತ್ತದೆ.
ಲಂಡನ್ ನಿಂದ ಸಲ್ಮಾ ಟೀಂ ಲಕ್ನೋಗೆ ವಾಪಸ್
ಲಂಡನ್ ನಿಂದ ಸಲ್ಮಾ ಅವಳ ಟೀಂ ಲಕ್ನೋಗೆ ವಾಪಸ್ಸಾಗುತ್ತದೆ. ಈ ಮಧ್ಯೆ ಒಂದು ಅಚಾತುರ್ಯ ಅಥವಾ ರೋಚಕ ಎನ್ನಬಹುದಾದ ಘಟನೆ ನಡೆದಿರುತ್ತದೆ. ಸಲ್ಮಾ ಮೀತ್ ನ ಜೊತೆ ಬೀಚ್ ನಲ್ಲಿ ಅಡ್ಡಾಡುವಾಗ ಯಾರದೋ ಫೋಟೋ ಹಿಂಭಾಗದಲ್ಲಿ ಸಲ್ಮಾಳ ಬಿಕಿನಿ ಪೋಟೋ ಕ್ಯಾಪ್ಚರ್ ಆಗಿರುತ್ತದೆ. ಹಾಗೆ ಫೋಟೋ ತೆಗೆಸಿಕೊಂಡವರು ಯಾರೆಂದು ಸಲ್ಮಾಗೂ ಗೊತ್ತಿಲ್ಲ ಅವಳ ಅರಿವಿಗೂ ಬಂದಿಲ್ಲ. ರೀಲ್ಸ್ ಅದು ಹೇಗೋ ಲಕ್ನೊ ಜನಗಳ ಕಣ್ಣಿಗೆ ಬೀಳುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡಿ ಎಲ್ಲರೂ ಸಲ್ಮಾಳ ಬಗ್ಗೆ ಕೆಟ್ಟ ಕೊಳಕು ಭಾಷೆ ಮಾತಾಡುವಷ್ಟು ಭಾನಗಡಿ ಆಗಿರುತ್ತದೆ. ಕೆಲವರಂತೂ ಸಲ್ಮಾ ಮೂರೂ ಬಿಟ್ಟವಳು ಎಂಬ ತೀರ್ಮಾನಕ್ಕೆ ಬಂದು ಸಲ್ಮಾಳ ಭಾವಿಪತಿ ಸಿಕಂದರ್ ನ ಅಮ್ಮನಿಗೂ ಈ ಫೋಟೋ ತೋರಿಸಿ ಮದುವೆ ಮುರಿದುಹಾಕುವ ಹುನ್ನಾರ ನಡೆಸುತ್ತಾರೆ.
ಸಲ್ಮಾಳ ಅಪ್ಪನಿಗೂ ಈ ಫೋಟೋ ತೋರಿಸಿ ಕರ್ಮಠ ಮುಸಲ್ಮಾನನಾದ ಅವನಿಗೆ ಕೋಪ ಬರಿಸುತ್ತಾರೆ. ಬೀದಿ ಬೀದಿಯಲ್ಲಿ ಸಲ್ಮಾಳ ಬಿಕಿನಿ ಫೋಟೋ ಪೋಸ್ಟರ್ ಅಂಟಿಸುತ್ತಾರೆ. ಸಿಕಂದರ್ ನ ತಾಯಿ ಮಗನಿಗೆ ಈ ಮದುವೆ ಬೇಡ ಎನ್ನುತ್ತಾಳೆ. ಆದರೆ ಸಿಕಂದರ್ ಒಪ್ಪುವುದಿಲ್ಲ. ಅವನಿಗೆ ಸಲ್ಮಾಳ ರೂಪವಷ್ಟೇ ಅಲ್ಲ ಅವಳ ಬುದ್ದಿವಂತಿಕೆ, ಸಂಪ್ರದಾಯಕ್ಕೆ ಹೊರತಾಗಿ ಅವಳು ಯೋಚಿಸುವ ರೀತಿ, ಅವಳ ವಿವೇಚನೆ ತ್ಯಾಗ ಎಲ್ಲವೂ ಇಷ್ಟವಾಗಿರುತ್ತದೆ. ಅವನು ಸಲ್ಮಾಳನ್ನು ಅಪಮಾನಿಸಿದ ಎಲ್ಲರಿಗೂ ದಬಾಯಿಸುತ್ತಾನೆ. ಸಲ್ಮಾಳ ಮೇಲೆ ನನಗೆ ನಂಬಿಕೆ ಇದೆ, ಮದುವೆಯಾಗುವವನು ನಾನು ನನಗೇ ಇಲ್ಲದ ಅಭ್ಯಂತರ ನಿಮಗೇಕೆ ಎನ್ನುತ್ತಾನೆ? ಲಂಡನ್ನಿನಲ್ಲಿ ಅಲ್ಲಿಯಂತೆ ದಿರಿಸು ಹಾಕಿದರೆ ತಪ್ಪೇನು ಎನ್ನುತ್ತಾನೆ. ಸಲ್ಮಾ ಕೂಡಾ ತನ್ನ ಅಪ್ಪನಿಗೆ ದಬಾಯಿಸುತ್ತಾಳೆ.
ಸಮುದ್ರ ತಟದಲ್ಲಿ ಬಿಕನಿ ಹಾಕದೆ ಬುರ್ಖಾ ಹಾಕಬೇಕೇ ಎಂದು ಕೇಳುತ್ತಾಳೆ. ಮನೆಗಾಗಿ ತಾನು ಮಾಡಿದ ತ್ಯಾಗ ಸಹಾಯ ಎಲ್ಲವೂ ಈ ಫೋಟೋದಿಂದ ಕೊಚ್ಚಿಹೋಯಿತೇ ಎನ್ನುತ್ತಾಳೆ. ಸಲ್ಮಾಳ ತಂಗಿಯರನ್ನು ಅವರ ಗಂಡಂದಿರು ತವರಿಗೆ ಕಳಿಸಿರುತ್ತಾರೆ. ಆ ತಂಗಿಯರಿಗೆ ಸಲ್ಮಾ 'ನನ್ನ ಬಿಕಿನಿ ಫೋಟೋದಿಂದ ನಿಮ್ಮ ಗಂಡಂದಿರಿಗೆ ಮರ‍್ಯಾದೇ ಹೋಯಿತೇ' ಎಂದು ದಬಾಯಿಸುತ್ತಾಳೆ. ಸಿಕಂದರ್ ಸಲ್ಮಾಳನ್ನು ಇಂಪ್ರೆಸ್ ಮಾಡಲು ಅವಳ ಮನೆಯ ಸಾಲಕ್ಕಾಗಿ ಪೂರ್ತ ಹಣವನ್ನು ಲೋಕಲ್ ಬ್ಯಾಂಕರ್ ಗೆ ಚೆಕ್ ಮೂಲಕ ಕೊಟ್ಟಿರುತ್ತಾನೆ. ಸಲ್ಮಾ ಸಿಕಂದರ್ ನನ್ನೂ ಭೇಟಿಯಾಗಿ ತನಗೆ ಮೀತ್ ನಲ್ಲಿ ಆಕರ್ಷಣೆ ಉಂಟಾಗಿತ್ತು ಎಂದು ನಿಜ ಹೇಳುತ್ತಾಳೆ, ಆದರೂ ಸಿಕಂದರ್ ನಾನು ನಿನ್ನನ್ನೇ ನಿಕಾ ಮಾಡಿಕೊಳ್ಳುತ್ತೇನೆ ಎಂದು ಉದಾರ ಮನಸ್ಸು ಮೆರೆಯುತ್ತಾನೆ.
ಈ ಗಲಾಟೆ ಒಂದೂ ತಿಳಿಯದ ಮೀತ್ ಸಲ್ಮಾಳ ನಿರ್ಗಮನದ ನಂತರ ಅವಳ ವಿರಹವನ್ನು ತಡೆಯಲಾರದೆ ಸಲ್ಮಾಳನ್ನು ಮದುವೆಯಾಗಲು ಭಾರತಕ್ಕೆ ಬರುತ್ತಾನೆ. ಸಲ್ಮಾ ಸಿಕಂದರ್ ಮದುವೆಯ ದಿನ ಸಿಕಂದರನ ಬಾರಾತ್ ಬರುವ ವೇಳೆಗೆ ಮೀತ್ ಕೂಡ ತನ್ನ ಬಾರಾತನ್ನು ಕರೆತರುತ್ತಾನೆ. ಸಲ್ಮಾಳ ತಂದೆಗೆ ಯಾರಿಗೆ ಮಗಳನ್ನು ಕೊಡಬೇಕು ಎಂದು ಕಕಮಕವಾಗುತ್ತದೆ. ಸಲ್ಮಾಳ ತಂಗಿ ಬಂದು ಸಲ್ಮಾ ಮನೆಯಲ್ಲಿ ಇಲ್ಲ ಎನ್ನುತ್ತಾಳೆ. ಎಲ್ಲಿ ಎಲ್ಲಿ ಎಂದು ಹುಡುಕಿದಾಗ ರೈಲ್ವೇ ಸ್ಟೇಷನ್ ಗೆ ಹೋಗಿದ್ದಾಳೆ ಎಂಬ ಮಾಹಿತಿ ದೊರೆಯುತ್ತದೆ. ಎಲ್ಲರೂ ರೈಲ್ವೇ ಸ್ಟೇಷನ್ ಗೆ ಬರುತ್ತಾರೆ. ಮೀತ್ ಹಾಗೂ ಸಿಕಂದರ್ ಅವಳನ್ನು ಪರಿಪರಿಯಾಗಿ ಓಲೈಸುತ್ತಾರೆ. ಸಲ್ಮಾ ಯಾರಿಗೆ ಒಲಿಯುತ್ತಾಳೆ ನೀವೇ ತೆರೆಯ ಮೇಲೆ ನೋಡಿ.
ಇದರಲ್ಲಿ ಬರುವ ಓಪನ್ ರಿಲೇಷನ್ ಶಿಪ್ ಎನ್ನುವುದು ನಮ್ಮನ್ನು ಬಹಳ ಯೋಚಿಸುವಂತೆ ಮಾಡುತ್ತದೆ. ಯಾವುದೇ ಕಟ್ಟುಪಾಡುಗಳಿಲ್ಲದ ಚೌಕಟ್ಟಿಲ್ಲದ ಸಂಬಂಧ ಎಷ್ಟು ದಿನ ಉಳಿಯಬಹುದು. ಈ ರೀತಿಯ ಸಂಬಂಧಗಳು ಆರೋಗ್ಯಕರವೇ ಎಂಬ ಚಿಂತನೆ ಹುಟ್ಟುಹಾಕಿದರೆ ಇಂಥ ಸಂಬಂಧಗಳು ಸಮಾಜಕ್ಕೆ ಏನು ಹೇಳುತ್ತವೆ ಯಾವ ಆದರ್ಶವಿದೆ ಎನಿಸಿದರೆ ತಪ್ಪಲ್ಲ. ಮತ್ತೂ ಒಂದು ಸಂಗತಿ ಎಂದರೆ ಸೋಷಿಯಲ್ ಮೀಡೀಯಾಗಳು ಎಷ್ಟು ವೇಗದಲ್ಲಿದೆ ಎಂಬುದು ಭಯ ಹುಟ್ಟಿಸುತ್ತದೆ. ಪ್ರಪಂಚದ ಯಾವುದೊ ಮೂಲೆಯಲ್ಲಿ ರೀಲ್ಸ್ ಗಾಗಿ ತೆಗೆದ ವೀಡಿಯೋ/ಫೋಟೋ ಹೇಗೆ ಪ್ರಪಂಚವೆಲ್ಲಾ ಸುತ್ತಿ ನಮ್ಮ ಕಾಲಬುಡಕ್ಕೇ ಬರುತ್ತದೆ ಎಂಬುದನ್ನು ನೋಡಿದಾಗ ಪ್ರಪಂಚ ಬಹಳ ಚಿಕ್ಕದು ಎನಿಸಿಬಿಡುತ್ತದೆ. ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದವರು ಮುಕ್ತ ಪ್ರಪಂಚಕ್ಕೆ ಬೇಗ ಆಕರ್ಷಿತರಾಗುತ್ತಾರೆ ಎಂಬುದು ಮತ್ತೊಮ್ಮೆ ಈ ಚಿತ್ರದಿಂದ ಸಾಬೀತಾಗುತ್ತದೆ. ಸಲ್ಮಾ ಆಗಿ ಹ್ಯೂಮಾ ಕ್ಯುರೇಷಿ, ಸಿಕಂದರ್ ಆಗಿ ಶ್ರೇಯಸ್ ತಲ್ಪಡೆ, ಮೀತ್ ಆಗಿ ಸನ್ನಿ ಸಿಂಗ್ ಉತ್ತಮ ಅಭಿನಯ ನೀಡಿದ್ದಾರೆ.



