Asianet Suvarna News Asianet Suvarna News

Achar & Co Review: ಮದ್ವೆ ಸಂಸಾರ ಸುಲಭವಲ್ಲ, ಸುಮಾಳಿಗೆ ಸಾಥ್‌ ಕೊಟ್ರು ಏರಿಯಾ BBCಗಳು!

ಹಳೆ ಕಾಲದಲ್ಲಿ ಬೆಂಗಳೂರು ಹೇಗಿತ್ತು? 10 ಜನ ಇರೋ ಮನೆ ಹೇಗಿತ್ತು? ರೆಟ್ರೋ ಫೀಲ್ ಕೊಡಲು ಬಂದಿದೆ ಆಚಾರ್ ಆಂಡ್ ಕೋ ಸಿನಿಮಾ.... 
 

PRK Production Sindhu Srinivasa Murthy Ashwini Puneeth Rajkumar Achar and Co review vcs
Author
First Published Aug 1, 2023, 5:38 PM IST

ವೈಷ್ಣವಿ ಚಂದ್ರಶೇಖರ್

ಮದ್ವೆ ಸಂಸಾರ ಅನ್ನೋದು ಈಗಿನ ಕಾಲದಲ್ಲಿ ಎಷ್ಟು ಸಿಂಪಲ್ಲೋ, ಹಿಂದಿನ ಕಾಲದಲ್ಲಿ ಅದೇ ದೊಡ್ಡ ಟಾಸ್ಕ್ ಆಗಿತ್ತು. ಅದರಲ್ಲೂ ಮನೆ ತುಂಬಾ ಮಕ್ಕಳಿದ್ದರೆ, ಅಪ್ಪ ಸರ್ಕಾರಿ ಕೆಲಸ ಬಿಟ್ಟು ಬೇರೆ ಯಾವ ಕೆಲಸ ಮಾಡಿದರೂ ಮನೆ ನಡೆಸುವುದು ಕಷ್ಟ. ಮಕ್ಕಳು ಎಂಜಿನಿಯರಿಂಗ್ ಓದಬೇಕು. ಆಗ ಮಾತ್ರ ಒಳ್ಳೆ ಕೆಲಸ, ಮನೆ, ಕಾರು ಮತ್ತು ಫೋನ್ ಸಿಗುತ್ತೆ ಅನ್ನೋದು ಮಧುಸೂದ್ ಆಚಾರ್ ಅವರ ಮೈಂಡ್‌ಸೆಟ್‌. ಆಸೆಗೆ ತಕ್ಕಂತೆ ಬದುಕಬೇಕು ಅನ್ನೋದು ಅವರ ಮಕ್ಕಳ ವಾದ. 10 ಮಕ್ಕಳ ತಾಯಿ ಪಾತ್ರದಲ್ಲಿ ಸುಧಾ ಬೆಳವಾಡಿ. ಮೂರು ಗಂಡು ಮಕ್ಕಳು, ಏಳು ಹೆಣ್ಣು ಮಕ್ಕಳು! ಒಬ್ಬರಿಗೂ ವಿದ್ಯಾಭ್ಯಾಸದಲ್ಲೇನೂ ಕೊರತೆ ಮಾಡಿರಲಿಲ್ಲ. ಒಂದೊಂದು ವರ್ಷ ಗ್ಯಾಪ್‌ನಲ್ಲಿ ಮಕ್ಕಳು, ಮದುವೆ ಮಾಡುವ ಪ್ಲ್ಯಾನ್ ಇಟ್ಟುಕೊಂಡ ಪೋಷಕರು. ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಹಿರಿ ಮಗನ ಮದುವೆ ಮಾಡಿಯೇ ಬಿಟ್ಟರು. ಮನೆಯಲ್ಲಿ ಜಾಗವಿಲ್ಲ. ದೊಡ್ಡ ಮನೆ ಮಾಡಬೇಕು ಎನ್ನುತ್ತಿರುವಾಗಲೇ, ಹಿರಿ ಮಗ ಪ್ರಮೋಷನ್‌ ತೆಗೆದುಕೊಂಡು, ಮುಂಬೈಗೆ ಹಾರುತ್ತಾನೆ. ಎರಡನೇ  ಮಗ ಮನೆಯಲ್ಲಿರಬೇಕು ಎಂದು ಅಡ್ಜಸ್ಟ್  ಮಾಡಿಕೊಳ್ಳುತ್ತಾನೆ. 

ಒಂದು ದಿನ ಆಫೀಸ್‌ನಲ್ಲಿ ಮಧುಸೂದ್‌ ಆಚಾರ್‌ಗೆ ಹೃದಯಾಘಾತವಾಗುತ್ತದೆ. ಇಡೀ ಮನೆಯನ್ನು ರಘು ನಡೆಸುವುದು ಕಷ್ಟವೆಂದು ಜಗ್ಗು ಮತ್ತು ಸುಮಾಗೆ ಕೆಲಸ ಹುಡುಕಿ ಕೊಳ್ಳಳು ಬಂಧುಗಳು, ಆತ್ಮೀಯರು ಹೇಳುತ್ತಾರೆ. ತುಂಟಾಟ ಮಾಡಿಕೊಂಡಿದ್ದ ಜಗ್ಗು ರಂಗಭೂಮಿ ಸೇರಿಕೊಂಡು ಮನೆಯಲ್ಲಿ ಫ್ಯಾಕ್ಟರಿ ಕೆಲಸ ಎಂದು ಸುಳ್ಳು ಹೇಳುತ್ತಿರುತ್ತಾನೆ. 9ನೇ ಕ್ಲಾಸ್ ಓದಿರುವ ಸುಮಾಗೆ ಮಾಡಿದ ಕೆಲಸ ಕೈ ಹಿಡಿಯದೇ,  ಮನೆಯಲ್ಲಿಯೇ ಕೂರುತ್ತಾಳೆ. ಹುಡುಕಿಕೊಂಡು ಬರುವ ಸಂಬಂಧಗಳನ್ನು ರಿಜೆಕ್ಟ್‌ ಮಾಡಿ, ತಂಗಿಯರಿಗೆ ಮದುವೆ ಮಾಡಿ ಕೊಟ್ಟು ಕಳುಹಿಸುತ್ತಾಳೆ. 

ಹಾಸ್ಟೆಲ್‌ಗೆ ಹೋಗಿಲ್ಲ ಆದ್ರೂ ಬಾಯ್ಸ್‌- ವಾರ್ಡನ್ ಲವ್ ಇಷ್ಟ ಆಯ್ತು: ಹಾಸ್ಟೆಲ್ ಹುಡುಗರು ಸಿನಿಮಾ ಹಿಂಗಿತ್ತು!

ಇಷ್ಟೆನಾ ಸಿನಿಮಾ ಅಂದುಕೊಳ್ಳಬೇಡಿ. ಒಬ್ಬಳು ತಂಗಿ ವಿದ್ಯಾವಂತ ಕುಟುಂಬಕ್ಕೆ ಸೊಸೆಯಾಗಿ ಹೋಗಿ, ಹಿಂಸೆ ಅನುಭವಿಸುತ್ತಿರುತ್ತಾಳೆ.  ಆಕೆಯನ್ನು ಪುನಾ ಮನೆಗೆ ಕರೆದುಕೊಂಡು ಬಂದು, ವಿಚ್ಛೇದನ ಕೊಡಿಸುತ್ತಾಳೆ ಸುಮಾ. ಸುಧಾ ಮ್ಯಾಗಜಿನ್‌ನಲ್ಲಿ ಉಪ್ಪಿನ ಕಾಯಿ ರೆಸಿಪಿ ಪ್ರಕಟವಾಗುತ್ತಿದ್ದಂತೆ, ಅದನ್ನೇ ಬ್ಯುಸಿನೆಸ್ ಮಾಡಿಕೊಂಡು ದೊಡ್ಡ ಕಂಪನಿ ಕಟ್ಟುತ್ತಾಳೆ. ಸದಾ ಮದುವೆ ಯೋಚನೆ ಮಾಡಿಕೊಂಡು ಲಂಡನ್‌ಗೆ ಹೋಗಬೇಕೆಂದು ಕನಸು ಕಾಣುವ ಸುಮಾಗೆ ಜೀವನದ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಅಣ್ಣ ರಘು ಜೊತೆ ಆ ಒಂದು ದಿನ ಜಗಳವೇ ಆಗಬೇಕಾಗುತ್ತೆ. ಆದರೆ ವಿಧಿ ನೋಡಿ, ಜಗಳವಾಡಿದ ದಿನವೇ ಅಣ್ಣ ರಘು ಸ್ಕೂಟರ್ ಆ್ಯಕ್ಸಿಡೆಂಟ್‌ನಲ್ಲಿ ಕೊನೆಯುಸಿರೆಳೆಯುತ್ತಾನೆ. 

1960ರ ದಶಕದಲ್ಲಿ ಸಂಸಾರಗಳು ಹೇಗಿದ್ದವು? ವಿದ್ಯಾಭ್ಯಾಸಕ್ಕೆ ಕೊಡುತ್ತಿದ್ದ ಪ್ರಾಮುಖ್ಯತೆ ಏನು, ಹೆಣ್ಣು ಮಕ್ಕಳು ಆಗಲೇ ಇಂಡಿಪೆಂಡೆಂಟ್‌ ಆಗಿರಬೇಕು ಅನ್ನೋ ಯೋಚನೆಗಳು ಏನಿತ್ತು ಎಂಬುದನ್ನು ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಅದ್ಭುತವಾಗಿ ತೋರಿಸಿದ್ದಾರೆ. ಮನೆ ಮುಂದೆ ತೆಂಗಿನ ಮರ, ಹೂ ಗಿಡಗಳು, ಹಳೆ ಕಿಟಕಿ ಬಾಗಿಲು, ಪ್ರತಿಯೊಂದು ವಿಚಾರಕ್ಕೂ ಪ್ರಮುಖ್ಯತೆ ನೀಡಲಾಗಿದೆ. ಅಷ್ಟೇ ಅಲ್ಲ ಆಗಿನ ಕಾಲದಲ್ಲಿ ಮದುವೆ ಅಂದ್ರೆ ಯಾವ ರೀತಿ ಸೀರೆ ಧರಿಸುತ್ತಿದ್ದರು, ಯಾವ ಶೈಲಿ ಆಭರಣಗಳು ಟ್ರೆಂಡ್ ಅಗುತ್ತಿದ್ದವೋ ಅವನ್ನೇ ಫಾಲೋ ಮಾಡಿದ್ದಾರೆ. ಅಷ್ಟೇ ಯಾಕೆ ಅಡುಗೆ ಮನೆಯಲ್ಲಿರುವ ಪಾತ್ರೆಯೂ ಅವರಿವರ ಹಿಂದಿನ ಕಾಲದ ಜನ ಜೀವನವನ್ನು ನೆನಪಿಸುತತ್ದೆ. 

ಅತ್ತೆ ಸ್ಟ್ರಿಕ್ಟ್‌ ಆಗಿದ್ದರು ಬಜೆಟ್‌ ಹಿಡಿತದಲ್ಲಿರುತ್ತಿತ್ತು, ನಾನು ಅಪ್ಪು ತರ ಫುಲ್ ಫ್ರೀ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಇನ್ನು ಹೈಲೈಟ್ ಅಫ್‌ ದಿ ಸ್ಕ್ರೀನ್‌ ಅಂದ್ರೆ BBC. ಏರಿಯಾ ವಿಚಾರಗಳನ್ನು ಚರ್ಚೆ ಮಾಡುವ ಕಲ್ಪನಾ ರಾವ್, ಶಿಲ್ಪಾ ರುದ್ರಪ್ಪ ಮತ್ತು ಸೋನು ವೇಣುಗೋಪಾಲ್. ಮನೆಯವರಿಗೇ ವಿಚಾರ ಗೊತ್ತಿರುವುದಿಲ್ಲ. ಈ ತ್ರಿಮೂರ್ತಿಗಳು ಅದನ್ನು ಕಲೆಕ್ಟ್ ಮಾಡಿ, ಡಿಸ್ಕಶನ್ ಮಾಡುತ್ತಿರುತ್ತಾರೆ. ಕೊನೆಯಲ್ಲಿ ನಮಗ್ಯಾಕೆ ಬಿಡಿ ಶಾಂತಂ ಪಾಪಂ ಎಂದು ಟಿಪಿಕಲ್ ಗಾಸಿಪರ್ಸ್ ನಡೆದುಕೊಳ್ಳುವ ರೀತಿ ಮುಖದ ಮೇಲೆ ನಗು ಮೂಡಿಸುತ್ತದೆ. 

ಅಷ್ಟಕ್ಕೂ ಈ ಚಿತ್ರಕ್ಕೆ ಆಚಾರ್ ಆ್ಯಂಡ್ ಕೋ ಟೈಟಲ್ ಹೀಗೆ ಬಂತೆಂದೂ ಸಿಂಪಲ್ ಆಗಿ ಹೇಳಬಹುದು. ಆದರೆ ಹೈಲೈಟ್ ಆಗಿ, ಖುಷಿ ಕೊಡುವ ವಿಚಾರನೇ ಅದಾಗಿರುವ ಕಾರಣ ರಿವೀಲ್ ಮಾಡಲು ಮನಸ್ಸಿಲ್ಲ. ಈ ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಅಂತಾರೆ. ನೋಡಿ ಅವರಿಗೆ ಉಪ್ಪಿನಕಾಯಿ ಹಾಡು ತೋರಿಸಿದರೆ ಖಂಡಿತಾ ಒಂದಿನ ರುಚಿ ನೋಡೇ ನೋಡುತ್ತಾರೆ. 

ಪಿಆರ್‌ಕೆ ಬ್ಯಾನರ್ ಅಡಿ ಸಿದ್ಧವಾಗುವ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತದೆ. ಮಹಿಳೆಯರು ಓದಬೇಕು, ಯಾರ ಸಹಾಯವೂ ಇಲ್ಲದೇ ತಮ್ಮ ಕಾಲ ತಾವು ನಿಲ್ಲಬೇಕು ಅನ್ನೋದು ಪುನೀತ್ ರಾಜ್‌ಕುಮಾರ್ ಆಸೆ ಆಗಿತ್ತು. ಅದೇ ರೀತಿ ಈ ಚಿತ್ರದಲ್ಲಿಯೂ ಒಂದು ಮೆಸೇಜ್ ಇದೆ. ಬಹುಶಃ ಆಚಾರ್ ಆ್ಯಂಡ್ ಕೋ ಸಿನಿಮಾ ನೋಡಿದ ಮೇಲೆ ಗೃಹಿಣಿಯರ ತಲೆಯಲ್ಲಿ ಒಂದು ಆಲೋಚನೆ ಬರುವುದು ಗ್ಯಾರಂಟಿ. ಮ್ಯೂಸಿಕ್ ಸೂಪರ್, ಕ್ಯಾಮೆರಾ ವರ್ಕ್‌ ಸೂಪರ್, ಕಾಸ್ಟ್ಯೂಮ್ ಫಸ್ಟ್‌ ಕ್ಲಾಸ್... ಒಟ್ಟಾರೆ ಒಳ್ಳೆ ಮನೋರಂಜನೆ.

 

Follow Us:
Download App:
  • android
  • ios