Asianet Suvarna News Asianet Suvarna News

ದಿ ಗೋಟ್ ಲೈಫ್ (ಆಡು ಜೀವಿತಂ): ಭಾರತದಿಂದ ಸೌದಿಗೆ ಹೋಗಿ ನೋವು ಅನುಭಸಿವ ಭಾರತೀಯರ ಕಥೆ!

90ರ ದಶಕದ ನೈಜ ಘಟನೆಯನ್ನು ಆಧರಿಸಿದ 'ಆಡುಜೀವಿತಂ' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ನದೀಂ ಎಂಬ ಯುವಕನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ಜೀತದಾಳುವಾಗಿ ಸೌದಿ ಅರೇಬಿಯಾದಲ್ಲಿ ನಡೆಯುವ ನದೀಂನ ಕಷ್ಟಗಳನ್ನು ಚಿತ್ರ ಬಿಂಬಿಸುತ್ತದೆ.

Aadujeevitham The Goat Life netflix streaming malayalam movie
Author
First Published Oct 10, 2024, 12:46 PM IST | Last Updated Oct 10, 2024, 12:46 PM IST

- ವೀಣಾ ರಾವ್, ಕನ್ನಡ ಪ್ರಭ

ಬ್ಲೆಸ್ಸಿ ಸ್ಕ್ರೀನ್‌ ಪ್ಲೇ ಬರೆದು ನಿರ್ದೇಶಿಸಿರುವ ಆಡುಜೀವಿತಂ 2024ರಲ್ಲಿ ಬಿಡುಗಡೆಯಾದ ಚಿತ್ರ.  90ರ ದಶಕದಲ್ಲಿ ನಡೆದಿದೆ ಎನ್ನಲಾದ ನೈಜ ಘಟನೆಯನ್ನು ಆಧರಿಸಿದ ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿದ್ದಾರೆ.  ಅತ್ಯಧಿಕ 160 ಕೋಟಿ ಲಾಭ ತಂದು ಕೊಟ್ಟಿರುವ ಈ ಚಿತ್ರ  ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದೆ.

ನಜೀಬ್ ಮೊಹಮ್ಮದ್ ಎಂಬ ಉತ್ಸಾಹಿ ಯುವಕ ಕೇರಳದ ಪುಟ್ಟ ಹಳ್ಳಿಯಲ್ಲಿ ತನ್ನ ತಾಯಿ-ಹೆಂಡತಿಯೊಡನೆ ವಾಸಿಸುತ್ತಿರುತ್ತಾನೆ. ಬಡತನವಿದ್ದರೂ ಪ್ರೀತಿಗೇನೂ ಇರೋಲ್ಲ ಕೊರತೆ. ನದೀಂಗೆ ಹೊರ ದೇಶಕ್ಕೆ ಹೋಗಿ ಕೈ ತುಂಬಾ ಸಂಪಾದಿಸುವಾಸೆ. ತಾಯಿ ಹೆಂಡತಿಯ ಒಪ್ಪಿಸಿ, ಸಾಲಸೋಲ ಮಾಡಿ ಮೂವತ್ತು ಸಾವಿರ ಹೊಂದಿಸಿ ತನ್ನ ಊರಿನ ಲೋಕಲ್ ದಲ್ಲಾಳಿಗೆ ಕೊಟ್ಟು ಸೌದಿ ಅರೇಬಿಯಾಗೆ ಹೋಗಲು ವೀಸಾ ಪಾಸ್ ಪೋರ್ಟ್ ಮಾಡಿಸುತ್ತಾನೆ. ಆದರೆ ಅದು ಅಸಲಿಯೋ ನಕಲಿಯೋ ನೋಡುವುದೇ ಇಲ್ಲ. ಅದವನಿಗೆ ಗೊತ್ತಾಗುವುದೂ ಇಲ್ಲ. ಯಾರು ನೌಕರಿ ಕೊಡುತ್ತಿದ್ದಾರೆ, ಅವರ ಹೆಸರೇನು, ಆ ಕಂಪನಿ ಅಥವಾ ಕಚೇರಿ ಎಂಬ ಜ್ಞಾನವೂ ಇಲ್ಲದ ತಮ್ಮ ಹಕೀಂ ಜೊತೆ ಸೌದಿ ಅರೇಬಿಯಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಾನೆ. ಬಾಕಿ ವಿಮಾನ ಪ್ರಯಾಣಿಕರೆಲ್ಲಾ ತಮ್ಮನ್ನು ಸ್ವಾಗತಿಸಲು ಬಂದವರೊಡನೆ ಹೊರಟು ಬಿಡುತ್ತಾರೆ. ಆದರೆ ನದೀಂ, ಹಕೀಂರನ್ನು ಕರೆದುಕೊಂಡು ಹೋಗಲು ಯಾರೂ ಬಂದಿರುವುದಿಲ್ಲ. ಇವರಿಗೆ ಕಕ್ಕಾಬಿಕ್ಕಿ ಆಗುತ್ತದೆ. ಗಾಬರಿಯಾದ ಇವರು ಅಲ್ಲಿ ಕಂಡ ಅರೇಬಿಯನ್ಸ್ ಬಳಿ ತಮ್ಮ ಎಂಪ್ಲಾಯರ್ ಎಂದು ತಿಳಿದು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ. ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಆದರೆ ಒಬ್ಬ ಅರೇಬಿಯನ್ ಇವರನ್ನು ತನ್ನ ಗಾಡಿಗೆ ಹತ್ತಿಸಿ ಕೊಳ್ಳುತ್ತಾನೆ. ಆ ಗಾಡಿಯೋ ಸರಕು ಸಾಮಾನು ಸಾಗಿಸುವ ಕೊಳಕು ಜೀಪ್. ಇವರಿಬ್ಬರಿಗೂ ಆಶ್ಚರ್ಯವಾಗುತ್ತದೆ. ಅವರು ಕಾರಿನ ಕಲ್ಪನೆಯಲ್ಲಿ ಇರುತ್ತಾರೆ. ಇಬ್ಬರನ್ನೂ ಆ ಅರೇಬಿ ಒರಟೊರಟಾಗಿ ಕಾರಿನಲ್ಲಿ ತಳ್ಳಿ ತಾನೂ ಹತ್ತಿ ತನಗೆ ಗೊತ್ತಾದ ಒಂದು ಜಾಗಕ್ಕೆ ಕೊಂಡೊಯ್ಯುತ್ತಾನೆ. ಬಹಳ ದೂರ ಪ್ರಯಾಣ ಇವರಿಬ್ಬರಿಗೂ ಎಲ್ಲಿ ಹೋಗುತ್ತಿದ್ದೇವೆ ಎಂದು ಗೊತ್ತಾಗದೆ ಗೊಂದಲ ಕಾಡುತ್ತಿರುತ್ತದೆ. ಆ ಅರೇಬಿಯವನನ್ನು ಎಷ್ಟು ಕೇಳಿದರೂ ಅವನ ಭಾಷೆಯಲ್ಲಿ ಹೀನಾಮಾನಾ ಬೈಯುತ್ತಾನೆಯೇ ವಿನಾ, ಇವರಿಬ್ಬರೂ ಏನು ಹೇಳುತ್ತಿದ್ದಾರೆಂದು ರವೆಯಷ್ಟೂ ಯೋಚಿಸುವುದಿಲ್ಲ. ಅವನಿಗೆ ಇಬ್ಬರು ದುಡಿಯುವ ಆಳುಗಳು ಬೇಕಾಗಿರುತ್ತದೆ. ಇವರನ್ನು ಆಳುಗಳೆಂದೇ ತಿಳಿದು ಚಾಟಿಯಿಂದ ಹೊಡೆದು ಗಾಡಿಗೆ ನೂಕುತ್ತಾನೆ. ನೀರು ಕೇಳಿದರೂ ಕೊಡುವುದಿಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸುವುದಿಲ್ಲ. ಇವರು ಯಾರು ಏಕೆ ಬಂದಿದ್ದಾರೆ ಎಂದು ತಿಳಿಯುವ ಕನಿಷ್ಠ ಸೌಜನ್ಯವನ್ನೂ ತೋರಿಸುವುದಿಲ್ಲ.

ಕ್ರಿಕೆಟ್ ಪ್ರೇಮದ ಕಹಿ ಸತ್ಯ: 'ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ' ಒಂದು ವಿಮರ್ಶೆ

ಆಗಲೇ ರಾತ್ರಿಯಾಗಿರುತ್ತದೆ. ಬಹಳ ದೂರ ಕ್ರಮಿಸಿದ ಮೇಲೆ ಹಕೀಂನನ್ನು ಒಂದೆಡೆ ಇಳಿಸಿ ಅವನು ಬೊಬ್ಬೆ ಹೊಡೆಯುತ್ತಿದ್ದರೂ ಲೆಕ್ಕಿಸದೆ ಒಂದು ಟೆಂಟ್ ನಂತಹ ಸ್ಥಳದಲ್ಲಿ ಬಿಟ್ಟು ನದೀಂನನ್ನು ಕರೆದುಕೊಂಡು ಹೋಗಿ ಬಿಡಡುತ್ತಾನೆ. ಇಲ್ಲಿ ಈ ಇಬ್ಬರು ಅಣ್ಣ ತಮ್ಮಂದಿರು ಬೇರೆಯಾಗುತ್ತಾರೆ. ಸುತ್ತಲೂ ಮರಳುಗಾಡು. ಕೂಗಿದರೂ, ಕಿರುಚಿದರೂ ಓ ಎನ್ನುವ ನರಪಿಳ್ಳೆಯೂ ಇಲ್ಲ. ಇವರ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಅಲ್ಲಿ ಯಾರಿಗೂ ಇಲ್ಲ. ಹಕೀಂನನ್ನು  ಅಲ್ಲಿ ಅಕ್ಷರಶಃ ಕುರಿದೊಡ್ಡಿಯಲ್ಲಿ ಇಳಿಸಿ ಹೋಗಿಬಿಡುತ್ತಾರೆ. 'ಅಣ್ಣಾ ನನ್ನ ಬಿಟ್ಟುಹೋಗಬೇಡ. ಸಾರ್ ನನ್ನನ್ನು ಇಲ್ಲಿ ಯಾಕೆ ಇಳಿಸಿದಿರಿ? ನನ್ನನ್ನೂ ಅಣ್ಣನನ್ನೂ ಒಟ್ಟಿಗೆ ಇರಲು ಬಿಡಿ,' ಎಂದು ಆಲಾಪಿಸುವ ಹಕೀಂನ ಆರ್ತಧ್ವನಿ ನೋಡುಗರಿಗೆ ತಳಮಳ ಹುಟ್ಟುಹಾಕುತ್ತದೆ. ಇಡೀ ಸಿನಿಮಾ ಇದೇ ತಳಮಳ ಸಂಕಟ ಭಯ, ಮುಂದೇನಾಗುವುದೋ ಎಂಬ ಕಾತರದಿಂದಲೇ ಕೂಡಿದೆ. ಎಲ್ಲಿಯೂ ಅಳ್ಳಕವಾಗದ ಬಿಗಿ ನಿರ್ದೇಶನ.

ನದೀಂನನ್ನು ಕೂಡ ಹೀಗೆಯೇ ಒಂದು ದೂರದ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಒಂದು ಶೆಡ್ಡಿನಲ್ಲಿ ಇದ್ದ ಮತ್ತೊಬ್ಬ ಅರೇಬಿಯನಿಗೆ ಒಪ್ಪಿಸಿ ಇವನು ಹೊರಟು ಹೋಗುತ್ತಾನೆ. ನದೀಂ ಇಲ್ಲಿ ಯಾಕೆ ಇಳಿಸಿದಿರಿ? ನನ್ನ ಕಚೇರಿ ಯಾವುದು, ನಾನು ಯಾವ ಕೆಲಸ ಮಾಡಬೇಕು? ಎಂದು ಕಿರಿಚಿ ಕೇಳುತ್ತಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ತಗಡಿನ ಶೆಡ್ಡಿನೊಳಗೆ ಹೋದರೆ ಅಲ್ಲಿದ್ದ ಅರೇಬಿ ಇವನನ್ನು ಇವನ ಸಾಮಾನುಗಳಿದ್ದ ಬ್ಯಾಗನ್ನೂ ಆಚೆ ಎಸೆದು ಹೋಗಿ ಅಲ್ಲಿ ಮಲಗು ಎನ್ನುತ್ತಾನೆ. ಆ ಮರಳುಗಾಡಿನಲ್ಲಿ ಒಂದು ಸೂರಿಲ್ಲದೆ, ಮರೆಯಿಲ್ಲದೆ  ಆ ಕೊರೆವ ಚಳಿ, ಗಾಳಿಯ ರಭಸಕ್ಕೆ ಕಣ್ಣಿಗೆ ಬಂದು ಬಡಿಯುವ ಮರಳು, ನದೀಂ ದಿಕ್ಕೆಂಟ್ಟವನಂತಾಗುತ್ತಾನೆ. ಅಲ್ಲಿ ಅವನ ಅಹವಾಲು ಆರ್ತನಾದ ಕೇಳುವವರೇ ಇಲ್ಲ. ಮಾತಾಡಿದರೆ ಚಾಟಿ ಏಟು. ನೂರಾರು ಕುರಿ, ಒಂಟೆಗಳಿದ್ದ ಆ ಮಂದೆಯಲ್ಲೇ ಜಾಗ ಮಾಡಿ ಮಲಗುತ್ತಾನೆ. ಬಾಯಾರಿ ಒಣಗಿ ಹೋಗುತ್ತಿದ್ದರೂ, ನೀರನ್ನೂ ಕೊಡುವುದಿಲ್ಲ. ಅಲ್ಲಿ ಒಬ್ಬ ಜೀತದಾಳಿನ ರೀತಿ ಒಬ್ಬ ಮುದುಕ ಇರುತ್ತಾನೆ. ಅವನೂ ಭಾರತೀಯನೇ. ಆದರೂ ಬೇರೆ ಭಾಷೆಯವನು, ಆ ಅಜ್ಜನಿಗೂ ನದೀಂನ ಮಲೆಯಾಳ ಬರುವುದಿಲ್ಲ. ಇವನಿಗೆ ಅವನ ಭಾಷೆ ಅರ್ಥವಾಗದು. ತಾನಿಲ್ಲಿಗೆ ಏತಕ್ಕಾಗಿ ಬಂದೆ, ಯಾರು ಇವರು ನನಗೆ ಏನು ಕೆಲಸ ಕೊಡುತ್ತಾರೆ, ಎಲ್ಲಿ ನಾನು ವಾಸ ಮಾಡುವುದು ಎಂಬುದೊಂದೂ ತಿಳಿಯದ ಅಯೋಮಯ ಪರಿಸ್ಥಿತಿ. ನೋಡುವ ಪ್ರೇಕ್ಷಕರ ಮನಸ್ಸಿನಲ್ಲೂ ನದೀಂಗೆ ಆಗುವಂಥದ್ದೇ ತಲ್ಲಣ.

ಐಸಿ 814 ದಿ ಕಂದಹಾರ್ ಹೈಜಾಕ್ ಕಥೆ ಹೇಳೋ ಚಿತ್ರವಿದು!

ಆ ಅರೇಬಿ ಎಂಥ ಕ್ರೂರಿ ಎಂದರೆ ಸಂಡಾಸಿಗೆ ತೊಳೆಯಲು ನೀರನ್ನೂ ಕೊಡುವುದಿಲ್ಲ. ಮರಳಿನಲ್ಲೇ ಒರೆಸಿಕೋ ಎನ್ನುತ್ತಾನೆ. ಗಟ್ಟಿಯಾದ ರೊಟ್ಟಿಗಳನ್ನು ಕೊಡುತ್ತಾರೆ. ಆ ರೊಟ್ಟಿಗೆ ಸರಿಯಾದ ವ್ಯಂಜನವೂ ಇಲ್ಲ. ಆ ರೊಟ್ಟಿ ಗಂಟಲಿಗೆ ಸಿಕ್ಕು ಬಿಕ್ಕಳಿಗೆ ಬಂದರೆ, ಒಂದಿಷ್ಟು ನೀರು ಹನಿಸುತ್ತಾರೆ. ಅಲ್ಲಿ ಊಟ ತಿಂಡಿ ಏನೂ ಇವನಿಗೆ ಸರಿಬರದೆ ಇದ್ದರೂ ತಪ್ಪಿಸಿಕೊಳ್ಳಲು ಬೇರೆ ದಾರಿ ಇಲ್ಲ. ದಿನವೂ ಬೆಳಗ್ಗೆ ಎದ್ದರೆ ಹಲ್ಲುಜ್ಜುವುದು, ಸ್ನಾನ ಏನೂ ಇಲ್ಲ. ಪ್ರಾಣಿಗಳ ರೀತಿಯೇ ಬದುಕಬೇಕು. ಆ ಪ್ರಾಣಿಗಳನ್ನೂ ನೋಡಿಕೊಳ್ಳಬೇಕು. ಅವಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಕೊಡುವುದು, ಮೇಯಿಸಲು ಕರೆದು ಕೊಂಡು ಹೋಗುವುದು, ಅದರ ಹಾಲು ಕರೆಯುವುದು, ಇವೆಲ್ಲ ಇವನ ಪಾಲಿಗೂ ಬರುತ್ತದೆ. ಮಾಡದಿದ್ದರೆ ಚಾಟಿಯೇಟು.

ನದೀಂ ಅಲ್ಲಿಗೆ ಹೋದ ಕೆಲವೇ ದಿನಗಳಲ್ಲಿ ಅಲ್ಲಿದ್ದ ಜೀತದ ಮುದುಕ ಸತ್ತು ಹೋಗುತ್ತಾನೆ. ನದೀಂ ಒಂಟಿಯಾಗುತ್ತಾನೆ. ಕತ್ತೆ ಚಾಕರಿ, ಬಾರುಕೋಲುಗಳ ಹೊಡೆತ, ನಿದ್ರೆಯಿಲ್ಲ, ಸ್ನಾನ ಇಲ್ಲ ಹೊಟ್ಟೆಗ ಸರಿಯಾದ ಆಹಾರ ಇಲ್ಲದೆ ನದೀಂ ಬಡಕಲಾಗಿ ಮುದಿಯನಂತಾಗುತ್ತಾನೆ. ಕಾಲಕ್ರಮೇಣ ಶೇವಿಂಗ್ ಇಲ್ಲದೆ, ಸ್ನಾನ ಇಲ್ಲದೆ, ಉದ್ದುದ್ದ ದಾಡಿ ತಲೆಗೂದಲು ಬೆಳೆದು ಲಕ್ಷಣವಂತ ನದೀಂ ಕಾಡುಪ್ರಾಣಿಯಂತೆಯೇ ಆಗಿರುತ್ತಾನೆ. ಅವನ ತಮ್ಮ ಹಕೀಂ ಪತ್ತೆ ಸಿಗುವುದಿಲ್ಲ. ಅವನೂ ಇವನಂತೆಯೇ ಎಲ್ಲಿ ಜೀತ ಮಾಡುತ್ತಿದ್ದಾನೋ ಬಲ್ಲವರಾರು? ಒಮ್ಮೆ ಅಲ್ಲಿ ಕುರಿಗಳ ತುಪ್ಪಳ ತೆಗೆದುಕೊಂಡು ಹೋಗಲು ಜೀಪ್ ಬಂದಾಗ ಅದರ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡ ನದೀಂ ಬೆಚ್ಚಿ ಬೀಳುತ್ತಾನೆ. ತನ್ನ ಮುಖವೇ ಇದು! ಎನಿಸಿ ಬಹಳ ದುಃಖ ಪಡುತ್ತಾನೆ. ತಪ್ಪಿಸಿಕೊಳ್ಳಲು ಎರಡು ಮೂರು ಬಾರಿ ಪ್ರಯತ್ನಿಸಿದರೂ, ಎಲ್ಲಿ ಹೋಗಬೇಕು ಎಂಬುದೇ ಗೊತ್ತಾಗುವುದಿಲ್ಲ. ಸುತ್ತಲೂ ಮರಳುಗಾಡು. ಡಾಂಬರು ರಸ್ತೆ ಸೂಚನೆಯೇ ಇಲ್ಲ. ತಪ್ಪಿಸಿಕೊಳ್ಳಲಿಕ್ಕೆ ಪ್ರಯತ್ನಿಸಿದ್ದಾನೆ ಎಂದು ಗೊತ್ತಾದಾಗ ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಕೊಬ್ಬಿದ ಟಗರಿನಿಂದ ಗುದ್ದಿಸುವುದು, ಬಾರುಕೋಲಿನಲ್ಲಿ ಬಾರಿಸುವುದು, ಬಂದೂಕಿನಿಂದ ಕಾಲುಗಳ ಮೇಲೆ ಹೊಡೆಯುವುದು ಮಾಡುತ್ತಾರೆ. ಹಾಗೆ ಹೊಡೆತ, ಬಡಿತ ತಿಂದು ನದೀಂ ನಡೆಯಲು ಸಾಧ್ಯವಾಗದಂತಾಗಿಬಿಡುತ್ತಾನೆ. ಚುರುಕಾಗಿ ನಡೆಯುವುದೂ ಕಷ್ಟವಾಗುತ್ತದೆ. ಕಾಲು ಎಳೆದು ಹಾಕಿ ನಡೆಯಬೇಕು, ಯಾವ ಮೂಳೆ ಮುರಿದಿದೆಯೋ ಯಾರಿಗೆ ಗೊತ್ತು. ನೋವಿನಿಂದ ಪ್ರಾಣ ಹೋಗುವಂತೆ ಆಲಾಪಿಸಿದರೂ ಅಲ್ಲಿ ಇರುವ ಆ ಅರೇಬಿಯನಿಗೆ ಕನಿಕರವೇ ಬರುವುದಿಲ್ಲ.

ಮನೋರಥಂಗಳ್: ಅಪ್ಪಟ ದೇಸಿ ಸೊಗಡಿನ ದೃಶ್ಯಕಾವ್ಯ

ಹೀಗೇ ಎಷ್ಟೋ ವರ್ಷಗಳು ಕಳೆಯುತ್ತವೆ. ಒಮ್ಮೆ ಹೀಗೆಯೇ ಕುರಿಗಳನ್ನೂ, ಒಂಟೆಗಳನ್ನೂ ಬಿಡಾರದಿಂದ ದೂರ ಹೋಗಿ ಮೇಯಿಸುತ್ತಿದ್ದಾಗ ಒಂದು ಗುಹೆ ಕಾಣುತ್ತದೆ. ಕುತೂಹಲದಿಂದ ಆ ಗುಹೆಯೊಳಗೆ ತೂರಿ ಇನ್ನೊಂದು ಕಡೆಯ ಬಯಲಿಗೆ ಬರುತ್ತಾನೆ. ಅಲ್ಲಿ ಒಬ್ಬ ಮನುಷ್ಯ ಕಾಣುತ್ತಾನೆ. ಯಾರೆಂದು ಹತ್ತಿರ ಹೋಗಿ ನೋಡಿದರೆ ಇವನ ತಮ್ಮ ಹಕೀಂ! ಅವನದೂ ಇವನದೇ ಅವಸ್ಥೆ. ಜೀತ ಮಾಡುವುದು, ಹೊಡೆತ ತಿನ್ನುವುದು. ಇಬ್ಬರೂ ಪರಸ್ಪರ ತಬ್ಬಿಕೊಂಡು ಅಳುತ್ತಾರೆ. ನೋಡುವ ನಮಗೂ ಕಣ್ಣಿರ ಧಾರೆಯಾಗುತ್ತದೆ. ಇಲ್ಲಿ ಕೊಲೆ ರಕ್ತಪಾತ ಇಲ್ಲ. ಟೆರರರಿಸಂ ಇಲ್ಲ. ಆದರೆ ಮಾನಸಿಕ ಹಿಂಸೆ, ದೈಹಿಕ ಯಾತನೆ ನದೀಂನನ್ನು ಹಣ್ಣು ಮಾಡಿದಂತೆ ನೋಡುಗರನ್ನೂ ಹಣ್ಣು ಮಾಡುತ್ತದೆ.

ಕುರಿ ಮೇಯಿಸುವಾಗ ಸಿಕ್ಕ ತಮ್ಮ ಹಕೀಂ ಒಂದು ಉಪಾಯ ಹೇಳುತ್ತಾನೆ, ತನ್ನ ಬಿಡಾರದಲ್ಲಿ ಒಬ್ಬ ಆಫ್ರಿಕನ್ ಇದ್ದಾನೆ. ಅವನು ಇಲ್ಲಿಗೆ ಹಳಬ. ಅವನಿಗೆ ಇಲ್ಲಿನ ದಾರಿಗಳೆಲ್ಲ ಗೊತ್ತಿದೆ. ಹಾಗಾಗಿ ನಮಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಸ್ವಲ್ಪ ಸಮಯ ಕಾಯಬೇಕು. ಈ ಅರೇಬಿಯನ್ ನ ಯಜಮಾನನ ಮಗಳಿಗೆ ಮದುವೆ ಇದೆ. ಆಗ ಇವರೆಲ್ಲ ಮದುಗೆ ಹೋಗುತ್ತಾರೆ ಆ ಸಮಯ ನೋಡಿಕೊಂಡು ನಾವು ಇಲ್ಲಿಂದ ಪರಾರಿ ಆಗೋಣ, ಎಂದು ಹೇಳುತ್ತಾನೆ. ಅದರಂತೆ ಅವರೆಲ್ಲ ಒಂದು ದಿನ ಮದುವೆಗೆ ಹೊರಡುತ್ತಾರೆ. ನದೀಂಗೆ ಒಂದೆರಡು ರೊಟ್ಟಿ ಎಸೆದು, 'ಬೇಗ ಬರ‍್ತೇವೆ, ಕುರಿಗಳನ್ನು ಜಾಗ್ರತೆಯಿಂದ ನೋಡಿಕೋ ಬರುವಾಗ ನಿನಗೂ ಬಿರಿಯಾನಿ ತರುತ್ತೇವೆ,' ಎಂದು ಹೇಳಿ ಹೋಗಿ ಬಿಡುತ್ತಾರೆ. ಅವರು ಆ ಕಡೆ ಹೋದ ಕೂಡಲೇ ನದೀಂ ತನ್ನ ಬಟ್ಟೆಯ ಬ್ಯಾಗ್ ತೆಗೆದು, ತಂದಿದ್ದ ಬಟ್ಟೆಗಳಲ್ಲಿ ಚೆಂದದ್ದು ಒಂದು ಆಯ್ಕೆ ಮಾಡಿ ತೊಟ್ಟು ಕೊಂಡರೆ ಪ್ಯಾಂಟ್ ಉದುರಿ ಹೋಗುವಷ್ಟು ಸಡಿಲ. ಹೇಗೋ ದಾರ ಕಟ್ಟಿ ಪ್ಯಾಂಟ್ ಏರಿಸಿ ಶರ್ಟ್ ಹಾಕಿ ಆ ಹೊತ್ತಿನ ಕುರಿಗಳ ಆಹಾರ ಕೊಟ್ಟು ಅವರಿಗೆಲ್ಲ ವಿದಾಯ ಹೇಳಿ, ತನ್ನನ್ನು ಕರೆದುಕೊಂಡು ಹೋಗಲು ಬಂದ ತಮ್ಮನೊಡನೆ ಹೊರಟು ಬಿಡುತ್ತಾನೆ.

 

ದೇವರಂತೆ ಬರುವ ಆಫ್ರಿಕನ್:
ಇವರಿಗೆ ಮಾರ್ಗದರ್ಶನ ಮಾಡಲು ಆಪದ್ಭಾಂಧವನಂತೆ ಬರುವ ಆ ಆಫ್ರಿಕನ್ ಇಬ್ರಾಹಿಂ ದೇವರಂತೆ ಕಾಣುತ್ತಾನೆ ನಮಗೂ ನದೀಂ ಹಕೀಮರಿಗೂ. ಸುತ್ತಲೂ ಎತ್ತ ನೋಡಿದರೂ ಮರಳುಗಾಡು. ನೀರಿನ ಸೆಲೆಯಿಲ್ಲ. ಹಸಿರಿನ ತುಣುಕಿಲ್ಲ, ನೆರಳಿಗೆ ಒಂದೂ ಮರವಿಲ್ಲ. ಅಂಥ ಬಿರುಬಿಸಿಲಿನ ಬೆಂಗಾಡಿನಲ್ಲಿ ಕಾದ ಮರಳ ಮೇಲೆ ನಡೆಯುತ್ತಾ ಡಾಂಬರು ರಸ್ತೆ ಹುಡುಕಿ ಸಾಗಬೇಕು. ನದೀಂ ಹಕೀಂ ಇಬ್ಬರೂ ರಸ್ತೆ ತಲುಪಿದರೇ? ತಮ್ಮ ತಾಯ್ನಾಡಿಗೆ ಮರಳಿ ಬಂದರೇ? ದಾರಿಯಲ್ಲಿ ಏನೇನಾಯ್ತು? ಯಾವ ಅಡೆತಡೆಗಳನ್ನು ಎದುರಿಸಬೇಕಾಯ್ತು? ಆ ಬಿಡಾರದಲ್ಲಿ ಕುರಿಕಾಯುವ ಕೆಲಸಕ್ಕಿಂತ ಭೀಕರವಾದ ಮರಳುಗಾಡಿನಲ್ಲಿ ಹೇಗೆ ನಡೆದು ಬಂದು ಗಮ್ಯ ಸೇರುತ್ತಾರೆ? ಎಂಬುದನ್ನು ನೀವೇ ನೋಡಿ. 

ಮಗಳನ್ನು ಬಲೆಗೆ ಬೀಳಿಸಿದ 'ಸೈತಾನ್': ಮನಸ್ಸನ್ನು ವಶಕ್ಕೆ ಪಡೆದು, ತನ್ನಿಷ್ಟದಂತೆ ಕುಣಿಸುವ

ನದೀಂ ಆಗಿ ಸುಕುಮಾರನ್ ಅದ್ಭುತ ಅಭಿನಯ ನೀಡಿದ್ದಾರೆ. ಸುಕುಮಾರನ್ ಈ ಚಿತ್ರದ ಜೀವಾಳ ಎಂದರೂ ಅಡ್ಡಿಯಿಲ್ಲ. ಆಗಾಗ ನದೀಂ ನೆನಪು ಮಾಡಿಕೊಳ್ಳುವ ಕೇರಳದ ತನ್ನ ಊರಿನ ಪರಿಸರ, ನದಿ ಕಾಡು ಹಸಿರು, ಮನಸ್ಸಿಗೆ ತಂಪಾಗುವಂತೆ ಇದೆ. ಸಮುದ್ರದ  ದೈತ್ಯಾಕಾರದ ಅಲೆಗಳು ಅಪ್ಪಳಿಸುವಂತೆ ಮರಳುಗಾಡಿನಲ್ಲಿ ಬಿರುಗಾಳಿಗೆ ಮರಳು ದೈತ್ಯಾಕಾರವಾಗಿ ಅಪ್ಪಳಿಸುವಾಗಲಂತೂ ಆ ದೃಶ್ಯವನ್ನು ನೋಡುವುದಕ್ಕೇ ಭಯವಾಗುವಂತಿದೆ. ಆ ಮರಳಿನ ಅಲೆಗೆ ಸಿಲುಕಿದರೆ ಮನುಷ್ಯ ಅದರಡಿಯಲ್ಲಿ ಸಿಕ್ಕು ನಾಮಾವಶೇಷ  ಆಗಿ ಬಿಡುತ್ತಾರೆ. ಹೀಗೆ ಇಂಥ ರೋಚಕ ಅನುಭವಗಳನ್ನು ಕಟ್ಟಿ ಕೊಡುವ ಆಡುಜೀವಿತಂ ಬಹಳವಾಗಿ ಕಾಡುವ ಚಿತ್ರ. ಕನಸಿನಲ್ಲೂ ಬಂದು ಬೆಚ್ಚಿಬೀಳಿಸುವ ಚಿತ್ರ. ಮೂಲಭಾಷೆ ಮಲೆಯಾಳವಾದರೂ, ಹಿಂದಿ, ಕನ್ನಡ, ತೆಲುಗು ಭಾಷೆಗಳಲ್ಲೀಯೂ ಲಭ್ಯವಿದೆ.
 

Latest Videos
Follow Us:
Download App:
  • android
  • ios