Asianet Suvarna News Asianet Suvarna News

Kantara Review: ಕಾಂತಾರ ಒಂದು ವಿಶಿಷ್ಟ ಅನುಭೂತಿ

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಅಭಿನಯಿಸಿರುವ ಈ ಸಿನಿಮಾ ಹೇಗಿದೆ? 

Kannada Kantara film review Rishab Shetty Sapthami gowda Hombale films vcs
Author
First Published Oct 1, 2022, 10:15 AM IST

ರಾಜೇಶ್‌ ಶೆಟ್ಟಿ

ಜೀಟಿಗೆ ಹಿಡಿದು ಕೋಲದಲ್ಲಿ ದೈವ ನರ್ತಿಸುವ ದೃಶ್ಯಗಳನ್ನು ನೋಡಿದವರಿಗೆ ಆ ಕ್ಷಣದ ತೀವ್ರತೆಯ ಅರಿವಿರುತ್ತದೆ. ಇಲ್ಲಿಯವರೆಗೆ ಕೋಲದಲ್ಲಿ ಭಾಗವಹಿಸಿದವರು ಮಾತ್ರ ಅನುಭವಿಸಿರಬಹುದಾದ ಈ ತೀವ್ರ ಕ್ಷಣಗಳನ್ನು ಎಲ್ಲಾ ಭಾಗದ, ಎಲ್ಲಾ ವರ್ಗದ ಜನರೂ ಅನುಭವಿಸುವಂತೆ ಮಾಡುವ, ವಿಶಿಷ್ಟಅನುಭೂತಿ ಒದಗಿಸುವ ಸಿನಿಮಾ ಕಾಂತಾರ. ನಿರ್ದೇಶಕ ರಿಷಬ್‌ ಶೆಟ್ಟಿಯ ಕಲ್ಪನಾಶಕ್ತಿ, ನಟ ರಿಷಬ್‌ ಶೆಟ್ಟಿಯ ಅಭೂತಪೂರ್ವ ಎನರ್ಜಿ, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಕಟ್ಟಿಕೊಡುವ ಅಪೂರ್ವ ಧ್ವನಿಶಕ್ತಿ, ಛಾಯಾಗ್ರಾಹಕ ಅರವಿಂದ್‌ ಕಶ್ಯಪ್‌ ಕಣ್ಣಮುಂದೆ ತರುವ ಬೆಂಕಿಚೆಂಡಿನಂತಹ ಚಿತ್ರಕಾವ್ಯ ಈ ಸಿನಿಮಾವನ್ನು ಬೇರೆಯದೇ ಆದ ಎತ್ತರಕ್ಕೆ ಕೊಂಡೊಯ್ದಿದೆ. ಈ ಕಾರಣಕ್ಕೆ ಈ ಎಲ್ಲರ ಕೆಲಸ ಶ್ಲಾಘನೀಯ.

ನಿರ್ದೇಶನ: ರಿಷಬ್‌ ಶೆಟ್ಟಿ

ತಾರಾಗಣ: ರಿಷಬ್‌ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್‌ ಕುಮಾರ್‌, ಕಿಶೋರ್‌, ಪ್ರಕಾಶ್‌ ತುಮಿನಾಡು, ಪ್ರಮೋದ್‌ ಶೆಟ್ಟಿ

ರೇಟಿಂಗ್‌- 4

Kannada Kantara film review Rishab Shetty Sapthami gowda Hombale films vcs

ಒಂದೂರಿನಲ್ಲಿ ಒಬ್ಬ ರಾಜ ಅರಣ್ಯ ಪ್ರದೇಶದಲ್ಲಿ ಜನರಿಂದ ಆರಾಧಿಸಲ್ಪಡುತ್ತಿದ್ದ ಪಂಜುರ್ಲಿ ದೈವವನ್ನು ತನ್ನ ಜೊತೆಗೆ ಅರಮನೆಗೆ ಕರೆದುಕೊಂಡು ಹೋಗಿ, ಅಲ್ಲಿನ ಆ ಜಾಗವನ್ನೆಲ್ಲಾ ಆ ಊರಿನ ಜನರಿಗೆ ಕೊಡುವಲ್ಲಿ ಕತೆ ಶುರುವಾಗುತ್ತದೆ. ಹೈವೋಲ್ಟೇಜ್‌ ದೃಶ್ಯಗಳಿಂದ ಆರಂಭವಾಗುವ ಕಾಂತಾರ ಸಿನಿಮಾ ಮಂತ್ರಮುಗ್ಧಗೊಳಿಸುವ ದೃಶ್ಯದೊಂದಿಗೆ ಮುಗಿಯುತ್ತದೆ. ಅಲ್ಲಿಂದಾಚೆಯೂ ಕತೆ ಬೆಳೆಯುವಂತಹ ಶಕ್ತಿ ಹೊಂದಿರುವುದು ಈ ಸಿನಿಮಾದ ಶಕ್ತಿ.

ಸಿನಿಮಾ ಉದ್ದಕ್ಕೂ ನಾನು ಬೀಡ ಹಾಕೊಂಡೆ ಇದ್ದೆ; ರಿಷಬ್ ಶೆಟ್ಟಿ

ದಕ್ಷಿಣ ಕನ್ನಡದ ಕಂಬಳ, ಕೋಳಿ ಅಂಕ, ಕಾಡು, ಗದ್ದೆ ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ಕತೆ ನಡೆಯುತ್ತದೆ. ಕೋಪತಾಪ, ಫೈಟಿಂಗು, ಪ್ರೀತಿ ಪ್ರೇಮ, ತಮಾಷೆಯ ದೃಶ್ಯಗಳಿಂದ ಬೋರ್‌ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಮೊದಲಾರ್ಧ ಮುಗಿದಾಗ ಇದು ಭಾಷೆ, ವಾತಾವರಣದಿಂದಾಗಿ ದಕ್ಷಿಣ ಕನ್ನಡದ ಕತೆ ಎಂದೆನ್ನಿಸುವ ಸಾಧ್ಯತೆ ಹೆಚ್ಚು. ಆದರೆ ದ್ವಿತೀಯಾರ್ಧದಲ್ಲಿ ಇದೊಂದು ಜಗತ್ತಿನ ಕತೆಯಾಗಿ ಬದಲಾಗುತ್ತದೆ ಅನ್ನುವುದು ಸಿನಿಮಾದ ಹೆಗ್ಗಳಿಕೆ.

ಸರಳವಾದ ಕತೆ. ಮಾನವನ ದ್ವೇಷದ, ದುರಾಸೆಯ, ಕ್ರೌರ್ಯದ ಕತೆ. ಬಲಿ ನೀಡುವ, ಬಲಿ ಬೇಡುವ ಕತೆ. ಆದರೆ ಅದನ್ನು ಹೇಳಲು ನಿರ್ದೇಶಕ ಬಳಸಿರುವ ವಾತಾವರಣ, ಕೊನೆಯಲ್ಲಿ ಜರುಗುವ ಅನೂಹ್ಯ ಘಟನೆಯಿಂದ ಸಾಮಾನ್ಯ ಕತೆಯಾಗಿದ್ದ ಒಂದು ಕತೆಗೆ ದೈವತ್ವ ಅಥವಾ ಅಮರತ್ವ ಪ್ರಾಪ್ತವಾಗುತ್ತದೆ. ಆ ಅಂಶವೇ ಈ ಸಿನಿಮಾವನ್ನು ದೈವಶಕ್ತಿಯಂತೆ ಪೊರೆಯುತ್ತದೆ, ಕಾಪಾಡುತ್ತದೆ.

Rishab Shetty Kantara ಶೂಟಿಂಗ್‌ ಕೊನೆಗೆ ನಿಂಗಿದು ಬೇಕಿತ್ತ ಮಗನೇ ಹಾಡು ನೆನಪಾಗ್ತಿತ್ತು!

ಇದು ಅಪ್ಪಟ ರಿಷಬ್‌ ಶೈಲಿಯ ಸಿನಿಮಾ. ತಮಾಷೆಯಾಗಿಯೇ ಸಾಗುತ್ತದೆ. ಸುಂದರ ಪಾತ್ರಧಾರಿ ದೀಪಕ್‌ ರೈ, ಬುಲ್ಲ ಗುರು ಸನಿಲ್‌, ರಾಂಪ ಪ್ರಕಾಶ್‌ ತುಮಿನಾಡು, ಲಚ್ಚು ರಂಜನ್‌ ಹೊಟ್ಟೆತುಂಬಾ ನಗಿಸುತ್ತಾರೆ. ಕಿಶೋರ್‌ ಘನತೆ ಒದಗಿಸಿದ್ದಾರೆ. ಸಪ್ತಮಿ ಗೌಡ ಈ ಸಿನಿಮಾ ಖುಷಿಯಾದ ಅಚ್ಚರಿ. ಪ್ರೀತಿ ಮತ್ತು ವಿಷಾದ ಸಶಕ್ತವಾಗಿ ವ್ಯಕ್ತಪಡಿಸುವ ಅಭಿನಯ. ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಮಾನಸಿ ಸುಧೀರ್‌ ಸೇರಿದಂತೆ ಎಲ್ಲಾ ಕಲಾವಿದರ ನಟನೆಯೂ ಮನಸ್ಸಲ್ಲಿ ಉಳಿಯುವಷ್ಟುಪರಿಪೂರ್ಣ.

ಕಾಂತಾರ ಒಂದು ಸಿನಿಮಾ ಅನ್ನುವುದಕ್ಕಿಂತ ವಿಶೇಷ ಅನುಭೂತಿ. ಎಷ್ಟೆಲ್ಲಾ ಹೇಳಿದ ನಂತರವೂ ಹೇಳದೇ ಉಳಿಯುವಂತದ್ದು ಜಾಸ್ತಿಯೇ ಇದೆ. ಅದೇ ಕಾರಣಕ್ಕೆ ಕಾಂತಾರ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನವನ್ನು ಪಡೆಯುತ್ತದೆ.

Follow Us:
Download App:
  • android
  • ios