Spooky College Review ಸ್ಮಶಾನದಂತಹ ಕಾಲೇಜಿನಲ್ಲಿ ಸಾವಿನ ಪ್ರೇಮ ಕಲೆ
ವಿವೇಕ್ ಸಿಂಹ, ಶ್ರುತಿ ರಾವ್, ಖುಷಿ ರವಿ, ಸುಂದರ್ ವೀಣಾ, ವಿಜಯ್ ಚೆಂಡೂರು, ರಘು ರಮಣಕೊಪ್ಪ, ಶ್ರೀಧರ್ ಮತ್ತು ರೀಷ್ಮಾ ನಾಣಯ್ಯ ನಟಿಸಿರುವ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ಗೊತ್ತ?
ಆರ್‌ಕೆ
ಕಾಡಿನ ಮಧ್ಯೆ ಇರುವ ಒಂದು ಬೃಹತ್ ಕಾಲೇಜು. ಅದಕ್ಕೆ ಬ್ರಿಟಿಷರ ಕಾಲದ ಕತೆ ಇದೆ. ಆ ಕಾಲದ ಕತೆಗೂ, ಈಗ ಕಾಲಕ್ಕೂ ಏನಾದರೂ ಲಿಂಕು ಇದಿಯಾ ಎನ್ನುವ ಕುತೂಹಲದಲ್ಲಿ ಸಾಗುವ ಸಿನಿಮಾ ‘ಸ್ಫೂಕಿ ಕಾಲೇಜು’. ದೆವ್ವ, ಪ್ರೇತ ಹಾಗೂ ಆತ್ಮಗಳನ್ನೇ ನಮ್ಮಿಂಕೊಂಡು ಬರುವ ಚಿತ್ರಗಳ ಸಾಲಿನಲ್ಲಿ ಇದೂ ಒಂದು. ಕಾಡಿನ ನಡುವೆ, ರಾತ್ರಿ, ವಿದ್ಯಾರ್ಥಿಗಳು, ಅಲ್ಲಿನ ಸಾವುಗಳು, ಏನೇ ಆದರೂ ಕಾಲೇಜು ಮುಚ್ಚಲ್ಲ ಎನ್ನುವ ಅಲ್ಲಿನ ಪ್ರಿನ್ಸಿಪಾಲ್, ಇಲ್ಲಿ ದೆವ್ವ ಇದೆ ಎಂದು ವಿದ್ಯಾರ್ಥಿಗಳ ಜತೆಗೆ ಆಗಾಗ ಎಚ್ಚರಿಸುವ ಕಾಲೇಜಿನ ಪ್ರಾಧ್ಯಪಕ ಇತ್ಯಾದಿಗಳ ತಿರುವುಗಳಲ್ಲಿ ಸಿನಿಮಾ ಸಾಗುತ್ತದೆ.
ತಾರಾಗಣ: ವಿವೆಏ್ಕ ಸಿಂಹ, ಶ್ರುತಿ ರಾವ್, ಖುಷಿ ರವಿ, ಸುಂದರ್ ವೀಣಾ, ವಿಜಯ್ ಚೆಂಡೂರು, ರಘು ರಮಣಕೊಪ್ಪ, ಶ್ರೀಧರ್, ರೀಷ್ಮಾ ನಾಣಯ್ಯ
ನಿರ್ದೇಶನ: ಭರತ್ ಜಿ
ತುಂಬಾ ವರ್ಷಗಳ ನಂತರ ನಾಯಕಿ, ಕಾಲೇಜಿಗೆ ಮರಳುತ್ತಿದ್ದಾಳೆ. ಅದೇ ಕಾಲೇಜಿನಲ್ಲಿ ಆಕೆಯ ಜೀವನದಲ್ಲಿ ಒಂದು ದುರಂತ ನಡೆದಿದೆ. ಅದೆಲ್ಲವನ್ನೂ ಮರೆತಂತೆ ಮರಳಿದ್ದಾಳೆ. ಆದರೆ, ಮರೆತ ದುರಂತ ಮತ್ತೆ ಕಣ್ಣ ಮುಂದೆ ಬರುತ್ತದೆ. ಆಕೆ ಗಾಬರಿಗೊಳ್ಳುತ್ತಲೇ ಕಾಲೇಜು ಸುತ್ತುತ್ತಾಳೆ. ಆಗಾಗ ಅಲ್ಲಿ ಪ್ರೇಮಿಗಳು ಸಾಯುತ್ತಿದ್ದಾರೆ. ‘ಐ ಹೇಟ್ ಲವರ್ಸ್’ ಎನ್ನುವ ಡೈಲಾಗ್ ಕೂಡ ಪದೇ ಪದೇ ಕೇಳಿ ಬರುತ್ತದೆ. ಲವರ್ಸ್ ಮಾತ್ರ ಯಾಕೆ ಸಾಯುತ್ತಾರೆ, ಈ ಪ್ರೇಮಿಗಳ ಸಾವಿಗೂ ಬ್ರಿಟಿಷರ ಕಾಲದಲ್ಲಿ ಇದ್ದ ಅಧಿಕಾರಿಯ ಸಾವಿಗೂ, ಈಗ ಬಂದಿರುವ ನಾಯಕಿ ಜೀವನದಲ್ಲಾದ ದುರಂತಕ್ಕೂ ಇರುವ ಸಂಬಂಧ ಏನು ಎಂಬುದು ಚಿತ್ರದ ತಿರುಳು.
Spooky ಕಾಲೇಜಿನಲ್ಲಿ ಭಯ ಪಡಿಸೋಕೆ ಬರ್ತಿದ್ದೀನಿ : ಖುಷಿ ರವಿ
ಕತೆ ನಂಬಿಕೊಂಡು ಬರುವ ಚಿತ್ರಗಳ ನಡುವೆ ತಾಂತ್ರಿಕ ವಿಭಾಗವನ್ನೇ ನಂಬಿರುವ ಚಿತ್ರ ‘ಸ್ಫೂಕಿ ಕಾಲೇಜು’. ಅನಗತ್ಯವಾದ ಅರಚಾಟ, ಲಾಜಿಕ್ ಇಲ್ಲದೆ ಕೇಳಿ ಬರುವ ಶಬ್ದಗಳೇ ಚಿತ್ರದ ಜೀವಾಳ ಎನ್ನುವ ಭ್ರಮೆಯಲ್ಲಿ ಇಡೀ ಚಿತ್ರವನ್ನು ನೋಡಬೇಕಿದೆ. ಸತ್ತ ಪ್ರೇಮಿಯೇ ಮತ್ತೆ ಬದುಕಿ ತಾನು ಪ್ರೀತಿಸುವ ಹುಡುಗಿ ಹಿಂದೆ ಬಿದ್ದರೆ ಏನಾಗುತ್ತದೆ ಎಂಬುದರ ಒಂದು ಸಾಲಿನ ಕತೆಯನ್ನು ಸಾಧ್ಯವಾದಷ್ಟುಕಾಂಪ್ಲಿಕೇಟ್ ಮಾಡಗಿದೆ. ತನ್ನ ಹುಡುಗಿಗೆ ಮೋಸ ಮಾಡಬಾರದು ಎಂದು ವಾಪಸ್ಸು ಬರುತ್ತಿರುವಾಗ ನಾಯಕ ಸಾಯುತ್ತಾನೆ. ಅಂದರೆ ಆತ ಪ್ರಾಮಾಣಿಕ ಪ್ರೇಮಿ. ಹಾಗಾದರೆ ಅದೇ ಪ್ರೇಮಿ ಆತ್ಮವಾಗಿ ಈಗ ಪ್ರೇಮಿಗಳನ್ನು ಸಾಯಿಸುವುದು ಯಾಕೆ? ದೆವ್ವದ ಕಾಲೇಜು ಎಂಬುದನ್ನು ಹೇಳುವಾಗ ಅದನ್ನು ಆರಂಭದಿಂದಲೇ ಸ್ಮಶಾನದಂತೆ ತೋರಿಸುವ ಮೂಲಕ ನಿರ್ದೇಶಕರೇ ಗುಟ್ಟು ರಟ್ಟು ಮಾಡಿ, ತಾವೇ ರೂಪಿಸಿಕೊಂಡಿರುವ ಚೀಟಿಂಗ್ ಚಿತ್ರಕಥೆಗೆ ಮೋಸ ಮಾಡಿದ್ದಾರೆ. ಪಾಠ ಮಾಡುವ ಶಿಕ್ಷಕನೇ ಮಂತ್ರವಾದಿಯಂತೆ ಅರಚುತ್ತಾರೆ. ಹೀಗೆ ಹತ್ತಾರು ಕೊರತೆಗಳ ನಡುವೆಯೂ ಹೆದರುವ ಗುಣ ಇದ್ದವರು ‘ಸ್ಫೂಕಿ ಕಾಲೇಜು’ ನೋಡಬಹುದು. ಹಳೆಯ ಹಾಡೊಂದು ಹೊಸದಾಗಿ ಬರುವುದು ಚಿತ್ರದ ರಿಲ್ಯಾಕ್ಸ್ ಪಾಯಿಂಟ್.