ಡಾರ್ಲಿಂಗ್‌ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್‌, ನಾಗಭೂಷಣ್, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಸುಧಾ ಬೆಳವಾಡಿ ನಟಿಸಿರುವ  ಕೌಸಲ್ಯ ಸುಪ್ರಜಾ ರಾಮ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ? 

ಆರ್‌. ಕೇಶವಮೂರ್ತಿ

ನಗಿಸುತ್ತಲೇ ಮುದ್ದು ಮುದ್ದಾಗಿರುವ ಒಂದು ಫ್ಯಾಮಿಲಿ ಕತೆಯನ್ನು ಹೇಳುತ್ತಲೇ, ‘ನಾನು’ ಎಂಬ ಗಂಡಸಿನ ಅಹಂ ಅನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್‌ ಮಾಡುವ ಮೂಲಕ ನಿರ್ದೇಶಕ ಶಶಾಂಕ್‌ ಗೆಲ್ಲುತ್ತಾರೆ. ನಿರ್ದೇಶಕನ ಕಲ್ಪನೆಯ ‘ಭಾವ’ಚಿತ್ರಕ್ಕೆ ಜೀವ ತುಂಬಿದವರ ಪೈಕಿ ಡಾರ್ಲಿಂಗ್‌ ಕೃಷ್ಣ, ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ್‌ ಹಾಗೂ ಮಿಲನ ನಾಗರಾಜ್‌ ಅವರನ್ನು ಮೊದಲಿಗರನ್ನಾಗಿ ನಿಲ್ಲಿಸುತ್ತದೆ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ.

‘ಕೌಟುಂಬಿಕ ಮನರಂಜನೆಯಿಂದ ಕೂಡಿದ ಸಂದೇಶಾತ್ಮಕ ಸಿನಿಮಾ’ ಹೇಗಿರುತ್ತದೆ ಎನ್ನುವ ಕುತೂಹಲಕ್ಕೆ ನೋಡಲೇ ಬೇಕಾದ ಸಿನಿಮಾ ಇದು. ರಂಗಾಯಣ ರಘು ಅವರ ಸಿದ್ದೇಗೌಡನ ಪಾತ್ರ ಪ್ರತಿ ಮನೆಯಲ್ಲೂ ಇದೆ. ಸಿದ್ದೇಗೌಡನ ಮುಂದುವರಿದ ಭಾಗದಂತೆ ಕಾಣುವ ರಾಮನ ಪಾತ್ರ ನಮ್ಮಲ್ಲೂ ಇದೆ.

ಹಾಸ್ಟೆಲ್‌ಗೆ ಹೋಗಿಲ್ಲ ಆದ್ರೂ ಬಾಯ್ಸ್‌- ವಾರ್ಡನ್ ಲವ್ ಇಷ್ಟ ಆಯ್ತು: ಹಾಸ್ಟೆಲ್ ಹುಡುಗರು ಸಿನಿಮಾ ಹಿಂಗಿತ್ತು!

ತಾರಾಗಣ: ಡಾರ್ಲಿಂಗ್‌ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್‌, ನಾಗಭೂಷಣ್, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಸುಧಾ ಬೆಳವಾಡಿ, ಉಷಾ ಭಂಡಾರಿ

ನಿರ್ದೇಶನ: ಶಶಾಂಕ್‌

ರೇಟಿಂಗ್‌: 4

ಚಿತ್ರದ ಮೊದಲಾರ್ಧ ಚಿತ್ರದ ನಾಯಕನ ಕಾಲೇಜು, ಪ್ರೀತಿಗೆ ಸೀಮಿತವಾಗುತ್ತದೆ. ವಿರಾಮದ ನಂತರ ಅದೇ ನಾಯಕನ ಮದುವೆ, ಸಂಸಾರದ ಏಳುಬೀಳುಗಳಲ್ಲಿ ಸಾಗುತ್ತಾ ಎಂಟರ್‌ಟೈನ್‌ ಮಾಡುವ ಜತೆಗೆ ನೋಡುಗರನ್ನು ಭಾವುಕರನ್ನಾಗಿಯೂ ಆವರಿಸಿಕೊಳ್ಳುತ್ತದೆ. ಆಪ್ತವಾದ ಭಾವುಕತೆಯಲ್ಲೂ ನಾಯಕನ ಬಾಮೈದನ ಪಾತ್ರಧಾರಿ ನಾಗಭೂಷಣ್‌ ನಗಿಸುವುದನ್ನು ಮರೆಯಲ್ಲ.

Paramvah Film Review: ದಾರಿ ತಪ್ಪಿದ ವೀರಗಾಸೆ ಹುಡುಗನ ಕತೆ

ಸಿನಿಮಾ ಕತೆ ಏನು? ನೀನು ಗಂಡು ಕಣೋ... ಹೆಂಗ್ಸಿನ ಥರಾ ಆಡಬೇಡ, ಅವನೇನೋ ಹುಡುಗ ಕಣಮ್ಮ. ನೀನೂ ಕೂಡ ಅವನ ಹಾಗೆ ಆಡಿದರೆ ಹೇಗೆ. ಹೆಣ್ಣು ಮಗು ನೀನು. ತಗ್ಗಿ ಬಗ್ಗಿ ಇರಬೇಕು... ಈ ಧಾಟಿಯ ಮಾತುಗಳನ್ನು ಬಹುತೇಕರು ಕೇಳಿರುತ್ತೀರಿ.‘ನೀನು ಹೆಣ್ಣು’, ‘ನೀನು ಗಂಡು’ ಎಂಬ ಈ ಸುಪ್ರಭಾತ ಕತೆಯಾಗಿ, ಅದು ದೃಶ್ಯಗಳಾಗಿ, ಆ ದೃಶ್ಯಗಳಲ್ಲಿ ಎಲ್ಲರು ಪಾತ್ರಧಾರಿಗಳಾಗಿ ಬಂದರೆ ಹೇಗಿರುತ್ತದೆ ಎಂಬುದೇ ‘ಕೌಸಲ್ಯ ಸುಪ್ರಜಾ ರಾಮ’. ಇಂಥ ಗಂಭೀರವಾದ ಥಾಟ್‌ ಅನ್ನು ತುಂಬಾ ಸರಳವಾಗಿ, ಲವಲವಿಕೆಯಿಂದ ಕಟ್ಟಿಕೊಟ್ಟಿರುವುದೇ ಈ ಚಿತ್ರದ ಹೆಚ್ಚುಗಾರಿಕೆ. ಹೀಗಾಗಿ ಮನಸಾರೆ ನಗಬೇಕು, ಆಗಾಗ ಭಾವುಕರಾಗಬೇಕು, ಮಧ್ಯೆ ಮಧ್ಯೆ ಶಿಳ್ಳೆ ಹೊಡೆಯೋ ಸಂಭಾಷಣೆಗಳು ಬೇಕು. ಬಟ್‌ ನೋ ವೈಲೆನ್ಸ್‌ ಎಂದುಕೊಳ್ಳುವವರಿಗೆ ಈ ಸಿನಿಮಾ ಹೇಳಿ ಮಾಡಿಸಿದ ಜೋಡಿ.

ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌ ಮತ್ತೊಮ್ಮೆ ಫರ್‌ಫಾರ್ಮಿಂಗ್‌ ಜೋಡಿ ಎನಿಸಿಕೊಳ್ಳುತ್ತದೆ. ರಂಗಾಯಣ ರಘು ಮತ್ತು ಸುಧಾ ಬೆಳವಾಡಿ ಅವರದ್ದು ಅದೇ ಪ್ರಬುದ್ಧ ನಟನೆ. ನಾಗಭೂಷಣ್ ಕನ್ನಡ ಹೀರೋಗಳಿಗೆ ಸಿಕ್ಕಿರುವ ಹೊಸ ಫ್ರೆಂಡು ಕಂ ಬಾಮೈದ.