ಚಿತ್ರ ವಿಮರ್ಶೆ: ಮಂಗಳವಾರ ರಜಾದಿನ
ಒಳ್ಳೆಯ ಕಲಾವಿದರು ಸಿಕ್ಕಿದರೆ ಸಿನಿಮಾ ಹೇಗೆ ಚೆಂದ ಕಾಣಿಸುತ್ತದೆ ಅನ್ನುವುದಕ್ಕೆ ಸಾಕ್ಷಿ ಮಂಗಳವಾರ ರಜಾದಿನ.
ರಾಜೇಶ್ ಶೆಟ್ಟಿ
ಚಂದನ್ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ ಎಂಥಾ ನಟರೆಂದರೆ ಕೆಲವು ದೃಶ್ಯಗಳಲ್ಲಿ ನೋಡುಗರನ್ನು ನೋಡ್‌ನೋಡ್ತಾ ಕರಗಿಹೋಗುವಂತೆ ಮಾಡಿಬಿಡುತ್ತಾರೆ. ಹಾಗೇ ಕಳೆದುಹೋಗೋಣ ಅನ್ನಿಸಿದ ಕೆಲವೇ ಕ್ಷಣದಲ್ಲಿ ಬರುವ ಮತ್ತೊಂದು ದೃಶ್ಯ ನೋಡುಗನ ಮೇಲೆ ಮಂಜುಗಡ್ಡೆ ಹಾಕಿ ಎಬ್ಬಿಸಿ ಕೂರಿಸುತ್ತದೆ ಅನ್ನುವುದು ವಿಷಾದಕರ. ಅಷ್ಟುಲೈವ್ಲಿ ಮತ್ತು ಇಷ್ಟುನೋವು.
ಕ್ಷಾೌರಿಕ ಹುಡುಗನೊಬ್ಬನಿಗೆ ಸುದೀಪ್‌ಗೆ ಹೇರ್‌ಕಟ್ ಮಾಡಿಸಬೇಕು ಅನ್ನುವುದು ಕನಸು. ಪಾಪ, ಒಳ್ಳೆಯ ಹುಡುಗ. ಸಿಗರೇಟ್ ಸೇದಲ್ಲ, ಎಣ್ಣೆಹಾಕಲ್ಲ, ಅಪ್ಪನಿಗೆ ಎದುರು ಮಾತಾಡಲ್ಲ. ದೇವರಂಥಾ ಹುಡುಗ. ಸುದೀಪ್ ಒಂದೇ ವೀಕ್‌ನೆಸ್ಸು. ಅವನಿಗೆ ದೇವರು ಒಂದು ಕಷ್ಟಕೊಡ್ತಾನೆ ಕೊಡ್ತಾನೆ ಕನಸು ನನಸಾಗುವ ವೇಳೆಗಾಗಲೇ ತುಂಬಾ ಲೇಟಾಗಿರುತ್ತದೆ. ಲೈಟು ಬಿದ್ದಾಗಿರುತ್ತದೆ. ಅಲ್ಲಿಯವರೆಗೆ ಆ ಒಳ್ಳೆಯ ಹುಡುಗನ ಸಾಹಸಗಾಥೆಗಳು ಜರುಗುತ್ತಿರುತ್ತವೆ.
ತಾರಾಗಣ: ಚಂದನ್ ಆಚಾರ್, ಲಾಸ್ಯ ನಾಗರಾಜ್, ಗೋಪಾಲಕೃಷ್ಣ ದೇಶಪಾಂಡೆ, ಜಹಾಂಗೀರ್, ಹರಿಣಿ, ರಜನಿಕಾಂತ್
ನಿರ್ದೇಶಕ: ಯುವಿನ್
ಛಾಯಾಗ್ರಹಣ: ಉದಯ್ ಲೀಲಾ
ಸಂಗೀತ ನಿರ್ದೇಶಕ: ರಿತ್ವಿಕ್ ಮುರಳೀಧರ್
ರೇಟಿಂಗ್- 3
ಈ ಕತೆಯನ್ನು ನಿರ್ದೇಶಕರು ನೇರವಾಗಿ ಹೇಳುವುದಿಲ್ಲ. ಅದಕ್ಕೊಬ್ಬ ಸೂತ್ರಧಾರನನ್ನು ಕರೆದುಕೊಂಡು ಬರುತ್ತಾರೆ. ಆತನ ಕತೆ ಕೇಳುವುದಕ್ಕೆ ಅವನು ಬಯಲಲ್ಲಿ ಸ್ನಾನ ಮಾಡುವುದು ಕೂಡ ನೋಡಬೇಕಾಗಿ ಬರುತ್ತದೆ. ಆ ಸ್ನಾನದ ದೃಶ್ಯ ಯಾಕಿಟ್ಟರು, ಯಾರಿಟ್ಟರು.. ಎಲ್ಲಾ ದೈವ ಲೀಲೆ. ತುಂಬಾ ಲೈವ್ಲಿಯಾಗುವ ಹೋಗುವ ಕಥೆ ಆಮೇಲಾಮೇಲೆ ಕಿವಿಗೆ ಗಾಳಿ ನುಗ್ಗಿದ ಕರುವಿನಂತಾಗುತ್ತದೆ. ಎಲ್ಲಿಂದಲೋ ಶುರುವಾಗಿ ಎಲ್ಲೋ ತಲುಪುವ ಪಯಣದಲ್ಲಿ ನಗು ಅಳು ಬೇಸರ ಕೋಪ ಎಲ್ಲವೂ ಒಟ್ಟಾಗಿ ಆಕ್ರಮಿಸಿ ಕೊನೆಗೆ ಸುಸ್ತಾಗುತ್ತದೆ.
ನಿಮ್ಗೊತ್ತಾ..? ಮಂಗಳವಾರ ರಜಾದಿನ ಕತೆ ಹೊಳೆದದ್ದು ಕಟ್ಟಿಂಗ್ ಶಾಪ್‌ನಲ್ಲಿ
ಈ ಸಿನಿಮಾದ ಕಾನ್ಸೆಪ್ಟ್ ಚೆನ್ನಾಗಿದೆ. ಆದರೆ ಅದನ್ನು ನಿರೂಪಿಸಿರುವ ರೀತಿ ಉಬ್ಬು ತಗ್ಗಿನ ಹಾದಿ. ಹೊಸತನ ಇದೆ ಎಂದುಕೊಂಡರೆ ಇದೆ. ಅದು ಯೋಚನೆಯಲ್ಲಿ ಮಾತ್ರ ಇದೆ. ಚಿತ್ರಕತೆಯಲ್ಲಿ ಮಾತ್ರ ಹಳೇ ಸಂಘರ್ಷಗಳೇ. ನಗಿಸಲೇಬೇಕು ಎನ್ನುವಂತೆ ಭಾಸವಾಗುವ ಡೈಲಾಗುಗಳು, ಕಷ್ಟಕೊಡುವ ಮಾರ್ಟಿನ್ನನ ಓವರ್ ಎಕ್ಸ್‌ಪ್ರೆಷನ್ನುಗಳು, ಕೊಡಬೇಕಾದ ಗಮನ ಕೊಡದೆ ಚೆಲ್ಲಾಪಿಲ್ಲಿಯಾದ ತೆಳುವಾದ ದೃಶ್ಯಗಳು ಹೊರತುಪಡಿಸಿದರೆ ಇದೊಂದು ನೀಟ್ ಸಿನಿಮಾ. ಅದರಾಚೆ ಏನೂ ಹುಡುಕಬಾರದು. ಹುಡುಕಿದರೂ ಅತಿಯಾಸೆ ಇರಬಾರದು.
ಸುದೀಪ್ ಮೇಲೆ ಅಭಿಮಾನ,'ಮಂಗಳವಾರ ರಜಾದಿನ'; ಚಂದನ್ ಆಚಾರ್ ಸಂದರ್ಶನ