ಉಲಝ್: ರಾಜತಾಂತ್ರಿಕ ಜಾಲದಲ್ಲಿ ಭಾರತೀಯ ರಾಯಭಾರಿ
ಐಎಫ್‌ಎಸ್ ಅಧಿಕಾರಿ ಸುಹಾನಳ ಜೀವನದಲ್ಲಿ ನಡೆಯುವ ರೋಚಕ ಘಟನೆಗಳ ಸುತ್ತ ನಡೆಯುವ ಕಥೆ. ವಿದೇಶಿ ಗೂಢಚಾರರ ಜಾಲದಲ್ಲಿ ಸಿಲುಕಿಕೊಳ್ಳುವ ಸುಹಾನಳ ಸವಾಲುಗಳು ಮತ್ತು ರಹಸ್ಯಗಳನ್ನು ಬೇಧಿಸುವ ಪ್ರಯತ್ನಗಳನ್ನು ಚಿತ್ರ ಒಳಗೊಂಡಿದೆ.
ಜಾನ್ವಿ ಕಪೂರ್ ಅಭಿನಯದ ಉಲಝ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಚಿತ್ರ. ರಾಜತಾಂತ್ರಿಕ ಕತೆ ಇರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಗುಲ್ಶನ್ ದೇವಯ್ಯ, ಜಾನ್ವಿ ಕಪೂರ್, ಅದಿಲ್ ಹುಸೇನ್, ರೋಷನ್ ಮ್ಯಾಥ್ಯೂ, ರಾಜೇಶ್ ಟಿಲಾಂಗ್, ರುಷದ್ ರಾಣಾ, ರಾಜೇಂದ್ರ ಗುಪ್ತಾ ಮೊದಲಾದವರು ಇದ್ದಾರೆ.
ಸುಹಾನ (ಜಾನ್ವಿಕಪೂರ್) (ಐಎಫ್‌ಎಸ್) ಇಂಡಿಯನ್ ಫಾರಿನ್ ಸರ್ವಿಸ್‌ನಲ್ಲಿ ಆಫೀಸರ್. ಇವಳ ತಾತ ಸಹ ರಾಜತಾಂತ್ರಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಅವಳ ತಂದೆ ಅನೇಕ ದೇಶಗಳಲ್ಲಿ ಭಾರತೀಯ ರಾಯಭಾರಿಯಾಗಿದ್ದವರು. ಸುಹಾನಾಳ ನಿಷ್ಣಾತ ಕೆಲಸ ಹಾಗೂ ಅವಳ ಬುದ್ಧಿವಂತಿಕೆಗೆ ಮೆಚ್ಚಿ ಅವಳನ್ನು ಯುಕೆ ಡೆಪ್ಯುಟಿ ಕಮಿಷನರ್ ಆಗಿ ಬಡ್ತಿ ನೀಡಿರುತ್ತಾರೆ. ಅತಿ ಚಿಕ್ಕ ವಯಸ್ಸಿನ ಮಹಿಳೆಯಾಗಿ ಸುಹಾನ ಈ ಪದವಿಗೆ ಅರ್ಹಳಾಗಿರುತ್ತಾಳೆ.
ಪಾಕಿಸ್ತಾನದಲ್ಲಿ ಶೆಹಜಾದ್ ಆಲಂ ಪ್ರಧಾನಿಯಾಗಿದ್ದು, ಭಾರತ ಪಾಕಿಸ್ತಾನದ ಮೈತ್ರಿ ಬಗ್ಗೆ ಒಲವು ತೋರುವ ಶೆಹಜಾದ್ ಭಾರತಕ್ಕೆ ಬೇಕಾದ ಭಯೋತ್ಪಾದಕ ಯಾಸಿನ್ ಮಿರ್ಜಾನನ್ನು ಭಾರತಕ್ಕೆ ಒಪ್ಪಿಸಲು ಆಸಕ್ತಿ ರುತ್ತಾರೆ. ಯಾಸಿನ್ ಭಾರತದಿಂದ ತಪ್ಪಿಸಿಕೊಂಡು ಪಾಕಿಸ್ತಾನ ಸೇರಿರುತ್ತಾನೆ. ಭಾರತ ಸರ್ಕಾರದಿಂದ ಶೆಹಜಾದನಿಗೆ ಸ್ವಾತಂತ್ರ್ಯ ಮಹೋತ್ಸವಕ್ಕೆ ಭಾಗವಹಿಸಲು ಆಹ್ವಾನ ಸಹ ಸಿಕ್ಕಿರುತ್ತದೆ. ಶೆಹಜಾದ್ ಭಾರತಕ್ಕೆ ಬರಲು ಉತ್ಸುಕನಾಗಿರುತ್ತಾನೆ. ಪಾಕಿಸ್ತಾನದ ಪ್ರಧಾನಿ ಭಾರತಕ್ಕೆ ಬರುವುದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇರುತ್ತದೆ. ಇದೇ ಕಥೆಯ ಬೆನ್ನೆಲುಬು.
ವಯಸ್ಸಾದ ಜೀವಕ್ಕೆ ಬೆಲೆ ಇಲ್ಲವೇ?: ಸಿಗ್ನೇಚರ್ ಹೇಳೋ ಕಥೆ ಇದು!
ಸಿನಿಮಾ ಪ್ರತಿಕ್ಷಣ ನಮ್ಮನ್ನು ಕುರ್ಚಿಯ ತುದಿಗೆ ಕೂಡಿಸುತ್ತದೆ. ಒಂದೂ ಫ್ರೇಮ್ ಮಿಸ್ ಮಾಡಿಕೊಳ್ಳದಂತೆ ನೋಡಬೇಕಾದ ಚಿತ್ರ. ರಾಜತಾಂತ್ರಿಕ ಹುದ್ದೆಯಲ್ಲಿ ಇರುವವರು ಎಷ್ಟು ಎಚ್ಚರಿಕೆ ವಹಿಸಬೇಕು, ಯಾವುದನ್ನು ಮಾಡಬಾರದು, ಯಾವುದನ್ನು ಮಾಡಬೇಕು, ನಮ್ಮ ಜೊತೆಗೆ ಇರುವವರೇ ಪರದೇಶದ ಗೂಢಚಾರರಾಗಿ ಇರಬಹುದು. ಯಾವ ಕ್ಷಣದಲ್ಲಿ ಏನೂ ಆಗಬಹುದು ಎಂದು ರೋಚಕವಾಗಿ ತೋರಿಸುವ ಚಿತ್ರ.
ಸುಹಾನ ಯುಕೆಗೆ ಹೋಗಿ ತನ್ನ ಕೆಲಸದ ಚಾರ್ಜ್ ವಹಿಸಿಕೊಳ್ಳುತ್ತಾಳೆ. ಅವಳ ಡ್ರೈವರ್ ರಾಜೇಶ್ ಟಿಲಾಂಗ್ ಮೊದಲ ದಿನವೇ ಆಪ್ಯಾಯತೆಯಿಂದ ಮಾತನಾಡಿಸಿ, ಸುಹಾನಾಳ ವಿಶ್ವಾಸ ಗೆದ್ದುಕೊಳ್ಳುತ್ತಾನೆ. ಒಂದು ಮಾಲ್‌ನಲ್ಲಿ ಸುಹಾನಾಳಿಗೆ ನಕುಲ್ ಶರ್ಮಾ (ಗುಲ್ಶನ್ ದೇವಯ್ಯ) ಭೇಟಿಯಾಗುತ್ತಾನೆ. ಇಬ್ಬರೂ ಪರಸ್ಪರ ಆಕರ್ಷಿತರಾಗುತ್ತಾರೆ. ಕೆಲ ಸಮಯ ಒಟ್ಟಿಗೆ ಕಳೆಯುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಸುಹಾನಾಳ ಮೊಬೈಲ್‌ಗೆ ಒಂದು ವೀಡಿಯೋ ಬರುತ್ತದೆ. ತೆರೆದು ನೋಡಿದರೆ, ಅವಳು ನಕುಲ್ ಜೊತೆ ಕಳೆದ ಖಾಸಗಿ ಸಮಯದ ವೀಡಿಯೋ ಆಗಿರುತ್ತದೆ. ಸುಹಾನಾಳಿಗೆ ಶಾಕ್ ಆಗುತ್ತದೆ. ಸುಹಾನ ತನ್ನ ಕಚೇರಿಯಿಂದ ಕೆಲವು ರಹಸ್ಯ ಫೈಲುಗಳನ್ನು ನಕುಲ್‌ಗೆ ಕೊಡಬೇಕು, ಇಲ್ಲವಾದರೆ ಈ ವೀಡಿಯೋ ಬಹಿರಂಗಗೊಳ್ಳುತ್ತದೆ ಎಂಬ ಬೆದರಿಕೆಯೂ ಇರುತ್ತದೆ. ಸುಹಾನಾ ನಕುಲ್ ಒಬ್ಬ ವಿದೇಶಿ ಗೂಢಚಾರಿ ಇರಬೇಕೆಂದು ಸಂಶಯಿಸುತ್ತಾಳೆ.
ಸುಹಾನಾಳಿಗೆ ಇಬ್ಬಗೆ ಸಂಕಟ. ಒಂದು ತನ್ನ ಸೆಕ್ಸ್ ವೀಡಿಯೋ ಬಹಿರಂಗವಾದರೆ ತನ್ನ ಕೆಲಸದ ಗತಿಯೇನು? ಹಾಗೂ ತನ್ನ ಮನೆತನದ ಪ್ರತಿಷ್ಠೆ ಏನಾಗುತ್ತದೆ ಎಂಬ ಭಯ, ಒಂದು ಕಡೆಯಾದರೆ ತನ್ನ ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯ ಫೈಲುಗಳನ್ನು ನಕುಲ್‌ಗೆ ಕೊಡಲು ಮನಸ್ಸು ಬರುವುದಿಲ್ಲ. ಏನು ಮಾಡಬೇಕೆಂದು ತೋಚದೆ ಸುಹಾನ ಕಂಗಾಲಾಗುತ್ತಾಳೆ. ಕೊನೆಗೆ ಒಂದು ಫೇಕ್ ಫೈಲನ್ನು ನಕುಲ್‌ಗೆ ಒಪ್ಪಿಸಿ ನಿರಾಳವಾಗುತ್ತಾಳೆ.
ದಿ ಗೋಟ್ ಲೈಫ್ (ಆಡು ಜೀವಿತಂ): ಸೌದಿಗೆ ಹೋಗಿ ನೋವು ಅನುಭವಿಸಿದವನ ಕಥೆ
ಮಾರನೇ ದಿನ ಸುಹಾನಾಳ ಮೊಬೈಲಿಗೆ ಮತ್ತೊಂದು ಫೋಟೋ ಬಂದು ಬೀಳುತ್ತದೆ. ಅದರಲ್ಲಿ ಸುಹಾನ ಫೈಲನ್ನು ನಕುಲ್‌ಗೆ ಕೊಡುತ್ತಿರುವ ಚಿತ್ರ ಇರುತ್ತದೆ. ತಾನು ಐಎಸ್‌ಐ ಏಜೆಂಟ್ ಎಂದು ಹೇಳುತ್ತಾನೆ. ಈ ಫೋಟೋ ಜೊತೆಗೆ ನಕುಲನ ಒಂದು ಬೇಡಿಕೆಯೂ ಇರುತ್ತದೆ. ಅದರಂತೆ ಅವನಿಗೆ ಇಂಡಿಯಾಗೆ ಹೋಗಲು ವೀಸಾ ಹಾಗೂ ಐಎಸ್‌ಐ ನಲ್ಲಿ ರಾ ದ ಇಬ್ಬರು ಗುಪ್ತಚರರು ಇದ್ದಾರೆ. ಅವರು ಐಎಸ್‌ಐ ಮಾಹಿತಿಗಳನ್ನು ರಾಗೆ ಕೊಡುತ್ತಿದ್ದು, ಯಾರೆಂದು ಹೇಳಬೇಕು ಎಂದು ಹೇಳುತ್ತಾನೆ. ತನ್ನ ಹೆಸರು ಹುಮಾಯೂನ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಈ ಮಾಹಿತಿಗಳನ್ನು ತನಗೆ ಕೊಡದೇ ಹೋದರೆ ತಾನು ಈ ಫೋಟೋಗಳನ್ನು ಬಹುರಂಗಗೊಳಿಸುವುದಾಗಿಯೂ ಆಗ ಸುಹಾನಾ ವಿಚಾರಣೆ/ಸೆರೆಮನೆಗೆ ಹೋಗುವ ಸಾಧ್ಯತೆ ಇದೆಯೆಂದು ಬೆದರಿಕೆ ಹಾಕುತ್ತಾನೆ. ಸುಹಾನಾಳ ತಂದೆಯ ಬಡ್ತಿಯ ವಿಷಯಕ್ಕೆ ತಾನು ಅಡ್ಡಗಾಲು ಹಾಕುವುದಾಗಿಯೂ ಬೆದರಿಸುತ್ತಾನೆ. ಸುಹಾನ ಈಗ ಹತಾಶಳಾಗುತ್ತಾಳೆ. ಅವಳ ಡ್ರೈವರನಿಗೆ ನಕುಲ್ ಬಗ್ಗೆ ಹೇಳಿ ಅವನು ಯಾರು ಏನು ಎಂದು ಪತ್ತೆ ಮಾಡಲು ಹೇಳುತ್ತಾಳೆ. ನಕುಲ್ ಸ್ನೇಹ ಈಗ ಸುಹಾನಾಳಿಗೆ ದುಬಾರಿಯಾಗುತ್ತದೆ.
ಈ ಮಧ್ಯೆ ಜೇಕಬ್ ಎಂಬ ಸುಹಾನಾಳ ಕಚೇರಿ ಸಿಬ್ಬಂದಿಗೆ ಇವಳ ಮೇಲೆ ಅನುಮಾನ ಉಂಟಾಗಿ ಸುಹಾನಾಳನ್ನು ಪ್ರಶ್ನಿಸಲು ಅವಳ ಮನೆಗೆ ಹೋಗುತ್ತಾನೆ. ನಕುಲ್ ಜೇಕಬ್‌ನನ್ನು ಕೊಂದು ಹಾಕಿ, ಶವವನ್ನು ವಿಲೇವಾರಿ ಮಾಡಿಬಿಡುತ್ತಾನೆ. ಸುದೈವದಿಂದ ರಾ ದವರು ಜೇಕಬ್ ಮರಣದ ವಿಚಾರದಲ್ಲಿ ಸುಹಾನಳನ್ನು ಅನುಮಾನಿಸುವುದಿಲ್ಲ. ಆದರೆ ಜೇಕಬ್ ಮರಣದ ತನಿಖೆಯನ್ನು ಸುಹಾನಾಳಿಗೇ ಒಪ್ಪಿಸುತ್ತಾರೆ. ಅದರ ಸಲುವಾಗಿ ಸುಹಾನ ಕಾರ್ಯಪ್ರವೃತ್ತಳಾಗಿದ್ದಾಗ ಸುಹಾನಾಳ ಡ್ರೈವರ್ ಸಲೀಂ ಹಾಗೂ ನಕುಲ್ ಮಾತನಾಡುತ್ತಿರುವುದು ಕಂಡು ಆಘಾತಗೊಳ್ಳುತ್ತಾಳೆ. ಆಗ ಅವಳಿಗೆ ಅವಳ ಡ್ರೈವರ್ ಸಹಾ ನಕುಲ್ ಸಹಚರ ಎಂಬುದು ತಿಳಿಯುತ್ತದೆ. ನಕುಲ್ ದೆಹಲಿಯ ಬಹುದೊಡ್ಡ ಪ್ರಾರ್ಥನಾ ಮಂದಿರಕ್ಕೆ ಹೋಗಬೇಕಾಗಿರುತ್ತದೆ. ಹಾಗಾಗಿ ಅವನಿಗೆ ಇಂಡಿಯಾ ವೀಸಾ ಬೇಕಾಗಿರುತ್ತದೆ. ಸುಹಾನಾ ವಿಧಿಯಿಲ್ಲದೆ ವೀಸಾ ಕೊಡಿಸುತ್ತಾಳೆ. ಸಲೀಂನನ್ನು ಪ್ರಶ್ನಿಸಲು ಅವನ ಮನೆಗೆ ಹೋಗುವ ಸುಹಾನ ಅಲ್ಲಿ ಸಲೀಂನೊಂದಿಗಿನ ಮಾರಾಮಾರಿಯಲ್ಲಿ ಸಲೀಂ ಸತ್ತುಹೋಗುತ್ತಾನೆ. ಸತ್ತು ಹೋಗುವ ಮುನ್ನ ಕೆಲವು ರಹಸ್ಯಗಳನ್ನು ಸುಹಾನಾಳಿಗೆ ತಿಳಿಸುತ್ತಾನೆ. ಸಲೀಂ ಮನೆಯಲ್ಲಿ ಅವಳಿಗೆ ನಕುಲನೊಂದಿಗಿನ ಖಾಸಗಿ ಕ್ಷಣಗಳ ವೀಡಿಯೋ ಬ್ಯಾಕ್ ಅಪ್ ಸಿಗುತ್ತದೆ ಮತ್ತು ರಾ ಸಹ ಮುಖ್ಯಸ್ಥ ಪ್ರಕಾಶ್ ಕಾಮತ್ ಸಹ ನಕುಲ್ ಜೊತೆ ಕೈ ಜೋಡಿಸಿದ್ದಾನೆ ಎಂಬ ಆಘಾತಕಾರಿ ವಿಷಯವೂ ಗೊತ್ತಾಗುತ್ತದೆ.
ಕ್ರಿಕೆಟ್ ಪ್ರೇಮದ ಕಹಿ ಸತ್ಯ: 'ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ'
ನಕುಲ್ ದೆಹಲಿಯ ಪ್ರಾರ್ಥನಾ ಮಂದಿರಕ್ಕೆ ಏಕೆ ಹೋಗುತ್ತಿದ್ದಾನೆ ಎಂಬ ತನಿಖೆ ಮಾಡುತ್ತಾಳೆ. ರಾ ದ ಇನ್ನೊಬ್ಬ ಏಜೆಂಟ್ ಸೆಬಿನ್ ಕುಟ್ಟಿಗೆ ಸುಹಾನಾ ಮೇಲೆ ಸಂಶಯ ಇರುತ್ತದೆ. ಅವಳನ್ನು ಅವನು ಹಿಂಬಾಲಿಸುತ್ತಿರುತ್ತಾನೆ. ಸುಹಾನಳನ್ನು ಅರೆಸ್ಟ್ ಮಾಡಲೂ ತಯಾರಾಗುತ್ಥಾನೆ. ಆದರೆ ಸುಹಾನ ಅವನಿಗೆ ನಿಜವನ್ನು ಹೇಳಿ, ನಕುಲ್ ವಿಷಯದಲ್ಲಿ ತಾನು ಸಂತ್ರಸ್ಥೆಯಾದ ವಿಷಯ ತಿಳಿಸಿ, ಸಲೀಂ ಕೆಲವು ರಹಸ್ಯಗಳನ್ನು ಹೇಳಿದ್ದನ್ನು ಸೆಬಿನ್‌ಗೆ ಹೇಳಿ ಸತ್ಯ ಕಂಡು ಹಿಡಿಯಲು ಸೆಬಿನ್ ಸಹಾಯ ಕೋರುತ್ತಾಳೆ. ಅವಳ ಮಾತನ್ನು ನಂಬಿದ ಸೆಬಿನ್ ಅವಳನ್ನು ತನ್ನ ಜೊತೆಗೆ ಕೆಲಸ ಮಾಡಲು ಹೇಳುತ್ತಾನೆ. ತಾವಿಬ್ಬರೂ ಕೂಡಿಯೇ ಈ ರಹಸ್ಯ ಬೇಧಿಸೋಣ ಎಂದು ಹೇಳುತ್ತಾನೆ.
ಸಲೀಂ ಸುಹಾನಾಳಿಗೆ ಹೇಳುವ ರಹಸ್ಯ ಏನು? ನಕುಲ್ ದೆಹಲಿಗೆ ಏಕೆ ಹೋಗಬೇಕಾಗಿದೆ? ನಕುಲನ ಗುರಿ ಯಾರು? ಪಾಕಿಸ್ತಾನದ ಪ್ರಧಾನಿ ಭಾರತಕ್ಕೆ ಅತಿಥಿಯಾಗಿ ಆಗಮಿಸಿದರೇ? ಸುಹಾನಾ ಯಾವ ರಹಸ್ಯ ಬೇಧಿಸುತ್ತಾಳೆ? ಅವಳು ಸಿಕ್ಕಿಕೊಂಡಿರುವ ಸಿಕ್ಕುಗಳಿಂದ ಹೊರಬಂದು ತಾನೊಬ್ಬ ದೇಶಪ್ರೇಮಿ ಹಾಗೂ ನಿಷ್ಠಾವಂತ ಅಧಿಕಾರಿ ಎಂಬುದನ್ನು ಪ್ರೂವ್ ಮಾಡುತ್ತಾಳೆಯೇ? ಇವೆಲ್ಲ ತಿಳಿಯಬೇಕಾದರೆ ಉಲಝ್ ಚಿತ್ರ ನೀವೂ ನೋಡಿ.
ಇದರಲ್ಲಿ ಯಾರೂ ನಾಯಕ ಇಲ್ಲ. ಜಾನ್ವಿ ಕಪೂರ್ ತಾನೇ ನಾಯಕ, ನಾಯಕಿ ಎರಡೂ ಆಗಿದ್ದಾಳೆ. ಅವಳ ಅಭಿನಯದಲ್ಲಿ ಪಕ್ವತೆ ಕಾಣುತ್ತದೆ. ಜಾನ್ವಿಯ ತಂದೆಯಾಗಿ ಹುಸೇನ್, ಜಾನ್ವಿಯ ಚಾಲಕನಾಗಿ ರಾಜೇಶ್ ಟಿಲಾಂಗ್ ನಕುಲನಾಗಿ ಗುಲ್ಶನ್ ಬಹಳ ಸಹಜತೆಯಿಂದ ಅಭಿನಯಿಸಿದ್ದಾರೆ.