ಹಾಸ್ಟೆಲ್‌ಗೆ ಹೋಗಿಲ್ಲ ಆದ್ರೂ ಬಾಯ್ಸ್- ವಾರ್ಡನ್ ಲವ್ ಇಷ್ಟ ಆಯ್ತು: ಹಾಸ್ಟೆಲ್ ಹುಡುಗರು ಸಿನಿಮಾ ಹಿಂಗಿತ್ತು!
ಎಲ್ಲಿ ನೋಡಿದರೂ ಹಾಸ್ಟಲ್ ಹುಡುಗರ ಹಾವಳಿ ಹೆಚ್ಚಾಗಿದೆ. ಸಿನಿಮಾ ಹಾಗಿದೆ ಹೀಗದೆ ಅಂತ ಕೇಳಿ ಕೇಳಿ ಸಾಕಾಗಿ ನಾನೇ ಹೋಗಿದೆ ನೋಡಿ.....
ವೈಷ್ಣವಿ ಚಂದ್ರಶೇಖರ್
ನಾನು ಹಾಸ್ಟಲ್‌ಗೆ ಹೋಗಿಲ್ಲ. ಹಾಕ್ತೀನಿ ಅಂತ ಅಪ್ಪ ಅಮ್ಮ ಹೇಳ್ತಿದ್ರು. ಮೊದಲು ಬೇಡ ಅಂತಿದ್ದೆ. ಆಮೇಲೆ ಸೇರಿಸಿ ಅಂದ್ರೂ ಅವರೇ ಬೇಡ ಅಂದ್ರು. ಕೋಎಡ್ ಸ್ಕೂಲ್ ಆ್ಯಂಡ್ ಕಾಲೇಜಿನಲ್ಲಿ ಓದಿರುವ ನನಗೆ ಹಾಸ್ಟಲ್ ಲೈಫ್ ಜಸ್ಟ್ ಸಿನಿಮಾ ಆಯ್ತು. ಮದ್ವೆ ಆದ್ಮೇಲೆ ನನ್ನ ಗಂಡ ಹೇಳುತ್ತಿದ್ದ ಅವರ ಹಾಸ್ಟೆಲ್ ಕಥೆ ಇಂಟ್ರೆಸ್ಟಿಂಗ್ ಅನಿಸಿದ್ದು ನಿಜ. ಆದರೆ ರಿಯಲ್ ವಿಶ್ಯುಯಲ್ ಸಿಕ್ಕಿದ್ದು 'ಹಾಸ್ಟೆಲ್ ಹುಡುಗರು' ಸಿನಿಮಾ ನೋಡಿದ ಮೇಲೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಹುಡುಗ್ರು ಮಸ್ತಾಗಿದ್ದಾರೆ. ನಿಜ ಹೇಳಬೇಕು ಅಂದ್ರೆ ವಾರ್ಡನ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳು ಬೇಕಾಗಿರುವುದು. ಒಂಟಿ ಪಿಶಾಚಿಯಾಗಿ ಹುಟ್ಟಿರುವವರಿಗೆ ಸಿಬ್ಲಿಂಗ್ ಫೀಲ್ ಬೇಕು ಅಂದ್ರೆ ಹಾಸ್ಟೆಲ್ ಬೆಸ್ಟ್ ಪ್ಲೇಸ್. ನಿತಿನ್ ಕೃಷ್ಣಮೂರ್ತಿ ತಲೆಯಲ್ಲಿ ಏನ್ ಇಟ್ಕೊಂಡು ಸಿನಿಮಾ ಬರೆದಿರುತ್ತಾರೋ, ನಂಗೆ ಗೊತ್ತಿಲ್ಲ. ಅಂದ್ರೆ 160- ರೂಪಾಯಿ ಕೊಟ್ಟು ನೋಡಿದ್ದಕ್ಕಂತೂ ನಯಾ ಪೈಸಾ ಮೋಸ ಮಾತ್ರ ಆಗೋಲ್ಲ. ಹುಡುಗರ ಹಾಸ್ಟಲ್ ಅಂದ್ಮೇಲೆ ಪಕ್ಕದಲ್ಲಿ ಹುಡುಗಿಯರ ಹಾಸ್ಟೆಲ್, ಅಲ್ಲೊಂದು ಲವ್ ಸ್ಟೋರಿ ಇರಬೇಕು. ರೂಮ್ ಪೂರ್ತಿ ಸಿನಿಮಾ ಪೋಸ್ಟರ್. ಟಾಯ್ಲೆಟ್ ತುಂಬಾ ಹುಡುಗಿಯರ ಹೆಸರು. ಈ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಅಂದ್ರೆ ಎಲ್ಲಿ ನೋಡಿದರೂ ವಾರ್ಡನ್ ಮುಖ, ನನ್ನ ನೋಡಿ ನಿದ್ರೆ ಬರುತ್ತೆ, ನನ್ನ ನೋಡಿ ಕಕ್ಕ ಬರುತ್ತೆ! ನಾನು ಹೇಳ್ತಿರೋದಲ್ಲ ಈ ಹಾಸ್ಟೆಲ್ ಪುಂಡರು ಎಲ್ಲಡೆ ಅದನ್ನೇ ಬರೆದು ಕೊಂಡಿದ್ದಾರೆ.
ಇನ್ನು ಇದು ಭಾಗ 1 ಮಾತ್ರ ...ಕಥೆ ಮಾಡ್ಬೇಕು ಅಂತ ಸಿಕ್ಕಾಪಟ್ಟೆ ಆಸೆ ಕನಸು ಕಟ್ಟಿಕೊಂಡಿರುವ ಹುಡುಗ ಎಕ್ಸಾಂ ಹಿಂದಿನ ದಿನ 5 ನಿಮಿಷ ವಿಡಿಯೋ ಮಾಡಲು ಹೋಗಿ, 136 ನಿಮಿಷ ಮಾಡಿಟ್ಟಿದ್ದಾನೆ. ಕೈಯಲ್ಲೊಂದು ಪಾಪ್ ಕಾರ್ನ್ ಇಟ್ಕೊಂಡು ಸಿನಿಮಾ ನೋಡೋಕೆ ಮಜಾ ಇದೆ. ಆದರೆ ಮಧ್ಯ ಮಧ್ಯ ರಮ್ಯಾ ನೋಡಿ ಖುಷಿಗಿಂತ ಬೇಜಾರ್ ಆಗೋಯ್ತು ಗುರು. ಮೋಹಕ ತಾರೆ ಸಕ್ಕತ್ತಾಗಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಆದರೆ ಏನೋ ಲಿಂಕ್ ಮಿಸ್ ಆಗ್ತಿದೆ ಅನ್ಸುತ್ತೆ. ಆಮೇಲೆ ಸಿನಿಮಾದಲ್ಲಿ ಅಷ್ಟೊಂದು ಸೀನ್‌ನಲ್ಲಿ ಕಾಣಿಸಿಕೊಂಡು, ಟ್ರೈಲರ್‌ನಲ್ಲಿ ಬೇಡ ಅಂತ ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಅರ್ಥ ಹುಡುಕಿದರೆ ಸಿಕ್ಕಿದ್ದು ಶೂನ್ಯ. ರಮ್ಯಾ ಸುಮ್ಮನೆ ಬಂದಿಲ್ಲ ಗುರು! ಈ ಶಾರ್ಟ್ ಸಿನಿಮಾ ಎಡಿಟ್ ಮಾಡಿದ ದೂದ್ ಪೇಡಾ ದಿಗಂತ್ ಮಸಾಲಾ ಇರಲಿ ಅಂತ ಅಲ್ಲಿ ಇಲ್ಲಿ ಸೇರಿಸಿರುವುದು. ಸಿಂಕ್ ಆಗಿಲ್ಲ. ಆದರೂ ಪರ್ವಾಗಿಲ್ಲ ನೋಡ್ಬೋದು. ಕಮ್‌ಬ್ಯಾಕ್‌ಗೆ ಒಳ್ಳೆ ಸಿನಿಮಾ ಆಯ್ಕೆ ಮಾಡಿಕೊಳ್ಳಿ ಮೇಡಂ ಅಂತ ಹೇಳ್ಬೋದು.
ಅಜಿತ್, ಮಂಜು, ಅಭಿ, ರಾಣಾ, ಪ್ರಸನ್ನ ಮತ್ತು ಕಾಶಿ ತರ ಸ್ನೇಹಿತರು ಇದ್ರೆ ಖಂಡಿತಾ ಎಕ್ಸಾಂನಲ್ಲಿ ಫೇಲ್ ಆದ್ರೂ ಫೀಲ್ ಆಗೋಲ್ಲ. 'ತುಂಗಾ ಬಾಯ್ಸ್ ಹಾಸ್ಟೆಲ್' ವಾರ್ಡನ್ ರಮೇಶ್ ಕುಮಾರ್ ಪಾತ್ರ ಮಾಡಿರೋದು ಮಂಜುನಾಥ್ ನಾಯಕ್. ಏನ್ ಗುರು, ಆರಂಭದಲ್ಲಿ ನಿಮ್ಮ ಕ್ಯಾರೆಕ್ಟರ್ ಇರಿಟೇಟ್ ಆಗುತ್ತಿತ್ತು. ಆದರೆ ಎಡಿಟಿಂಗ್‌ನಲ್ಲಿ ನೀವೇ ಬೆಸ್ಟ್ ಅನ್ಸಿತ್ತು. ಕಾಲೇಜ್ ಸೀನಿಯರ್ ಅಗಿ ನಿರ್ದೇಶಕರೇ ಕಾಣಿಸಿಕೊಂಡಿದ್ದು ಕೂಲ್ ಆಗಿತ್ತು. ಜೀನಿ, ಎಕೋ ಮತ್ತು ಇನ್ನೊಬ್ರು ಇದ್ರೂ ಅವ್ರು ಹೆಸರಿಗಿಂತ ಲೇಟ್ ಮನುಷ್ಯ ಅಂತಲೇ ನೆನಪು. ಆಗಾಗ ಬರ್ತಿದ್ರೂ ಈ ಮೂವರ ಕಾಂಬಿನೇಷನ್ ಕ್ರೇಜಿಯಾಗಿದೆ. ಇನ್ನು ರಿಷಬ್ ಶೆಟ್ಟಿ ಮತ್ತು ಪವನ್ ಕುಮಾರ್ ಸೀನಿಯರ್ಸ್ ಆಗಿ ಹಾಸ್ಟಲ್ ಹಿಡನ್ ಜಾಗದಿಂದ ಎಂಟ್ರಿ ಕೊಟ್ಟು ಕೊಂಚ ತಮಾಷೆ ಮಾಡುತ್ತಾರೆ. ಕುಡುಕನ ಪಾತ್ರ ಮಾಡಿದ್ರೂ ಫನ್ ಇದೆ.
ಇನ್ನು ಕಥೆ ಏನಿದೆ? ಇಷ್ಟೊಂದು ಬಿಲ್ಡಪ್ ಯಾಕೆ ಅಂತ ಕೇಳಿದ್ರೆ ಉತ್ತರ ಕೊಡೋದು ಕಷ್ಟ ಬಿಡಿ. ಸರ್ ಥಿಯೇಟರ್‌ನಲ್ಲಿ ಓಡ್ತಿದೆ. ಎರಡನೇ ಭಾಗ ಬೇರೆ ಬರ್ಬೇಕು. ಅಲ್ಲದೆ ಈಗ ವಾರ್ಡನ್ ಬಗ್ಗೆ ಚಿಂತೆ ಬೇರೆ ಶುರುವಾಗಿದೆ ನನಗೆ!