ಕೆಪಿ

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿ, ಅದೇ ವೇಳೆ ಹತ್ತಾರು ವಿರೋಧಿಗಳನ್ನೂ ಎದುರಿಸುತ್ತಾ ಬಂದ ನಟಿ ಈಗ ಒಂಟಿ. ಅದಕ್ಕೆ ಕಾರಣ ಏನು, ಬಾಲ್ಯದಲ್ಲಿಯೇ ಚೆಂದದ ಕನಸು ಕಟ್ಟಿಕೊಂಡಿದ್ದ ಹುಡುಗಿಯೊಬ್ಬಳು ಏಕೆ ಅಡಲ್ಟ್‌ ಸಿನಿಮಾಗಳ ನಾಯಕಿ ಆದಳು ಎನ್ನುವ ಸಹಜ ಪ್ರಶ್ನೆಗಳಿಗೆ ಇಂದ್ರಜಿತ್‌ ಲಂಕೇಶ್‌ ‘ಶಕೀಲಾ’ ಚಿತ್ರದ ಮೂಲಕ ಉತ್ತರ ನೀಡಿದ್ದಾರೆ.

ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್ 

ತಾರಾಗಣ: ರಿಚಾ ಚಡ್ಡಾ, ಪಂಕಜ್‌ ತ್ರಿಪಾಠಿ, ಸುಚೇಂದ್ರ ಪ್ರಸಾದ್‌, ಎಸ್ತರ್‌ ನರೋನ್ಹಾ

ನಿರ್ದೇಶನ: ಇಂದ್ರಜಿತ್‌ ಲಂಕೇಶ್‌

ನಿರ್ಮಾಣ: ಶಮ್ಮಿ ನನ್ವಾನಿ, ಶಾಹಿಲ್‌ ನನ್ವಾನಿ

ರೇಟಿಂಗ್‌: ***

ಬಯೋಪಿಕ್‌ ಚಿತ್ರಗಳನ್ನು ಮಾಡುವಾಗ ಎಲ್ಲಾ ನಿರ್ದೇಶಕರಿಗೂ ಸಾಕಷ್ಟುಸವಾಲುಗಳಿರುತ್ತವೆ. ಅದೇ ವೇಳೆಯಲ್ಲಿ ಅನುಕೂಲಗಳೂ ಇರುತ್ತವೆ. ಇವೆರಡನ್ನೂ ನಿರ್ದೇಶಕ ಹೇಗೆ ನಿರ್ವಹಿಸುತ್ತಾನೆ ಎಂಬುದರ ಮೇಲೆ ಚಿತ್ರದ ಯಶಸ್ಸು ನಿಂತಿರುತ್ತದೆ. ಇದನ್ನು ಚೆನ್ನಾಗಿ ಬಲ್ಲ ಇಂದ್ರಜಿತ್‌ ಶಕೀಲಾ ಜೀವನವನ್ನು ಅಂದವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಬಾಲ್ಯದ ಬಡತನ ಮತ್ತು ತಂದೆಯ ಸಾವಿನ ಕಾರಣ ಬಣ್ಣದ ಲೋಕಕ್ಕೆ ಪ್ರವೇಶ ಬಯಸುವ ಶಕೀಲಾಗೆ ಚಿತ್ರರಂಗ ಯಾವ ರೀತಿಯ ಅವಕಾಶಗಳನ್ನು ನೀಡುತ್ತದೆ, ಅಲ್ಲಿನ ಪುರುಷ ಪ್ರಧಾನ ವ್ಯವಸ್ಥೆ, ನಟನೆಯಿಂದಲೇ ಬ್ಯಾನ್‌ ಮಾಡುವುದು, ಹೆಜ್ಜೆ ಹೆಜ್ಜೆಗೂ ಸವಾಲು, ಅವೆಲ್ಲವನ್ನೂ ಎದುರಿಸಿ ನಿಲ್ಲುವ ಶಕೀಲಾ...

ಕೋಟಿಗಟ್ಟಲೆ ಹಣವಿಲ್ಲ, ಬಂಗಲೆ ಇಲ್ಲ, ಚಿಕ್ಕ ಮನೆ, ಒಂಟಿ ಜೀವನ: ಲೈಫ್ ಬಗ್ಗೆ ಶಕೀಲಾ ಮಾತು 

ಇವೆಲ್ಲವೂ ರೋಚಕವಾಗಿ ಸಾಗುತ್ತಾ ನೋಡುಗನ ಎದೆಯಲ್ಲಿ ಶಕೀಲಾ ಬಗ್ಗೆ ಅನುಕಂಪ ಹುಟ್ಟಿ, ಅವಳೊಬ್ಬ ಸಾಹಸಿ ಎನ್ನುವ ಭಾವನೆ ಉಂಟಾಗುತ್ತದೆ. ಬಯೋಪಿಕ್‌ ಚಿತ್ರದ ಒಳಗೆ ಮತ್ತೊಂದು ಬಯೋಪಿಕ್‌ ಚಿತ್ರ ತಯಾರು ಮಾಡುವ ತಂತ್ರ, ಅದರ ಮೂಲಕ ಕತೆಯನ್ನು ಭಿನ್ನ ರೀತಿಯಲ್ಲಿ ಹೇಳಿರುವ ಇಂದ್ರಜಿತ್‌ ಪ್ರಯತ್ನ ವರ್ಕ್ಔಟ್‌ ಆಗಿದೆ. ಶಕೀಲಾ ಪ್ಯಾನ್‌ ಇಂಡಿಯಾ ಸಿನಿಮಾ ಆಗಬೇಕು ಎನ್ನುವ ದೃಷ್ಟಿಯಲ್ಲಿಯೇ ತಾರಾಗಣದ ಆಯ್ಕೆಯೂ ಆಗಿದೆ. ಪಂಕಜ್‌ ತ್ರಿಪಾಠಿ, ರಿಚಾ ಚಡ್ಡ, ಎಸ್ತರ್‌ ನರೋನ್ಹಾ, ಸುಚೇಂದ್ರ ಪ್ರಸಾದ್‌, ರಾಜೀವ್‌ ಪಿಳ್ಳೈ, ರಾಜೀವ್‌ ರವೀಂದ್ರ ನಾಥ್‌ ಇವರೆಲ್ಲರೂ ಒಟ್ಟಾಗಿ ಚಿತ್ರವನ್ನು ಎಲ್ಲಾ ಭಾಷೆಗಳಿಗೂ ನಿಲುಕುವಂತೆ ನೋಡಿಕೊಂಡಿದ್ದಾರೆ.

ದಕ್ಷಿಣ ಸಿನಿಮಾ ನಟಿ ಕತೆ 5 ಭಾಷೆಗಳಲ್ಲಿ ಬರುತ್ತಿರುವುದು ಮೊದಲು: ಇಂದ್ರಜಿತ್‌ ಲಂಕೇಶ್‌ 

ರಿಚಾ ಚಡ್ಡಾ ಮತ್ತು ಪಂಕಜ್‌ ತ್ರಿಪಾಠಿ ಇಡೀ ಪ್ರಯಾಣದ ಎರಡು ಬೋಗಿಗಳು. ನಟಿಯೊಬ್ಬಳ ಸವಾಲು, ನಟನೊಬ್ಬನ ಸ್ವಭಾವ ಇವರಿಬ್ಬರ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಜೀವನ ಚರಿತ್ರೆಯನ್ನು ಕಮರ್ಷಿಯಲ್‌ ಚೌಕಟ್ಟಿನಲ್ಲಿ ಸೇರಿಸಿ, ಹೇಳಬೇಕಾದ್ದನ್ನು ಸೊಗಸಾಗಿ ಹೇಳಿದ್ದಾರೆ ನಿರ್ದೇಶಕರು. ಇದೆಲ್ಲದರ ಕಾರಣ ಶಕೀಲಾ ಚಿತ್ರಗಳನ್ನು ನೋಡಿ ಆನಂದಿಸಿದ್ದವರೆಲ್ಲಾ ಅವರದ್ದೇ ಕತೆಯನ್ನು ನೋಡಿ ದೀರ್ಘವಾದ ನಿಟ್ಟುಸಿರು ಬಿಡಬಹುದು.