ನವೀನ್‌ ಶಂಕರ್‌, ರಾಹುಲ್‌ ಐನಾಪುರ್‌, ನಾಟ್ಯ ರಂಗ, ಅರ್ಚನಾ ಜೋಯಿಸ್‌, ಅಚ್ಯುತ ಕುಮಾರ್‌ ನಟನೆಯ ಕ್ಷೇತ್ರಪತಿ ಸಿನಿಮಾ ರಿಲೀಸ್‌ ಆಗಿದೆ..... 

ಪ್ರಿಯಾ ಕೆರ್ವಾಶೆ

‘ನೀವು ಎಂಟು ರುಪಾಯಿ ಕೊಟ್ಟು ಒಂದು ಕೆಜಿ ಈರುಳ್ಳಿ ಖರೀದಿ ಮಾಡ್ತೀರಿ. ಅದೇ ಎಂಟು ರುಪಾಯಿಯಲ್ಲಿ ಒಂದು ಕೆಜಿ ಈರುಳ್ಳಿ ಬೆಳೆದು ತೋರಿಸಿ ನೋಡೋಣ.’

ನಾಯಕ ಬಸ್ಯಾ ಅಲಿಯಾಸ್‌ ಬಸವರಾಜ ಹಾದಿಮನಿ ತಣ್ಣನೆ ನಗುವಿನೊಂದಿಗೆ ಈ ಮಾತು ಹೇಳಿದಾಗ ಥಿಯೇಟರ್‌ನಲ್ಲಿ ಕೂತ ಪ್ರೇಕ್ಷಕನೂ ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಇದು ಕ್ಷೇತ್ರಪತಿ ಸಿನಿಮಾದ ಶಕ್ತಿ. ಇದರಲ್ಲಿ ಎದೆ ನಡುಗಿಸುವ ಇನ್ನೊಂದು ದೃಶ್ಯ ಬರುತ್ತೆ. ಎಲ್ಲೋ ಹೋದ ನಾಯಕ ಊರಿಗೆ ವಾಪಾಸಾಗುವಾಗ ಎದುರಿಗೆ ಆ್ಯಂಬುಲೆನ್ಸ್‌ ಸೈರನ್‌ ಮೊಳಗಿಸುತ್ತಾ ಊರೊಳಗೆ ಬರುತ್ತದೆ. ಬೆಚ್ಚಿ ಬೀಳುವ ಆತ ಜೀವ ಕೈಯಲ್ಲಿ ಹಿಡಿದು ಓಡುತ್ತಾನೆ. ಆ್ಯಂಬುಲೆನ್ಸ್‌ ಯಮದೂತನಂತೆ ಆತನನ್ನು ಹಿಂಬಾಲಿಸುತ್ತದೆ. ಆ ಆ್ಯಂಬುಲೆನ್ಸ್‌ ತನ್ನ ಮನೆಯನ್ನ ದಾಟಿ ಮುಂದೆ ಹೋದಾಗ ಒಂದು ನಿಟ್ಟುಸಿರು. ಉತ್ತರ ಕರ್ನಾಟಕದ ರೈತ ಬದುಕಿಗೆ ರೂಪಕದಂತೆ ಬರುವ ದೃಶ್ಯವಿದು.

ತಾರಾಗಣ: ನವೀನ್‌ ಶಂಕರ್‌, ರಾಹುಲ್‌ ಐನಾಪುರ್‌, ನಾಟ್ಯ ರಂಗ, ಅರ್ಚನಾ ಜೋಯಿಸ್‌, ಅಚ್ಯುತ ಕುಮಾರ್‌

ನಿರ್ದೇಶನ : ಶ್ರೀಕಾಂತ್‌ ಕಟಗಿ

ರೇಟಿಂಗ್‌: 3

ಪುರುಷಾಹಂಕಾರವನ್ನೇ ಕಳೆದು ಮನುಷ್ಯನಾಗುವ 'ಕೌಸಲ್ಯಾ ಸುಪ್ರಜಾ ರಾಮ'

ಆಧುನಿಕ ಜಗತ್ತಿನ ಸಂಕೀರ್ಣ ಸಮಸ್ಯೆಯ ಉರುಳಲ್ಲಿ ಸಿಲುಕಿದ ರೈತ ಬದುಕಿನ ಅನೇಕ ಸತ್ಯಗಳನ್ನು ಸಿನಿಮಾ ನಮ್ಮ ಮುಂದಿಡುತ್ತದೆ. ರೈತ ಆತ್ಮಹತ್ಯೆಯ ನೈಜ ಕಾರಣವನ್ನು ಹುಡುಕಿ ತೆಗೆಯುತ್ತದೆ. ಅಷ್ಟಕ್ಕೇ ನಿಲ್ಲದೇ ಸಮಸ್ಯೆಗೆ ಒಂದು ಪರಿಹಾರ ಹೇಳುವ ಪ್ರಯತ್ನವನ್ನೂ ಮಾಡುತ್ತದೆ. ಆರಂಭದಲ್ಲಿ ರೈತರ ಸ್ಥಿತಿಯನ್ನು ಹೇಳುವಾಗ ಇರುವ ರಿಯಲಿಸ್ಟಿಕ್‌ ನಿರೂಪಣೆ ಪರಿಹಾರ ಹೇಳುವ ಹೊತ್ತಿಗೆ ಕಮರ್ಷಿಯಲ್‌ ರೂಪಕ್ಕೆ ತಿರುಗುತ್ತದೆ. ವಿಲನ್‌ ಕುತಂತ್ರ, ಹೊಡೆದಾಟ, ಹೀರೋ ಒಬ್ಬನೇ ಹತ್ತಿಪ್ಪತ್ತು ರೌಡಿಯನ್ನು ಹೊಡೆದುಹಾಕೋದು ಇತ್ಯಾದಿ ಮಾಸ್‌ ಅಂಶಗಳು ಸೇರಿಕೊಳ್ಳುತ್ತವೆ. ಈ ಕಾರಣಕ್ಕೋ ಏನೋ ಚಿತ್ರ ಸೆಕೆಂಡ್‌ ಹಾಫ್‌ನಲ್ಲಿ ಕೊಂಚ ಎಳೆದಂತೆ ಅನಿಸುತ್ತದೆ.

ಕಥೆಯ ವಿಷಯಕ್ಕೆ ಬಂದರೆ ನಾಯಕ ಬಸವ ಉತ್ತರ ಕರ್ನಾಟಕದ ರೈತನ ಮಗ. ಮಲತಾಯಿಯ ಕಾರಣದಿಂದ ಮಠದಲ್ಲಿ ಓದುತ್ತಾ ಮುಂದೆ ಇಂಜಿಯರಿಂಗ್‌ ಕಲಿಯುವ ಹಂತಕ್ಕೆ ಬರುತ್ತಾನೆ. ಅಷ್ಟರಲ್ಲಿ ಅನಾಹುತ ಜರುಗುತ್ತದೆ. ಆತನನ್ನು ಯಾವ ಮಟ್ಟಿಗೆ ನೋಯಿಸುತ್ತೆ ಅಂದರೆ ಬಹುದೊಡ್ಡ ರೈತ ಹೋರಾಟ ರೂಪಿಸುವಷ್ಟು.

Achar & Co Review: ಮದ್ವೆ ಸಂಸಾರ ಸುಲಭವಲ್ಲ, ಸುಮಾಳಿಗೆ ಸಾಥ್‌ ಕೊಟ್ರು ಏರಿಯಾ BBCಗಳು!

ನಾಯಕ ಬಸವನ ಪಾತ್ರದಲ್ಲಿ ನವೀನ್‌ ಶಂಕರ್‌ ಮೌನದಲ್ಲೇ ಬಹಳಷ್ಟನ್ನು ದಾಟಿಸುತ್ತಾರೆ. ಪ್ರತೀ ಫ್ರೇಮ್‌ನಲ್ಲೂ ಪಾತ್ರಕ್ಕೆ ಜೀವ ತುಂಬುತ್ತಾರೆ. ವಿಲನ್ ಪಾತ್ರಧಾರಿ ರಾಹುಲ್‌ ಐನಾಪುರ್‌ ಅವರದು ಕ್ರೌರ್ಯ ತುಂಬಿದ ಪಾತ್ರದಲ್ಲಿ ಉತ್ತಮ ನಟನೆ. ಆತ್ಮಹತ್ಯೆ ಮಾಡಿಕೊಂಡ ಮಗನಿಗೆ ಮಣ್ಣು ಹಾಕುವ ತಾಯಿ ಪಾತ್ರದಿಂದ ಹಿಡಿದು ಪ್ರತೀ ಕಲಾವಿದರೂ ತೀವ್ರವಾಗಿ ಅಭಿನಯಿಸಿದ್ದಾರೆ. ಸಂಗೀತ, ಛಾಯಾಗ್ರಹಣ ಪೂರಕವಾಗಿದೆ.

ಒಟ್ಟಿನಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬರೂ ಅನ್ನದಾತನ ಬಗೆಗಿನ ಈ ಸಿನಿಮಾ ನೋಡುವುದು ರಿಯಲೈಸೇಶನ್‌ ದೃಷ್ಟಿಯಿಂದ ಒಳ್ಳೆಯದು.