Film Review: ಲವ್ ಮಾಕ್ಟೇಲ್ 2
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೇಲ್ 2 ಸಿನಿಮಾ ಹೇಗಿದೆ? ಮೊದಲ ದಿನ ಹೌಸ್‌ಫುಲ್ ಪ್ರದರ್ಶನ ಕಂಡ ಸಿನಿಮಾ ಬಗ್ಗೆ ಸಿನಿ ರಸಿಕರು ಏನ್ ಹೇಳುತ್ತಾರೆ?
ಪ್ರಿಯಾ ಕೆರ್ವಾಶೆ
ಇಬ್ಬರ ನಡುವೆ ಒಮ್ಮೆ ಪ್ರೀತಿ ಹುಟ್ಟಿತು ಅಂದರೆ ಮುಗೀತು, ಮತ್ತೆ ಅದರಿಂದ ಬಿಡುಗಡೆ ಇಲ್ಲ. ಪ್ರೀತಿಸಿದವರು ಜೊತೆಗಿರುತ್ತಾರಾ, ಇಲ್ಲವಾ ಅನ್ನೋದೆಲ್ಲ ಇಲ್ಲಿ ಮ್ಯಾಟರ್ ಆಗೋದಿಲ್ಲ. ಪ್ರೀತಿಯೊಂದೇ ಶಾಶ್ವತ. ಇಂಥದ್ದೊಂದು ಸಬ್ಜೆಕ್‌ಟ್ ಇಟ್ಟುಕೊಂಡು ರೊಮ್ಯಾಂಟಿಕ್ ಆಗಿ ಲವ್ ಮಾಕ್‌ಟೇಲ್ 2 ಚಿತ್ರ ಹೆಣೆದಿದ್ದಾರೆ ಡಾರ್ಲಿಂಗ್ ಕೃಷ್ಣ. ಅವರು ಕತೆಯನ್ನು ಟ್ರೀಟ್ ಮಾಡುವ ಬಗೆ, ಪ್ರೀತಿಯ ಜರ್ನಿಯನ್ನು ಕೊಂಡೊಯ್ಯುವ ರೀತಿಯಲ್ಲೊಂದು ಜೋಶ್ ಇದೆ, ಭಾವನಾತ್ಮಕತೆ ಇದೆ. ಅದು ಚಿತ್ರವನ್ನು ಆಪ್ತವಾಗಿಸುತ್ತದೆ.
ಇಡೀ ಸಿನಿಮಾ ತುಂಬಿರೋದು ಗತಿಸಿದ ನಿಧಿಮಾ. ಎರಡು ವರ್ಷದ ಮೊದಲು ಬಂದ ಈ ಚಿತ್ರದ ಮೊದಲ ಭಾಗದಲ್ಲೇ ಆಕೆ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾಳೆ. ಅದರೆ ಇಲ್ಲಿ ಅವಳ ಪ್ಲೆಸೆಂಟ್ ಪ್ರೆಸೆನ್‌ಸ್ ಇದೆ. ಅದು ಹೇಗೆ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು. ಅವಳ ಉಪಸ್ಥಿತಿಯಲ್ಲೇ ಇಡೀ ಸಿನಿಮಾ ನಡೆಯುತ್ತದೆ ಮತ್ತು ಅದರ ಜೊತೆಗೇ ಆದಿಯ ಮರುಮದುವೆಯ ಪ್ರಯತ್ನವೂ ಆಗುತ್ತಿರುತ್ತದೆ. ತಮ್ಮ ಟೈಮಿಂಗ್‌ನಿಂದ ನಗೆ ಉಕ್ಕಿಸುವ ಪಾತ್ರಗಳು, ಆದಿಯ ಬದುಕಿನಲ್ಲಿ ಬರುವ ಹುಡುಗಿಯರು, ಬದುಕಿನ ಪಾಠ ಹೇಳುವ ಪಾತ್ರಗಳು.. ಇವುಗಳ ಮೂಲಕ ಕತೆ ಮುಂದುವರಿಯುತ್ತದೆ.
ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ, ಸೂಸೈಡ್ ಯೋಚನೆ ಬರುತ್ತಿತ್ತು: ಡಾರ್ಲಿಂಗ್ ಕೃಷ್ಣತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ರಾಚೆಲ್ ಡೇವಿಡ್, ಅಭಿಲಾಷ್, ಅಮೃತಾ ಅಯ್ಯಂಗಾರ್
ನಿರ್ದೇಶನ: ಡಾರ್ಲಿಂಗ್ ಕೃಷ್ಣ
ರೇಟಿಂಗ್: ****
ನಾಯಕನ ಮನಸ್ಥಿತಿಗೆ ಪೂರಕವಾಗಿ ಬರುವ ಮಂಜು, ಇಬ್ಬನಿ, ಕಾಡು, ಬೆಟ್ಟ ಎಲ್ಲವೂ ಈ ಅನುಭವವನ್ನು ಮತ್ತಷ್ಟು ಗಾಢವಾಗಿಸುತ್ತದೆ. ಒಮ್ಮೊಮ್ಮೆ ನಿಧಿಮಾ ಮೂಗು ತೂರಿಸಿದ್ದು ಕೊಂಚ ಜಾಸ್ತಿಯಾಯ್ತು ಅನಿಸಿದರೂ, ಅವಳೊಂಥರಾ ಚಂಡಿ ಹಿಡಿವ ಮಳೆಯ ಹಾಗೋ, ಭಾವ ಲಹರಿಯ ಹಾಗೋ ಆವರಿಸುವ ಕಾರಣ ಅದು ಅಸಹಜ ಅಂತನಿಸೋದಿಲ್ಲ. ಕೆಲವೊಂದು ಕಡೆ ಕತೆ ಕೊಂಚ ಎಳೆದಂತೆ ತೋರಬಹುದು. ಆ ಹೊತ್ತಲ್ಲಿ ಪ್ರೇಕ್ಷಕ ಕತೆಯಿಂದ ವಿಮುಖನಾಗ್ತಾನೆ. ಮತ್ತೆ ಹೊಸ ಎಳೆ ಕತೆಯೊಳಗೆ ಆತನನ್ನು ಸೆಳೆದುಕೊಳ್ಳುತ್ತದೆ.
Love Mocktail ಚಿತ್ರದಲ್ಲಿ ಮಲಯಾಳಂ ನಟಿ, ಕನ್ನಡದ ಮಾತುಗಳನ್ನು ಕೇಳಿ ಫಿದಾ ಆದ ಫ್ಯಾನ್ಸ್!ಕ್ಲೈಮ್ಯಾಕ್‌ಸ್ ಭಾಗ ಪಾಠ ಹೇಳುವ ಹಳೇ ಸ್ಟೈಲಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ತನ್ನ ಲವಲವಿಕೆಯ ಓಟ ಮುಂದುವರಿಸುತ್ತದೆ. ಕೊನೆಯ ಸರ್ಪ್ರೈಸ್ ಮನಸ್ಸಲ್ಲುಳಿಯುತ್ತದೆ. ಇಡೀ ಚಿತ್ರವನ್ನು ಹೃದಯಪೂರ್ವಕವಾಗಿ ನೋಡಬೇಕು. ಬುದ್ಧಿ ಪೂರ್ವಕವಾಗಿ ನೋಡಿದರೆ ಕೆಲವೊಂದು ವಿಚಾರಗಳಿಗೆ ಜಸ್ಟಿಫಿಕೇಶನ್ ಸಿಗೋದಿಲ್ಲ. ಕತೆಯೊಳಗೆ ಸೇರಿ ಹೋದರೆ ಜರ್ನಿ ರೊಮ್ಯಾಂಟಿಕ್. ಕೃಷ್ಣ, ಮಿಲನಾ ಸಹಜ ನಟನೆಗೆ ಫುಲ್‌ಮಾರ್ಕ್‌ಸ್. ಕೃಷ್ಣ ತಾವೆಂಥಾ ನಿರ್ದೇಶಕ ಅನ್ನೋದನ್ನು ಈ ಚಿತ್ರದ ಮೂಲಕ ನಿರೂಪಿಸಿದ್ದಾರೆ.
ಉಳಿದೆಲ್ಲ ಕಲಾವಿದರೂ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಕ್ರೇಜಿ ಮೈಂಡ್‌ಸ್ ಛಾಯಾಗ್ರಹಣ ಅಮೇಜಿಂಗ್. ಹಾಡುಗಳು, ಹಿನ್ನೆಲೆ ಸಂಗೀತವೂ ಚೆನ್ನಾಗಿದೆ. ಮನರಂಜನೆ ನೀಡುತ್ತಲೇ, ಗಾಢವಾಗಿ ಮನಸ್ಸಲ್ಲುಳಿಯುವ ಗುಣವನ್ನು ಹೊಂದಿರುವುದು ಈ ಚಿತ್ರದ ಹೆಚ್ಚುಗಾರಿಕೆ.
"