ಕುವೆಂಪುವನ್ನು ಹೀಗೆ ಓದಬೇಕು;'ಮಂಡ್ಯದಲ್ಲಿ ಕುವೆಂಪು ಬಗ್ಗೆ ಒಂದು ರೀತಿ ಪೊಸೆಸಿವ್ ಭಾವನೆ ಇತ್ತು!

ಮದುಮಗಳು ಕಾದಂಬರಿಗೆ 50 ವರ್ಷಗಳು ತುಂಬಿದಾಗ ಓದುಗನಾಗಿ ನಾನು ಏನು ಮಾಡಬಹುದು ಎಂದು ಯೋಚಿಸುತ್ತಲೇ ಇದ್ದೆ. ಕುವೆಂಪು ಕೃತಿಗಳ ಬಗ್ಗೆ ಹಿಂದೆ ನಾನೂ ಬರೆದಿರುವುದು, ಆ ಲೇಖನಗಳು ಅಲ್ಲಲ್ಲಿ ಉಲ್ಲೇಖಗೊಂಡಿರುವುದು ನಿಜವಾದರೂ ಈಗ ಅದೆಲ್ಲ ಕೆಲಸಕ್ಕೆ ಬಾರದ ಬರವಣಿಗೆಯೆನಿಸುತ್ತದೆ. ಈ ಭೂತವನ್ನೆಲ್ಲ ಬದಿಗೆ ಸರಿಸಿ, ಹೀಗೆ ಮಾಡೋಣವೆನ್ನಿಸಿತು.

read Indian novelist Kuvempu books in different way says k sathya narayan vcs

-ಕೆ ಸತ್ಯನಾರಾಯಣ

ಕುವೆಂಪು ಎನ್ನುವುದೇ ನಿಜವಾದ ಹೆಸರು ಎಂದು ತಿಳಿದಿದ್ದ ದಿನಗಳವು. ಕಾವ್ಯನಾಮ ಎಂದರೇನು, ಅದನ್ನೇಕೆ ಸಾಹಿತಿಗಳು ಇಟ್ಟುಕೊಳ್ಳುತ್ತಾರೆ ಎಂಬುದು ಗೊತ್ತಿರಲಿಲ್ಲ; ನನಗೆ ಮಾತ್ರವಲ್ಲ, ನನ್ನ ಸಹಪಾಠಿಗಳಿಗೂ ಕೂಡ. ಈಗಂತೂ ಬಿಡಿ; ಕಾವ್ಯನಾಮದ ಪದ್ಧತಿಯೇ ಚಾಲ್ತಿಯಲ್ಲಿಲ್ಲವಲ್ಲ!

‘ಕುವೆಂಪುಗೆ ಮರಣೋತ್ತರ ನೋಬೆಲ್‌ ಪ್ರಶಸ್ತಿ ನೀಡಿ’ 

ಆದರೆ ಹೈಸ್ಕೂಲು ದಿನಗಳಲ್ಲೇ ಕುವೆಂಪು ಪದ್ಯ, ನಾಟಕಗಳು ಗೊತ್ತಿದ್ದವು. ಅವರ ಪ್ರಸಿದ್ಧ ಕತೆ, ಈಶ್ವರನೂ ನಕ್ಕಿರಬೇಕು ಎಂಟನೇ ತರಗತಿಯಲ್ಲೇ ನಮಗೆ ಪಠ್ಯವಾಗಿತ್ತು. ಆ ಕತೆಯನ್ನು ಇಷ್ಟಪಟ್ಟು ಪಾಠ ಮಾಡುತ್ತಿದ್ದ ನಾಗರಾಜಯ್ಯ ಅನ್ನುವ ಮೇಷ್ಟರು, ತಾವೇನೂ ಆ ಕತೆಯ ಪಾತ್ರವಲ್ಲವೆಂದು ಮತ್ತೆ ಮತ್ತೆ ತಮಾಷೆ ಮಾಡುತ್ತಿದ್ದರು. ಏಕೆಂದರೆ, ಕಥಾನಾಯಕನ ಹೆಸರು ಕೂಡ, ನಾಗರಾಜ ಎಂದೇ ಇತ್ತು. ಶಾಲಾ ವಾರ್ಷಿಕೋತ್ಸವಕ್ಕೆ ಮಕ್ಕಳ ಕೈಲಿ ನಾಟಕಗಳನ್ನು ಆಡಿಸುತ್ತಿದ್ದ ಈ ಮೇಷ್ಟರು ಕುವೆಂಪುರವರ, ನನ್ನ ಗೋಪಾಲ ನಾಟಕವನ್ನು ಆಯ್ಕೆ ಮಾಡಿ ಅದರಲ್ಲಿ ಒಂದು ಪಾತ್ರವನ್ನು ಕೂಡ ನನಗೆ ಕೊಟ್ಟಿದ್ದು, ಅಭಿನಯಕ್ಕಾಗಿ ಬಹುಮಾನ ಕೂಡ ಬಂದಿತ್ತು. ತುಂಬಾ ಮೆಲುದನಿಯಲ್ಲಿ ಯಾರಿಗೂ ಕೇಳಿಸದ ಹಾಗೆ ಪಾಠ ಮಾಡುತ್ತಿದ್ದ ಈ ಮೇಷ್ಟರ ಮಕ್ಕಳ ಪ್ರೀತಿ, ಸಾಹಿತ್ಯ ಪ್ರೇಮ ಅಮೋಘವಾಗಿತ್ತು. ಶಾಲಾ ದಿನಗಳಲ್ಲಿ ಕುವೆಂಪುರವರ ಮುನ್ನುಡಿಯೊಡನೆ ಪ್ರಕಟವಾಗಿದ್ದ ಎ.ಆರ್‌. ಕೃಷ್ಣಶಾಸ್ತ್ರಿಗಳ, ಬಂಕಿಂಚಂದ್ರ ಸಂಪುಟವನ್ನು ಓದಿಸಿದ್ದರು. ಭಾರತೀಯ ಕಾದಂಬರಿಕಾರರಲ್ಲಿ ಶರತ್‌ಚಂದ್ರರ ಪರಂಪರೆ ಮತ್ತು ಬಂಕಿಂಚಂದ್ರರ ಪರಂಪರೆ ಎಂಬ ಎರಡು ದಾರಿಗಳಿಯಿವೆಯಷ್ಟೆ. ಕುವೆಂಪು ಬಂಕಿಂರವರ ಪರಂಪರೆಯವರು. ಕೃಷ್ಣಶಾಸ್ತ್ರಿಗಳ ಕೃತಿ ರಚನೆಯ ಹಿಂದೆ ಕೂಡ ಕುವೆಂಪುರವರ ಪ್ರೇರಣೆಯಿತ್ತಂತೆ. ಇದು ಅವರ ಮುನ್ನುಡಿಯಲ್ಲೂ ಗೊತ್ತಾಗುತ್ತದೆ. ಈಗ, ಶಾಲಾದಿನಗಳ 50 ವರ್ಷಗಳ ನಂತರ ಮದುಮಗಳನ್ನು ಮತ್ತೆ ಓದುವಾಗ ಕುವೆಂಪುರವರ ವರ್ಣನಾತ್ಮಕ ಪ್ರತಿಭೆ, ಪಾತ್ರ ಸೃಷ್ಟಿ, ಭಾಷೆಯ ಬಳಕೆ ಎಲ್ಲದರಲ್ಲೂ ಬಂಕಿಂ ಪರಂಪರೆಗೆ ಅವರು ಹೇಗೆ ಸೇರುತ್ತಾರೆ ಎಂಬುದು ತಿಳಿಯುತ್ತದೆ. ಕುವೆಂಪು ಪ್ರೀತಿಯನ್ನು, ಅವರಿಗಿರುವ ಪ್ರೇರಣೆಗಳನ್ನು ಹೀಗೆ ಶಾಲಾ ದಿನಗಳಲ್ಲೇ ದಾಟಿಸಿದ ಆ ಮೇಷ್ಟರಿಗೆ ಕೃತಜ್ಞತೆಗಳು.

read Indian novelist Kuvempu books in different way says k sathya narayan vcs

ಇನ್ನು ಕಾಲೇಜಿಗೆ ಬಂದರೆ ಕುವೆಂಪುರವರ ಶ್ರೀಸಾಮಾನ್ಯನ ದೀಕ್ಷಾಗೀತೆ, ಶಬರಿಗಾದನು ಅತಿಥಿ ದಾಶರಥಿ, ಇವೆಲ್ಲ ಪಠ್ಯವಾಗಿದ್ದವು. ಕನ್ನಡ ಮೇಷ್ಟರುಗಳಿಗೆ ಅವರ ಬಗ್ಗೆ ವಿಶೇಷವಾದ ಒಲವು, ಗೌರವ, ಭಕ್ತಿ ಭಾವಗಳಿದ್ದವು. ಕುವೆಂಪುವನ್ನು ಇಷ್ಟಪಡುವವರಲ್ಲಿ, ಪಡದವರಲ್ಲಿ ಎಷ್ಟುಜಾತೀಯತೆಯ ಭಾವನೆಯಿತ್ತು ಎಂಬುದು ನಮಗೆ ಗೊತ್ತಾಗುತ್ತಿರಲಿಲ್ಲ. ಆವಾಗ ಅದು ನಮಗೆ ಅಷ್ಟುಮುಖ್ಯವಾದ ವಿಷಯವೂ ಆಗಿರಲಿಲ್ಲ.

ನೂರರ ಹೊಸ್ತಿಲಲ್ಲಿ ಮಲೆಗಳಲ್ಲಿ ಮದುಮಗಳು; ಬೆಂಗಳೂರಲ್ಲಿ ಕೊನೆ ಪ್ರದರ್ಶನ!

ಈಗ ನೆನಸಿಕೊಂಡು, ಆದಷ್ಟುಪ್ರಾಮಾಣಿಕವಾಗಿ ಹೇಳುವುದಾದರೆ, ಒಕ್ಕಲಿಗರ ಸೀಮೆಯಾದ ಮಂಡ್ಯದಲ್ಲಿ ಕುವೆಂಪು ಬಗ್ಗೆ ಒಂದು ರೀತಿಯ ಪೊಸೆಸಿವ್‌ ಭಾವನೆ ಇತ್ತು; ಯಾರಿಗಾದರೂ ಗೊತ್ತಾಗುವಂತೆ, ಗೊತ್ತಾಗುವಷ್ಟು. ಆದರೆ ಕಾರಂತ, ಗೊರೂರು, ಪುತಿನ, ಕೆಎಸ್‌ನ ಇಂತಹವರನ್ನು ಆರಾಧಿಸುವುದಕ್ಕೆ ಈ ಪೊಸೆಸಿವ್‌ನೆಸ್‌ ಅಡ್ಡಿ ಬರುತ್ತಿರಲಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಕುವೆಂಪು ಒಂದೇ ಒಂದು ಸಲ ಮಂಡ್ಯಕ್ಕೆ ಬಂದವರಲ್ಲ. ಕುವೆಂಪುವಿನ ವಿವರವಾದ ವಿಶೇಷವಾದ ಓದನ್ನು ಪ್ರೇರೇಪಿಸುವಂತಹ ವಾತಾವರಣವೇನಿರಲಿಲ್ಲ. ಪ್ರಗತಿಶೀಲರ ಕಾದಂಬರಿಗಳು, ಭೈರಪ್ಪ, ಮಂಡ್ಯ ಜಿಲ್ಲೆಯವರೇ ಆದ ತ್ರಿವೇಣಿ, ವಾಣಿ, ನಾಗಮಂಗಲದವರೇ ಆದ ಎಚ್‌.ಎಲ್‌. ನಾಗೇಗೌಡರ ಕಾದಂಬರಿಗಳು ತುಂಬಾ ಚಲಾವಣೆಯಲ್ಲಿದ್ದವು. ಶ್ರೀ ಎಂ.ಎ ಜಯಚಂದ್ರ, ಕಾರಂತರ ಕಾದಂಬರಿಗಳ ಖಾಸಗಿ ಸಂಗ್ರಹಾಲಯವೊಂದನ್ನು ಅವರ ಮನೆಯಲ್ಲಿಟ್ಟುಕೊಂಡಿದ್ದು ಆಸಕ್ತ ವಿದ್ಯಾರ್ಥಿಗಳಿಗೆ ಓದಿಸುತ್ತಿದ್ದರು. ಹೀಗೆ ಇವರೆಲ್ಲರನ್ನೂ ಓದಿದ ಮೇಲೆ ಕುವೆಂಪುರವರ ಕಾದಂಬರಿಗಳನ್ನು ಓದಿದ್ದು ಎಷ್ಟೋ ರೀತಿಯಲ್ಲಿ ಲಾಭವಾಯಿತು. ಸಾಹಿತ್ಯ ಕೃತಿಗಳ ಓದಿನಲ್ಲಿ ಯಾವಾಗಲೂ ಒಂದು ರೀತಿಯ ಮುಗ್ಧತೆ, ಅಮಾಯಕತೆ ಇರಬೇಕು. ನಂತರ ವಿಮರ್ಶಾತ್ಮಕ ಗಂಭೀರ ಓದು. ನನ್ನ ಓದುಗಾರಿಕೆ, ಸಂವೇದನೆಯ ಹಿಂದೆ ಯೌವ್ವನದ ದಿನಗಳ ಅಡ್ಡಾದಿಡ್ಡಿ ಓದು, ಜನಪ್ರಿಯ ಕೃತಿಗಳ ಬಗ್ಗೆ ಆಗಲೂ ಇದ್ದ, ಈಗಲೂ ಇರುವ ಆಸಕ್ತಿ, ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡಿದೆ, ಮಾಡುತ್ತಿದೆ.

read Indian novelist Kuvempu books in different way says k sathya narayan vcs

1972-74ರ ಕಾಲಾವಧಿಯಲ್ಲಿ ಮಾನಸ ಗಂಗೋತ್ರಿಯಲ್ಲಿ ಓದುವಾಗ ಚರ್ಚೆಯಲ್ಲಿದ್ದುದು ಭಾರತೀಪುರ, ದಾಟುವಿನಂತಹ ಕಾದಂಬರಿಗಳು, ಅನಂತಮೂರ್ತಿ, ಭೈರಪ್ಪ ಇಂತಹ ಲೇಖಕರ ಬಗ್ಗೆ ಇದ್ದ ಪರ-ವಿರೋಧ ಅಭಿಪ್ರಾಯಗಳು. ಮಲೆಗಳಲ್ಲಿ ಮದುಮಗಳು ಬಗ್ಗೆ ಯಾರೂ ಪ್ರಸ್ತಾಪಿಸುತ್ತಿರಲಿಲ್ಲ. ಜಿ.ಎಚ್‌. ನಾಯಕರು ಮಾತ್ರ ಕುವೆಂಪು, ಕಾರಂತ ಇಂತಹವರ ಕಾದಂಬರಿಗಳ ಬಗ್ಗೆಯೂ ಯಾರಿಗೂ ಹೆದರದೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂಬುದು ಸಾಹಿತ್ಯ ವಲಯದಿಂದಾಚೆಗೂ ಒಂದು ಸುದ್ದಿಯಾಗಿ ಬಂದು ತಲುಪುತ್ತಿದ್ದರೂ ಕಾದಂಬರಿಯ ಓದಿಗೆ ಹೊಸ ಓದುಗರನ್ನು ಇದೊಂದೇ ಅಂಶ ಹೇಗೆ ಪ್ರೇರೇಪಿಸಲು ಸಾಧ್ಯ? ಕುವೆಂಪುರವರ ವ್ಯಕ್ತಿತ್ವದ ಪ್ರೆಸೆನ್ಸ್‌ ಗಂಗೋತ್ರಿಯ ಆವರಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಅನುಭವಕ್ಕೆ ಬರುತ್ತಿತ್ತು. ಗಂಗೋತ್ರಿಯ ಅತಿಥಿಗೃಹದಲ್ಲಿ ಬಂದು ಉಳಿದುಕೊಳ್ಳುತ್ತಿದ್ದ ಬಂಧು-ಮಿತ್ರರನ್ನು ನೋಡಲು ಸ್ವತಃ ಕುವೆಂಪುರವರೇ ಕಾರ್‌ ಡ್ರೈವ್‌ ಮಾಡಿಕೊಂಡು ಬರುತ್ತಿದ್ದರು. ಬೆಳಿಗ್ಗೆ ನಾವು ಕಾಲೇಜಿಗೆ ಬರುವ ಹೊತ್ತಿಗೆ ಸರಿಯಾಗಿ ಕುವೆಂಪು ಕಾರು ಅತಿಥಿಗೃಹದಿಂದ ಹೊರಡುತ್ತಿತ್ತು. ಮಾನಸ ಗಂಗೋತ್ರಿಯ ಹಿಂಭಾಗದಲ್ಲಿದ್ದ ಮರಗಳ ಗುಂಪಿನ ಹತ್ತಿರ ಅವರು ಆಗಾಗ್ಗೆ ವಾಯುವಿಹಾರಕ್ಕೆ ಬರುತ್ತಿದ್ದರು. ಯಾರಾದರೂ ಒಬ್ಬರು ಅವರನ್ನು ಗಮನಿಸಿಬಿಟ್ಟರೆ ಸಾಕು ಮಾರನೇ ದಿನದಿಂದ ಅವರು ಅಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಅಪರೂಪಕ್ಕೆ ಅವರು ಕೆಲವು ಸಮಾರಂಭಗಳಿಗೆ ಬರುತ್ತಿದ್ದರಾದರೂ ಆ ಸಮಾರಂಭಗಳು ಸಾಹಿತ್ಯಕ್ಕಿಂತ ಹೆಚ್ಚಾಗಿ ತತ್ವಶಾಸ್ತ್ರ, ಆಧ್ಯಾತ್ಮ, ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಪಟ್ಟಿರುತ್ತಿದ್ದವು. ಕೇಳಿಬರುತ್ತಿದ್ದ ಇನ್ನೊಂದು ಮಾತೆಂದರೆ ಕುವೆಂಪುಗೆ ಸಾಹಿತ್ಯ ಮೇಷ್ಟರುಗಳಿಗಿಂತ ಹೆಚ್ಚಾಗಿ ವಿಜ್ಞಾನ, ತತ್ವಶಾಸ್ತ್ರ, ಈ ವಿಭಾಗದ ಪರಿಣಿತರ ಜೊತೆಯೇ ಹೆಚ್ಚು ಒಡನಾಟವೆಂದು, ಕನ್ನಡದಲ್ಲಿ ಪ್ರಕಟವಾಗುತ್ತಿರುವ ವಿಜ್ಞಾನ ಪುಸ್ತಕಗಳು, ಬರಹಗಳನ್ನು ಕುವೆಂಪು ವಿವರವಾಗಿ ಗಮನಿಸುತ್ತಾರೆಂದು, ಇಷ್ಟವಾದ ಬರಹಗಳ ಲೇಖಕರಿಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ ಎಂಬುದು ಇನ್ನೊಂದು ಸುದ್ದಿ. ಕುವೆಂಪುಗಿಂತ ತೇಜಸ್ವಿಯವರೇ ಹೆಚ್ಚಾಗಿ ಕ್ಯಾಂಪಸ್‌ನಲ್ಲಿ ಅವರ ಗೆಳೆಯರ ಬಳಗದೊಡನೆ ಕಾಣಿಸಿಕೊಳ್ಳುತ್ತಿದ್ದರು. ಆ ಕಾಲಕ್ಕೆ ಅವರದೊಂದು ಪ್ರಸಿದ್ಧ ಕಥಾಸಂಕಲನ ಪ್ರಕಟವಾಗಿತ್ತು. ಎಲ್ಲ ಪತ್ರಿಕೆಗಳ ವಾಚಕರವಾಣಿ ವಿಭಾಗಗಳಲ್ಲಿ ಅವರ ಪತ್ರಗಳು ಎಲ್ಲ ವಿಷಯಗಳ ಮೇಲೂ ನಿರಂತರವಾಗಿ ಪ್ರಕಟವಾಗುತ್ತಿದ್ದವು.

ಕುವೆಂಪು ‘ಕಲಾಸುಂದರಿ’ ಬಗ್ಗೆ ಹೇಳಿದ ಚಿಂತಾಮಣಿ ಕೊಡ್ಲಿಕೆರೆ ! 

ಈ ಕಾಲಾವಧಿಯಲ್ಲೇ ಮೈಸೂರಿನಲ್ಲಿ ಕರ್ನಾಟಕ ಕಲಾವಿದ-ಬರಹಗಾರರ ಒಕ್ಕೂಟ ಸ್ಥಾಪನೆಯಾದದ್ದು. ಅದರ ಒಂದು ಸಮಾರಂಭದಲ್ಲಿ ಕುವೆಂಪು ಮಾಡಿದ ಭಾಷಣ ಮುಂದೆ ತುಂಬಾ ಪ್ರಸಿದ್ಧವಾದರೂ, ಆವಾಗ ನನಗೆ ಅದರ ಸಾಂಸ್ಕೃತಿಕ ಮಹತ್ವ ಗೊತ್ತಾಗಲಿಲ್ಲವೆಂದು ಒಪ್ಪಿಕೊಳ್ಳುವುದು ಒಳ್ಳೆಯದು. ನಂತರ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದ್ದು, ಕರ್ನಾಟಕದಿಂದ ಎರಡು ದಶಕಗಳ ಕಾಲ ದೂರ ಇರಬೇಕಾಗಿ ಬಂದದ್ದು, ಎಲ್ಲವೂ ಸರಿಯೇ. ಆದರೆ ಕುವೆಂಪುವನ್ನು ನಿಜವಾಗಲೂ ಓದಬೇಕು ಎನ್ನುವ ಅಂತರಂಗದ ಪ್ರೇರಣೆ ಮೂಡಿದ್ದು ಅವರೇ ಟಾಲ್‌ಸ್ಟಾಯ್‌ ಬಗ್ಗೆ ಬರೆದ ಮಾತುಗಳಿಂದ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ಟಾಲ್‌ಸ್ಟಾಯ್‌ ಕಾದಂಬರಿಗಳ ಕುರಿತಂತೆ ವೆಂಕಣ್ಣಯ್ಯ-ಕುವೆಂಪು ಮಾತುಕತೆ ಈಗಾಗಲೇ ಬಹಳ ಕಡೆ ಉಲ್ಲೇಖಗೊಂಡಿದೆ. ಆವಾಗೆಲ್ಲ ನಮ್ಮ ಗೆಳೆಯರ ಬಳಗದಲ್ಲಿ ಟಾಲ್‌ಸ್ಟಾಯ್‌ ಹುಚ್ಚಿನ ದಿನಗಳು. ಅಂತಹ ಕಾದಂಬರಿಗಳು ಕನ್ನಡದಲ್ಲಿ ಏಕೆ ಬಂದಿಲ್ಲ ಎಂದು ಕೊರಗುತ್ತಿದ್ದಾಗ ಕುವೆಂಪು ಕಾದಂಬರಿಗಳ ಬೀಸು ಆಕರ್ಷಣೆ ಹುಟ್ಟಿಸಿದ್ದು ನಿಜ. ಶೇಕ್ಸ್‌ಪಿಯರ್‌-ಟಾಲ್‌ಸ್ಟಾಯ್‌ ನಡುವೆ ಕುವೆಂಪುಗೆ ಇರುವ ಟಾಲ್‌ಸ್ಟಾಯ್‌ ಪಕ್ಷಪಾತವು ಕೂಡ ಯಾವ ಓದುಗನನ್ನಾದರೂ ಸಂಮೋಹಗೊಳಿಸುತ್ತದೆ. ಕುವೆಂಪು ಕಾದಂಬರಿಗಳನ್ನು ಮತ್ತೆ ಮತ್ತೆ ಓದಲು ಪ್ರಾರಂಭಿಸಿದರೆ ನವೋದಯದವರನ್ನು ತೀವ್ರವಾಗಿ ವಿರೋಧಿಸುತ್ತಿದ್ದ, ಆಗತಾನೇ ಪರಿಚಯವಾಗುತ್ತಿದ್ದ ನವ್ಯ ಸಾಹಿತಿಗಳು ಕೂಡ ಕುವೆಂಪು ಬಗ್ಗೆ ವಿಶೇಷವಾದ ಪ್ರೀತಿ, ಗೌರವಗಳನ್ನು ಸೂಚಿಸುತ್ತಿದ್ದರು. ನವ್ಯದ ಪ್ರೇರಕರೆಂದು ಮಾನ್ಯತೆ ಪಡೆದಿರುವ ವೈಎನ್‌ಕೆಯವರು ಮುಂದೆ ಪರಿಚಯವಾದಾಗ ಹೇಳಿದ ಒಂದು ಮಾತು ಈಗಲೂ ನನಗೆ ಮುಖ್ಯವೆನಿಸುತ್ತದೆ. ಕುವೆಂಪು, ಮಾಸ್ತಿ, ಕಾರಂತರಂತಹ ಲೇಖಕರನ್ನು ಎಲ್ಲ ತರುಣ ಲೇಖಕರೂ ಸಮಗ್ರವಾಗಿ ಓದಿ, ಅವರವರಿಗೆ ಬೇಕಾದ ಕುವೆಂಪುವನ್ನು ಅವರೇ ರೀಡಿಸ್ಕವರ್‌ ಮಾಡಿಕೊಳ್ಳಬೇಕು; ತಮ್ಮ ತಮ್ಮ ವೈಯಕ್ತಿಕ ಬರವಣಿಗೆಗೆ ಹೊಸ ಪ್ರೇರಣೆಗಳನ್ನು ಹುಡುಕಬೇಕು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. 1980ರ ದಶಕದ ನಂತರ ಕರ್ನಾರ್‍ಟಕದ ವೈಚಾರಿಕತೆ, ಸಾಮಾಜಿಕ ಆದರ್ಶ ಎರಡೂ ಕೂಡ ಕುವೆಂಪು ಪರವಾಗಿ ಇರುವುದು ಸರಿ. ಆದರೆ ಈ ರೀತಿಯ ಪರ-ವಿರೋಧ ವಿಜೃಂಭಣೆಯ ವಾತಾವರಣದಲ್ಲಿ ಸರಿಯಾದ, ಅಪಾಯಕಾರಿಯಲ್ಲದ ನಿಲುವು ತಳೆಯುವುದು ಮುಖ್ಯವಾಗುತ್ತದೆಯೇ ಹೊರತು ಲೇಖಕನನ್ನು ಸಮಗ್ರವಾಗಿ, ವೈಯಕ್ತಿಕವಾಗಿ, ತೀವ್ರವಾಗಿ ಓದುವುದಲ್ಲ. ಕುವೆಂಪು ಕೃತಿಗಳನ್ನು ಓದುವಾಗ ನಾವು ಕುವೆಂಪುವಿನ ಪ್ರತಿಮೆಯನ್ನು ಕಟ್ಟಿಕೊಳ್ಳುತ್ತೇವೆ; ಹೊಸ ರೀತಿಯ ಕರ್ನಾಟಕವನ್ನು ಕಟ್ಟಿಕೊಳ್ಳುವ ಹಂಬಲ ನಮ್ಮಲ್ಲಿ ಜಾಗೃತವಾಗುತ್ತದೆ ಎನ್ನುವುದೆಲ್ಲ ತುಂಬಾ ದೊಡ್ಡತನ, ತುಂಬಾ ದೊಡ್ಡ ಮಾತು. ಕುವೆಂಪು ನೆರವಾಗುವುದು ನಮ್ಮನ್ನು ನಾವೇ ಕಟ್ಟಿಕೊಳ್ಳಲು, ರೂಪಿಸಿಕೊಳ್ಳಲು. ಇದಕ್ಕಾಗಿ ಅವರ ಕೃತಿಗಳನ್ನು ಸುಮ್ಮನೆ ಓದಿದರೆ ಸಾಲದು, ಮತ್ತೆ ಮತ್ತೆ ಓದುತ್ತಾ ನಮ್ಮ ಹಿಂದಿನ ಓದುಗಳನ್ನು ನಾವೇ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಓದುಗನಾಗಿ, ಬರಹಗಾರನಾಗಿ ನನ್ನ ಒಲವಿರುವುದು ಈ ದಿಕ್ಕಿನಲ್ಲಿ. ಓದುಗರಾಗಿ ನಮಗೆ ಒಬ್ಬ ಲೇಖಕನ ಪ್ರಜ್ಞೆ, ಕಲಾವಂತಿಕೆಯೆಲ್ಲ ಹಂತ ಹಂತವಾಗಿ ಹೇಗೆ ವಿಕಾಸಗೊಂಡಿತು ಎಂದು ತಿಳಿದುಕೊಳ್ಳುವುದೇ ಹೆಚ್ಚು ಮುಖ್ಯ. ನಿಲುವು, ಆಶಯ, ತಾತ್ವಿಕತೆಯಂತಹ ಗಹನವಾದ ಸಂಗತಿಗಳನ್ನು ವಿಮರ್ಶಕರಿಗೇ ಮೀಸಲಿಡುವುದು ಒಳಿತು.

read Indian novelist Kuvempu books in different way says k sathya narayan vcs

ಕುವೆಂಪು ಈ ಗೀತೆಯಿಂದ ಆತ್ಮಶುದ್ಧಿ ಸಾಧ್ಯ 

ಕುವೆಂಪುಗೆ ಮೊದಲಿನಿಂದಲೂ ಭಕ್ತರ, ವಕ್ತಾರರ ಕಾಟ ಸ್ವಲ್ಪ ಹೆಚ್ಚೇ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಅನಿವಾರ‍್ಯ. ಏಕೆಂದರೆ, ಕುವೆಂಪು ಪರವಾದ ಸ್ಥೂಲ ನಿಲುವು, ವಿಚಾರ, ಭಂಗಿಗಳಿಂದಲೂ ಕೆಲವರಿಗೆ ಲಾಭವಿರುತ್ತದೆ. ಓದುಗರಾಗಿ, ವೈಯಕ್ತಿಕವಾಗಿ ನಾವು ಕುವೆಂಪುಗೆ ಏನು ಮಾಡಬಹುದು ಎಂಬುದೇ ಮುಖ್ಯ ಪ್ರಶ್ನೆ. ಸುತ್ತು ಬಳಸದೆ ಹೇಳುವುದಾದರೆ, ಕುವೆಂಪು ಪುಟಗಳನ್ನು ನಮಗೆ ಬೇಕಾದ ನಿಧಾನದಲ್ಲಿ, ವ್ಯವಧಾನದಲ್ಲಿ, ಖಾಸಗಿತನದಲ್ಲಿ ಓದುತ್ತಾ ನಮ್ಮದನ್ನಾಗಿ ಮಾಡಿಕೊಳ್ಳುತ್ತಾ ಹೋಗಬೇಕು. ನೀವು ಕುವೆಂಪು ಪುಟಗಳನ್ನು ನಿಮಗಾಗಿಯೇ, ನಿಮ್ಮ ಒಳಗಿನಿಂದಲೇ, ಕೃತಿಯ ಒಳಗಿನಿಂದಲೇ, ನಿಮ್ಮ ಕಾಲದ ಒಳಗಿನಿಂದಲೇ ಓದಲು ಪ್ರಾರಂಭಿಸಿದರೆ, ಕುವೆಂಪುರವರ ವ್ಯಕ್ತಿತ್ವ, ಪ್ರತಿಮೆಗಳ ಸುತ್ತಮುತ್ತ ನಡೆಯುವ ಬಹುಪಾಲು ಚಟುವಟಿಕೆಗಳ ಅರ್ಥಹೀನತೆ ಗೊತ್ತಾಗುತ್ತದೆ. ಕುವೆಂಪು ಅವರ ಪ್ರಸಿದ್ಧ ಸಾಲುಗಳನ್ನು ಉಲ್ಲೇಖಿಸುವುದಾದರೆ -

ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ,

ವ್ಯರ್ಥ ಜಿಜ್ಞಾಸೆಯಲ್ಲಿ ಕಾಲಹರಣವದೇಕೆ.

Latest Videos
Follow Us:
Download App:
  • android
  • ios