Asianet Suvarna News Asianet Suvarna News

ನೂರರ ಹೊಸ್ತಿಲಲ್ಲಿ ಮಲೆಗಳಲ್ಲಿ ಮದುಮಗಳು; ಬೆಂಗಳೂರಲ್ಲಿ ಕೊನೆ ಪ್ರದರ್ಶನ!

ಕುವೆಂಪು ಮಹಾ ಕಾದಂಬರಿ ಮಲೆಗಳಲ್ಲಿ ಮದುಮಗಳು ಸಿ. ಬಸವಲಿಂಗಯ್ಯ ಅವರ ಸಾರಥ್ಯದಲ್ಲಿ ರಂಗರೂಪಕ್ಕೆ ಇಳಿದು ಲಕ್ಷಾಂತರ ಮಂದಿಯನ್ನು ತಲುಪಿದೆ. ಇದೀಗ ಈ ನಾಟಕ ಬೆಂಗಳೂರಿನಲ್ಲಿ ತನ್ನ ಕಡೆಯ ಕಂತಿನ ಪ್ರದರ್ಶನಗಳನ್ನು ನೀಡುತ್ತಿದೆ. ಜ.20ರಿಂದ ಫೆ. 29ರ ವರೆಗೆ ನಡೆಯಲಿರುವ ಈ ನಾಟಕ ಈಗಾಲೇ ಬೆಂಗಳೂರಿನಲ್ಲಿ 85 ಪ್ರದರ್ಶನಗಳನ್ನು ಕಂಡಿದ್ದು, ಒಟ್ಟು 109 ಪ್ರದರ್ಶನವನ್ನು ಪೂರೈಸಲಿದೆ. ಇಲ್ಲಿ ಸಿ. ಬಸವಲಿಂಗಯ್ಯನವರು ನೂರರ ಸನಿಹದಲ್ಲಿರುವ ನಾಟಕದ ಬಗ್ಗೆ ಮಾತನಾಡಿದ್ದಾರೆ.

Kuvempu Malegalali madumagalu kannada theater play turns 100 final show happening at Kalagrama
Author
Bangalore, First Published Jan 19, 2020, 2:54 PM IST

ಕೆಂಡಪ್ರದಿ

ನಿರ್ದೇಶಕ ಸಿ. ಬಸವಲಿಂಗಯ್ಯ ಸಂದರ್ಶನ

ಮತ್ತೆ ಮಲೆಗಳಲ್ಲಿ ಮದುಮಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೀರಿ, ಈ ಕುರಿತು ಹೇಳುವುದಾದರೆ?

ಹೌದು, ಇದೆಲ್ಲಾ ಸಾಧ್ಯವಾಗುತ್ತಿರುವುದು ಪ್ರೇಕ್ಷಕರ ಒತ್ತಾಯದ ಮೇರೆಗೆ. ಅವರು ಮತ್ತೆ ಮತ್ತೆ ನೋಡಬೇಕು ಎಂದು ಬಯಸುತ್ತಿದ್ದಾರೆ ನಾವು ಮಾಡುತ್ತಿದ್ದೇವೆ. ಆದರೆ ಇದು ಬೆಂಗಳೂರಿನಲ್ಲಿ ನಡೆಯುವ ಕಡೆಯ ಆವೃತ್ತಿಯ ಪ್ರದರ್ಶನಗಳು. ಈಗಾಗಲೇ ನಾಟಕ 85 ಪ್ರದರ್ಶನಗಳನ್ನು ಕಂಡಿದ್ದು, ಈ ಆವೃತ್ತಿಯಲ್ಲಿ 109 ಪ್ರದರ್ಶನಗಳು ಪೂರ್ಣವಾಗಲಿವೆ. ಫೆ. 14ರಂದು ನಾಟಕದ ನೂರನೇ ಪ್ರದರ್ಶನ ಇರಲಿದೆ. ಆ ವೇಳೆ ಈ ನಾಟಕಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ.

Kuvempu Malegalali madumagalu kannada theater play turns 100 final show happening at Kalagrama

ಬೆಂಗಳೂರಿನಲ್ಲಿ ಇದು ಇಷ್ಟೊಂದು ದೊಡ್ಡ ಯಶ ಕಾಣಲು ಕಾರಣ?

ಪ್ರಾರಂಭದಲ್ಲಿ 9 ಗಂಟೆಗಳ ಈ ನಾಟಕ ಮಾಡಲು ಹೊರಟಾಗ ಭಯ ಇತ್ತು, ಬೆಂಗಳೂರಿನ ಮಂದಿ ಇದನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವ ಆತಂಕಕ್ಕೆ ಜನರೇ ಪರಿಹಾರ ನೀಡಿದರು. ಪ್ರತಿ ಬಾರಿಯೂ ಬೆಂಗಳೂರಿನ ಐಟಿ ಮಂದಿ, ಬೇರೆ ಬೇರೆ ಕ್ಷೇತ್ರದ ಜನರು, ಕಲಾಸಕ್ತರು ಕುಟುಂಬ ಸಮೇತವಾಗಿ ಬಂದು ನೋಡಿದ್ದಾರೆ. ದೊಡ್ಡ ನಾಟಕಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದು ಮುಖ್ಯವಲ್ಲ. ಕನ್ನಡ ಮನಸ್ಸನ್ನು ವೈಚಾರಿಕವಾಗಿ ಕಟ್ಟುವುದು ಮುಖ್ಯ. ಇಂದಿನ ಯುವಕರು ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ ಕಡೆ ಮುಖ ಮಾಡಿದ್ದಾರೆ ಎನ್ನುವಾಗಲೂ ನಾವು ಅವರನ್ನು ತಲುಪಿದ್ದೇವೆ. ಇಲ್ಲಿನ ಪಾತ್ರಗಳೆಲ್ಲಾ ಎಲ್ಲರಿಗೂ ತಟ್ಟುತ್ತವೆ. ಸಿಟಿಯಲ್ಲಿ ಇರುವ ಮಂದಿಗೆ ಹಳ್ಳಿಯ ಬದುಕಿನ ಬಗ್ಗೆ ಕುತೂಹಲ, ಆಸಕ್ತಿ ಇರುತ್ತದೆ. ಹಾಗಾಗಿಯೇ ಇದು ದೊಡ್ಡ ಮಟ್ಟದ ಯಶ ಕಂಡಿದೆ.

ನನ್ನ ನಂತರವೂ ರಂಗಶಂಕರ ಯಶಸ್ವಿಯಾಗಿ ಮುಂದುವರಿಯಬೇಕು: ಅರುಂಧತಿ ನಾಗ್!

ನಾಟಕದಿಂದ ಸಾಕಷ್ಟುಕಲಾವಿದರಿಗೆ ಅನುಕೂಲವಾಗಿದೆ ಅನ್ಸುತ್ತೆ

ಹೌದು, 80ಕ್ಕೂ ಹೆಚ್ಚು ಕಲಾವಿದರು ಇಲ್ಲಿ ದುಡಿದಿದ್ದಾರೆ. ಈ ನಾಟಕದ ಮೂಲಕವೇ ಅವರನ್ನು ಹೊರಗೆ ಗುರುತಿಸುವಷ್ಟುಮಟ್ಟಕ್ಕೆ ಯಶ ಸಿಕ್ಕಿದೆ. ಇಲ್ಲಿಂದಲೇ ಅವರು ಬೇರೆ ಕಡೆಗಳಲ್ಲಿ ಅವಕಾಶ ಪಡೆದಿದ್ದಾರೆ. ಜೊತೆಗೆ ರಂಗಭೂಮಿಯ ಬಗ್ಗೆ ಸಾಕಷ್ಟುತಿಳಿದುಕೊಂಡಿದ್ದಾರೆ. ವೈಚಾರಿಕತೆ ಬೆಳೆಸಿಕೊಂಡಿದ್ದಾರೆ. ಕೇವಲ ಡೈಲಾಗ್‌ ಹೇಳಿ, ನಟನೆ ಮಾಡಿ ಸುಮ್ಮನಾಗದೇ ಬದುಕಿನ ಪಾಠಗಳನ್ನು ಅವರು ಮಲೆಗಳಲ್ಲಿ ಮದುಮಗಳು ಮೂಲಕ ಪಡೆದಿದ್ದಾರೆ.

ನಾಟಕದಿಂದ ರಂಗಭೂಮಿಗೆ ಆದ ಅನುಕೂಲವೇನು?

ಇದರ ಜೊತೆಗೆ ಕುವೆಂಪು ಅವರನ್ನು ಲಕ್ಷಾಂತರ ಮಂದಿಗೆ ತಲುಪಿಸಿದ್ದೇವೆ. ಸಾಕಷ್ಟುಮಂದಿ ನಾಟಕ ನೋಡಿ ಕಾದಂಬರಿ ಓದಿದ್ದಾರೆ. ಕುವೆಂಪು ಅವರನ್ನು ಮತ್ತೆ ಜೀವಂತವಿರಿಸಿದ್ದಾರೆ. ಮಹಾಕಾವ್ಯಗಳು ಯಾವಾಗಲೂ ಜೀವಂತವಾಗಿ ಇರಬೇಕು. ಆಗಲೇ ನಾಡು, ನಾಡಿನ ಮನಸ್ಸು ಚೆನ್ನಾಗಿ ಇರಲು ಸಾಧ್ಯವಾಗುವುದು. ಇದೇ ರೀತಿ ನಮ್ಮ ಬೇಂದ್ರೆ, ಕಾರಂತ ಮೊದಲಾದವರು ಎಲ್ಲರನ್ನೂ ತಲುಪಬೇಕಿದೆ. ಈ ಕೆಲಸವನ್ನು ನಮ್ಮ ನಾಟಕ ಮಾಡಿದೆ. ಜೊತೆಗೆ ಈ ನಾಟಕ ರಂಗಭೂಮಿಯ ಚೌಕಟ್ಟನ್ನು ದಾಟಿದೆ. ಹೊಸದಾದ ಚೌಕಟ್ಟನ್ನು ನಿರ್ಮಿಸಿದೆ.

Kuvempu Malegalali madumagalu kannada theater play turns 100 final show happening at Kalagrama

100ನೇ ಪ್ರದರ್ಶನದ ವಿಶೇಷತೆ ಏನು?

ಫೆ. 14ರಂದು ನಾಟಕ 100ನೇ ಪ್ರದರ್ಶನ ಕಾಣಲಿದೆ. ಈ ವೇಳೆ ಬೆಂಗಳೂರಿನಲ್ಲಿ ನಾಟಕ ಇಷ್ಟೊಂದು ಯಶ ಕಾಣಲು ಕಾರಣರಾದ ಎಲ್ಲರಿಗೂ ಅಭಿನಂದಿಸುವ ಉದ್ದೇಶ ಇದೆ. ನಾನು ಮೈಸೂರು ರಂಗಾಯಣಕ್ಕೆ ಈ ನಾಟಕ ಮಾಡಿದೆ. ಅಲ್ಲಿ ಮೆಚ್ಚುಗೆ ಸಿಕ್ಕಿತು. ಆಗ ಬೆಂಗಳೂರಿಗೂ ಈ ನಾಟಕ ತೆಗೆದುಕೊಂಡು ಬಂದು ಇಲ್ಲಿ, 109 ಪ್ರದರ್ಶನಗಳನ್ನು ನೀಡಲು ಸರಕಾರ, ಅಧಿಕಾರಿಗಳು, ಕಲಾವಿದರು ಕಾರಣ. ಮುಂದೆ ಈ ನಾಟಕವನ್ನು ರಾಜ್ಯದ ಬೇರೆ ಬೇರೆ ಕಡೆಗೂ ತೆಗೆದುಕೊಂಡು ಹೋಗುವ ಆಲೋಚನೆ ಇದೆ. ಆದರೆ ಅದಕ್ಕೂ ಮೊದಲು ನನ್ನ ಹೊಸ ನಾಟಕ ‘ವಚನ ಕಲ್ಯಾಣ’ವನ್ನು ಮಾಡಬೇಕಿದೆ.

ಹಾಗಿದ್ದರೆ ನಿಮ್ಮ ಮುಂದಿನ ನಾಟಕ ವಚನ ಕಲ್ಯಾಣವಾ?

ಹೌದು, ಇದು ಶರಣರ ಕುರಿತಾದ ನಾಟಕ. ಮಲೆಗಳಲ್ಲಿ ಮದುಮಗಳು ರೀತಿಯೇ ಇದು ದೊಡ್ಡ ನಾಟಕವಾಗಲಿದೆ. ಎರಡು ವರ್ಷದಿಂದ ಇದರ ಕೆಲಸದಲ್ಲಿ ತೊಡಗಿದ್ದೇವೆ. ಸರಕಾರದ ಮಟ್ಟದಲ್ಲಿ ನಾಟಕ ಪ್ರದರ್ಶನಕ್ಕೆ ನೆರವು ಸಿಗುವ ಹಂತದಲ್ಲಿದ್ದೇವೆ. ಮುಂದೆ ವಚನ ಕಲ್ಯಾಣ ನಾಟಕ ಶುರುವಾಗಲಿದೆ.

ಸೇತೂರಾಂ ನಿರ್ದೇಶನದ ಹೊಸ ನಾಟಕ ಉಚ್ಛಿಷ್ಟ!

ಎಲ್ಲಿ: ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಶಾಖೆ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

ಯಾವಾಗ: ಜ.20ರಿಂದ ಫೆ. 29, ರಾತ್ರಿ 8.00 ರಿಂದ ಬೆಳಿಗ್ಗೆ 6.00

ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ

Kuvempu Malegalali madumagalu kannada theater play turns 100 final show happening at Kalagrama

Follow Us:
Download App:
  • android
  • ios