ಭಾರತ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ, CERT-In, WhatsApp ವೆಬ್ ಮತ್ತು ಡೆಸ್ಕ್‌ಟಾಪ್ ಬಳಕೆದಾರರಿಗೆ ಹೈ ಅಲರ್ಟ್ ನೀಡಿದ್ದು, ಸ್ನೇಹಿತರು ಅಥವಾ ಕುಟುಂಬದವರಿಂದ ಅನುಮಾನಾಸ್ಪದ ಫೈಲ್‌ಗಳು ಬಂದರೆ, ಅದನ್ನು ಡೌನ್ ಲೋಡ್ ಮಾಡುವ ಮುನ್ನ ಎಚ್ಚರವಹಿಸಿ, ಇಲ್ಲಾಂದ್ರೆ ಹ್ಯಾಕ್ ಆಗೋದು ಖಚಿತಾ.
ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ವೆಬ್ ಬಳಸುತ್ತಿರುವವರೇ ಎಚ್ಚರ
ನೀವು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ವೆಬ್ ಅಥವಾ ವಾಟ್ಸಾಪ್ ಡೆಸ್ಕ್‌ಟಾಪ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಭಾರತದ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ, CERT-In,, ಬಹಳ ಗಂಭೀರ ಎಚ್ಚರಿಕೆ ನೀಡಿದೆ. ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಬಳಕೆದಾರರನ್ನು ನೇರವಾಗಿ ಗುರಿಯಾಗಿಸಿಕೊಂಡು ಅಂತರ್ಜಾಲದಲ್ಲಿ ದೊಡ್ಡ ಅಪಾಯಕಾರಿ ಮಾಲ್‌ವೇರ್ ಅಭಿಯಾನ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ವೈರಸ್ ಅಪರಿಚಿತ ಸಂಖ್ಯೆಯಿಂದ ಬರುತ್ತಿಲ್ಲ, ಆದರೆ ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳ ಖಾತೆಗಳಿಂದ ಬರುತ್ತಿದೆ.
ಸ್ನೇಹಿತರ ಹೆಸರಿನಲ್ಲಿ ವಂಚನೆ
ಹ್ಯಾಕರ್ಸ್ ಏನು ಮಾಡುತ್ತಾರೆ ಅಂದರೆ, ಮೊದಲಿಗೆ ನಿಮಗೆ ವಾಟ್ಸಪ್ ಮೆಸೇಜ್ ಮಾಡುತ್ತಾರೆ. ಈ ಫೈಲ್ ವಿಷುಯಲ್ ಬೇಸಿಕ್ ಸ್ಕ್ರಿಪ್ಟ್ ಸ್ವರೂಪದಲ್ಲಿರುತ್ತದೆ. ಮೆಸೇಜ್ ಅಪರಿಚಿತ ನಂಬರ್ ಗಳಿಂದ ಅಲ್ಲ, ಬದಲಾಗಿ ನಿಮ್ಮ ಆಪ್ತ ಸ್ನೇಹಿತ ಅಥವಾ ಪರಿಚಯಸ್ಥರಿಂದ ಅಥವಾ ನಿಮ್ಮ ಕಾಂಟಾಕ್ಟ್ ಲಿಸ್ಟಲ್ಲಿ ಇರುವವರಿಂದ ಬಂದಿರುವಂತೆ ಕಾಣಿಸುತ್ತದೆ. ಹಾಗಾಗಿ ಜನರು ಅನುಮಾನವಿಲ್ಲದೆ ಫೈಲ್ ಡೌನ್‌ಲೋಡ್ ಮಾಡಿ ಓಪನ್ ಮಾಡುತ್ತಾರೆ. ಆ ಮೂಲಕ ಅವರು ಹ್ಯಾಕರ್‌ಗಳ ಬಲೆಗೆ ಬೀಳುತ್ತಾರೆ. ಸೈಬರ್ ಭದ್ರತಾ ಸಂಸ್ಥೆಗಳಾದ ಕ್ಯಾಸ್ಪರ್ಸ್ಕಿ ಮತ್ತು ಸೆಕ್ಯೂರ್‌ಲಿಸ್ಟ್‌ನ ವರದಿಗಳ ಆಧಾರದ ಮೇಲೆ, ಹ್ಯಾಕರ್‌ಗಳು ಮೊದಲು ಬಳಕೆದಾರರ ವಾಟ್ಸಾಪ್ ಅಕೌಂಟ್ ಹ್ಯಾಕ್ ಮಾಡುತ್ತಾರೆ ಎಂದು CERT-In ವರದಿ ಮಾಡಿದೆ. ನಂತರ ಯಾರನ್ನು ಹ್ಯಾಕ್ ಮಾಡಿದ್ದಾರೋ, ಅವರ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ, ಅವರ ಕುರಿತು ದುರುದ್ದೇಶ ಹೊಂದಿದ ಮೆಸೇಜ್ ಮಾಡುವ ಸಾಧ್ಯತೆ ಕೂಡ ಇದೆ.
ಈ ವೈರಸ್ ನಿಮ್ಮ ಕಂಪ್ಯೂಟರ್, ಡಾಟಾ ಎಲ್ಲವನ್ನೂ ಹ್ಯಾಕ್ ಮಾಡಬಹುದು
ಯೂಸರ್ಸ್ ಆಕಸ್ಮಿಕವಾಗಿ ಈ ಅನುಮಾನಾಸ್ಪದ ಫೈಲ್ ಅನ್ನು ತಮ್ಮ ಕಂಪ್ಯೂಟರ್‌ನಲ್ಲಿ ಚಲಾಯಿಸಿದರೆ, ಹ್ಯಾಕರ್‌ಗಳು ಆ ಯೂಸರ್ ಗಳ ಸಂಪೂರ್ಣ ಡಿವೈಸ್ ನ ರಿಮೋಟ್ ಆಕ್ಸೆಸ್ ಅಂದರೆ, ಕಂಪ್ಯೂಟರ್ ನ ಸಂಪೂರ್ಣ ಕಂಟ್ರೋಲ್ ಪಡೆಯುತ್ತಾರೆ. ನಂತರ ಸೈಬರ್ ಅಪರಾಧಿಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುವ ಲಾಗಿನ್ ಐಡಿಗಳು, ಪಾಸ್‌ವರ್ಡ್‌ಗಳು ಮತ್ತು ಬ್ಯಾಂಕ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು. ಇದಲ್ಲದೆ, ಈ ವೈರಸ್ ನಿಮ್ಮ ಸಂಪೂರ್ಣ ಸಿಸ್ಟಮ್ ಹಾನಿಗೊಳಿಸಬಹುದು, ನಿಮ್ಮ ಆಫೀಸ್ ನೆಟ್‌ವರ್ಕ್‌ನಾದ್ಯಂತ ಹರಡಬಹುದು ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ ಇತರ ಅಪಾಯಕಾರಿ ಸಾಫ್ಟ್‌ವೇರ್‌ಗಳನ್ನು ಸಹ ಇನ್’ಸ್ಟಾಲ್ ಮಾಡಬಹುದು, ಇದರಿಂದ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ.
ಸರ್ಕಾರ ಮುನ್ನೆಚ್ಚರಿಕೆ ಸಲಹೆ ನೀಡಿದೆ
ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗುವುದನ್ನು ತಪ್ಪಿಸಲು CERT-In ಬಳಕೆದಾರರಿಗೆ ಕೆಲವು ಸಲಹೆಗಳನ್ನು ನೀಡಿದೆ. ಮೊದಲನೆಯದಾಗಿ, ನೀವು WhatsApp ನಲ್ಲಿ ಅನಿರೀಕ್ಷಿತ ಅಟ್ಯಾಚ್ ಮೆಂಟ್ ಅಥವಾ ಫೈಲ್ ಸ್ವೀಕರಿಸಿದರೆ, ಅದು ನಿಮ್ಮ ಆತ್ಮೀಯ ಸ್ನೇಹಿತ ಅಥವಾ ಕುಟುಂಬದ ಸದಸ್ಯರಿಂದ ಬಂದಿದ್ದರೂ ಸಹ ಅದನ್ನು ತೆರೆಯಬೇಡಿ. ಯಾವುದೇ ಫೈಲ್ ವಿಚಿತ್ರ ಅಥವಾ ಅಸಾಮಾನ್ಯವೆಂದು ತೋರುತ್ತಿದ್ದರೆ, ಅದು ನಿಜವಾಗಿಯೂ ನಿಮ್ಮ ಸ್ನೇಹಿತರು ಕಳುಹಿಸುವವರೇ ಎಂದು ಖಚಿತಪಡಿಸಿಕೊಳ್ಳಲು ತಕ್ಷಣವೇ ಆ ಸ್ನೇಹಿತರಿಗೆ ಕರೆ ಮಾಡಿ ಅಥವಾ ಮೆಸೇಜ್ ಮಾಡಿ. ನಿಮಗೆ ಸಂಪೂರ್ಣವಾಗಿ ಖಚಿತವಾಗುವವರೆಗೆ ಯಾವುದೇ ಫೈಲ್ ಕ್ಲಿಕ್ ಮಾಡಬೇಡಿ.


