ಪೈರೆಸಿ, ಪ್ರೇಕ್ಷಕರು, ಸಿನಿಮಾ ಮಂದಿಯ ಫ್ಯಾಮಿಲಿ, ಪ್ರೇಮ ಕತೆಯೂ ಬಂದು ಹೋಗುತ್ತದೆ. ಎಲ್ಲಾ ಅಡುಗೆ ಖಾದ್ಯಗಳನ್ನು ರುಚಿ ನೋಡುವ ಮುಖ್ಯ ಬಾಣಸಿಗನಂತೆ ಈ ಚಿತ್ರವು ಎಲ್ಲಾ ಓಣಿಗಳಲ್ಲೂ ಸಂಚಾರ ಮಾಡುತ್ತದೆ.

ಆರ್‌.ಕೇಶವಮೂರ್ತಿ

ತೆರೆ ಮೇಲೆ ಮೂಡುವ ಸಿನಿಮಾ ಕತೆಗೆ ಮೀರಿದ ಕತೆಗಳು ತೆರೆ ಹಿಂದೆ ಇವೆ. ಚಿತ್ರರಂಗದ ಒಳಗಿರೋ ಅಂಥ ಸ್ಟೋರಿಗಳು ಆಗಾಗ ತೆರೆ ಮೇಲೆ ಸಿನಿಮಾಗಳಾಗಿ ಬರುವುದನ್ನು ನೋಡಿದ್ದೇವೆ. ಆ ಕೆಲವೇ ಕೆಲವು ಚಿತ್ರಗಳ ಸಾಲಿಗೆ ಈ ಸಿನಿಮಾ ಕೂಡ ಸೇರ್ಪಡೆಗೊಳ್ಳುತ್ತದೆ. ಇಲ್ಲಿ ಸಾಹಸಗಳು ಇವೆ, ಸಂಭ್ರಮಗಳಿವೆ, ಹೇಳಿಕೊಳ್ಳಲಾಗದ ದುಗುಡ, ಭಾವುಕತೆಗಳೂ ಕೊರತೆ ಇಲ್ಲ. ಈ ಎಲ್ಲವನ್ನೂ ನಿರ್ದೇಶಕ ಗಿರೀಶ್‌ ಬಿಡಿ ಬಿಡಿ ಚಿತ್ರಣಗಳಂತೆ ನಿರೂಪಣೆ ಮಾಡುತ್ತಾ ಹೋಗುತ್ತಾರೆ.

ಸಿನಿಮಾ ನಿರ್ಮಿಸಿರುವ ಸಂಭ್ರಮದಲ್ಲಿರುವ ನಿರ್ಮಾಪಕ, ನಿರ್ದೇಶನ ಮಾಡಿರುವ ಭಾವುಕತೆಯಲ್ಲಿ ನಿರ್ದೇಶಕ, ಈ ಚಿತ್ರದಿಂದ ತಾನು ರಾತ್ರೋರಾತ್ರಿ ಸ್ಟಾರ್‌ ಆಗುತ್ತೇನೆಂದುಕೊಂಡಿರುವ ನಾಯಕ, ನಾಯಕಿ, ಕ್ಯೂಬ್‌ಗೆ ಅಪ್‌ಲೋಡ್‌ ಮಾಡಲು ಹಾರ್ಡ್‌ ಡಿಸ್ಕ್‌ ಜೊತೆ ಚೆನ್ನೈ ಹೋಗುವ ಇಬ್ಬರು. ಜೊತೆಗೆ ಆಸ್ಪತ್ರೆಯಲ್ಲಿರುವ ತುಂಬು ಗರ್ಭಿಣಿ. ಇವಿಷ್ಟು ಪಾತ್ರಗಳ ಮೂಲಕ ಮೂರು ದಾರಿಗಳಲ್ಲಿ ಕತೆಯನ್ನು ನಿರೂಪಿಸಿರುವುದು ಚಿತ್ರದ ಹೊಸತನಕ್ಕೆ ಸಾಕ್ಷಿ.

ಚಿತ್ರ: ಫಸ್ಟ್‌ ಡೇ ಫಸ್ಟ್‌ ಶೋ
ತಾರಾಗಣ: ಗಿರೀಶ್‌ ಜಿ, ಜೀವಿತ ವಸಿಷ್ಠ, ಗಿಲ್ಲಿ ನಟ, ದಶವತಾರ ಚಂದ್ರು, ಶೋಭಿತ ಶಿವಣ್ಣ, ಅನಿರುದ್ಧ್‌ ಶಾಸ್ತ್ರಿ
ನಿರ್ದೇಶನ: ಗಿರೀಶ್‌
ರೇಟಿಂಗ್: 3

ಇನ್ನೂ ಪೈರೆಸಿ, ಪ್ರೇಕ್ಷಕರು, ಸಿನಿಮಾ ಮಂದಿಯ ಫ್ಯಾಮಿಲಿ, ಪ್ರೇಮ ಕತೆಯೂ ಬಂದು ಹೋಗುತ್ತದೆ. ಎಲ್ಲಾ ಅಡುಗೆ ಖಾದ್ಯಗಳನ್ನು ರುಚಿ ನೋಡುವ ಮುಖ್ಯ ಬಾಣಸಿಗನಂತೆ ಈ ಚಿತ್ರವು ಎಲ್ಲಾ ಓಣಿಗಳಲ್ಲೂ ಸಂಚಾರ ಮಾಡುತ್ತದೆ. ಇದು ತಪ್ಪು, ಅದು ಸರಿ ಎನ್ನುವ ಪ್ರವಚನೆಗಳಿಗೆ ಇಳಿಯದ ಒಂದು ಸಿನಿಮಾ ಹುಟ್ಟುವ ಹಿಂದೆ ಏನೆಲ್ಲ ಸಾಹಸಗಳು ಇರುತ್ತವೆ, ಆ ಸಾಹಸಗಳ ನಂತರ ಬರುವ ಸಂಭ್ರಮ ಹೇಗಿರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಈ ಚಿತ್ರದ್ದು. ಚಿತ್ರವೊಂದರ ‘ಫಸ್ಟ್‌ ಡೇ ಫಸ್ಟ್‌ ಶೋ’ ತೆರೆ ಮೇಲೆ ಮೂಡುವ ಹಿಂದೆ ಏನೆಲ್ಲ ರೋಚಕತೆಗಳು ಇರುತ್ತವೆ ಎನ್ನುವ ಕುತೂಹಲ ಇದ್ದವರು ಈ ಚಿತ್ರ ನೋಡಬಹುದು.