-ಆರ್‌ ಕೇಶವಮೂರ್ತಿ

ಈಗ ನಿಮ್ಮ ಜೀವನ ಹೇಗಿದೆ?

ನನ್ನ ಪ್ರಪಂಚದಲ್ಲಿ ನಾನು ಸಂತೋಷವಾಗಿದ್ದೇನೆ. ಬೇಸರ ಆದಾಗ ಸಿನಿಮಾ ನೋಡುತ್ತೇನೆ. ಗೇಮ್ಸ್‌ ಆಡುತ್ತೇನೆ. ಏನೂ ಬೇಡ ಅನಿಸಿದರೆ ಇಡೀ ದಿನ ಮಲಗಿರುತ್ತೇನೆ. ನನ್ನ ಎಬ್ಬಿಸಲು ಯಾರೂ ಬರಲ್ಲ. ನಾನಾಗಿಯೇ ಎಚ್ಚರಗೊಳ್ಳಬೇಕು. ಎಚ್ಚರವಾದಾಗ ನನ್ನ ಇಷ್ಟದ ಬಿರಿಯಾನಿ ಮಾಡಿಕೊಂಡು ತಿನ್ನುತ್ತೇನೆ. ನನ್ನ ಅರ್ಥ ಮಾಡಿಕೊಂಡಿರುವ ಸ್ನೇಹಿತರು ಇದ್ದಾರೆ. ಅವರನ್ನು ಕರೆದು ನಾನೇ ಅಡುಗೆ ಮಾಡಿ ಬಡಿಸುತ್ತೇನೆ. ಇದರ ನಡುವೆ ಖಾಸಗಿ ವಾಹಿನಿಯೊಂದರಲ್ಲಿ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ.

ನೀವು ಮಾಡಿದ ಸಿನಿಮಾಗಳ ಬಗ್ಗೆ ರಿಗ್ರೆಟ್‌ ಉಂಟಾ?

ಖಂಡಿತ ಇಲ್ಲ. ಯಾಕೆಂದರೆ ಶಕೀಲಾ ಯಾರೂ ಅಂತ ಗೊತ್ತಾಗಿದ್ದೇ ಆ ರೀತಿಯ ಸಿನಿಮಾಗಳ ಮೂಲಕ. ನಾನು ಈ ಕ್ಷಣಕ್ಕೂ ನಿಮ್ಮ ಮುಂದೆ ಕೂತು ಮಾತನಾಡುತ್ತಿದ್ದೇನೆ, ನೀವು ನನ್ನ ಬಗ್ಗೆ ಬರೆಯುತ್ತಿದ್ದೀರಿ, ನನ್ನ ಜೀವನ ಸಿನಿಮಾ ಆಗುತ್ತಿದೆ ಎಂದರೆ ನಾನು ಆ ದಿನಗಳಲ್ಲಿ ಮಾಡಿದ ಚಿತ್ರಗಳ ಕಾರಣ. ಹೀಗಾಗಿ ನನಗೆ ಆ ಸಿನಿಮಾಗಳ ಬಗ್ಗೆ ಯಾವ ರಿಗ್ರೆಟ್‌ ಇಲ್ಲ. ಖುಷಿ ಇದೆ.

ಎಲ್ಲವೂ ಸಂಪಾದನೆ ಮಾಡಿಕೊಂಡಿದ್ದೀರಿ. ಆದರೆ, ಕುಟುಂಬನೇ ಜತೆಗೆ ಇಲ್ಲವಲ್ಲ?

ಆ ಬಗ್ಗೆ ನನಗೂ ಬೇಸರ ಇದೆ. ನೋವಿದೆ. ಹಾಗಂತ ಯಾರ ಬಳಿ ಹೇಳಿಕೊಳ್ಳಲಿ? ಪಾಸ್ಟ್‌ ಈಸ್‌ ಪಾಸ್ಟ್‌ ಅಷ್ಟೆ. ನನ್ನ ಜೀವನ ಸಿನಿಮಾ ಆಗುತ್ತಿದೆ. ಆ ಸಿನಿಮಾ ನನ್ನ ಬದುಕನ್ನು ತೋರಿಸುತ್ತಿದೆ. ಇದು ಒಬ್ಬ ನಟಿಯಾಗಿ ನಾನು ಸಂಭ್ರಮಿಸಬಹುದಾದ ಕ್ಷಣಗಳು.

ಈಗಲಾದರೂ ನೀವೇ ಹೋಗಿ ನಿಮ್ಮ ಕುಟುಂಬವನ್ನು ಆಹ್ವಾನಿಸುತ್ತೀರಾ?

ಯಾರನ್ನ ಕರೆಯಲಿ, ಯಾಕೆ ಕರೆಯಲಿ ಎಂಬುದು ಗೊತ್ತಿಲ್ಲ. ನಾನು ದುಡಿದ ದುಡ್ಡು ತೆಗೆದುಕೊಂಡು ನನ್ನ ಅಕ್ಕ ನನ್ನ ಬಿಟ್ಟು ಹೋದವಳು ಮತ್ತೆ ತಿರುಗಿ ನೋಡಿಲ್ಲ. ಅವಳ ಜತೆ ಮಾತು ಬಿಟ್ಟು ವರ್ಷಗಳೇ ಆಗಿವೆ. ಮತ್ತೊಬ್ಬ ಸೋದರ ಇದ್ದಾನೆ. ಅವನು ವ್ಯಾಪಾರ ಮಾಡುತ್ತಿದ್ದಾನೆ.

'ಶಕೀಲಾ' ಬಯೋಪಿಕ್‌ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು!

ನನ್ನ ಬಗ್ಗೆ ಸಿನಿಮಾ ಆಗುತ್ತಿರುವುದು ಆತನಿಗೆ ಗೊತ್ತು. ನಾನು ತಮಿಳು ವಾಹಿನಿಯಲ್ಲಿ ಅಡುಗೆ ಕಾರ್ಯಕ್ರಮ ಮಾಡುತ್ತಿರುವುದೂ ಗೊತ್ತು. ಎಲ್ಲವೂ ಗೊತ್ತಿದ್ದು ಫೋನ್‌ ಮಾಡಿ ವಿಶ್‌ ಮಾಡುವ ಸೌಜನ್ಯ ಅವನಿಗೆ ಇಲ್ಲ. ನನ್ನ ದುಡಿಮೆ ಪೂರ್ತಿ ಯಾರ ಉದ್ದಾರಕ್ಕೆ ವೆಚ್ಚ ಮಾಡಿದೆನೋ ಅವರೇ ನನಗೆ ಮೋಸ ಮಾಡಿ ದೂರ ಆಗಿದ್ದಾರೆ.

ಈಗ ನಿಮ್ಮ ಜೀವನ ಆಧಾರ ಏನು?

ನಾನೇ. ನನ್ನ ಜೀವನಕ್ಕೆ ನಾನೇ ಪಿಲ್ಲರ್‌. 10ನೇ ತರಗತಿ ಫೇಲ್‌ ಆದ ಹುಡುಗಿ. ಅಂದಿನಿಂದಲೂ ದುಡಿಯಲು ಪ್ರಾರಂಭಿಸಿದರೆ. ಯಾರನ್ನೂ ನಾನು ಅವಲಂಬಿಸಲಿಲ್ಲ. ಯಾರ ಬಳಿಯೂ ಕೈ ಚಾಚಿ ಹಣ ಕೇಳಲಿಲ್ಲ. ಯಾರಿಗೂ ಮೋಸ ಮಾಡಲಿಲ್ಲ. ನಾನಾಯಿತು, ನನ್ನ ಸಿನಿಮಾ ಆಯ್ತು, ನನ್ನ ದುಡಿಮೆ ಆಯ್ತು. ಅಷ್ಟೇ ಇದ್ದೆ. ಹಾಗಂತ ದೊಡ್ಡ ಬಂಗಳೆ, ಕೋಟಿಗಳ ಲೆಕ್ಕದಲ್ಲಿ ಹಣ ನನ್ನ ಬಳಿ ಇಲ್ಲ. ಸಿಂಪಲ್‌ ಜೀವನ. ಚಿಕ್ಕ ಮನೆ. ಆ ಮನೆಯಲ್ಲಿ ನಾನು ಒಂಟಿ. ನನ್ನ ಮನೆ, ನನ್ನ ಬದುಕಿಗೆ ನಾನೇ ರಾಣಿ, ನಾನೇ ಮಂತ್ರಿ. ನಾನು ದೇವರ ಮಗಳಂತೆ. ಹೀಗಾಗಿ ಆ ದೇವರು ನನ್ನ ಕೈ ಬಿಡಲ್ಲ ಅಂದುಕೊಂಡಿದ್ದೇನೆ.

ನಿಮಗೆ ಜೀವನ ಕೊಟ್ಟಮಲಯಾಳಂ ಚಿತ್ರರಂಗದಿಂದ ನೀವು ದೂರ ಆಗಿದ್ದು ಯಾಕೆ?

ಅದೊಂದು ರಾಜಕೀಯ. ಆ ಸಂಚಿನ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಈಗ ಬೇಡ. ನನ್ನ ನಂಬಿ ನಿರ್ಮಾಪಕರು ಹಣ ತಂದು ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾಗಳಿಗೆ ಸೆನ್ಸಾರ್‌ ಆಗದಂತೆ ತಡೆದರು. ಹೀಗೆ 40 ಸಿನಿಮಾಗಳಿಗೆ ಸೆನ್ಸಾರ್‌ ಮಾಡಿಸಿಕೊಳ್ಳಲು ಆಗಲಿಲ್ಲ. ನನ್ನ ನಂಬಿದ ನಿರ್ಮಾಪಕರ ಗತಿ ಏನೆಂದು ಯೋಚನೆ ಮಾಡಿದೆ. ನನ್ನ ಸಂಪೂರ್ಣವಾಗಿ ಸರ್ವನಾಶ ಮಾಡಬೇಕೆಂದು ಹೂಡಿದ ಸಂಚಿಗೆ ನನ್ನ ನಿರ್ಮಾಪಕರು ಯಾಕೆ ಬಲಿ ಆಗಬೇಕೆಂದು ನಿರ್ಧರಿಸಿ ನಾನೇ ಮಲಯಾಳಂ ಚಿತ್ರರಂಗವನ್ನು ಕ್ವಿಟ್‌ ಮಾಡಿದೆ.

ಈ ಬಾಲಿವುಡ್ ಬ್ಯೂಟಿ ಶಕೀಲಾ ಭೇಟಿ ಮಾಡಿದ್ದೇಕೆ?

ನಿರ್ಮಾಪಕರಿಂದ ತೆಗೆದುಕೊಂಡು ಹಣ ವಾಪಸ್ಸು ಕೊಟ್ಟು ಸೆನ್ಸಾರ್‌ ಆಗದ 20ಕ್ಕೂ ಹೆಚ್ಚು ಚಿತ್ರಗಳ ಜತೆ ಚೆನ್ನೈಗೆ ಹಿಂತಿರುಗಿದವಳು, ಮತ್ತೆ ಆ ಕಡೆ ಮುಖ ಮಾಡಲಿಲ್ಲ. ಮಲಯಾಳಂ ಚಿತ್ರವನ್ನು ಬಿಡುವುದು ನನಗೆ ಅನಿವಾರ್ಯವಾಗಿತ್ತು. ಅದು ನನ್ನ ಸ್ವಾಭಿಮಾನದ ಪ್ರಶ್ನೆ ಆಗಿತ್ತು.

ಈಗ ತೆರೆಗೆ ಬರುತ್ತಿರುವ ನಿಮ್ಮ ಜೀವನ ಆಧರಿತ ಚಿತ್ರದಲ್ಲಿ ಏನೆಲ್ಲ ಇರಲಿದೆ?

ಈ ಚಿತ್ರದಿಂದ ಯಾರಿಗೂ ಏನೂ ಸಂದೇಶ ಕೊಡುವುದು ಇರಲ್ಲ. ಒಬ್ಬ ನಟಿಯ ಜೀವನ ಅಷ್ಟೆ. ನಾನು ನನ್ನ ಆತ್ಮಕತೆ ಬರೆದು 10 ವರ್ಷಗಳಾಗಿವೆ. ಅದನ್ನು ಈಗ ಸಿನಿಮಾ ಮಾಡುವಾಗ ಕೊಂಚ ಬದಲಾವಣೆ ಮಾಡಿಕೊಂಡಿದ್ದೇವೆ. ನನ್ನ ಪಾತ್ರ ಮಾಡಿರುವ ರಿಚಾ ಚಡ್ಡಾ ನ್ಯಾಯ ಒದಗಿಸಿದ್ದಾರೆ. ನನ್ನ ಜತೆ ಇದ್ದು, ನನ್ನ ನೋಡಿ ಕಲಿತು ಅವರು ‘ಶಕೀಲಾ’ ಚಿತ್ರದಲ್ಲಿ ನಟಿಸಿದ್ದಾರೆ.

ಇಂದ್ರಜಿತ್‌ ಲಂಕೇಶ್‌ ಅವರಿಗೆ ಈ ಸಿನಿಮಾ ಮಾಡಲು ರೈಟ್ಸ್‌ ಕೊಟ್ಟಿದ್ದೇಕೆ?

ಹಾಗೆ ನೋಡಿದರೆ ಒಬ್ಬ ಮಹಿಳಾ ನಿರ್ದೇಶಕರು ಕೂಡ ಬಂದಿದ್ದರು. ಅವರು ಅವಾರ್ಡ್‌ ದೃಷ್ಟಿಯಲ್ಲಿಟ್ಟು ತುಂಬಾ ಹಸಿಹಸಿಯಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಅಂದಾಜು ಇತ್ತು. ಹೀಗಾಗಿ ನಾನು ಅವರಿಗೆ ಸಿನಿಮಾ ಮಾಡುವ ಹಕ್ಕು ಕೊಡಲಿಲ್ಲ. ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರ ಬಗ್ಗೆ ಗೊತ್ತಿತ್ತು. ಅವರು ಕಮರ್ಷಿಯಲ್ಲಾಗಿ ಮಾಡುತ್ತಾರೆ. ಮನರಂಜನೆ ಇರುತ್ತದೆ. ಎಲ್ಲರಿಗೂ ತಲುಪುತ್ತದೆ. ಈ ಕಾರಣಕ್ಕೆ ನಾನು ಇಂದ್ರಜಿತ್‌ ಅವರಿಗೆ ನನ್ನ ಜೀವನ ಸಿನಿಮಾ ಮಾಡುವ ಹಕ್ಕುಗಳನ್ನು ಕೊಟ್ಟೆ.

ಚಿತ್ರದ ಟ್ರೇಲರ್‌ ನೋಡಿ ಏನನಿಸುತ್ತಿದೆ?

ನನ್ನ ಹಳೆಯ ಸಂಗಾತಿ ನೆನಪಾಗುತ್ತಿದ್ದಾರೆ. ನನ್ನ ಆ ದಿನಗಳು ಮತ್ತೆ ಕಣ್ಣು ಮುಂದೆ ಬರುತ್ತಿದೆ. ಆತ ಈಗ ಇರಬೇಕಿತ್ತು ಅನಿಸುತ್ತಿದೆ.