Asianet Suvarna News Asianet Suvarna News

ಮನೋರಥಂಗಳ್: ಅಪ್ಪಟ ದೇಸಿ ಸೊಗಡಿನ ದೃಶ್ಯಕಾವ್ಯ

ಝೀ5ನಲ್ಲಿ ಸ್ಟ್ರೀಮ್ ಆಗುತ್ತಿರುವ ಮನೋರಥಂಗಳ್ ಮನ ಮುಟ್ಟುವ ಕಥೆಗಳ ದೃಶ್ಯಕಾವ್ಯ. ಒಂಬತ್ತು ಕಥೆಗಳಿರೋ ಈ ಸಂಕಲನದಲ್ಲಿ ಮಲಯಾಳಂ ಸಾಹಿತ್ಯ ದಿಗ್ಗಜ ಎಂ.ಟಿ.ವಾಸುದೇವ ನಾಯರ್ ಅವರ ಮನಮೋಹಕ ಕಥೆಗಳಿವೆ. 

Malayalam writer mt vasudeva nair penned stories Manorathangal kamal hassan zee5 streaming
Author
First Published Sep 3, 2024, 4:30 PM IST | Last Updated Sep 3, 2024, 4:58 PM IST

- ವೀಣಾ ರಾವ್, ಕನ್ನಡಪ್ರಭ

ಮಲೆಯಾಳಂ ಸಾಹಿತ್ಯದಲ್ಲಿ ಎಂ.ಟಿ ವಾಸುದೇವ ನಾಯರ್ ಬಹಳ ಪ್ರಸಿದ್ಧಿ. ಸಣ್ಣಕತೆಗಳು ಕಾದಂಬರಿ ಹೀಗೆ ಎಲ್ಲ ಪ್ರಾಕಾರಗಳಲ್ಲೂ ಕೈಯಾಡಿಸಿರುವ ಇವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳು ಒಂದೆರಡಲ್ಲ. ಮಲೆಯಾಳಂ ಸಾಹಿತ್ಯದಲ್ಲಿ ಇವರ ಸೇವೆಯನ್ನು ಗುರುತಿಸಿ ಜ್ಞಾನಪೀಠ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿ ಸನ್ಮಾನಗಳು ಇವರಿಗೆ ಮುಡಿಗೇರಿವೆ. ಒಂಬತ್ತು ಕಥೆಗಳನ್ನು ಆಧರಿಸಿದ ಮನೋರಥಗಳ್ ಎಂಬ ಇವರ ಸಂಕಲನವನ್ನು ವಿವಿಧ ಪಳಗಿದ ನಿರ್ದೇಶಕರ ನಿರ್ದೇಶನದಲ್ಲಿ ಕಿರು ಚಿತ್ರಗಳಾಗಿ ಝೀ 5 ನಲ್ಲಿ ಬಿಡುಗಡೆಯಾಗಿದೆ.

ಅಪ್ಪಟ ದೇಸೀ ಸೊಗಡಿನ ಕತೆಗಳು, ಕೇರಳದ ಸುಂದರ ಪರಿಸರ, ಆ ಹಸಿರು, ಆ ನದಿಗಳು, ಬೆಟ್ಟ ಗುಡ್ಡ, ಸಮುದ್ರ, ಪ್ರತಿಭಾವಂತ ಕಲಾವಿದರ ಅಭಿನಯ, ಮನಮುಟ್ಟುವ ಕತೆಗಳು ಎಲ್ಲವೂ ಪ್ರೇಕ್ಷಕನನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಯಾವ ಕತೆಯಲ್ಲೂ ಅತಿಶಯ ಅಭಿನಯ ಇಲ್ಲದೆ, ಅತಿಯಾದ ಭಾವಾಭಿವ್ಯಕ್ತಿ ಇಲ್ಲದೆ ಸರಳವಾಗಿ ಮನೋಜ್ಞವಾಗಿ ಎಲ್ಲ ಕಲಾವಿದರೂ ಅಭಿನಯಿಸಿದ್ದಾರೆ. ಒಟ್ಟು ಒಂಬತ್ತು ಕತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಒಲವಮ್ ತೀರವಂ, ಕಡುಗನ್ನವ, ಕಜೆ಼ಚ್ಚಾ, ಶಿಲಾಲಿಖಿತಮ್, ವಿಲ್ಪನಾ, ಶೆರ್ಲಾಕ್, ಕಾದಲ್ ಕಟ್ಟು, ಅಭಯಂ ತೇಂಡಿ ವಿಂಡುಂ, ಸ್ವರ್ಗಂ ತುರಕ್ಕನ ಸಮಯಂ ಈ ಒಂಬತ್ತು ಕತೆಗಳು ನಿಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಪ್ರಕೃತಿಯ ರಮ್ಯ ತಾಣದಲ್ಲಿ ಈಜಾಡಿಸುತ್ತದೆ. ಪ್ರಿಯದರ್ಶನ್, ರಂಜಿತ್, ಶ್ಯಾಮಪ್ರಸಾದ್, ಅಶ್ವತಿ ವಿ ನಾಯರ್, ಮಹೇಶ್ ನಾರಾಯಣನ್, ಜಯರಾಜ್, ಸಂತೋಷ್ ಸಿವನ್ ಮತ್ತು ರತೀಶ್ ಅಂಬಟ್ ಇವರಂಥ ಮಹಾನ್ ನಿರ್ದೇಶಕರು ನಿರ್ದೇಶಿಸಿರುವ ಈ ಕಿರುಚಿತ್ರಗಳು ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ.

 

Malayalam writer mt vasudeva nair penned stories Manorathangal kamal hassan zee5 streaming

ಎಂ.ಟಿ ನಾಯರ್ ಅವರ ಪುತ್ರಿ ಅಶ್ವತಿ ನಾಯರ್ ಸಹ ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. 20 ಕತೆಗಳನ್ನು ಆಯ್ಕೆ ಮಾಡಿ, ಅದನ್ನು ಹತ್ತಕ್ಕಿಳಿಸಿ ನಂತರ ಒಂಬತ್ತು ಕತೆಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಅಶ್ವತಿ ನಾಯರ್ ಎಲ್ಲ ಕತೆಗಳೂ ಮಹಿಳಾ ಪ್ರಧಾನವಾಗಿಯೇ ಇರಬೇಕೆಂದು ಬಯಸಿದ್ದರು. ಆದರೆ ನಾಯಕ ಪ್ರಧಾನ ಕತೆಗಳೂ ಬಹಳ ಪರಿಣಾಮಕಾರಿಯಾಗಿ ಇರುವುದನ್ನು ಮನಗೊಂಡು, ನಾಯಕಿ-ನಾಯಕ ಪ್ರಧಾನವಾಗಿದ್ದ ಒಂಬತ್ತು ಕತೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರೇಮ, ಕಾಮ, ಆಸೆ, ದುರಾಸೆ, ನಿರಾಸೆ, ಸೇಡು, ಕಾಯುವಿಕೆ ಮುಂತಾದ ವಿವಿಧ ಭಾವಗಳು ಇರುವ ಈ ಕತೆಗಳು ಚಿತ್ರ ನೋಡಿದ ಮೇಲೂ ಬಹುಕಾಲ ನಮ್ಮನ್ನು ಕಾಡುತ್ತದೆ. 

ಪ್ರತಿ ಕತೆ ಅಥವಾ ಎಪಿಸೋಡ್ ಆರಂಭವಾಗುವಾಗ ಖ್ಯಾತ ನಟ ಕಮಲಹಾಸನ್ ಈ ಕತೆಗಳ ಕಿರು ಪರಿಚಯ ಮಾಡಿಕೊಡುತ್ತಾರೆ. ಅರವತ್ತು ಎಪ್ಪತ್ತರ ದಶಕದಿಂದ ಹಿಡಿದು 2000 ದವರೆಗಿನ ಕಾಲಮಾನದ ಕತೆಗಳಿವು.  ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ಪಾರ್ವತಿ ಮೆನನ್, ಮಧುಬಾಲಾ, ದುರ್ಗಾ ಕೃಷ್ಣಾ, ಫಹಾದ ಫಾಸಿಲ್, ಅಸಿಫ್ ಆಲಿ, ಶಾಂತಿಕೃಷ್ಣ, ನಾದಿಯಾ, ಆನ್ ಅಗಸ್ಟಿನ್, ಇಂದ್ರಜಿತ್ ಸುಕುಮಾರನ್, ನೆಡಮುಡಿ ವೇಣು ಇನ್ನೂ ಅನೇಕ ಪ್ರಸಿದ್ಧ ಕಲಾವಿದರು ಈ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

ತಾನು ಪ್ರೀತಿಸಿದ ಹೆಣ್ಣನ್ನು ಪಡೆಯಲಾಗದೆ ಪರಿತಪಿಸುವ ಬಾಪುಟ್ಟಿಯ ಕತೆ ಒಲವಂ ತೀರವಂ, ತನ್ನ ತಂದೆಯ ಇನ್ನೊಬ್ಬ ಹೆಂಡತಿಗೆ ಹುಟ್ಟಿರುವ  ಮಗಳು ಅರ್ಥಾತ್ ತನ್ನ ಬಲ ಅಕ್ಕನನ್ನು ಹುಡುಕಿಕೊಂಡು ಹೋಗುವ ಪ್ರೊಫೆಸರ್ ನ ಕಥೆ ಕಡುಗನ್ನವ, ಸಂಗೀತವೇ ತನ್ನ ಉಸಿರಾದರೂ ತನ್ನ ಗಂಡನಿಗೆ ಅದರ ಬಗ್ಗೆ ಕಿಂಚತ್ ಆಸಕ್ತಿ ಇಲ್ಲದೆ ಬದುಕು ನರಕವಾಗಿ ಕೊನೆಗೆ ವಿಚ್ಚೇದನಕ್ಕೆ ಯೋಚಿಸುವ ಹೆಣ್ಣಿನ ಕತೆ ಕಜೆ಼ಚ್ಚಾ, ಶಿಲಾಶಾಸನಗಳನ್ನು ಓದಿ ಅಭ್ಯಾಸ ಮಾಡಿರುವ ಇತಿಹಾಸಜ್ಞನ ಗತಕಾಲದ ಪ್ರೇಮಕಥೆಯನ್ನು ತೋರಿಸುವ ಶಿಲಾಲಿಖಿತಮ್, ಹಳೆಯ ವಸ್ತುಗಳನ್ನು ಮಾರಿ ಬಿಡಲು ಹೇಳುವ ವಿಚಿತ್ರ ಸ್ವಭಾವದ ಗಂಡನಿಂದ ಬೇಸತ್ತ ಗೀತಾ ಪಾರೇಖ್ ಎಂಬ ಹೆಣ್ಣಿನ ಕತೆ ವಿಲ್ಪನಾ, ತಾಯ್ನಾಡಿನಿಂದ ನೌಕರಿಗಾಗಿ ಅಮೆರಿಕಕ್ಕೆ ಹೋಗುವ ಬಾಲುವಿನ ಕತೆ ಶೆರ್ಲಾಕ್, ಹೆಂಡತಿಯಿದ್ದೂ ಬೇರೊಂದು ಹೆಣ್ಣನ್ನು ಪ್ರೀತಿಸಿ, ಹೆಂಡತಿಯನ್ನು ನಿರ್ಲಕ್ಷಿಸುವ ಕೇಶವನ ಕತೆ ಕಾದಲ್ ಕಟ್ಟು, ದುರ್ಮರಣಕ್ಕೀಡಾದ ಪ್ರೇಯಸಿಯನ್ನು ನೆನೆದು ಕೊರಗುವ ಅಭಯಂ ತೇಂಡಿವಿಂಡುಂ, ಹುಟ್ಟಿದ ಮನುಷ್ಯ ಸಾಯಲೇ ಬೇಕು ಎಂಬ ತತ್ವವಿರುವ ಕಥೆ ಸ್ವರ್ಗಂ ತುರಕ್ಕನ ಸಮಯಂ. ಯಾವುದೇ ಅಬ್ಬರವಿಲ್ಲದೆ ಸುಂದರವಾದ ಪರಿಸರದಲ್ಲಿ ಅಚ್ಚುಕಟ್ಟಾಗಿ ನಿರ್ದೇಶಿಸಿರುವ ಈ ಚಿತ್ರಗಳು ನಮ್ಮ ಮನಸೂರೆಗೊಳ್ಳುತ್ತವೆ. ಎಲ್ಲವೂ ಉತ್ಕೃಷ್ಟ ಕಲಾಕೃತಿಗಳೇ ಆಗಿವೆ. ಕಲಾವಿದರ ನೈಜ ಅಭಿನಯ ಕಲಾಕೃತಿಗೆ ಚಿನ್ನದ ಚೌಕಟ್ಟು ಹಾಕಿದಂತೆ ಚಿತ್ತಾಕರ್ಷಕ. ಕೇರಳದ ನಿಸರ್ಗ ನಮ್ಮ ಕಣ್ಮನ ತಣಿಸುತ್ತದೆ.

 

Latest Videos
Follow Us:
Download App:
  • android
  • ios