Gaalipata 2Film Review: ಪ್ರಾಯಶಃ ಭಾಗಶಃ ಪ್ರೇಮ ಪರವಶ
ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಗಾಳಿಪಟ 2 ಸಿನಿಮಾದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಅಭಿನಯಿಸಿದ್ದಾರೆ. ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಹೇಗಿದೆ?
ಜೋಗಿ
ಯೌವನದ ಪ್ರೇಮಕ್ಕೂ ನಡುವಯಸ್ಸಿನ ಪ್ರೇಮಕ್ಕೂ ಇರುವ ವ್ಯತ್ಯಾಸ ಗೊತ್ತಾಗಬೇಕಿದ್ದರೆ ಗಾಳಿಪಟ 2 ಚಿತ್ರ ನೋಡಿ ಎಂದು ಒಂದೇ ಮಾತಲ್ಲಿ ಹೇಳಿಬಿಡಬಹುದು. ಅಷ್ಟೇ ಹೇಳಿದರೆ ಅದು ಆಸಕ್ತ ಪ್ರೇಕ್ಷಕರಿಗೂ ನಿರ್ದೇಶಕರಿಗೂ ಮಾಡುವ ಅನ್ಯಾಯ ಎಂಬ ಕಾರಣಕ್ಕೆ ಕೊಂಚ ವಿವರಿಸಬೇಕು.
ಥೇಟ್ ಸಣ್ಣಕತೆಯಂತೆ ಆರಂಭವಾಗುವ ಸಿನಿಮಾ ಇದು. ನೀರುಕೋಟೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಓದಿದ ವಿದ್ಯಾರ್ಥಿಗಳಿಗೆ ಎರಡು ವರುಷದ ನಂತರ ತಮ್ಮ ಕನ್ನಡ ಮೇಷ್ಟರಿಗೆ ಹುಚ್ಚು ಹಿಡಿದಿದೆ ಎನ್ನುವುದು ಗೊತ್ತಾಗುತ್ತದೆ. ಅವರನ್ನು ನೋಡಲು ಮೂವರೂ ಹೊರಡುತ್ತಾರೆ. ಮೇಷ್ಟರು ಸಿಗುತ್ತಾರೆ. ಅವರ ಕಷ್ಟಅರ್ಥವಾಗುತ್ತದೆ. ಮೇಷ್ಟರ ಸಮಸ್ಯೆ ಬಗೆಹರಿಸಲು ಅವರನ್ನು ಕರೆದುಕೊಂಡು ವಿದೇಶಕ್ಕೆ ಹೊರಡುತ್ತಾರೆ. ಅಲ್ಲಿ ಏನೇನೇನೋ ಆಗುತ್ತದೆ. ಪ್ರೇಮ ಕೈಗೂಡುತ್ತದೆ, ಮಣ್ಣಾಗುತ್ತದೆ, ಪ್ರೇಮಿಗಳು ಜಗಳ ಆಡುತ್ತಾರೆ, ಸುತ್ತಾಡುತ್ತಾರೆ. ಹೀಗೆ ಮೂರು ಜೋಡಿಗಳು ಅಚಾನಕ್ ಒಂದು ಪ್ರವಾಸ ಹೊರಟಾಗ ಏನೆಲ್ಲ ಆಗಬಹುದೋ ಅದೆಲ್ಲವೂ ನ‚ಡೆಯುತ್ತದೆ.
ಆದರೆ ಅದೆಲ್ಲ ಕತೆಯ ಇಚ್ಛೆಯಂತೆ ನಡೆಯುತ್ತದೆಯೋ ಕಾಲದ ಆಶೆಯಂತೆ ನಡೆಯುತ್ತದೆಯೋ ಎಂಬ ಪ್ರಶ್ನೆಗಿಲ್ಲಿ ಉತ್ತರವಿಲ್ಲ. ನಾಲ್ಕು ತಿಂಗಳ ಕಾಲ ಸುರಿಯುವ ಮಳೆಗೆ ಶಾಲೆಯ ಚಾವಣಿ ಕುಸಿಯುತ್ತದೆ ಎಂದು ಮೊದಲೇ ಹೇಳಿ ಹೆದರಿಸುವ ಭಟ್ಟರು, ಕೊನೆಗೂ ಚಾವಣಿ ಬೀಳಿಸುತ್ತಾರೆ. ಅದು ಕತೆಯ ಚಾವಣಿಯೂ ಹೌದು. ಆಮೇಲಿನದು, ರಕಾರವಿಲ್ಲದ ಹಾಡಿನಂತೆ ಹೊಂಟೋಗಿರೋ ಹುಡುಗೀರೆಲ್ಲ ತಿರಗ ವಾಪಸ್ ಬಂದವ್ರಲ್ಲ... ದೇವ್ಲೇ ದೇವ್ಲೇ!
ನಿರ್ದೇಶಕ: ಯೋಗರಾಜ ಭಟ್
ಅಭಿನಯ: ಅನಂತನಾಗ್, ಗಣೇಶ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಪ್ರಕಾಶ್ ತುಮಿನಾಡು
ಸಂಗೀತ: ಅರ್ಜುನ್ ಜನ್ಯ
ರೇಟಿಂಗ್- 3
ಗಾಳಿಪಟ 2 ಕತೆಯ ಕೇಂದ್ರಬಿಂದು ಅನಂತನಾಗ್ ನಟಿಸಿರುವ ಕನ್ನಡ ಮೇಷ್ಟರ ಪಾತ್ರ. ಯಥಾಪ್ರಕಾರ ಭಟ್ಟರು ಆ ಪಾತ್ರವನ್ನು ಕ್ಯಾರಿಕೇಚರ್ ಮಾಡಲು ಯತ್ನಿಸಿದ್ದರೂ ಅನಂತ್‌ನಾಗ್ ತಮ್ಮ ಪ್ರತಿಭೆಯ ಬಲದಿಂದ ಕನ್ನಡ ಮೇಷ್ಟರನ್ನು ಚಿರಾಯುವನ್ನಾಗಿಸುತ್ತಾರೆ. ಹುಡುಗಾಟಿಕೆ, ತಮಾಷೆ, ತರಲೆ ಮತ್ತು ನಿರ್ಲಜ್ಜ ಮಾತುಗಳ ನಡುವೆ ಅನಂತ್‌ನಾಗ್ ಘನಗಂಭೀರ ಮಾತುಗಳಿಂದ ಗಾಳಿಪಟದ ಸೂತ್ರವನ್ನು ಕೈಗೆತ್ತಿಕೊಂಡಂತೆ ಭಾಸವಾಗುತ್ತದೆ.
ಗಣೇಶ್ ನಟನೆಯ‘ಗಾಳಿಪಟ 2’ ಮೊದಲ ದಿನವೇ 20 ಕೋಟಿ ರೂ. ಕಲೆಕ್ಷನ್
ಇದು ಸಸ್ಯಾಹಾರಿ ಭಟ್ಟರ ಹೋಟೆಲಿನ ಪ್ಲೇಟ್ ಮೀಲ್ಸ್ ಶೈಲಿಯ ಚಿತ್ರ. ಹೊಟ್ಟೆಕೆಡಿಸದಷ್ಟುಮಸಾಲೆ, ನೆತ್ತಿಗೆ ಹತ್ತದಷ್ಟುಖಾರ ಮತ್ತು ರುಚಿಗೆ ತಕ್ಕಷ್ಟುಉಪ್ಪು ಹಾಕಿರುವ ದೈನಂದಿನ ಜನಪ್ರಿಯ ಊಟಕ್ಕಿಲ್ಲಿ ಮೋಸವಿಲ್ಲ. ಗಣೇಶ್ ಮಾತು ಮತ್ತು ಮೌನದಲ್ಲಿ ಗಾಳಿಪಟದ ಸೂತ್ರ ಹರಿಯದಂತೆ ಕಾಪಾಡುತ್ತಾರೆ. ಅದಕ್ಕಿಂತ ಹೆಚ್ಚಿನ ಪವಾಡವನ್ನು ನಟರಿಂದ ನಿರೀಕ್ಷಿಸುವಂತಿಲ್ಲ.
ಆದರೆ ಭಟ್ಟರು ಮಾತ್ರ ಒಂದರ ಮೇಲೊಂದು ಪವಾಡ ಮಾಡುತ್ತಲೇ ಹೋಗುತ್ತಾರೆ. ಕನ್ನಡ ಎಂಎ ಓದುವ ಮೊದಲೇ ಹುಡುಗನಿಗೆ ಜರ್ಮನಿಯ ಕಿಟೆಲ್ ಸಂಸ್ಥೆಯಲ್ಲಿ ಉದ್ಯೋಗ ಕಾದಿರುತ್ತದೆ. ಅದನ್ನು ಆತ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ದಾನ ಮಾಡುತ್ತಾನೆ. ಎರಡೇ ವರುಷದಲ್ಲಿ ಮೂವರು ಮೂರು ಕೆಲಸ ಹಿಡಿಯುತ್ತಾರೆ. ಅಷ್ಟೇ ಸರಾಗವಾಗಿ ಟರ್ಕಿಗೂ ಹೋಗುತ್ತಾರೆ. ಅಲ್ಲಿಗೆ ಅವರು ಪ್ರೀತಿಸುತ್ತಿದ್ದ ಹುಡುಗಿಯರೂ ಬಂದುಬಿಡುತ್ತಾರೆ. ಒಬ್ಬಳಂತೂ ಅಲ್ಲೇ ವಾಸ ಮಾಡುತ್ತಿರುತ್ತಾಳೆ. ಹೀಗೆ ಎಲ್ಲರಿಗೂ ಬೇಕಾದ್ದನ್ನೆಲ್ಲ ಕೊಡಿಸಿ, ಭಟ್ಟರು ಕೃತಾರ್ಥರಾಗುತ್ತಾರೆ ಮತ್ತು ಅಂತರ್ಧಾನರಾಗುತ್ತಾರೆ.
ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?
ಸಂತೋಷ್ ಪಾತಾಜೆ, ಅರ್ಜುನ್ ಜನ್ಯ, ಹಬ್ಬಿರುವ ಹಿಮದ ಹಾದಿ, ಚಿಕ್ಕಮಗಳೂರಿನ ಮಳೆಗಾಲ, ಅನಂತನಾಗ್ ಕನ್ನಡ, ಗಣೇಶ್ ಹುಡುಗಾಟ, ರಂಗಾಯಣ ರಘು ಸಿಟ್ಟು, ಪ್ರಕಾಶ್ ತುಮಿನಾಡು ಮಾತು ಮತ್ತು ಗಂಭೀರವಾದಾಗೆಲ್ಲ ಹಿಡಿದಿಡುವ ಚಿತ್ರಕತೆ ಚಿತ್ರವನ್ನು ಆಪ್ತವಾಗಿಸುತ್ತದೆ.
ಜೀವನ ದ್ವಾಸೆ ಹೆಂಚು, ಸ್ಟವ್ ಯಾಕೋ ಆನಾಗ್ತಿಲ್ಲ. ನೆನಪೇ ದ್ವಾಸೆ ಹಿಟ್ಟು, ಹುಯ್ಯಂಗಿಲ್ಲ ಬಿಡಂಗಿಲ್ಲ- ಎಂಬುದು ಈ ಚಿತ್ರದ ಸಂದೇಶ. ಇದನ್ನು ಸಂದರ್ಭಕ್ಕೆ ಅನುಸಾರ ವಿಸ್ತರಿಸಿ ಬರೆದುಕೊಳ್ಳಬಹುದು.