Asianet Suvarna News Asianet Suvarna News

Sakutumba Sametha Film Review: ಹಿತವಾದ ಪಿಸುಮಾತಿನಂಥಾ ಗಾಢ ಸಣ್ಣಕಥೆ

ಇದೊಂದು ಸದ್ದು ಗದ್ದಲವಿಲ್ಲ, ವೇಗದ ಹಂಗಿಲ್ಲದ, ಬಿಲ್ಡಪ್‌ಗಳ ಭಾರವಿಲ್ಲದ ಹಿತವಾದ ಪಿಸುಮಾತಿನಂತಹ ಸಿನಿಮಾ. ಕೇಳಿಸಿಕೊಳ್ಳುವ ಕಿವಿ ಇರುವವರಿಗೆ ಒಂದು ಸುದೀರ್ಘ ನಿಟ್ಟುಸಿರು.
 

Kannada Movie Sakutumba Sametha Film Review gvd
Author
Bangalore, First Published May 21, 2022, 3:25 AM IST

ರಾಜೇಶ್‌ ಶೆಟ್ಟಿ

ರಷ್ಯಾದ ಅಧ್ಯಕ್ಷ ಪುಟಿನ್‌ ಒಳ್ಳೆಯವನೋ ಕೆಟ್ಟವನೋ ಅನ್ನುವ ವಿಚಾರದ ಕುರಿತು ಅರ್ಧ ಗಂಟೆ ವಾದ ಮಾಡುವ ನಾವು ನಮ್ಮ ಪಕ್ಕದಲ್ಲಿರುವ ಅಥವಾ ನಮ್ಮ ಮನೆಯಲ್ಲಿರುವ ಮತ್ತೊಂದು ಜೀವದ ಅಂತರಂಗವನ್ನು ಅರಿತುಕೊಳ್ಳಬಲ್ಲೆವಾ? ಇಂಥದ್ದೊಂದು ಪ್ರಶ್ನೆಯನ್ನು ತಣ್ಣನೆಯ ದನಿಯಲ್ಲಿ ಕೇಳುತ್ತದೆ ಸಕುಟುಂಬ ಸಮೇತ. ಇದೊಂದು ಸದ್ದು ಗದ್ದಲವಿಲ್ಲ, ವೇಗದ ಹಂಗಿಲ್ಲದ, ಬಿಲ್ಡಪ್‌ಗಳ ಭಾರವಿಲ್ಲದ ಹಿತವಾದ ಪಿಸುಮಾತಿನಂತಹ ಸಿನಿಮಾ. ಕೇಳಿಸಿಕೊಳ್ಳುವ ಕಿವಿ ಇರುವವರಿಗೆ ಒಂದು ಸುದೀರ್ಘ ನಿಟ್ಟುಸಿರು. 

ವಯಸ್ಸು 30 ದಾಟಿದ ಮಧ್ಯಮ ವರ್ಗದ ಒಬ್ಬ ಹುಡುಗ ಮತ್ತು ಮೇಲ್ಮಧ್ಯಮ ವರ್ಗದ ಹುಡುಗಿಯ ಮದುವೆ ಮಾತುಕತೆಯಿಂದ ಶುರುವಾಗುವ ಅತ್ಯಂತ ಸರಳವಾದ ಕತೆ ಹೊಂದಿದೆ ಸಿನಿಮಾ. ಹೋಗುತ್ತಾ ಹೋಗುತ್ತಾ ಒಂದೊದು ಪಾತ್ರದ ಮುಖದ ನೆರಿಗೆ ಬದಲಾಗುತ್ತಿರುವಂತೆ ಸಂಕೀರ್ಣವಾಗುತ್ತಾ ಹೋಗುತ್ತದೆ. ಒಂದೊಂದು ಪಾತ್ರಗಳು ಒಂದೊಂದು ಪ್ರಶ್ನೆಯನ್ನು ಕೇಳಿ ಅಂತಿಮವಾಗಿ ಸಣ್ಣದೊಂದು ಜ್ಞಾನೋದಯವನ್ನು ಉಳಿಸಿ ಹೋಗುತ್ತವೆ. ಇಲ್ಲಿ ಯಾವುದನ್ನೂ ಇದು ಹೀಗೇ ಎಂದು ಮಾತಿನಲ್ಲಿ ಹೇಳಿಲ್ಲ. 

ಚಿತ್ರ: ಸಕುಟುಂಬ ಸಮೇತ

ನಿರ್ದೇಶನ: ರಾಹುಲ್‌ ಪಿ.ಕೆ.

ತಾರಾಗಣ: ಭರತ್‌ ಜಿ.ಬಿ, ಸಿರಿ ರವಿಕುಮಾರ್‌, ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್‌, ಪುಷ್ಪಾ ಬೆಳವಾಡಿ

ರೇಟಿಂಗ್‌: 4

ಪಾತ್ರ ಮತ್ತು ಸಿಚುವೇಷನ್ನುಗಳ ಮೂಲಕ ಇಡೀ ಸಿನಿಮಾ ಹೆಣೆದಿದ್ದಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾದ ಬರಹಗಾರರಾದ ರಾಹುಲ್‌ ಪಿ.ಕೆ ಮತ್ತು ಪೂಜಾ ಸುಧೀರ್‌ ಅವರಿಗೆ ಮೆಚ್ಚುಗೆ ಸಲ್ಲಬೇಕು. ಕ್ರಿಕೆಟ್‌ನಲ್ಲಿ ಟೆಸ್ಟ್‌ ಮ್ಯಾಚುಗಳನ್ನು ಆರಾಧಿಸುವವರು, ಶಾಸ್ತ್ರೀಯ ಸಂಗೀತ ಪ್ರೇಮಿಗಳು ಯಾವತ್ತೂ ವೇಗ ಬಯಸುವುದಿಲ್ಲ. ತಣ್ಣನೆ ಬೀಸುವ ಗಾಳಿಯನ್ನು, ನಿಧಾನವಾಗಿ ಏರುಗತಿಗೆ ಸಾಗುವ ಆಲಾಪವನ್ನು ಅನುಭವಿಸುತ್ತಾರೆ. ಇದು ಅದೇ ಥರ ಅನುಭವಿಸುವ ಸಿನಿಮಾ. ನೋಡಿ ಮುಗಿಸುವ ಸಿನಿಮಾ ಅಲ್ಲ. ವೇಗದ ಸದ್ದುಗಳ ಜಗತ್ತು, ಪಿಸುಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಮುಗಿದಂತಿರುವ ಜಗತ್ತು ಎಂದು ಭಾಸವಾಗುವ ಕಾಲವಿದು. 

KGF 2 Film Review: ನೆತ್ತರಲ್ಲಿ ಬರೆದ ಸುವರ್ಣ ಯುಗದ ಚರಿತ್ರೆ

ಅಂಥಾ ಹೊತ್ತಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ಅಚ್ಚರಿ. ಈ ಚಿತ್ರದ ನಿರ್ದೇಶಕ ರಾಹುಲ್‌, ಸಂಗೀತ ನಿರ್ದೇಶಕ ಮಿಥುನ್‌ ಮುಕುಂದನ್‌ ಒಂದು ಬೇರೆಯದೇ ಆದ ಕಲಾಕೃತಿ ಮುಂದಿಟ್ಟಿದ್ದಾರೆ. ಇಲ್ಲಿನ ಒಬ್ಬೊಬ್ಬ ಪಾತ್ರಧಾರಿಗಳು ಕೂಡ ಅಸಾಧಾರಣ ಆಟಗಾರರು. ಒಂದೊಂದು ಮುಖದ ಕದಲಿಕೆಯಲ್ಲೂ ಕತೆ ಹೇಳಬಲ್ಲವರು. ಈ ಚಿತ್ರದ ಪ್ರತೀ ಪಾತ್ರಕ್ಕೂ ಮೆಚ್ಚುಗೆ ಸಲ್ಲಬೇಕು. ನಿಟ್ಟುಸಿರನ್ನು ಅರ್ಥ ಮಾಡಿಕೊಳ್ಳಬಲ್ಲವರು, ಕಾಡಿನ ಮೌನವನ್ನು ಆಸ್ವಾದಿಸಬಲ್ಲವರು ಈ ಸಿನಿಮಾ ಪ್ರೀತಿಸಬಲ್ಲರು. ಉಳಿದಂತೆ ಹೊಳೆದದ್ದು ತಾರೆ, ಉಳಿದಿದ್ದು ಆಕಾಶ.

Follow Us:
Download App:
  • android
  • ios