ಬೆಂಗ​ಳೂರು [ಜ.21] :  ನಾಡು, ನುಡಿ ಕುರಿತು ಕುವೆಂಪು ಅವರು ಬರೆದ ಸಮಗ್ರ ಸಾಹಿ​ತ್ಯ​ವನ್ನು ಇಂಗ್ಲಿ​ಷ್‌ಗೆ ತರ್ಜುಮೆ ಮಾಡಿ​ದ್ದರೆ ಅವ​ರಿಗೆ ಈಗಾ​ಗಲೇ ನೋಬೆಲ್‌ ಪ್ರಶಸ್ತಿ ಲಭಿ​ಸು​ತ್ತಿತ್ತು. ಹಾಗಾಗಿ ತಡ​ವಾ​ಗಿ​ಯಾ​ದರೂ ಕುವೆಂಪು ಅವ​ರಿಗೆ ನೋಬೆಲ್‌ ಪ್ರಶಸ್ತಿ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿ​ಷ​ತ್‌ ಅಧ್ಯಕ್ಷ ಡಾ. ಮನು ಬಳಿ​ಗಾರ್‌ ಮನವಿ ಮಾಡಿ​ದರು.

‘ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಸಂಸ್ಥೆ’ ಸೋಮ​ವಾ​ರ ರವೀಂದ್ರ ಕಲಾಕ್ಷೇತ್ರದಲ್ಲಿ ​ಹ​ಮ್ಮಿ​ಕೊಂಡಿದ್ದ ‘ಕುವೆಂಪು ಅವರ 116ನೇ ಜಯಂತಿ, ಕುವೆಂಪು ಸಾಂಸ್ಕೃತಿಕ ಉತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಸಮಾ​ರಂಭ​ದಲ್ಲಿ ಪ್ರಶಸ್ತಿ ಸ್ವೀಕ​ರಿಸಿ ಅವರು ಮಾತ​ನಾ​ಡಿ​ದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ​ದ​ ಕುವೆಂಪು ಅವ​ರು ತಮ್ಮ ಸಾಹಿತ್ಯದ ಅರ್ಧ ಭಾಗವನ್ನು ಕನ್ನಡ ಸಾಹಿತ್ಯ, ನಾಡು, ನುಡಿ ಕುರಿತ ಜಾಗೃತಿಗಾಗಿ ಬರೆದವರು. ಇಂತಹ ಮಹತ್ತರ ಸಾಧ​ನೆ​ಗಾಗಿ ಅವ​ರಿಗೆ ‘ಮರಣೋತ್ತರ ನೊಬೆಲ್‌ ಪ್ರಶಸ್ತಿ’ ನೀಡಬೇಕೆಂದು ಒತ್ತಾ​ಯಿ​ಸಿ​ದ​ರು.

85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ...

ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಪ್ರಶಸ್ತಿ ದೊರೆ​ತದ್ದು ನನ್ನ ಭಾಗ್ಯ. ಈ ಪ್ರಶ​ಸ್ತಿ ಭವಿಷ್ಯದ ನನ್ನ ಇನ್ನಷ್ಟುಕಾರ್ಯ​ಸಾ​ಧ​ನೆಗೆ ಸ್ಪೂರ್ತಿ​ಯಾ​ಗಿದೆ ಎಂ​ದರು.

ಕವಿ ಸಿದ್ದ​ಲಿಂಗಯ್ಯ ಮಾತ​ನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇ​ಶ​ಕ​ರಾಗಿ ಸೇವೆ ಮಾಡಿರುವ ಮನು ಬಳಿ​ಗಾರ್‌ ಕನ್ನಡ ಸಾಹಿತ್ಯ ಪರಿ​ಷ​ತ್‌ ಅಧ್ಯ​ಕ್ಷ​ರಾಗಿ, ಜಾತ್ಯ​ತೀ​ತ​ವಾಗಿ ಎಲ್ಲ ಪ್ರಕಾರದ ಲೇಖ​ಕ​ರಿಗೆ, ಯುವ ಬರ​ಹ​ಗಾ​ರ​ರಿಗೆ ಪ್ರಾತಿ​ನಿಧ್ಯ ನೀಡುತ್ತಿ​ದ್ದಾರೆ ಎಂದು ನುಡಿ​ದರು.

‘ಕನ್ನಡ ನುಡಿ ಜಾತ್ರೆ’ಗೆ ಜರ್ಮನ್‌ ಟೆಕ್ನಾಲಜಿಯ ವೇದಿಕೆ!...

ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ನಾನು ಪ್ರತಿ​ನಿ​ಧಿ​ಸುವ ಮಹಾಲಕ್ಷ್ಮಿ ಲೇಔಟ್‌ ವಿಧಾ​ನ​ಸಭಾ ಕ್ಷೇತ್ರ​ದ ಉದ್ಯಾ​ನ​ವೊಂದ​ರಲ್ಲಿ ಕುವೆಂಪು ಪ್ರತಿಮೆ ನಿರ್ಮಿ​ಸ​ಲಿ​ದ್ದೇನೆ. ಆ ಮೂಲಕ ಕುವೆಂಪು ಅವರ ಜಾತ್ಯ​ತೀತ ಹಾಗೂ ವೈಚಾ​ರಿಕ ಪ್ರಜ್ಞೆ ಜನ​ರಲ್ಲಿ ಬೆಳೆ​ಸಲು ಪ್ರಯ​ತ್ನಿ​ಸು​ತ್ತೇನೆ ಎಂದರು.

ಕಾರ್ಯ​ಕ್ರ​ಮ​ದಲ್ಲಿ ಕುವೆಂಪು ರಚನೆ ನಾಟಕ, ಗೀತ ಗಾಯನ, ನೃತ್ಯ ರೂಪಕ ಪ್ರದರ್ಶಿಸಿ ಕುವೆಂಪು ಅವರಿಗೆ ಗೌರವ ಸಲ್ಲಿಸಲಾಯಿತು.

ಕವಿಗಳಾದ ಡಾ.ದೊಡ್ಡರಂಗೇಗೌಡ, ಡಾ.ಕೆ.ಚಿದಾನಂದಗೌಡ, ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕಲಾನಿಕೇತನ ಅಧ್ಯಕ್ಷ ಕುವೆಂಪು ಪ್ರಕಾಶ್‌ ಮತ್ತಿತರರು ಪಾಲ್ಗೊಂಡಿ​ದ್ದರು.