Physics Teacher Film Review: ಅಪರೂಪದ ಅಚ್ಚರಿ ಫಿಸಿಕ್ಸ್ ಟೀಚರ್
ಭೌತ ಶಾಸ್ತ್ರವನ್ನು ಅತಿಯಾಗಿ ಇಷ್ಟಪಡುವ ಒಬ್ಬ ಮೇಷ್ಟ್ರ ಬದುಕಿನ ಕತೆ ಇದು. ಮಕ್ಕಳಿಗೆ ವಿಜ್ಞಾನದ ಅಚ್ಚರಿಗಳನ್ನು ತೋರಿಸುತ್ತಾ, ಮೂಢನಂಬಿಕೆಗಳನ್ನು ತೊಡೆಯಲು ಯತ್ನಿಸುವ ಮೇಷ್ಟ್ರ ಮನೆಯಲ್ಲಿ ಅನೂಹ್ಯ ಸಂಗತಿಗಳು ಜರುಗತೊಡಗುತ್ತವೆ ಎಂಬಲ್ಲಿಗೆ ಕತೆ ಶುರುವಾಗುತ್ತದೆ.
ರಾಜೇಶ್ ಶೆಟ್ಟಿ
ಭ್ರಮೆ, ವಾಸ್ತವ ವಸ್ತುವಿಟ್ಟುಕೊಂಡು ಜಗತ್ತಿನ ನಾನಾ ಚಿಂತಕರು ತಮ್ಮ ತಮ್ಮ ವ್ಯಾಖ್ಯೆಗಳನ್ನು ಜಗತ್ತಿನ ಜೊತೆ ಹಂಚಿಕೊಂಡಿದ್ದಾರೆ. ತನ್ನ ಚೊಚ್ಚಲ ನಿರ್ದೇಶನದ ಫಿಸಿಕ್ಸ್ ಟೀಚರ್ ಚಿತ್ರದ ಮೂಲಕ ನಿರ್ದೇಶಕರಾದ ಸುಮುಖ ವಾಸ್ತವ-ಭ್ರಮೆ ಕುರಿತ ಹುಡುಕಾಟ ನಡೆಸಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಅಚ್ಚರಿ. ಭೌತ ಶಾಸ್ತ್ರವನ್ನು ಅತಿಯಾಗಿ ಇಷ್ಟಪಡುವ ಒಬ್ಬ ಮೇಷ್ಟ್ರ ಬದುಕಿನ ಕತೆ ಇದು. ಮಕ್ಕಳಿಗೆ ವಿಜ್ಞಾನದ ಅಚ್ಚರಿಗಳನ್ನು ತೋರಿಸುತ್ತಾ, ಮೂಢನಂಬಿಕೆಗಳನ್ನು ತೊಡೆಯಲು ಯತ್ನಿಸುವ ಮೇಷ್ಟ್ರ ಮನೆಯಲ್ಲಿ ಅನೂಹ್ಯ ಸಂಗತಿಗಳು ಜರುಗತೊಡಗುತ್ತವೆ ಎಂಬಲ್ಲಿಗೆ ಕತೆ ಶುರುವಾಗುತ್ತದೆ.
ಅಲ್ಲಿಂದ ಕೊಂಚ ಸಸ್ಪೆನ್ಸ್ ಥ್ರಿಲ್ಲರ್‌ನಂತೆ ಸಾಗುವ ಸಿನಿಮಾ ಅಂತಿಮ ಹಂತಕ್ಕೆ ಬರುವಾಗ ಬೇರೆಯದೇ ಆದ ಸಂಕೀರ್ಣ ಸಂಗತಿಗಳನ್ನು ಹೇಳಲು ಹಾತೊರೆಯುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಆದರೆ ಕತೆ ಶುರುವಾಗುತ್ತದೆ. ಇದು ಮುಗಿಯುವ ಸಿನಿಮಾ ಅಲ್ಲ. ಏನಾಯಿತು, ಹೇಗಾಯಿತು, ಯಾವುದು ವಾಸ್ತವ-ಯಾವುದು ಭ್ರಮೆ ಎಂಬುದನ್ನು ಯೋಚಿಸುವಂತೆ ಮಾಡುವ ಸಿನಿಮಾ. ಈ ಸಿನಿಮಾದ ಗೆಲುವು ಅಡಗಿರುವುದು ಅಲ್ಲಿಯೇ. ವಾಸ್ತವ ಅನ್ನುವುದು ಒಂದು ನಿರಂತರವಾದ ಭ್ರಮೆ ಎಂಬ ಐನ್‌ಸ್ಟೀನನ ಮಾತುಗಳನ್ನು ನೆಚ್ಚಿಕೊಂಡಿರುವ ನಿರ್ದೇಶಕ, ಆ ವಿಚಾರವನ್ನು ಹೇಳಲು ಆರಿಸಿಕೊಂಡಿರುವ ಕಥಾ ಹಿನ್ನೆಲೆ ಕೊಂಚ ಸರಳವಾಗಿದೆ.
ಚಿತ್ರ: ಫಿಸಿಕ್ಸ್ ಟೀಚರ್
ನಿರ್ದೇಶನ: ಸುಮುಖ
ತಾರಾಗಣ: ಸುಮುಖ, ಪ್ರೇರಣಾ ಕಂಬಂ, ರಾಜೇಶ್ ನಟರಂಗ, ಮಂಡ್ಯ ರಮೇಶ್
ರೇಟಿಂಗ್: 3
ಸರಳತೆಯಲ್ಲಿ ಸಂಕೀರ್ಣತೆಯ ಅರಿವಾಗುವ ಹೊತ್ತಿಗೆ ತಡವಾಗಿರುತ್ತದೆ. ಸಾಮಾನ್ಯ ಸಿನಿಮಾಗಳ ಎಲ್ಲಾ ಕಟ್ಟುಪಾಡುಗಳನ್ನು ಮೀರಿರುವ ಈ ಚಿತ್ರದಲ್ಲಿ ಅನೇಕ ಪದರಗಳಿವೆ. ಸಿನಿಮಾ ಮುಗಿದ ನಂತರ ಯೋಚಿಸುತ್ತಾ ಹೋದರೆ ಒಂದೊಂದೇ ಪದರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಕೆಲವೊಂದು ಜಾಣತನದ ದೃಶ್ಯಗಳು ಇಲ್ಲದೇ ಇದ್ದಿದ್ದರೆ ವಸ್ತುವಿಗೆ ಇನ್ನಷ್ಟುನಿಷ್ಟವಾಗಿರಲು ಸಾಧ್ಯವಾಗಬಹುದಿತ್ತು. ಆದರೆ ಅದರಿಂದ ಕತೆ ಓಘಕ್ಕೆ ಯಾವುದೇ ತೊಂದರೆಯಾಗಿಲ್ಲ. ಸರಳವಾಗಿ, ಕುತೂಹಲಕರವಾಗಿ ಸಾಗುವ ಈ ಸಿನಿಮಾದ ಆತ್ಮ ಇರುವುದು ಕೊನೆಯಲ್ಲಿ.
Sakutumba Sametha Film Review: ಹಿತವಾದ ಪಿಸುಮಾತಿನಂಥಾ ಗಾಢ ಸಣ್ಣಕಥೆ
ಆತ್ಮದ ಕುರಿತಾಗಿ ಯೋಚಿಸುವಂತೆ ಮಾಡುವ ಸಲುವಾಗಿ ನಿರ್ದೇಶಕ ಅಲ್ಲಿಯವರೆಗೆ ಸಾಗುವ ಹಾದಿಯಲ್ಲಿ ಬೇರೆ ಬೇರೆ ಪಾತ್ರಗಳನ್ನು ತರುವ ರೀತಿಯಲ್ಲಿ ಒಂದು ಕೃತಕತೆ ಇದೆ ಅನ್ನುವುದರ ಹೊರತಾಗಿ ಇದೊಂದು ಅಚ್ಚರಿಯ ಪ್ರಯೋಗ. ನಟ ಸುಮುಖ, ನಟಿ ಪ್ರೇರಣಾ ಕಂಬಂ ಈ ಚಿತ್ರದ ಲವಲವಿಕೆಗೆ ಕಾರಣಕರ್ತರು. ರಾಜೇಶ್ ನಟರಂಗ ಅವರ ಉಪಸ್ಥಿತಿ ಈ ಚಿತ್ರಕ್ಕೊಂದು ಘನತೆ ಒದಗಿಸಿದೆ. ನಿರ್ದೇಶಕ ಸುಮುಖ ಮತ್ತು ಸಹ ಬರಹಗಾರ ಸ್ಕಂದ ಸುಬ್ರಮಣ್ಯರ ಈ ವಿಶಿಷ್ಟಪ್ರಯತ್ನ ಶ್ಲಾಘನೀಯ. ಸಿನಿಮಾ ವ್ಯಾಮೋಹಿಗಳಿಗೆ ಇದೊಂದು ಭಿನ್ನ ಅನುಭವ ಒದಗಿಸಲಿದೆ.