ಹಳ್ಳಿಯಲ್ಲೇ ಮೊದಲ ಬಾರಿಗೆ ಪ್ಯಾಂಟು ಧರಿಸಿದವನ, ಹಳ್ಳಿಯಲ್ಲೇ ಮೊದಲು ಸರ್ಕಾರಿ ಕೆಲಸ ಪಡೆದವನ, ಹಳ್ಳಿಯೇ ಅಚ್ಚರಿಗೊಳ್ಳುವಂತೆ ಪಕ್ಕದ್ಮನೆ ಹುಡುಗಿಯನ್ನು ಪ್ರೇಮಿಸಿ ನಗರ ಸೇರಿಕೊಳ್ಳುವವನ ಬದುಕಿನ ಹೋರಾಟದ ಕತೆ ಇದು.

ರಾಜೇಶ್‌ ಶೆಟ್ಟಿ

ಹಳ್ಳಿಯಲ್ಲೇ ಮೊದಲ ಬಾರಿಗೆ ಪ್ಯಾಂಟು ಧರಿಸಿದವನ, ಹಳ್ಳಿಯಲ್ಲೇ ಮೊದಲು ಸರ್ಕಾರಿ ಕೆಲಸ ಪಡೆದವನ, ಹಳ್ಳಿಯೇ ಅಚ್ಚರಿಗೊಳ್ಳುವಂತೆ ಪಕ್ಕದ್ಮನೆ ಹುಡುಗಿಯನ್ನು ಪ್ರೇಮಿಸಿ ನಗರ ಸೇರಿಕೊಳ್ಳುವವನ ಬದುಕಿನ ಹೋರಾಟದ ಕತೆ ಇದು. 80ರ ದಶಕದ ರೆಟ್ರೋ ಹೀರೋ ಗೆಟಪ್ಪಲ್ಲಿ ಕಾಣಿಸಿಕೊಳ್ಳುವ ಹೀರೋ ಕಾಲ ಕಳೆದಂತೆ ಒಂದರ ಹಿಂದೊಂದು ನಾಲ್ಕು ಮಕ್ಕಳಾದಂತೆ ಎಲ್ಲಾ ಮನುಷ್ಯರ ಥರಾನೇ ಆಗಿ ಹೋಗುತ್ತಾನೆ.

ಕತೆ ಇರುವುದು ಅಲ್ಲಿಯೇ. ದೈವಭಕ್ತನಾಗಿದ್ದ ಹೀರೋ ಹೆಣ್ಣು ಮಕ್ಕಳು ಹುಟ್ಟಿದ ಮೇಲೆ ನಾಸ್ತಿಕನಾಗುತ್ತಾನೆ. ಹೆಣ್ಣು ಮಕ್ಕಳು ಮದುವೆ ವಯಸ್ಸಿಗೆ ಬಂದರೂ ಏನೂ ತಲೆ ಕೆಡಿಸಿಕೊಳ್ಳದೆ ಟಿವಿ ನೋಡಿಕೊಂಡು ಆರಾಮಾಗಿ ಇರುತ್ತಾನೆ. ಇರುವ ಒಬ್ಬನೇ ಒಬ್ಬ ಕೆಲಸ ಇಲ್ಲದ ವಂಶೋದ್ಧಾರಕ ಮಗನಿಗೆ ಸಿಟ್ಟು ಬರದೇ ಇರುತ್ತದೆಯೇ. ಅಲ್ಲಿಂದ ತಂದೆ- ಮಕ್ಕಳ ಕದನ ಕುತೂಹಲ ಆರಂಭ. ತಂದೆ- ಮಕ್ಕಳ ಬಾಂಧವ್ಯದ ಕತೆ ಸಾರುವ ಈ ಸಿನಿಮಾದಲ್ಲಿ ತಮಾಷೆ ಇದೆ, ಪ್ರೇಮವಿದೆ, ವಿಷಾದವಿದೆ, ತ್ಯಾಗವಿದೆ, ಭಾರವಾದ ನಿಟ್ಟುಸಿರುಗಳೂ ಇವೆ.

ಚಿತ್ರ: ಫೋರ್‌ವಾಲ್ಸ್‌

ನಿರ್ದೇಶನ: ಎಸ್. ಎಸ್. ಸಜ್ಜನ್

ತಾರಾಗಣ: ಅಚ್ಯುತ್‌ ಕುಮಾರ್‌, ದತ್ತಣ್ಣ, ಸುಜಯ್‌ ಶಾಸ್ತ್ರಿ, ಡಾ.ಪವಿತ್ರಾ, ಭಾಸ್ಕರ್‌ ನೀನಾಸಂ, ಡಾ.ಜಾನ್ವಿಜ್ಯೋತಿ, ಶ್ರೇಯಾ ಶೆಟ್ಟಿ, ಅಂಚಲ್‌

ರೇಟಿಂಗ್‌: 3

ಕೊಂಚ ಉದ್ದವಾಗಿಯೂ ಸ್ವಲ್ಪ ತಾಳ್ಮೆ ಬೇಡುವಂತೆಯೂ ಇರುವ ಕತೆ ಹೇಳುವ ಶೈಲಿ ಚಿತ್ರದ ಎಡರುತೊಡರು. ಅಂತಿಮವಾಗಿ ತಂದೆಯ ಪಾತ್ರದ ವಿಶ್ವರೂಪ ಕಾಣಿಸಿಕೊಳ್ಳುವುದೇ ಈ ಸಿನಿಮಾದ ಶಕ್ತಿ ಮತ್ತು ಭಕ್ತಿ. ಅಲ್ಲಿಯವರೆಗೆ ಸುಮ್ಮನೆ ಅಚ್ಯುತ್‌ ಕುಮಾರ್‌ ಬದುಕನ್ನು ಸುಮ್ಮನೆ ನೋಡುತ್ತಾ ಇದ್ದುಬಿಡುವುದಷ್ಟೇ. ಈ ಚಿತ್ರದುದ್ದಕ್ಕೂ ಅಚ್ಯುತ್‌ ಕುಮಾರ್‌, ಸುಜಯ್‌ ಶಾಸ್ತ್ರಿ ಕಾಣಿಸಿಕೊಂಡು ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ. 

Film Review: ಲವ್ ಮಾಕ್ಟೇಲ್ 2

ನಾಲ್ವರು ಮಕ್ಕಳ ಪಾತ್ರಧಾರಿಗಳಾದ ಭಾಸ್ಕರ್‌ ನೀನಾಸಂ, ಡಾ.ಜಾನ್ವಿಜ್ಯೋತಿ, ಶ್ರೇಯಾ ಶೆಟ್ಟಿ, ಅಂಚಲ್‌ ಗಮನ ಸೆಳೆಯುತ್ತಾರೆ. ಈ ಚಿತ್ರದ ಅಚ್ಚರಿ ಎಂದರೆ ಸಂಗೀತ ನಿರ್ದೇಶಕ ಆನಂದ್‌ ರಾಜವಿಕ್ರಮ್‌. ಅವರ ಎರಡು ಹಾಡುಗಳು ಇಂಪಾಗಿ ಕೇಳಿಸುತ್ತದೆ ಮತ್ತು ಸಂಗೀತ ನಿರ್ದೇಶಕ ಯಾರು ಎಂದು ಹುಡುಕುವಂತೆ ಮಾಡುತ್ತದೆ. ಅದ್ಭುತವಾಗಿರಬಹುದು ಎಂದು ನಿರೀಕ್ಷೆ ಮಾಡಿದ್ದ ದಾರಿ ಹೋಗ್ತಾ ಹೋಗ್ತಾ ಬೇಸರ ಹುಟ್ಟಿಸುವ ಕ್ಷಣಗಳನ್ನು ದಾಟಿ ಹೋದರೆ ಸಿನಿಮಾಗೊಂದು ಅರ್ಥ ಸಿಗುತ್ತದೆ.