ಚಿತ್ರ ವಿಮರ್ಶೆ: ಸ್ಟಾರ್ ಕನ್ನಡಿಗ
ಸಿನಿಮಾ ನಿರ್ಮಾಣದಲ್ಲಿ ಕತೆ, ಸಂಭಾಷಣೆ, ತಾರಾಗಣದ ಜತೆಗೆ ‘ಚಿತ್ರಕತೆ’ಯೇ ಸ್ಟಾರ್ ಅಂತ ನಂಬಿಕೊಂಡು ಸಿನಿಮಾದೊಳಗೊಂದು ಸಿನಿಮಾ ಮಾಡಲು ಹೊರಟ ಒಬ್ಬ ನಿರ್ದೇಶಕನ ಸುತ್ತಲ ಕತೆಯೇ ಸ್ಟಾರ್ ಕನ್ನಡಿಗ.
ದೇಶಾದ್ರಿ
ಇದೊಂದು ಹೊಸಬರ ಸಿನಿಮಾ. ಸಿನಿಮಾ ಮೇಲಿನ ಆಸಕ್ತಿಯಿಂದ ಆಟೋ ಚಾಲಕರು, ಕ್ಯಾಬ್ ಡ್ರೈವರ್ಸ್ ಒಂದೆಡೆ ಸೇರಿಕೊಂಡು ನಿರ್ಮಾಣ ಮಾಡಿದ ಸಿನಿಮಾ. ತಾರಾಗಣದಲ್ಲೂ ಹೊಸಬರದ್ದೇ ದರ್ಬಾರು. ಪ್ರೇಕ್ಷಕನಿಗೆ ಹೊಸ ರೀತಿಯ ಸಿನಿಮಾ ಕೊಡಬೇಕೆನ್ನುವ ಅವರ ಪ್ರಯತ್ನಕ್ಕೆ ಕತೆ, ಚಿತ್ರಕತೆ ತಕ್ಕಮಟ್ಟಿಗೆ ಸಾಥ್ ಕೊಟ್ಟಿವೆ.
ಅದೇ ರೀತಿ ತಾರಾಬಳಗವೂ ಒಂದಷ್ಟು ಗಮನ ಸೆಳೆಯುತ್ತದೆ. ಅದರಾಚೆ ಈ ಸಿನಿಮಾದ ವಿಶೇಷತೆ ಏನು ಅಂತ ನೋಡಿದರೆ ಅಷ್ಟಕಷ್ಟೇ. ‘ಗಾಂಧಿನಗರದ ಗಲ್ಲಿಗೂ, ಪ್ರೇಕ್ಷಕರ ದಿಲ್ಲಿಗೂ ನಾನೇ’ಎನ್ನುವ ಸ್ಟಾರ್ ಕನ್ನಡಿಗನ ಯಾತ್ರೆ ಬಹುತೇಕ ನಿರಸದಾಯಕ.
ಈ ಸಿನಿಮಾದ ಕತೆ ತುಂಬಾ ಸಿಂಪಲ್. ಆರು ಮಂದಿ ಹುಡುಗರು. ಅದರಲ್ಲೊಬ್ಬ ನಾಯಕ ಮಂಜು. ಆತನಿಗೆ ನಿರ್ದೇಶಕನಾಗುವ ಆಸೆ. ಸ್ನೇಹಿತರೆಲ್ಲ ಸೇರಿ ಸಿನಿಮಾ ಮಾಡಲು ಹೊರಟಾಗ ಅವರಿಗೆ ಹೊಳೆದಿದ್ದು ಒಂದು ರಿಯಲ್ ಲವ್ ಸ್ಟೋರಿ. ಅದಕ್ಕೆ ನಿರ್ದೇಶಕರೇ ಹೀರೋ. ಆಕಸ್ಮಿಕವಾಗಿ ಪರಿಚಯವಾದ ಚಿತ್ರದ ನಾಯಕಿಯನ್ನೇ ತನ್ನ ಸಿನಿಮಾ ಪ್ರಯೋಗಕ್ಕೆ ಬಳಸಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಾನೆ. ಮುಂದೆ ಅದು ಆತನ ನಿಜ ಜೀವನದ ಕತೆಯೂ ಆಗುತ್ತದೆ. ಇಬ್ಬರು ನಿಜವಾಗಿಯೂ ಪ್ರೀತಿಸಲು ಶುರು ಮಾಡುತ್ತಾರೆ. ಕೊನೆಗೊಂದು ದಿನ ಆತ ಒಬ್ಬ ಸಿನಿಮಾ ಡೈರೆಕ್ಟರ್ ಎನ್ನುವುದು ನಾಯಕಿಗೆ ಗೊತ್ತಾಗುತ್ತದೆ. ಅಲ್ಲಿಂದ ಮುಂದೇನು ಎನ್ನುವುದು ಚಿತ್ರದ ಕುತೂಹಲದ ಅಂಶ.
ಹರೆಯದ ಅಮಲಿನ ಮೂಟೆಯೇ 'ಗಂಟುಮೂಟೆ'!
ಚಿತ್ರದ ಮೊದಲಾರ್ಧವಿಡೀ ಬರೀ ಬೋರು. ಆರು ಮಂದಿ ಹುಡುಗರ ಹುಚ್ಚಾಟ, ಸಿನಿಮಾ ಮಾಡುವ ಪರದಾಟದ ವ್ಯರ್ಥ ಪ್ರಲಾಪದ ಪಯಣ. ಕತೆಗೆ ಸಂಬಂಧವೇ ಇಲ್ಲದ ದೃಶ್ಯಗಳ ಮೂಲಕ ಸಾಗುವ ಕತೆ ಕುತೂಹಲ ಹುಟ್ಟಿಸುವ ಬದಲಿಗೆ ಪ್ರೇಕ್ಷಕರನ್ನು ನಿರಾಸೆಯಲ್ಲಿ ಮುಳುಗಿಸುತ್ತದೆ. ಇದು ಪ್ರೇಮ ಕತೆಯೋ, ಸ್ಟಾರ್ ಕನ್ನಡಿಗರ ವಿನಾಕಾರಣ ಜರ್ನಿಯೋ ಅಂತ ಪ್ರೇಕ್ಷಕ ಮೈ ಪರಚಿಕೊಂಡು ಒದ್ದಾಡುವ ಹೊತ್ತಿಗೆ ವಿರಾಮ ಬರುತ್ತದೆ. ಆಗ ತೆರೆ ಮೇಲೆ ಪ್ರೀತಿ ಅಂದ್ರೆ ಏನು...? ಅಂತ ತೋರಿಸಿ, ಸಣ್ಣ ಕುತೂಹಲಕ್ಕೆ ಚಾಲನೆ ಕೊಡುತ್ತಾರೆ ನಿರ್ದೇಶಕರು. ಆಗ ಶುರುವಾಗುತ್ತೆ ಸಿನಿಮಾದೊಳಗಿನ ಸಿನಿಮಾದ ನಿಜವಾದ ಕತೆ.
ನಿರ್ಮಾಣಕ್ಕೆ ಬಂಡವಾಳ ಹಾಕಿರುವವರೇ ಬಹುತೇಕ ಕಲಾವಿದರಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಯಕರಾಗಿರುವ ಮಂಜುನಾಥ್, ನಿರ್ದೇಶಕರೂ ಹೌದು. ಮೊದಲ ಬಾರಿಗೆ ಎರಡು ಜವಾಬ್ದಾರಿ ನಿರ್ವಹಿಸಿದ್ದಾರೆ. ತಕ್ಕ ಮಟ್ಟಿಗೆ ಅಭಿನಯದಲ್ಲಿ ಇಷ್ಟವಾದರೂ, ನಿರ್ದೇಶಕರಾಗಿ ಇನ್ನಷ್ಟು ಅನುಭವ ಬೇಕಿದೆ. ಸಹ ನಟರಾಗಿ ಕಾಣಿಸಿಕೊಂಡಿರುವ ಕಿರಣ್, ಕೆವಿನ್, ರೋಹಿತ್, ಹರೀಶ್, ಮೋಹನ್ ಎಲ್ಲರೂ ಒಂದಷ್ಟು ನಟನೆಯ ತರಬೇತಿ ಪಡೆದುಕೊಂಡಿದ್ದರೆ ಚೆನ್ನಾಗಿತ್ತು. ನಾಯಕಿ ಶಾಲಿನಿ ಭಟ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎರಡು ಹಾಡುಗಳಲ್ಲಿ ಚಿತ್ರದ ಸಂಗೀತ ಇಷ್ಟವಾಗುತ್ತದೆ. ಉಳಿದಿದ್ದೆಲ್ಲ ಮಾಮೂಲು